ತೂಕ ಇಳಿಸಬೇಕಾ?; ಅತಿಯಾಗಿ ತಿನ್ನುವುದನ್ನು ತಪ್ಪಿಸಲು ಇಲ್ಲಿವೆ 7 ಉಪಾಯ

|

Updated on: Sep 03, 2023 | 8:51 AM

ತಿನ್ನುವಾಗ ಟಿವಿ ಅಥವಾ ಸ್ಮಾರ್ಟ್‌ಫೋನ್‌ಗಳನ್ನು ನೋಡುವ ಅಭ್ಯಾಸ ಬಿಟ್ಟುಬಿಡಿ. ಇದರಿಂದ ನೀವು ಎಷ್ಟು ತಿಂದಿರಿ ಎಂಬುದು ನಿಮಗೇ ಗೊತ್ತಾಗುವುದಿಲ್ಲ. ನೀವೇನಾದರೂ ನಿಮ್ಮ ಆಹಾರ ಸೇವನೆಯ ಪ್ರಮಾಣವನ್ನು ಕಡಿಮೆಗೊಳಿಸಲು ಯೋಚಿಸಿದ್ದರೆ ಅದಕ್ಕೆ ಕೆಲವು ಸುಲಭ ಉಪಾಯಗಳು ಇಲ್ಲಿವೆ.

ತೂಕ ಇಳಿಸಬೇಕಾ?; ಅತಿಯಾಗಿ ತಿನ್ನುವುದನ್ನು ತಪ್ಪಿಸಲು ಇಲ್ಲಿವೆ 7 ಉಪಾಯ
ಸಾಂದರ್ಭಿಕ ಚಿತ್ರ
Follow us on

ಇಂದಿನ ವೇಗದ ಜಗತ್ತಿನಲ್ಲಿ, ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು ಎಂದುಕೊಂಡರೂ ಆಹಾರವನ್ನು ನೋಡಿದ ಕೂಡಲೆ ಕಂಟ್ರೋಲ್ ಮಾಡಲು ಸಾಧ್ಯವಾಗದೆ ತಿಂಡಿಪೋತರಾಗುತ್ತಾರೆ. ನಾವು ಎಷ್ಟು ತಿನ್ನುತ್ತೇವೆ ಎನ್ನುವುದಕ್ಕಿಂತಲೂ ಏನು ತಿನ್ನುತ್ತೇವೆ ಎಂಬುದು ಬಹಳ ಮುಖ್ಯವಾಗುತ್ತದೆ. ಹೀಗಾಗಿ, ನೀವೇನಾದರೂ ನಿಮ್ಮ ಆಹಾರ ಸೇವನೆಯ ಪ್ರಮಾಣವನ್ನು ಕಡಿಮೆಗೊಳಿಸಲು ಯೋಚಿಸಿದ್ದರೆ ಅದಕ್ಕೆ ಕೆಲವು ಸುಲಭ ಉಪಾಯಗಳು ಇಲ್ಲಿವೆ.

  1. ತಿನ್ನುವಾಗ ನಿಮ್ಮ ಆಹಾರದ ಬಗ್ಗೆ ಹೆಚ್ಚು ಗಮನವಿರಲಿ. ತಿನ್ನುವಾಗ ಟಿವಿ ಅಥವಾ ಸ್ಮಾರ್ಟ್‌ಫೋನ್‌ಗಳನ್ನು ನೋಡುವ ಅಭ್ಯಾಸ ಬಿಟ್ಟುಬಿಡಿ. ಇದರಿಂದ ನೀವು ಎಷ್ಟು ತಿಂದಿರಿ ಎಂಬುದು ನಿಮಗೇ ಗೊತ್ತಾಗುವುದಿಲ್ಲ.
  2. ದೊಡ್ಡ ತಟ್ಟೆ ತೆಗೆದುಕೊಂಡಾಗ ಜಾಸ್ತಿ ತಿಂಡಿ, ಊಟವನ್ನು ಅದರಲ್ಲಿ ಹಾಕಿಕೊಳ್ಳುತ್ತೇವೆ. ಹೀಗಾಗಿ, ಸಣ್ಣ ತಟ್ಟೆಯನ್ನೇ ತೆಗೆದುಕೊಂಡು ಅದರಲ್ಲಿ ಆಹಾರವನ್ನು ಹಾಕಿಕೊಂಡು ತಿನ್ನಿ. ಇದರಿಂದ ನೀವು ತಟ್ಟೆ ತುಂಬ ತಿಂದಿರೆಂದು ನಿಮ್ಮ ಮನಸು ಭಾವಿಸುತ್ತದೆ.
  3. ಆಗಾಗ ನೀರು ಕುಡಿಯುತ್ತಿರುವುದರಿಂದ ನೀವು ಜಾಸ್ತಿ ಆಹಾರ ಸೇವಿಸುವುದನ್ನು ತಪ್ಪಿಸಬಹುದು. ಕೆಲವೊಮ್ಮೆ ಬಾಯಾರಿಕೆಯನ್ನು ಹಸಿವು ಎಂದು ತಪ್ಪಾಗಿ ಗ್ರಹಿಸುತ್ತೇವೆ. ನಿಮ್ಮ ಹಸಿವನ್ನು ನಿಯಂತ್ರಿಸಲು ಊಟಕ್ಕೆ ಮೊದಲು ಒಂದು ಲೋಟ ನೀರು ಕುಡಿಯಿರಿ.
  4. ಕಡಿಮೆ ತಿನ್ನಬೇಕೆಂದು ಒಂದು ಹೊತ್ತಿನ ಊಟವನ್ನೇ ಬಿಡುವುದು ಒಳ್ಳೆಯದಲ್ಲ. ಊಟವನ್ನು ಬಿಟ್ಟುಬಿಡುವುದು ತೀವ್ರವಾದ ಹಸಿವಿಗೆ ಕಾರಣವಾಗಬಹುದು. ಇದರಿಂದ ಜಾಸ್ತಿ ತಿನ್ನುವ ಮನಸಾಗುತ್ತದೆ.
  5. ಫೈಬರ್ ಭರಿತ ಆಹಾರಗಳನ್ನು ಹೆಚ್ಚು ಸೇವಿಸಿ. ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ದ್ವಿದಳ ಧಾನ್ಯಗಳೊಂದಿಗೆ ನಿಮ್ಮ ಆಹಾರದಲ್ಲಿ ಹೆಚ್ಚಿನ ಫೈಬರ್ ಅನ್ನು ಸೇರಿಸಿ. ಫೈಬರ್ ನಿಮ್ಮ ಹಸಿವನ್ನು ಬೇಗ ಕಡಿಮೆ ಮಾಡುತ್ತದೆ.
  6. ಪ್ರೋಟೀನ್ ಭರಿತ ಆಹಾರಗಳನ್ನು ಹೆಚ್ಚು ಸೇವಿಸಿದರೆ ಜಾಸ್ತಿ ಆಹಾರ ಸೇವಿಸುವ ಅಗತ್ಯ ಇರುವುದಿಲ್ಲ. ನಿಮ್ಮ ಊಟದಲ್ಲಿ ಕೋಳಿ, ಮೀನು, ಮೊಸರು, ತರಕಾರಿ, ಬೀನ್ಸ್‌ನಂತಹ ಪ್ರೋಟೀನ್‌ಗಳನ್ನು ಸೇರಿಸಿ.
  7. ಊಟ ಅಥವಾ ತಿಂಡಿ ತಿನ್ನುವಾಗ ನಿಮ್ಮ ಆಹಾರವನ್ನು ನಿಧಾನವಾಗಿ ಮತ್ತು ಸಂಪೂರ್ಣವಾಗಿ ಜಗಿದು ತಿನ್ನಿರಿ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ