Health: ಸಂಧಿವಾತ, ಗಂಟುಮೂಳೆ ನೋವು ಯಾಕಾಗುತ್ತದೆ? ಇದಕ್ಕೆಲ್ಲಾ ಜಾಯಿಂಟ್ ರಿಪ್ಲೇಸ್​ಮೆಂಟ್ ಸೂಕ್ತ ಪರಿಹಾರವೇ?

|

Updated on: Mar 27, 2021 | 9:58 PM

ಜನಸಾಮಾನ್ಯರಿಗೆ ಅರ್ಥವಾಗುವಂತೆ ಗಂಟುಮೂಳೆ, ಜಾಯಿಂಟ್ ರಿಪ್ಲೇಸ್​ಮೆಂಟ್ ವಿವರಗಳನ್ನು ಬರೆದಿದ್ದಾರೆ. ಕೃತಿಯ ಆಯ್ದ ಭಾಗವನ್ನು ಟಿವಿ9 ಕನ್ನಡ ಡಿಜಿಟಲ್ ಓದುಗರ ಮುಂದೆ ಸರಣಿ ರೂಪದಲ್ಲಿ ತೆರೆದಿಡುತ್ತಿದೆ. ಅದರ ಮೊದಲ ಭಾಗ ಇಲ್ಲಿದೆ.

Health: ಸಂಧಿವಾತ, ಗಂಟುಮೂಳೆ ನೋವು ಯಾಕಾಗುತ್ತದೆ? ಇದಕ್ಕೆಲ್ಲಾ ಜಾಯಿಂಟ್ ರಿಪ್ಲೇಸ್​ಮೆಂಟ್ ಸೂಕ್ತ ಪರಿಹಾರವೇ?
ಸಂಧಿವಾತ, ಗಂಟುಮೂಳೆ ನೋವಿಗೆ ಪರಿಹಾರವೇನು?
Follow us on

ಗಂಟುಮೂಳೆ ನೋವು ಅಥವಾ ಸಂಧಿವಾತ ಬಹಳಷ್ಟು ವಯಸ್ಕರನ್ನು ಅಥವಾ ಕೆಲವು ಯುವಸಮುದಾಯದ ಜನರನ್ನೂ ಕಾಡುವ ಸಮಸ್ಯೆ. ಇದಕ್ಕೆ ಪರಿಹಾರವಾಗಿ ಏನು ಕ್ರಮ ಕೈಗೊಳ್ಳಬಹುದು? ಗಂಟುಮೂಳೆ ಬದಲಾವಣೆಯ ಶಸ್ತ್ರಚಿಕಿತ್ಸೆ (ಜಾಯಿಂಟ್ ರಿಪ್ಲೇಸ್​ಮೆಂಟ್) ಮಾಡಬಹುದೇ? ಜಾಯಿಂಟ್ ರಿಪ್ಲೇಸ್​ಮೆಂಟ್ ಎಂದರೇನು? ಅದರಿಂದ ಸಮಸ್ಯೆ ಆಗುತ್ತಾ? ಹೀಗೇ ಹಲವು ಪ್ರಶ್ನೆಗಳು ಜನಸಾಮಾನ್ಯರಾದ ನಮ್ಮ ಮುಂದಿರುವುದು ಸಹಜ. ಅದೆಲ್ಲದಕ್ಕೂ ಉತ್ತರವಾಗಿ ಬೆಂಗಳೂರಿನ ಖ್ಯಾತ ಮೂಳೆ ಶಸ್ತ್ರಚಿಕಿತ್ಸಕ ಡಾ. ನಾರಾಯಣ ಹುಳ್ಸೆ ‘ಜಾಯಿಂಟ್ ರಿಪ್ಲೇಸ್​ಮೆಂಟ್ಸ್’ (Joint Replacements- A Patient’s Handbook) ಎಂಬ ಕೃತಿ ರಚಿಸಿದ್ದಾರೆ.

ಜನಸಾಮಾನ್ಯರಿಗೆ ಅರ್ಥವಾಗುವಂತೆ ಗಂಟುಮೂಳೆ, ಜಾಯಿಂಟ್ ರಿಪ್ಲೇಸ್​ಮೆಂಟ್ ವಿವರಗಳನ್ನು ಬರೆದಿದ್ದಾರೆ. ಕೃತಿಯ ಆಯ್ದ ಭಾಗವನ್ನು ಟಿವಿ9 ಕನ್ನಡ ಡಿಜಿಟಲ್ ಓದುಗರ ಮುಂದೆ ಸರಣಿ ರೂಪದಲ್ಲಿ ತೆರೆದಿಡುತ್ತಿದೆ. ಅದರ ಮೊದಲ ಭಾಗ ಇಲ್ಲಿದೆ.

ಗಂಟುಮೂಳೆ ಏನೆಂದು ಸರಿಯಾಗಿ ಅರ್ಥಮಾಡಿಕೊಳ್ಳಿ
ಚಲನಶೀಲತೆಗೆ ಸಹಕಾರಿಯಾಗಿ ಎರಡು ಮೂಳೆಗಳು ಒಂದೆಡೆ ಸೇರುವ ಭಾಗವನ್ನು ಮೂಳೆ ಸಂಧಿ, ಸಂದು ಅಥವಾ ಜಾಯಿಂಟ್ ಎಂದು ಕರೆಯುತ್ತಾರೆ. ಎಲ್ಲಾ ವಿಧದ ಸಂಧಿವಾತಗಳಲ್ಲಿ ಮೂಳೆಸಂದುಗಳಿಗೆ ಕ್ರಮೇಣ ಹಾನಿ ಉಂಟಾಗುತ್ತದೆ. ಮೂಳೆಸಂದುಗಳಲ್ಲಿ ಇರುವ ತೆಳುವಾದ ಮೃದು ಎಲುಬಿಗೆ (ಕಾರ್ಟಿಲೆಜ್) ಹಾನಿಯಾಗುತ್ತದೆ. ಆದರೆ, ದುರಾದೃಷ್ಟವಷಾತ್ ಕಾರ್ಟಿಲೆಜ್​ಗಳಿಗೆ ಆಂತರಿಕವಾಗಿ ಸಮಸ್ಯೆಯನ್ನು ಗುಣಪಡಿಸುವ ಶಕ್ತಿ ಇರುವುದಿಲ್ಲ. ಜೊತೆಗೆ, ಅವುಗಳನ್ನು ಸರಿಪಡಿಸಲು ಪರಿಣಾಮಕಾರಿ ಔಷಧವೂ ಲಭ್ಯವಿಲ್ಲ.

ಸಂಧಿವಾತ ಹಾಗೂ ಗಂಟುಮೂಳೆ ನೋವು
ಮೂಳೆಸಂದುಗಳಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಂದ ಮೂಳೆಸಂಧಿ ನೋವು ಕಾಣಿಸಿಕೊಳ್ಳಬಹುದು. ಅಸ್ಥಿ ಸಂಧಿವಾತ (Osteoarthritis also called ‘wear and tear’) ಎಂಬುದು ವಯಸ್ಕರಲ್ಲಿ ಕಂಡುಬರುವ ಸಾಮಾನ್ಯ ಸಂಧಿನೋವಾಗಿದೆ.

ಜಾಯಿಂಟ್ ರಿಪ್ಲೇಸ್​ಮೆಂಟ್ ಎಂದರೇನು?
ಜಾಯಿಂಟ್ ರಿಪ್ಲೇಸ್​ಮೆಂಟ್ ಅಥವಾ ಗಂಟುಮೂಳೆ ಬದಲಾಯಿಸುವ ಶಸ್ತ್ರಚಿಕಿತ್ಸೆ ವೈದ್ಯಕೀಯ ಚಿಕಿತ್ಸೆಯ ಒಂದು ಕ್ರಮವಾಗಿದೆ. ಅದರಂತೆ, ಸಂಧಿವಾತಕ್ಕೆ ಒಳಗಾದ ಅಥವಾ ಹಾನಿಗೊಂಡ ಜಾಯಿಂಟ್​ನ್ನು ಕೃತಕ ಉಪಕರಣಗಳಿಂದ ಬದಲಾಯಿಸಿಕೊಳ್ಳಬಹುದಾಗಿದೆ. ಇದು ಬಹುಯಶಸ್ವಿ ಹಾಗೂ ಜನಪ್ರಿಯ ಚಿಕಿತ್ಸಾ ವಿಧಾನವಾಗಿದೆ.

ಜಾಯಿಂಟ್ ರಿಪ್ಲೇಸ್​ಮೆಂಟ್​ನ್ನು ಆರ್ತ್ರೋಪ್ಲ್ಯಾಸ್ಟಿ ಎಂದೂ ಕರೆಯುತ್ತಾರೆ. ಇದು ಮೂಳೆಗೆ ಸಂಬಂಧಿಸಿದ ಶಸ್ತ್ರಚಿಕಿತ್ಸಾ ವಿಧಾನವಾಗಿದೆ. ಹಾನಿಗೊಳಗಾದ ಎಲುಬನ್ನು ಪ್ರಾಸ್ಥೆಸಿಸ್ ಎಂಬ ಕೃತಕ ಪರಿಕರದ ಮೂಲಕ ಬದಲಾಯಿಸಿಕೊಳ್ಳಬಹುದು. ಈ ಚಿಕಿತ್ಸೆಯಿಂದ ಎಲುಬು ಸಂಧಿಯ ನೋವು ನಿವಾರಿಸಬಹುದು.

ಸಂಪೂರ್ಣ ಗಂಟು ಬದಲಾವಣೆ ಹೆಚ್ಚಾಗಿ ಮಾಡಿಸಿಕೊಳ್ಳುವ ಶಸ್ತ್ರಚಿಕಿತ್ಸಾ ವಿಧಾನವಾಗಿದೆ. ಜೊತೆಗೆ, ಸಂಪೂರ್ಣ ಭುಜಭಾಗ, ಮೊಣಕೈ, ಮೊಣಕಾಲು, ಮಣಿಗಂಟು ಹಾಗೂ ಕೈ, ಬೆರಳುಗಳ ಇತರ ಸಣ್ಣ ಮೂಳೆಸಂಧಿಗಳ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ.

ಗಂಟುಮೂಳೆ ಬದಲಾವಣೆ ಶಸ್ತ್ರಚಿಕಿತ್ಸೆಯನ್ನು ಹೇಗೆ ತಪ್ಪಿಸಿಕೊಳ್ಳಬಹುದು?
ಗಂಟುಮೂಳೆ ಶಸ್ತ್ರಚಿಕಿತ್ಸೆ ತಡೆಯಲು ಕೆಲವು ಅಂಶಗಳನ್ನು ಗಮನದಲ್ಲಿ ಇರಿಸಿಕೊಳ್ಳುವುದು ಬಹುಮುಖ್ಯವಾಗಿದೆ. ಸಣ್ಣ ವಯಸ್ಸನಿಂದ ಗಂಟುಮೂಳೆಯ ಬಗ್ಗೆ ಕಾಳಜಿ ವಹಿಸುವುದರಿಂದ ಮೂಳೆಸಂದುಗಳನ್ನು ಜೋಪಾನವಾಗಿ ಇಟ್ಟುಕೊಳ್ಳಬಹುದು.

ಹಾನಿಗೊಳಗಾದ ಮೃದು ಎಲುಬು ಅಥವಾ ಕಾರ್ಟಿಲೆಜ್​ನ್ನು ಈಗಿನ ಚಿಕಿತ್ಸಾ ವಿಧಾನದಿಂದ ಸರಿಪಡಿಸಬಹುದೆ? ಎಲುಬು ಹಾನಿಯಾಗದಂತೆ ತಡೆಯಲು ಯಾವುದಾದರೂ ಮಾರ್ಗಗಳಿವೆಯೇ? ಮೊದಲಿನ ಹಂತದಲ್ಲೇ ಮೂಳೆ ಸಮಸ್ಯೆ ಕಂಡುಬಂದರೆ, ಎಲುಬು ಬದಲಿಸುವಿಕೆಯನ್ನು ತಡೆಗಟ್ಟಬಹುದೇ? ಶಸ್ತ್ರಚಿಕಿತ್ಸೆಯ ಮೂಲಕ ಮೃದು ಎಲುಬು ಸರಿಯಾಗುತ್ತದೆಯೇ? ಮೂಳೆತಜ್ಞರಿಗೆ ಎದುರಾಗುವ ಸಾಮಾನ್ಯ ಪ್ರಶ್ನೆಗಳಿವು.

ಮೂಳೆಸಂಧಿ ನೋವು ಹಾಗೂ ಸಂಧಿವಾತ ಕೇವಲ ಔಷಧೋಪಚಾರದಿಂದ ಗುಣಪಡಿಸಬಹುದಾದ ಸಮಸ್ಯೆಗಳಲ್ಲ ಎಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕು. ಹಾಗಾಗಿ, ಸೂಕ್ತವಲ್ಲದ, ನಿರುಪಯೋಗಿ ಥೆರಪಿಗಳಿಗೆ ಜನರು ಮಾರುಹೋಗಬಾರದು. ವಾಣಿಜ್ಯ ಲಾಭಾಂಶಕ್ಕೆ ಜಾಹೀರಾತು ಮಾಡಲ್ಪಡುವ ಇಂತಹಾ ಔಷಧೋಪಾಚರವನ್ನು ಜನರು ಹಿಂಬಾಲಿಸಬಾರದು. ಬದಲಾಗಿ, ಮೂಳೆತಜ್ಞರೊಂದಿಗೆ ನಿಮ್ಮ ಸಮಸ್ಯೆ ಹೇಳಿಕೊಳ್ಳುವುದು ಉತ್ತಮ.

ಸಂಧಿವಾತ, ಗಂಟುಮೂಳೆ ನೋವು ಯಾಕಾಗುತ್ತದೆ?
ಮೂಳೆಸಂದುಗಳ ನೋವನ್ನು ಆರಂಭದ ಹಂತಗಳಲ್ಲಿ ಕಡಿಮೆ ಮಾಡಲು ಕೆಲವು ಸಾಧ್ಯತೆಗಳಿದೆ. ಆದರೆ, ಯುವಜನರಿಗೆ ಅಥವಾ ಜಾಯಿಂಟ್ ರಿಪ್ಲೇಸ್​ಮೆಂಟ್ ಮಾಡಲಾಗದವರಿಗೆ ಈ ಸೌಲಭ್ಯ ಉಪಕಾರಿಯಾಗಲಿದೆ.

ಗಂಟುಮೂಳೆ ನೋವಿಗೆ ಸಂಧಿವಾತವೇ ಸಾಮಾನ್ಯ ಕಾರಣವಾಗಿದೆ. ಆದರೆ, ಯುವಕರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳಲು ಗಂಟುಗಳಿಗೆ ಸರಿಯಾದ ಕೆಲಸ ಇಲ್ಲದಿರುವುದು, ಕಡಿಮೆ ವ್ಯಾಯಾಮ ಇತ್ಯಾದಿಗಳು ಕಾರಣವಾಗಿದೆ. ಕ್ರಮೇಣ ಇದೇ ಸಮಸ್ಯೆ ಗಂಟುಮೂಳೆ ಬದಲಾವಣೆ ಶಸ್ತ್ರಚಿಕಿತ್ಸೆಗೂ ಕಾರಣವಾಗುತ್ತದೆ.

ಏನೇ ಆದರೂ, ಗಂಟುಮೂಳೆ ಬದಲಾವಣೆ ಶಸ್ತ್ರಚಿಕಿತ್ಸೆಯನ್ನು ಕೊನೆಯ ಆಯ್ಕೆಯಾಗಿ ಇಟ್ಟುಕೊಳ್ಳುವುದು ಒಳ್ಳೆಯದು. ಗಂಟುಮೂಳೆ ಶಸ್ತ್ರಚಿಕಿತ್ಸೆಗೂ ಮೊದಲು ವೈದ್ಯರೊಂದಿಗೆ ಚರ್ಚಿಸಿ, ಬೇರೆ ಪ್ರಯತ್ನಗಳನ್ನೂ ನೀವು ಮಾಡಬಹುದು. ಹಲವು ಮಂದಿ ಸಣ್ಣ ಪ್ರಮಾಣದ ಗಂಟುಮೂಳೆ ನೋವಿನಿಂದ ಬಳಲುತ್ತಾರೆ. ಅಂಥವರಿಗೆ ಜಾಯಿಂಟ್ ರಿಪ್ಲೇಸ್​ಮೆಂಟ್ ಶಸ್ತ್ರಚಿಕಿತ್ಸೆ ಬೇಕಾಗಿರುವುದಿಲ್ಲ.

JOINT REPLACEMENT ಪುಸ್ತಕದ ಜೊತೆ ಲೇಖಕ ಹಾಗೂ ವೈದ್ಯ ಡಾ. ನಾರಾಯಣ ಹುಳ್ಸೆ

ಇದನ್ನೂ ಓದಿ: Health Tips: ಲಾಕ್​ಡೌನ್​ನಲ್ಲಿ ತೂಕ ಹೆಚ್ಚಿಸಿಕೊಂಡ್ರಾ? ಆರೋಗ್ಯಕರವಾಗಿ ತೂಕ ಇಳಿಸಲು ಇಲ್ಲಿದೆ 6 ಅಂಶಗಳು

Health Tips: ತುಂಬ ಒತ್ತಡದಿಂದ ಬಳಲುತ್ತಿದ್ದೀರಾ.. ನಿದ್ದೆಯೂ ಬರುತ್ತಿಲ್ಲವಾ?- ಅಶ್ವಗಂಧ ಬಳಕೆ ಮಾಡಿ ನೋಡಿ..