ಮನುಷ್ಯನಿಗೆ ಬೆವರುವ ಪ್ರಕ್ರಿಯೆ ಕಿರಿಕಿರಿ ಉಂಟುಮಾಡಬಹುದು ಆದರೆ ಇದು ನಿಸರ್ಗ ನೀಡಿರುವ ವರಗಳಲ್ಲಿ ಒಂದು ಎಂದರೆ ತಪ್ಪಾಗಲಾರದು. ತಜ್ಞರು ಹೇಳುವ ಪ್ರಕಾರ ದೇಹ ಬೆವರುವುದು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಏಕಂದರೆ ಬಿಸಿರಕ್ತದ ಶರೀರದವರಿಗೆ ತಾಪಮಾನವನ್ನು ಒಂದೇ ರೀತಿಯಲ್ಲಿ ಇಟ್ಟುಕೊಳ್ಳುವುದು ಅಗತ್ಯ. ದೇಹ ಹೆಚ್ಚು ಬಿಸಿಯಾದಾಗ ದೇಹ ತಂಪಾಗಲು ಬೆವರುತ್ತದೆ. ತಾಪಮಾನ ಕಡಿಮೆ ಮಾಡುವುದು ಪ್ರಮುಖ ಉದ್ದೇಶವಾದರೂ ದೇಹ ಇತರ ಸಂದರ್ಭಗಳಲ್ಲೂ ಬೆವರುವುದು ಸಹಜ. ಹಾಗಾದರೆ ಬೆವರುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ.
ಬೆವರುವುದು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬೆವರಿನ ಮೂಲಕ ರಕ್ತದಲ್ಲಿದ್ದ ವಿಷಕಾರಿ ಅಂಶ ಮತ್ತು ಮುಖ್ಯವಾಗಿ ಉಪ್ಪಿನಾಂಶ ಹೊರಹೋಗುವುದರಿಂದ ಹೃದಯ ಆರೋಗ್ಯವಾಗಿರುತ್ತದೆ.
ಬೆವರು ಚರ್ಮದ ಬುಡದಲ್ಲಿ ಸೇರಿಕೊಂಡಿರುವ ಸೂಕ್ಷ್ಮವಾದ ಧೂಳು, ಬ್ಯಾಕ್ಟೀರಿಯಾ ಮೊದಲಾದವುಗಳನ್ನು ಮಾಲಿನ್ಯರಹಿತವಾಗಿರಿಸುತ್ತದೆ. ಇದು ಚರ್ಮದ ಆರೈಕೆ ಮತ್ತು ಕಾಂತಿಗೆ ಅಗತ್ಯವಾಗಿದೆ.
ಬೆವರಿದಾಗ ದೇಹದಲ್ಲಿ ಇರುವ ಹೆಚ್ಚುವರಿ ಉಪ್ಪಿನಾಂಶವು ಹೊರಗೆ ಹೋಗುತ್ತದೆ ಜೊತೆಗೆ ಮೂಳೆಗಳಲ್ಲಿನ ಕ್ಯಾಲ್ಸಿಯಂ ಮಟ್ಟವು ಸರಿಯಾಗಿ ಇರುತ್ತದೆ ಇದರಿಂದ ಕಿಡ್ನಿಯಲ್ಲಿ ಕಲ್ಲುಗಳಾಗುವ ಸಾಧ್ಯತೆ ಕಡಿಮೆಯಾಗುತ್ತದೆ. ಅದಲ್ಲದೆ ಹೆಚ್ಚು ಬೆವರುವ ಮೂಲಕ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ನೀರಡಿಕೆ ಹೆಚ್ಚುತ್ತದೆ. ಆ ಮೂಲಕ ದೇಹಕ್ಕೆ ನೀರು ಹೆಚ್ಚಾಗಿ ಹೋಗಿ ಮೂತ್ರಪಿಂಡಗಳ ಕ್ಷಮತೆಯೂ ಉತ್ತಮಗೊಳ್ಳುತ್ತದೆ.
ಬೆವರುವುದು ನಿಮ್ಮ ದೇಹವನ್ನು ಶುದ್ಧೀಕರಿಸುವ ಅತ್ಯಂತ ಪರಿಣಾಮಕಾರಿ ಮಾರ್ಗಗಳಲ್ಲಿ ಒಂದಾಗಿದೆ. ಜೊತೆಗೆ ಚರ್ಮದ ರಂಧ್ರವನ್ನು ಬ್ಲಾಕ್ ಮಾಡುವಂತಹ ಕಲ್ಮಷ ಮತ್ತು ಚರ್ಮಕ್ಕೆ ಹಾನಿ ಉಂಟು ಮಾಡುವ ವಿಷಕಾರಿ ಅಂಶವನ್ನು ಬೆವರು ಹೊರಗೆ ಹಾಕುತ್ತದೆ.
ಇದನ್ನೂ ಓದಿ: ಈ ಆಯುರ್ವೇದ ಪದಾರ್ಥಗಳು ಸದಾ ನಿಮ್ಮನ್ನು ಆರೋಗ್ಯವಾಗಿಡುತ್ತದೆ
ವಾಸ್ತವವಾಗಿ, ಬೆವರು ಹಾನಿಕಾರಕ ಸೋಂಕುಗಳು ಮತ್ತು ರೋಗಾಣುಗಳ ವಿರುದ್ಧ ರಕ್ಷಣೆ ಪಡೆದುಕೊಳ್ಳಲು ಸಹಾಯ ಮಾಡುತ್ತದೆ. ಬೆವರಿನಲ್ಲಿ ಕಂಡುಬರುವ ಆಂಟಿಮೈಕ್ರೊಬಿಯಲ್ ಪೆಪ್ಟೈಡ್ಗಳಲ್ಲಿ ಬ್ಯಾಕ್ಟೀರಿಯಾ ವಿರೋಧಿ, ಆಂಟಿವೈರಲ್ ಮತ್ತು ಶಿಲೀಂಧ್ರ ವಿರೋಧಿ ಗುಣಗಳಿರುವುದರಿಂದ ಶೀತ ಮತ್ತು ಕೆಮ್ಮನ್ನು ತಡೆಯುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: