ಈಗಾಗಲೇ ಬೇಸಿಗೆಯು ಶುರುವಾಗಿದೆ. ಈ ಸಮಯದಲ್ಲಿ ಜನರು ತೆಳುವಾದ ಉಡುಪನ್ನು ಧರಿಸುತ್ತಾರೆ ಜೊತೆಗೆ ಹೆಚ್ಚಿನ ಸಮಯವನ್ನು ಹೊರಗಡೆ ಕಳೆಯುತ್ತಾರೆ. ಆದರೆ ಹೆಚ್ಚಿನ ತಾಪಮಾನದಿಂದ ಚರ್ಮಕ್ಕೆ ಸಾಕಷ್ಟು ತೊಂದರೆಯಾಗುತ್ತದೆ. ಸೂರ್ಯನ ಶಾಖಕ್ಕೆ ಒಡ್ಡಿಕೊಳ್ಳುವುದರಿಂದ ಅತಿಯಾದ ಬೆವರುವಿಕೆಯಿಂದ ಚರ್ಮದ ಮೇಲೆ ಹಾನಿಯನ್ನುಂಟುಮಾಡುತ್ತದೆ. ಇದು ಒಂದು ರೀತಿ ಕಿರಿಕಿರಿ ಅನುಭವ ಉಂಟು ಮಾಡುತ್ತದೆ. ಇದರಿಂದ ನಮ್ಮ ತ್ವಚೆಯನ್ನ ರಕ್ಷಿಸಲು ಸೆಣಬಿನ ಬೀಜದ ಎಣ್ಣೆಯು ಉಪಯುಕ್ತವಾಗಿದೆ. ಹೌದು ಸೆಣಬಿನ ಬೀಜಗಳು ಬಹು ಅಪರ್ಯಾಪ್ತ, ಒಮೆಗಾ-3 ಮತ್ತು ಒಮೆಗಾ-6 ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿದೆ. ಇದು ಚರ್ಮದ ಸಮಸ್ಯೆಗಳಿಗೆ ಪರಿಣಾಮಕಾರಿ ಪರಿಹಾರವಾಗಿದೆ.
ಬಾಂಬೆ ಹೆಂಪ್ ಕಂಪನಿಯ ಆಯುರ್ವೇದಿಕ್ ಮೆಡಿಕಲ್ ಪ್ರಾಕ್ಟೀಷನರ್ ಡಾ.ಹರ್ಷದ್ ಜೈನ್, ಈ ಬೇಸಿಗೆಯಲ್ಲಿ ತ್ವಚೆಯ ಆರೈಕೆಗಾಗಿ ಸೆಣಬಿನ ಎಣ್ಣೆಯನ್ನು ಬಳಸುವುದರಿಂದ ಉಂಟಾಗುವ ಕೆಲವು ಪ್ರಯೋಜನಗಳನ್ನು ಹಿಂದೂಸ್ಥಾನ ಟೈಮ್ಸ್ ಲೈಫ್ ಸ್ಟೈಲ್ ಜೊತೆ ಹಂಚಿಕೊಂಡಿದ್ದಾರೆ.
1. ಚರ್ಮವನ್ನು ತೇವಗೊಳಿಸುತ್ತದೆ
ಬೇಸಿಗೆಯ ತಿಂಗಳುಗಳಲ್ಲಿ ಸೂರ್ಯನಿಗೆ ಹೆಚ್ಚು ಒಡ್ಡಿಕೊಳ್ಳುವುದರಿಂದ ಚರ್ಮವು ಶುಷ್ಕ ಮತ್ತು ಕಿರಿಕಿರಿ ಭಾವನೆಯನ್ನು ಉಂಟುಮಾಡಬಹುದು, ಇದು ಅನೇಕ ಜನರು ಎದುರಿಸುತ್ತಿರುವ ಸಮಸ್ಯೆಯಾಗಿದೆ. ಸೆಣಬಿನ ಎಣ್ಣೆಯು ಅತ್ಯುತ್ತಮವಾದ ಮಾಯಿಶ್ಚರೈಸರ್ ಆಗಿದ್ದು ಅದು ಚರ್ಮವನ್ನು ಹೈಡ್ರೇಟ್ ಮಾಡುತ್ತದೆ. ಹ್ಯೂಮೆಕ್ಟಂಟ್ ಮತ್ತು ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿರುವ ಇದು ತೇವಾಂಶವನ್ನು ಲಾಕ್ ಮಾಡಲು ಮತ್ತು ಚರ್ಮದ ತಡೆಗೋಡೆಯನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಚರ್ಮವನ್ನು ಮೃದುವಾಗಿರಿಸುತ್ತದೆ.
2. ಬಿಸಿಲಿನಿಂದ ಸುಟ್ಟ ಚರ್ಮವನ್ನು ಶಮನಗೊಳಿಸುತ್ತದೆ
ಈ ಋತುವಿನಲ್ಲಿ ಸನ್ ಬರ್ನ್ಸ್ ಸಾಮಾನ್ಯ ಸಮಸ್ಯೆಯಾಗಿದೆ. ಆದರೆ ಸೆಣಬಿನ ಎಣ್ಣೆಯು ಬಿಸಿಲಿನ ಚರ್ಮಕ್ಕೆ ಸಂಬಂಧಿಸಿದ ನೋವು ಮತ್ತು ಉರಿಯೂತವನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ. ಚರ್ಮ ಸುಲಿಯುವುದನ್ನು ತಡೆಯಲು ಸಹಾಯ ಮಾಡುವ ಎಣ್ಣೆಯ ಗುಣಲಕ್ಷಣಗಳನ್ನು ಒಳಗೊಂಡಿದೆ. ಇದು ಚರ್ಮದ ಕೆಂಪು ಮತ್ತು ಊತವನ್ನು ಕಡಿಮೆ ಮಾಡಲು ಕೆಲಸ ಮಾಡುತ್ತದೆ. ಇದಲ್ಲದೆ, ಸೋರಿಯಾಸಿಸ್ ಮತ್ತು ಎಸ್ಜಿಮಾದಂತಹ ವಿವಿಧ ಚರ್ಮರೋಗಗಳ ಚಿಕಿತ್ಸೆಯಲ್ಲಿ ಈ ತೈಲವು ಪರಿಣಾಮಕಾರಿಯಾಗಿದೆ.
ಇದನ್ನೂ ಓದಿ:Mustard: ಸಾಸಿವೆ ಸೇವನೆಯಿಂದಾಗುವ ಆರೋಗ್ಯದ ಪ್ರಯೋಜನಗಳು ಮತ್ತು ದುಷ್ಪರಿಣಾಮಗಳು ಇಲ್ಲಿವೆ
3. ಚರ್ಮದ ಬಿರುಕುಗಳನ್ನು ತಡೆಯಲು ಸಹಾಯ ಮಾಡುತ್ತದೆ
ಬೇಸಿಗೆಯ ತಿಂಗಳುಗಳಲ್ಲಿ ಬಿಸಿಲಿನಿಂದ ಚರ್ಮವು ಬಿರಿಯುತ್ತದೆ ಮತ್ತು ಮುಖದ ಮೊಡವೆಗಳಿಗೂ ಕಾರಣವಾಗುತ್ತದೆ. ಇದಕ್ಕೂ ಕೂಡ ಸೆಣಬಿನ ಬೀಜದ ಎಣ್ಣೆಯನ್ನು ಬಳಸುವುದು ಈ ರೀತಿಯ ಚರ್ಮದ ಜನರಿಗೆ ಅತ್ಯುತ್ತಮ ಆಯ್ಕೆಯಾಗಿದೆ. ಏಕೆಂದರೆ ಇದು ಕಾಮೆಡೋಜೆನಿಕ್ ಅಲ್ಲ, ಅಂದರೆ ಇದು ರಂಧ್ರಗಳನ್ನು ಮುಚ್ಚಿಹಾಕುವುದಿಲ್ಲ. ಜೊತೆಗೆ ಇದರ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಮೊಡವೆ ಉಂಟುಮಾಡುವ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುತ್ತದೆ.
4. UV ಹಾನಿಯಿಂದ ಚರ್ಮವನ್ನು ರಕ್ಷಿಸುತ್ತದೆ
ಸೆಣಬಿನ ಎಣ್ಣೆಯು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಇದು UV ವಿಕಿರಣದಿಂದ ಉಂಟಾಗುವ ಹಾನಿಯಿಂದ ಚರ್ಮವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಸನ್‌ಸ್ಕ್ರೀನ್‌ಗೆ ಬದಲಿಯಾಗಿ ಇದನ್ನು ಎಂದಿಗೂ ಬಳಸಬಾರದು. ಸೆಣಬಿನ ಬೀಜದ ಎಣ್ಣೆಯನ್ನು ನಿಮ್ಮ ಬೇಸಿಗೆಯ ತ್ವಚೆಯ ದಿನಚರಿಯ ಭಾಗವಾಗಿ ಬಳಸುವುದರಿಂದ ಸೂರ್ಯನ ಹಾನಿಕಾರಕ ಕಿರಣಗಳ ವಿರುದ್ಧ ಹೆಚ್ಚುವರಿ ರಕ್ಷಣೆಯನ್ನು ಒದಗಿಸಲು ಸಹಾಯ ಮಾಡುತ್ತದೆ.
5. ಚರ್ಮದ ಸುಕ್ಕುಗಳನ್ನು ಕಡಿಮೆ ಮಾಡುತ್ತದೆ
ಎಣ್ಣೆಯಲ್ಲಿರುವ ಟೊಕೊಫೆರಾಲ್, ಕ್ಲೋರೊಫಿಲ್, ಕ್ಯಾರೊಟಿನಾಯ್ಡ್‌ಗಳು ಮತ್ತು ಫೈಟೊಸ್ಟೆರಾಲ್‌ಗಳಂತಹ ಉತ್ಕರ್ಷಣ ನಿರೋಧಕಗಳು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು. ಮಾಲಿನ್ಯ ಮತ್ತು ಹೊಗೆಯಿಂದ ಉಂಟಾಗುವ ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಇದು ಮಂದವಾಗಿ ಕಾಣುವ ಚರ್ಮಕ್ಕೆ ಕಾರಣವಾಗುತ್ತದೆ. ಇದಲ್ಲದೆ ಸೆಣಬಿನ ಎಣ್ಣೆಯಲ್ಲಿ ವಿಟಮಿನ್ ಇ ಸಮೃದ್ಧವಾಗಿದೆ. ಇದು ಸೂಕ್ಷ್ಮ ರೇಖೆಗಳು ಮತ್ತು ಸುಕ್ಕುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಚರ್ಮಕ್ಕೆ ಹೆಚ್ಚು ತಾರುಣ್ಯವನ್ನು ನೀಡುತ್ತದೆ.
ಬೇಸಿಗೆಯಲ್ಲಿ ಚರ್ಮದ ಆರೈಕೆಗೆ ಈ ಸೆಣಬಿನ ಬೀಜದ ಎಣ್ಣೆಯು ಪ್ರಬಲವಾದ ಘಟಕಾಂಶವಾಗಿದೆ. ಇತರ ತೈಲಗಳಿಗಿಂತ ಭಿನ್ನವಾಗಿ ಎಲ್ಲಾ ಚರ್ಮದ ಪ್ರಕಾರಗಳಿಗೆ ಉತ್ತಮ ಆಯ್ಕೆಯಾಗಿದೆ. ನಿಮ್ಮ ದೈನಂದಿನ ತ್ವಚೆಯ ದಿನಚರಿಯಲ್ಲಿ ಅವುಗಳನ್ನು ಅಳವಡಿಸಿಕೊಳ್ಳುವುದರಿಂದ ನಿಮ್ಮ ಚರ್ಮದ ತೊಂದರೆಗಳನ್ನು ಪರಿಹರಿಸಲು ಮತ್ತು ಬೇಸಿಗೆಯಲ್ಲಿ ಆರೋಗ್ಯಕರ, ಕಾಂತಿಯುತ ಚರ್ಮವನ್ನು ಪಡೆಯಲು ಸಹಾಯ ಮಾಡುತ್ತದೆ.
ಇನ್ನಷ್ಟು ಆರೋಗ್ಯ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ