Balagam: ಬಲಗಂ ಗಾಯಕನ ಆರೋಗ್ಯ ಸ್ಥಿತಿ ಗಂಭೀರ, ನೆರವಿನ ಹಸ್ತ ಚಾಚಿದ ತೆಲಂಗಾಣ ಸರ್ಕಾರ
ಇತ್ತೀಚೆಗೆ ಬಿಡುಗಡೆ ಆಗಿ ಜನಮನ ಗೆದ್ದಿದೆ ತೆಲುಗಿನ ಬಲಗಂ ಸಿನಿಮಾ. ಸಿನಿಮಾದ ಕ್ಲೈಮ್ಯಾಕ್ಸ್ನಲ್ಲಿ ಬರುವ ಹಾಡಂತೂ ಹಲವರ ಮನಸ್ಸು ಆರ್ದ್ರಗೊಳಿಸಿದೆ. ಆದರೆ ಆ ಹಾಡು ಹಾಡಿದ ಗಾಯಕ ಈಗ ಆಸ್ಪತ್ರೆಯ ಬೆಡ್ ಮೇಲೆ ದಿನಗಳನ್ನು ಎಣಿಸುತ್ತಿದ್ದಾರೆ.
ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆದ ತೆಲುಗಿನ ಸಣ್ಣ ಬಜೆಟ್ ಸಿನಿಮಾ ಬಲಗಂ (Balagam) ದೊಡ್ಡ ಪ್ರಮಾಣದ ಕಲೆಕ್ಷನ್ (Box Office) ಮಾಡಿದೆ. ಸಿನಿಮಾವನ್ನು ಸಾಮಾನ್ಯ ಪ್ರೇಕ್ಷಕ ಹಾಗೂ ವಿಮರ್ಶಕ ಇಬ್ಬರೂ ಒಪ್ಪಿಕೊಂಡಿದ್ದಾರೆ. ಗ್ರಾಮೀಣ ಬದುಕು, ಕುಟುಂಬ, ಪರಸ್ಪರ ಸಂಬಂಧಗಳ ಮಹತ್ವ ಸಾರುವ ಈ ಸಿನಿಮಾ ಎಳವೆಯರಿಂದ ಹಿಡಿದು ಹಿರಿಯರ ವರೆಗೂ ಎಲ್ಲರನ್ನೂ ಮೆಚ್ಚಿಸಿದೆ. ಸಿನಿಮಾ ನೋಡಿದವರೆಲ್ಲ ಕ್ಲೈಮ್ಯಾಕ್ಸ್ನಲ್ಲಿ ಬರುವ ಹಾಡಿನ ಬಗ್ಗೆ ಬಹು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆ ಜನಪದ ಹಾಡು, ಆ ಗಾಯಕನ ಧ್ವನಿ ಪ್ರೇಕ್ಷಕರ ಎದೆಗಿಳಿದಿದೆ. ಆದರೆ ಹಲವು ಹೃದಯಗಳನ್ನು ತನ್ನ ಗಾಯನದಿಂದ ಕಲಕಿದ್ದ ಗಾಯಕ ಇದೀಗ ತೀವ್ರ ಅನಾರೋಗ್ಯಕ್ಕೀಡಾಗಿದ್ದಾರೆ.
ಬಲಗಂ ಸಿನಿಮಾದ ಕ್ಲೈಮ್ಯಾಕ್ಸ್ನಲ್ಲಿ ‘ತೋಡುಗಾ ಮಾತೋಡುಂಡಿ’ ಹಾಡು ಹಾಡಿದ್ದ ಗಾಯಕ ಮೊಗಿಲಯ್ಯಗೆ ಕಳೆದೆರಡು ವರ್ಷಗಳಿಂದಲೂ ಅನಾರೋಗ್ಯ ಕಾಡುತ್ತಿದೆ. ಕೋವಿಡ್ ನಿಂದ ತತ್ತರಿಸಿದ್ದ ಮೊಗಿಲಯ್ಯಗೆ ಅದೇ ಸಮಯದಲ್ಲಿ ಕಿಡ್ನಿ ವಿಫಲಗೊಂಡಿದ್ದವು. ಹಾಗಿದ್ದರೂ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದ ಮುಗಿಲಯ್ಯಗೆ ಇತ್ತೀಚೆಗೆ ಕಣ್ಣು ಸಹ ಕಾಣಿಸದಂತಾಗಿದೆ. ಈ ವರೆಗೆ ಸುಮಾರು ಹತ್ತು ವಿವಿಧ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಮುಗಿಲಯ್ಯ ಆರ್ಥಿಕ ಸ್ಥಿತಿ ಜರ್ಜರಿತವಾಗಿದೆ. ಸಂಕಷ್ಟದಲ್ಲಿರುವ ಮುಗಿಲಯ್ಯ ಸಹಾಯಕ್ಕೆ ತೆಲಂಗಾಣ ಸರ್ಕಾರ ಆಗಮಿಸಿದ್ದು, ಮುಗಿಲಯ್ಯ ಅವರ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಹೇಳಿದೆ.
ಮೊಗಿಲಯ್ಯ ಆರೋಗ್ಯ ಪರಿಸ್ಥಿತಿ ಬಗ್ಗೆ ತಿಳಿದ ಕೂಡಲೇ ಸಚಿವ ಕೆಟಿಆರ್ ಖುದ್ದು ಕಾಳಜಿವಹಿಸಿ, ಮೊಗಿಲಯ್ಯ ನಿವಾಸವಿರುವ ಕ್ಷೇತ್ರದ ಶಾಸಕ ಸುದರ್ಶನ ರೆಡ್ಡಿಗೆ ಕರೆ ಮಾಡಿ ಮುಗಿಲಯ್ಯ ಮನೆಗೆ ಹೋಗಿ ಅವರನ್ನು ಅವರ ಪತ್ನಿ ಕೋಮುರವ್ವ ಅವರನ್ನು ಕಂಡು ಅವರಿಗೆ ಧೈರ್ಯ ತುಂಬಿ, ಸರ್ಕಾರ ಅವರೊಟ್ಟಿಗಿದೆ ಎಂಬ ಭರವಸೆ ನೀಡುವ ಜೊತೆಗೆ ಮೊಗಿಲಯ್ಯ ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸುವ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದಾರೆ. ಅವರನ್ನು ಎನ್ಐಎಂಎಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದರ ಜೊತೆಗೆ ಸಚಿವ ಹರೀಶ್ ರಾವು ಸಹ ಮುಗಿಲಯ್ಯಗೆ ಆರ್ಥಿಕ ಸಹಾಯ ನೀಡಲು ಮುಂದಾಗಿದ್ದಾರೆ. ಇದರ ನಡುವೆ ಬಲಗಂ ಸಿನಿಮಾದ ನಿರ್ದೇಶಕ ವೇಣು ಯರ್ರಗೊಂಡ ಸಹ ಮೊಗಿಲಯ್ಯಗೆ ಕೆಲವು ಲಕ್ಷಗಳ ಸಹಾಯ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ