ಖ್ಯಾತ ನಿರ್ಮಾಣ ಸಂಸ್ಥೆ ವಿರುದ್ಧ ಕತೆ ಕದ್ದ ಆರೋಪ: ಕನ್ನಡ ಸಿನಿಮಾಕ್ಕೂ ಇದೆ ಹೋಲಿಕೆ
ಜನಪ್ರಿಯ ನಿರ್ಮಾಣ ಸಂಸ್ಥೆಯ ಮೇಲೆ ಪತ್ರಕರ್ತನೊಬ್ಬ ಕತೆ ಕದ್ದ ಆರೋಪ ಹೊರಿಸಿದ್ದಾರೆ. ಆದರೆ ಆ ಸಿನಿಮಾವು ಕನ್ನಡದ ಜನಪ್ರಿಯ ಸಿನಿಮಾದ ಕತೆಯನ್ನು ಹೋಲುತ್ತಿದೆ.
ದಶಕದ ಹಿಂದೆ ಚಿತ್ರರಂಗದಲ್ಲಿ ಕತೆ ಕದಿಯುವ, ಐಡಿಯಾ ಕದಿಯುವ ಪ್ರಕರಣಗಳು ಹೆಚ್ಚಾಗಿ ಕೇಳಿ ಬರುತ್ತಿದ್ದವು. ಚಿತ್ರಕತೆಯನ್ನು, ಕತೆಯನ್ನು ರಿಜಿಸ್ಟರ್ ಮಾಡಿಸುವ ವ್ಯವಸ್ಥೆಯನ್ನು ಶಕ್ತವಾಗಿ ಬಳಸಿಕೊಳ್ಳಲು ಆರಂಭಿಸಿದ ಬಳಿಕ ಈ ಪ್ರಕರಣಗಳು ಕಡಿಮೆಯಾದವಾದರೂ ಸಂಪೂರ್ಣಾಗಿ ನಿಂತಿಲ್ಲ. ಇದೀಗ ತೆಲುಗಿನ ಜನಪ್ರಿಯ ಸಿನಿಮಾ ನಿರ್ಮಾಣ ಸಂಸ್ಥೆಯೊಂದರ ಮೇಲೆ ಕತೆ ಕದ್ದ ಆರೋಪ ಬಂದಿದೆ. ವಿಶೇಷವೆಂದರೆ ಆ ಕತೆ ಕನ್ನಡದ (Kannada) ಒಂದು ಸಿನಿಮಾದ ಕತೆಯನ್ನು ಹೋಲುತ್ತಿದೆ.
ಇತ್ತೀಚೆಗೆ ಬಿಡುಗಡೆ ಆದ ವಿಜಯ್ರ ವಾರಿಸು ಸೇರಿದಂತೆ ಹಲವಾರು ಸೂಪರ್ ಹಿಟ್ ತೆಲುಗು ಸಿನಿಮಾಗಳನ್ನು ನಿರ್ಮಾಣ ಮಾಡಿರುವ ದಿಲ್ ರಾಜು (Dil Raju) ಅವರ ಶ್ರೀವೆಂಕಟೇಶ್ವರ ಕ್ರಿಯೇಷನ್ಸ್ ವಿರುದ್ದ ಈಗ ಕತೆ ಕದ್ದ ಆರೋಪ ಎದುರಾಗಿದೆ.
ದಿಲ್ ರಾಜು ನಿರ್ಮಾಣ ಸಂಸ್ಥೆಯಿಂದ ನಿರ್ಮಾಣಗೊಂಡಿರುವ ತೆಲುಗು ಸಿನಿಮಾ ಬಲಗಂ ಕಳೆದ ವಾರವಷ್ಟೆ ಬಿಡುಗಡೆ ಆಗಿದ್ದು ಸಿನಿಮಾದ ಬಗ್ಗೆ ಧನಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಹಾಸ್ಯನಟ ಪ್ರಿಯದರ್ಶಿ ನಟನೆಯ ಈ ಸಿನಿಮಾ ತೆಲಂಗಾಣದ ಹಳ್ಳಿಯೊಂದರಲ್ಲಿ ನಡೆವ ಕತೆಯನ್ನು ಹೊಂದಿದ್ದು ತೀರ ಕಡಿಮೆ ಬಜೆಟ್ನಲ್ಲಿ ಚಿತ್ರೀಕರಣಗೊಂಡಿದೆ.
ಆದರೆ ಈ ಸಿನಿಮಾದ ಕತೆ ತಮ್ಮದೆಂದು ತೆಲುಗು ಪತ್ರಕರ್ತ ಗಡ್ಡಂ ಸತೀಶ್ ಹೇಳಿದ್ದು, ಕೆಲವು ವರ್ಷಗಳ ಹಿಂದೆ ತಾವು ಬರೆದಿರುವ ಪಚ್ಚಿಕಿ ಕತೆಯನ್ನು ಆಧರಿಸಿ ಬಲಗಂ ಸಿನಿಮಾ ಮಾಡಲಾಗಿದೆ ಎಂದಿದ್ದಾರೆ.
ಸಿನಿಮಾದ ಕತೆ ಹೀಗಿದೆ; ಈಗಾಗಲೇ ಸಮಸ್ಯೆಗಳಲ್ಲಿರುವ ಬಡ ಕುಟುಂಬದ ತಾತ ಹಠಾತ್ತನೆ ನಿಧನ ಹೊಂದುತ್ತಾರೆ. ತಾತನ ತಿಥಿ ಮಾಡುವ ಜವಾಬ್ಧಾರಿ ಮೊಮ್ಮಗನ ಹೆಗಲಿಗೆ ಬೀಳುತ್ತದೆ. ತಿಥಿ ಕಾರ್ಯದಲ್ಲಿ ಪಾಲ್ಗೊಳ್ಳಲು ಸಂಬಂಧಿಕರು, ತಾತನ ಗೆಳೆಯರು ಊರಿನವರೆಲ್ಲ ಸೇರುತ್ತಾರೆ. ಎಲ್ಲರಿಗೂ ಒಂದೊಂದು ಸಮಸ್ಯೆ. ಒಬ್ಬೊಬ್ಬರು ಒಂದೊಂದು ರೀತಿ ಬೇಡಿಕೆಗಳನ್ನು ಇಡುತ್ತಾರೆ. ಈಗಾಗಲೇ ಸಂಕಷ್ಟದಲ್ಲಿರುವ ಕುಟುಂಬ, ತಾತನ ತಿಥಿ ಹೇಗೆ ಮಾಡುತ್ತದೆ ಎಂಬುದು ಸಿನಿಮಾದ ಕತೆ.
ಕನ್ನಡದ ಹಿಟ್ ಸಿನಿಮಾ ತಿಥಿಯ ಕತೆಯೂ ತುಸು ಹೀಗೆಯೇ ಇತ್ತು. ಮಾತ್ರವಲ್ಲ ಮರಾಠಿಯ ಅವಾರ್ಡ್ ವಿನ್ನಿಂಗ್ ಸಿನಿಮಾ ಶ್ರಾದ್ಧಾ ಸಿನಿಮಾದ ಕತೆಯೂ ತುಸು ಹೀಗೆಯೇ ಇದೆ. ಆದರೆ ಈಗ ಸತೀಶ್ ಈ ಕತೆಯನ್ನು ತಮ್ಮದೆಂದು ವಾದಿಸುತ್ತಿದ್ದು, ತಾವು ಬರೆದಿರುವ ಕತೆಗೆ ಅಲ್ಲಲ್ಲಿ ತುಸುವಷ್ಟೆ ಬೇರೆ ದೃಶ್ಯಗಳನ್ನು ಸೇರಿಸಿ ಅವರು ಸಿನಿಮಾ ಮಾಡಿದ್ದಾರೆ. ಈ ಬಗ್ಗೆ ನಾನು ದಾವೆ ಹೂಡುತ್ತೇನೆ ಎಂದಿದ್ದಾರೆ.
ಬಲಗಂ ಸಿನಿಮಾವನ್ನು ಜಬರ್ದಸ್ತ್ ಹಾಸ್ಯ ಕಾರ್ಯಕ್ರಮದ ಮೂಲಕ ಮುನ್ನೆಲೆಗೆ ಬಂದ ವೇಣು ಯಲದಂಡಿ ನಿರ್ದೇಶನ ಮಾಡಿದ್ದಾರೆ. ಕತೆ ತಮ್ಮದೇ ಎಂದು ವೇಣು ಹೇಳಿಕೊಂಡಿದ್ದಾರೆ. ಆದರೆ ಕತೆ ತಮ್ಮದೆಂದು ಹೇಳಿಕೊಂಡಿರುವ ಸತೀಶ್ ದಾವೆ ಹೂಡುವುದಾಗಿ ಹೇಳಿದ್ದು ತನಿಖೆ ನಡೆದಲ್ಲಿ ಸತ್ಯಾಂಶ ಹೊರಗೆ ಬರಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ