ಆರೋಗ್ಯಕರವಾಗಿರುವುದು ಮತ್ತು ದೇಹದ ತೂಕ ಇಳಿಸಿಕೊಳ್ಳುವುದು ಮಾಡಲು ಆಗದೇ ಇರುವ ರಾಕೆಟ್ ಸೈಯನ್ಸ್ ಏನಲ್ಲ. ಎಲ್ಲರೂ ಕೂಡ ತಮ್ಮ ತಮ್ಮ ಪ್ರಯತ್ನದಿಂದ ಆರೋಗ್ಯಕರವಾಗಿ ದೇಹದ ತೂಕ ಇಳಿಸಿಕೊಳ್ಳಬಹುದು. ಹಲವಾರು ಪೌಷ್ಠಿಕ ಆಹಾರ ತಜ್ಞರು ಇಲ್ಲಿ ಸೂಚಿಸಿರುವ ಆರೋಗ್ಯಕರ ಅಂಶಗಳನ್ನೇ ತಿಳಿಸುತ್ತಾರೆ. ಕಡಿಮೆ ಕೊಬ್ಬಿನ (Fat) ಅಂಶಗಳಿರುವ ಆಹಾರ ಸ್ವೀಕರಿಸುವುದು, ಮನೆಯಲ್ಲೇ ಕೈಗೊಳ್ಳಬಹುದಾದ ಫಿಟ್ನೆಸ್ ಸೂತ್ರಗಳನ್ನು ಅಳವಡಿಸುವುದು ಸಣ್ಣ ಅವಧಿಯಲ್ಲೇ ಉತ್ತಮ ಫಲಿತಾಂಶ ಕೊಡಬಹುದು.
ಬೆಳಗ್ಗಿನ ಉಪಹಾರ ಆರೋಗ್ಯಪೂರ್ಣವಾಗಿರಲಿ
ಹಲವಾರು ಮಂದಿ ಬೆಳಗ್ಗೆ ತಿಂಡಿ ತಿನ್ನದೆ, ಅವಸರ ಅವಸರವಾಗಿ ದಿನ ಆರಂಭಿಸುತ್ತಾರೆ. ಕೆಲವಷ್ಟು ಜನರು ತಣ್ಣಗಿನ ಆಹಾರ ಸೇವಿಸುವುದೂ ಮಾಡಬಹುದು. ಅಥವಾ ಪ್ರೊಸೆಸ್ಡ್ ತಿಂಡಿ-ತಿನಿಸುಗಳನ್ನು ತಿನ್ನುವುದೂ ಇದೆ. ಕೆಲಸಕ್ಕೆ ಹೋಗುವ ಯುವಜನರು, ಕಾಲೇಜಿಗೆ ಹೋಗುವ ಮಕ್ಕಳೂ ಹೀಗೆ ಸಂಸ್ಕರಣಗೊಂಡ ತಿಂಡಿಯನ್ನು ತಿನ್ನುತ್ತಾರೆ. ಆದರೆ ಇದು ಉತ್ತಮ ಪದ್ಧತಿಯಲ್ಲ. ನಮ್ಮ ಆರೋಗ್ಯ ವ್ಯವಸ್ಥೆ ಮತ್ತು ತೂಕ ಹೆಚ್ಚಲು ಇಂಥ ಅನಾರೋಗ್ಯಕರ ಪದ್ಧತಿಯೂ ಕಾರಣ. ಬೆಳಗ್ಗೆ ಆದಷ್ಟು ಬಿಸಿಯಾದ, ಮನೆಯಲ್ಲೇ ಮಾಡಿದ ತಿಂಡಿ ಸೇವಿಸಿ.
ಹಣ್ಣು, ತರಕಾರಿ ತಿನ್ನಿರಿ
ಆರೋಗ್ಯ ತಜ್ಞರು ಸಲಹೆ ನೀಡುವಂತೆ ನಾವು ಪ್ರತಿನಿತ್ಯ ಐದರಿಂದ ಏಳು ಬಾರಿ ಹಣ್ಣು ಅಥವಾ ತರಕಾರಿ ಸೇವಿಸಬೇಕು. ಹಣ್ಣು ಮತ್ತು ತರಕಾರಿಗಳು ಫೈಬರ್ ಅಂಶವನ್ನು ಹೊಂದಿರುತ್ತದೆ. ದೇಹದ ಪಚನಕ್ರಿಯೆ ಅಥವಾ ಜೀರ್ಣಶಕ್ತಿ ಉತ್ತಮಗೊಳ್ಳಲು ಸಹಕಾರಿಯಾಗುತ್ತದೆ. ದೇಹದ ಆರೋಗ್ಯ ಸರ್ವತೋಮುಕವಾಗಿ ವೃದ್ಧಿಯಾಗಲು ಸಹಾಯ ಮಾಡುತ್ತದೆ.
ಡ್ರೈ ಫ್ರೂಟ್ಸ್ನಂಥ ಆಹಾರಗಳು ನಿಮ್ಮ ಪಟ್ಟಿಯಲ್ಲಿರಲಿ
ಪ್ರೊಟೀನ್ ಅಧಿಕವಾಗಿ ಹೊಂದಿರುವ ಬೀಜಗಳು, ಡ್ರೈ ಫ್ರೂಟ್ಗಳನ್ನು ಸೇವಿಸುವುದರಿಂದ ಆರೋಗ್ಯ ಉತ್ತಮವಾಗುತ್ತದೆ. ಆಗಾಗ್ಗೆ ಕುರುಕಲು ತಿಂಡಿ, ಕರಿದ, ಖಾರ ಪದಾರ್ಥಗಳನ್ನು ತಿನ್ನುವ ಬದಲು ಇಂಥಾ ಆಹಾರ ಆರೋಗ್ಯಕ್ಕೆ ಒಳ್ಳೆಯದು. ಊಟ-ತಿಂಡಿಯ ನಡುವಿನ ಸಣ್ಣ ಹಸಿವನ್ನು ಓಡಿಸಲು ಈ ಆಹಾರ ಸೇವನೆ ಉತ್ತಮ ಆಯ್ಕೆ. ಹಾಗೆಂದು ಅತಿಯಾಗಿ ಈ ಆಹಾರ ಸೇವನೆ ಕೂಡ ಒಳ್ಳೆಯದಲ್ಲ. ಹೆಚ್ಚು ಕ್ಯಾಲೊರಿ ಪ್ರಮಾಣ ಇರುವ ಈ ಪದಾರ್ಥಗಳನ್ನು ಹೆಚ್ಚು ತಿಂದರೆ ನಿಮ್ಮ ತೂಕ ಇಳಿಸುವ ಗುರಿ ತಪ್ಪಬಹುದು. ನಿಯಮಿತವಾಗಿ ತಿನ್ನಿರಿ.
ಊಟ-ತಿಂಡಿ ಸಮಯದಲ್ಲಿ ಮೊಬೈಲ್ ಇತ್ಯಾದಿ ಬಳಸುವುದು ನಿಲ್ಲಿಸಿ
ಊಟ ಮಾಡುವಾಗ ಮೊಬೈಲ್ ಒತ್ತುವುದು, ಟಿವಿ ನೋಡುವುದು ಹಲವರ ಅಭ್ಯಾಸ. ಈ ಅಭ್ಯಾಸ ಒಳ್ಳೆಯದಲ್ಲ. ದಯವಿಟ್ಟು ಅದನ್ನು ನಿಲ್ಲಿಸಿ. ಟಿವಿ ನೋಡುತ್ತಾ, ಮೊಬೈಲ್ ಒತ್ತುತ್ತಾ ಒಂದು ಒತ್ತಡದಲ್ಲಿ ನೀವು ಆಹಾರ ಸೇವನೆ ಮಾಡುತ್ತೀರಿ. ಅದರಿಂದ ಕೆಲವು ಬಾರಿ ಓವರ್ ಈಟಿಂಗ್ (ಅತಿಯಾದ ಆಹಾರ ಸೇವನೆ) ಅಥವಾ ಅಶಿಸ್ತಿನ ಆಹಾರ ಸೇವನೆ ಅಭ್ಯಾಸ ಹೆಚ್ಚಾಗಬಹುದು. ಹಾಗಾಗಿ, ಊಟ ಮಾಡುವಾಗ ಒಪ್ಪವಾಗಿ ಊಟ ಮಾಡಲು ಮಾತ್ರ ಗಮನ ಹರಿಸಿ.
ಮಲಗುವುದಕ್ಕೆ 2 ಗಂಟೆ ಮೊದಲೇ ಊಟ ಮಾಡಿ
ಇನ್ನೇನು ಮಲಗುವ ಹೊತ್ತಾಯ್ತು ಎನ್ನುವಾಗ ಹಲವರು ಊಟ ಮಾಡಿ ಬರುತ್ತಾರೆ. ಕೈ ತೊಳೆದು ಬಂದು ಹಾಗೇ ಮಲಗಿ ಬಿಡುತ್ತಾರೆ. ಈ ಕ್ರಮ ಸರಿಯಲ್ಲ. ರಾತ್ರಿ ಮಲಗುವುದಕ್ಕೆ ಸುಮಾರು 2 ಗಂಟೆ ಮೊದಲು ಊಟ ಮಾಡಿ. ಹಾಗೂ ರಾತ್ರಿ ವೇಳೆ ಕಡಿಮೆ ಪ್ರಮಾಣದ ಊಟ ಸಾಕು. ಹೊಟ್ಟೆಗೆ ಭಾರವಾಗದಂತೆ, ಜೀರ್ಣಕ್ಕೆ ಸುಲಭವಾಗುವಂತೆ ಆಹಾರ ಸೇವಿಸಿ. ಇದರಿಂದ ಉತ್ತಮ ನಿದ್ರೆ ಮಾಡಲು ಕೂಡ ಸಹಾಯವಾಗುತ್ತದೆ.
ಪ್ರತಿನಿತ್ಯ ಕನಿಷ್ಠ 2 ರಿಂದ 2.5 ಲೀಟರ್ ನೀರು ಕುಡಿಯಿರಿ
ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯುವುದು ಆರೋಗ್ಯ ಕಾಪಾಡಲು ಅವಶ್ಯಕ. ಟಾಕ್ಸಿಕ್ ಅಂಶಗಳನ್ನು ದೇಹದಿಂದ ಹೊಹಾಕಲು ನೀರು ಕುಡಿದಷ್ಟು ಒಳ್ಳೆಯದು. ಸುಸ್ತು, ತಲೆ ನೋವು ಹಾಗೂ ಪಚನಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಾದ ಹೊಟ್ಟೆ ಉಬ್ಬರ, ಅಸಿಡಿಟಿ ಇತ್ಯಾದಿ ಕಡಿಮೆಯಾಗಲು ಸಹಕಾರಿ.
ಲಾಕ್ಡೌನ್ ಅವಧಿಯಲ್ಲಿ ದಪ್ಪಗಾಗಿ, ತೂಕ ಹೆಚ್ಚಿಸಿಕೊಂಡು ಈಗ ತೂಕ ಇಳಿಸಲು ನೀವು ಬಯಸುತ್ತೀರಾದರೆ ಈ ಅಂಶಗಳನ್ನು ಅಳವಡಿಸಿ, ಪಾಲಿಸಿ. ನಿಯಮಿತವಾಗಿ ವ್ಯಾಯಾಮವನ್ನೂ ಮಾಡಿ.
Health Tips: ತುಂಬ ಒತ್ತಡದಿಂದ ಬಳಲುತ್ತಿದ್ದೀರಾ.. ನಿದ್ದೆಯೂ ಬರುತ್ತಿಲ್ಲವಾ?- ಅಶ್ವಗಂಧ ಬಳಕೆ ಮಾಡಿ ನೋಡಿ..
Published On - 10:14 pm, Fri, 26 March 21