ಬೆಂಗಳೂರು: ಕೇರಳದ ಕೊಲ್ಲಂ ಸೇರಿದಂತೆ 3 ಭಾಗಗಳಲ್ಲಿ ಹೊಸ ರೂಪದ ಡೆಂಗ್ಯೂ ರೋಗ ಪತ್ತೆಯಾಗಿದೆ. ಈ ಡೆಂಗ್ಯೂ ರೂಪಾಂತರಿಯಿಂದಾಗಿ ಕೇರಳದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಕೇರಳದಲ್ಲಿ ಈಗಾಗಲೇ ಕೊವಿಡ್, ನಿಫಾ ಅಬ್ಬರ ಜೋರಾಗಿದ್ದು, ಅದರ ಜೊತೆಗೆ ಡೆಂಗ್ಯೂ ರೂಪಾಂತರಿ (DENV-2) ಕೂಡ ಆತಂಕ ಮೂಡಿಸಿದೆ. ಇತ್ತ ಬೆಂಗಳೂರಿನಲ್ಲಿ ಕೂಡ ಡೆಂಗ್ಯೂ ಜ್ವರದ (Dengue Fever) ಗುಣಲಕ್ಷಣಗಳಿರುವ ನಿಗೂಢ ಜ್ವರ ಪತ್ತೆಯಾಗಿದ್ದು, ಮಕ್ಕಳಲ್ಲಿ ವೈರಲ್ ಜ್ವರ ಕಂಡುಬರುತ್ತಿದೆ. ಕೊರೊನಾ ಲಸಿಕೆಯಿಂದ ಕೊವಿಡ್ ಸೋಂಕು ನಿಯಂತ್ರಣಕ್ಕೆ ಬರುತ್ತಿರುವ ಬೆನ್ನಲ್ಲೇ ಡೆಂಗ್ಯೂ ಆತಂಕ ಶುರುವಾಗಿದೆ. ಕೇರಳ, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಭಾರತದ 11 ರಾಜ್ಯಗಳಲ್ಲಿ ಡೆಂಗ್ಯೂ ರೂಪಾಂತರಿ ಪತ್ತೆಯಾಗಿದೆ.
ಇದೀಗ ಕೇರಳ, ತಮಿಳುನಾಡು, ಕರ್ನಾಟಕದಲ್ಲಿ ವಿಪರೀತ ಮಳೆಯಾಗುತ್ತಿರುವುದರಿಂದ ಈ ಡೆಂಗ್ಯೂ ಮಾದರಿಯ ಜ್ವರ ಹರಡುವಿಕೆಯೂ ಹೆಚ್ಚಾಗಿದೆ. ಅದರಲ್ಲೂ ಮಕ್ಕಳಲ್ಲಿ ಈ ರೂಪಾಂತರಿ ಡೆಂಗ್ಯೂ ಪ್ರಮಾಣ ಹೆಚ್ಚಾಗಿದೆ. ಹಾಗಾದರೆ, ಈ ಹೊಸ ರೋಗದ ಗುಣಲಕ್ಷಣಗಳೇನು? ಇಲ್ಲಿದೆ ಮಾಹಿತಿ.
ಕಣ್ಣಿನ ಹಿಂಭಾಗದಲ್ಲಿ ನೋವು, ಒಣ ಕಫ, ಕೆಮ್ಮು, ಹಲ್ಲಿನ ಒಸಡಿನಲ್ಲಿ ರಕ್ತ ಒಸರುವುದು, ಅತಿ ಹೆಚ್ಚಿನ ಋತುಸ್ರಾವ, ಮೂಗಿನಿಂದ ರಕ್ತ ಸುರಿಯುವುದು, ಮಲ ವಿಸರ್ಜನೆ ವೇಳೆ ರಕ್ತ ಸುರಿಯುವುದು, ವಿಪರೀತ ಸುಸ್ತು ಮುಂತಾದ ಲಕ್ಷಣಗಳು ಈ ರೂಪಾಂತರಿ ಡೆಂಗ್ಯೂ ಜ್ವರದಲ್ಲಿ ಕಾಣಿಸಿಕೊಳ್ಳುತ್ತವೆ. ಬೇರೆ ವರ್ಷಗಳಿಗಿಂತ ಈ ವರ್ಷ ಡೆಂಗ್ಯೂ ಕೇಸ್ಗಳು ಹೆಚ್ಚಾಗಿವೆ.
ಈ ಡೆಂಗ್ಯೂ ರೂಪಾಂತರಿ (ಡಿಇಎನ್ವಿ) ಹೆಚ್ಚು ಆತಂಕಕ್ಕೆ ಕಾರಣವಾಗಿದೆ. ಅದಕ್ಕೆ ಕಾರಣವೂ ಇದೆ. ಉತ್ತರ ಪ್ರದೇಶ, ಕೇರಳ ಮುಂತಾದ ರಾಜ್ಯಗಳಲ್ಲಿ ಈ ರೋಗ ಹೆಚ್ಚಾಗಿದೆ. ಅದರಲ್ಲೂ ಮುಖ್ಯವಾಗಿ ಮಕ್ಕಳು ಆಸ್ಪತ್ರೆ ಸೇರುವ ಸಂಖ್ಯೆ ಜಾಸ್ತಿಯಾಗಿದೆ. ಸೊಳ್ಳೆಗಳಿಂದ ಹರಡುವ ಈ ರೋಗ ಮಳೆಗಾಲದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಈ ಡೆಂಗ್ಯು ರೂಪಾಂತರಿ ಡಿ1, ಡಿ2, ಡಿ3, ಡಿ4 ಎಂಬ ರೂಪಗಳಲ್ಲಿ ಕಾಣಿಸಿಕೊಳ್ಳುತ್ತವೆ.
ಕೊವಿಡ್ ರೂಪಾಂತರಿ ವೈರಸ್ನಂತೆ ಡೆಂಗ್ಯೂ ರೂಪಾಂತರಿ ಕೂಡ ಅಪಾಯಕಾರಿಯೇ ಎಂಬ ಪ್ರಶ್ನೆಗೆ ಉತ್ತರ ಹೌದು. ಇದು ಮಾಮೂಲಿ ಡೆಂಗ್ಯೂಗಿಂತಲೂ ಅಪಾಯಕಾರಿಯಾಗಿದೆ. ಕೊವಿಡ್ಗೆ ಹೋಲಿಸಿದರೆ ಡೆಂಗ್ಯೂವನ್ನು ಬಹಳ ಹಗುರವಾಗಿ ತೆಗೆದುಕೊಳ್ಳಲಾಗುತ್ತದೆ. ಈ ಎರಡೂ ರೋಗಗಳಿ ಲಕ್ಷಣಗಳೂ ಕೂಡ ಹೆಚ್ಚೂ ಕಡಿಮೆ ಒಂದೇ ರೀತಿಯಾಗಿರುತ್ತದೆ. ಆರಂಭದಲ್ಲಿ ಕೊವಿಡ್ ಜ್ವರವಾ, ಡೆಂಗ್ಯೂ ಜ್ವರವಾ, ವೈರಲ್ ಜ್ವರವಾ ಎಂದು ಪತ್ತೆ ಹೆಚ್ಚುವುದು ಸ್ವಲ್ಪ ಕಷ್ಟವೇ. ಡೆಂಗ್ಯೂ ಜ್ವರ ಬಂದರೆ ಅತಿಯಾದ ಜ್ವರ, ವಿಪರೀತ ತಲೆನೋವು, ಮಂಡಿ ನೋವು, ಗಂಟು ನೋವು ಕಾಣಿಸಿಕೊಳ್ಳುತ್ತದೆ. ಹಾಗೇ, ಹೊಟ್ಟೆ ನೋವು ಕೂಡ ಇರುತ್ತದೆ.
ವಿಪರೀತ ಚಳಿ ಹಾಗೂ ಜ್ವರದಿಂದ ಆರಂಭವಾಗುವ ಡೆಂಗ್ಯೂ ಜ್ವರ ಸೋಂಕಿತ ವ್ಯಕ್ತಿಯಿಂದ ಬೇರೊಬ್ಬರಿಗೆ ಗಾಳಿಯ ಮೂಲಕ ಹರಡುತ್ತದೆ. ಮುಂಜಾನೆ ಕಚ್ಚುವ ಈಡಿಸ್ ಎಂಬ ಸೊಳ್ಳೆಯಿಂದ ಹರಡುವ ಡೆಂಗ್ಯೂ ನಮ್ಮ ದೇಹದೊಳಗೆ ಸೇರಿಕೊಳ್ಳುತ್ತಿದ್ದಂತೆ ಬಳಿ ರಕ್ತ ಕಣಗಳು ಕಡಿಮೆಯಾಗುತ್ತವೆ. ತೀವ್ರ ಜ್ವರ, ಸಂದು ನೋವು, ವಿಪರೀತ ತಲೆನೋವು, ತಲೆಸುತ್ತು, ವಾಂತಿ, ಮೈಯಲ್ಲಿ ಗುಳ್ಳೆಗಳು ಡೆಂಗ್ಯೂ ರೋಗದ ಮುಖ್ಯ ಲಕ್ಷಣಗಳು. 105 ಡಿಗ್ರಿ ತಾಪಮಾನಕ್ಕಿಂತಲೂ ಹೆಚ್ಚಿರುವ ನಿರಂತರ ಜ್ವರ ಕೊವಿಡ್ ಹಾಗೂ ಡೆಂಗ್ಯೂ ಎರಡೂ ರೋಗಗಳ ಲಕ್ಷಣವೂ ಹೌದು.
ಜ್ವರ ಬಂದಾಗ ದೇಹದ ಉಷ್ಣಾಂಶವನ್ನು ಹೆಚ್ಚಾಗುತ್ತಿದೆಯಾ ಅಥವಾ ಕಡಿಮೆಯಾಗುತ್ತಿದೆಯಾ? ಎಂಬುದನ್ನು ಪರೀಕ್ಷಿಸಿಕೊಳ್ಳುತ್ತಿರಿ. ಡೆಂಗ್ಯೂ ಬಂದರೆ ಮೈಯಲ್ಲಿ ಗುಳ್ಳೆ, ಚರ್ಮದ ಸುಕ್ಕು ಹಾಗೂ ಕೆಲವು ದಿನಗಳ ನಂತರ ತಲೆ ಸುತ್ತು ಹಾಗೂ ವಾಂತಿ ಕಾಣಿಸಿಕೊಳ್ಳುತ್ತದೆ. ಡೆಂಗ್ಯೂ ರೋಗಲಕ್ಷಣಗಳು ಸಾಮಾನ್ಯವಾಗಿ ಸೋಂಕು ತಗುಲಿದ ಮೂರರಿಂದ 14 ದಿನಗಳಲ್ಲಿ ಕಾಣಿಸಿಕೊಳ್ಳುತ್ತದೆ. ಹೆಚ್ಚಿನ ಜ್ವರ, ತಲೆನೋವು, ವಾಂತಿ, ಸ್ನಾಯು ಮತ್ತು ಸಂಧಿ ನೋವು, ಮತ್ತು ಗುಳ್ಳೆಗಳು ಕಂಡುಬಂದರೆ ವೈದ್ಯರನ್ನು ಭೇಟಿಯಾಗಿ.
ಡೆಂಗ್ಯೂ ಬಂದಾಗ ಹೆಚ್ಚಿನ ವಿಶ್ರಾಂತಿ ಬಹಳ ಮುಖ್ಯ. ಜ್ವರಕ್ಕೆ ಔಷಧವಾಗಿ ಪ್ಯಾರಸಿಟಮಾಲ್ ಬಳಸಿ. ಆದರೂ ಜ್ವರ ಕಡಿಮೆಯಾಗದಿದ್ದರೆ ಒದ್ದೆ ಬಟ್ಟೆಯಲ್ಲಿ ದೇಹವನ್ನು ಒರೆಸಿ. ದ್ರವ ಪದಾರ್ಥಗಳನ್ನೇ ಹೆಚ್ಚು ಸೇವಿಸಿ. ಅತಿಯಾದ ಸುಸ್ತು ಕಂಡುಬಂದಲ್ಲಿ ಅದು ಪ್ಲೇಟ್ಲೆಟ್ ಕಡಿಮೆಯಾಗಿರುವ ಲಕ್ಷಣವೂ ಆಗಿರಬಹುದು. ಹೊಟ್ಟೆ ನೋವು, ಎದೆನೋವು, ವಾಂತಿ, ರಕ್ತಸ್ರಾವ, ಮೂಗು, ವಸಡು ಮತ್ತು ಮಲಮೂತ್ರದ ಬಣ್ಣದಲ್ಲಿ ವ್ಯತ್ಯಾಸ ಕಂಡುಬಂದರೆ ಅದು ಡೆಂಗ್ಯೂ ಲಕ್ಷಣ. ಡೆಂಗ್ಯೂ ರೂಪಾಂತರಿ ಕೂಡ ಇದೇ ಲಕ್ಷಣಗಳನ್ನು ಹೊಂದಿರುತ್ತದೆ.
ಇದನ್ನೂ ಓದಿ: Dengue Symptoms: ನಿಮ್ಮ ಜ್ವರ ಡೆಂಗ್ಯೂ ಜ್ವರವಾ ಎಂದು ಪತ್ತೆ ಹಚ್ಚುವುದು ಹೇಗೆ?; ಇಲ್ಲಿದೆ ಉಪಯುಕ್ತ ಮಾಹಿತಿ
Dengue: ಮುಂಬೈನಲ್ಲಿ ಏರಿಕೆಯಾದ ಡೆಂಗ್ಯೂ ಪ್ರಕರಣ, ಆಗಸ್ಟ್ ತಿಂಗಳಲ್ಲಿ ಆಸ್ಪತ್ರೆಗೆ ದಾಖಲಾದವರ ಸಂಖ್ಯೆಯಲ್ಲಿ ಹೆಚ್ಚಳ
(Health Tips New Dengue variant DENV-2 spotted in 11 States of India What is the Symptoms of Dengue Fever)
Published On - 12:38 pm, Thu, 23 September 21