ಹಿಂದಿನ ಕಾಲದಿಂದಲೂ ಹಿರಿಯರು, ಕೆಲವು ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಬಂದಾಗ ಆಸ್ಪತ್ರೆಗೆ ಹೋಗುತ್ತಿರಲಿಲ್ಲ. ಬದಲಾಗಿ ಮನೆಯಲ್ಲಿರುವ ಪದಾರ್ಥಗಳನ್ನು ಬಳಸಿಕೊಂಡು, ಒಂದು ಉತ್ತಮ ಔಷಧಿ ತಯಾರಿಸಿ ಕುಡಿಯುತ್ತಿದ್ದರು. ಇದರಿಂದ ಅವರ ಆರೋಗ್ಯ ಸಮಸ್ಯೆ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಇಲ್ಲದೆ ವಾಸಿಯಾಗುತ್ತಿತ್ತು. ಆದರೆ ಇಂದು ಅದಾವುದನ್ನು ಪಾಲಿಸದ ನಾವು, ತಿಂಗಳಿಗೊಮ್ಮೆ ಆಸ್ಪತ್ರೆಯ ಕಡೆ ಮುಖ ಮಾಡುತ್ತೇವೆ. ಆದರೆ ಹಿಂದಿನಿಂದ ನಮ್ಮ ಅಜ್ಜ- ಅಜ್ಜಿ ಮಾಡುತ್ತಿದ್ದ ಕೆಲವು ಅದ್ಬುತ ಮನೆಮದ್ದುಗಳನ್ನು ಈಗಲೂ ಪಾಲಿಸಬಹುದು. ಇದರಿಂದ ಆರೋಗ್ಯ ಸಮಸ್ಯೆಗಳನ್ನು ಬಹುಬೇಗ ಕಡಿಮೆ ಮಾಡಿಕೊಳ್ಳಬಹುದು. ಹಾಗಾ್ದರೆ ನಾವು ದೈನಂದಿನ ಜೀವನದಲ್ಲಿ ಅನುಭವಿಸುವ ಸಮಸ್ಯೆಗಳಿಗೆ ಈ ಮನೆ ಮದ್ದುಗಳನ್ನು ಒಮ್ಮೆ ಮಾಡಿ ನೋಡಿ.
- ಸ್ನಾನ ಮಾಡುವಾಗ ದಾಸವಾಳದ ಎಲೆಯನ್ನು ಚೆನ್ನಾಗಿ ಕಿವುಚಿ ಅದನ್ನು ತಲೆಗೆ ಹಾಕಿಕೊಂಡು ಸ್ನಾನ ಮಾಡುವುದರಿಂದ ತಲೆ ಹೊಟ್ಟು ಕಡಿಮೆಯಾಗುತ್ತದೆ. ತಲೆ ಕೂದಲು ಸೊಂಪಾಗಿ ಬೆಳೆಯುತ್ತದೆ.
- ಕಫ ಅಥವಾ ಮೂಗು ಕಟ್ಟುತ್ತಿದ್ದರೆ ಈರುಳ್ಳಿ ಜಜ್ಜಿ ರಸ ತೆಗೆದು ಜೇನುತುಪ್ಪದೊಂದಿಗೆ ದಿನಕ್ಕೆ ಮೂರರಿಂದ ನಾಲ್ಕು ಬಾರಿ ಸೇವಿಸುವುದು.
- ದೇಹದ ಉಷ್ಣತೆ ಹೆಚ್ಚಾಗಿ ಕಣ್ಣು ಉರಿಯುತ್ತಿದ್ದರೆ ತಲೆಯ ನೆತ್ತಿಯ ಭಾಗಕ್ಕೆ ಹರಳೆಣ್ಣೆಯನ್ನು ಚೆನ್ನಾಗಿ ಹಚ್ಚಿಕೊಳ್ಳುವುದು.
- ಉರಿ ಮೂತ್ರ ಸಮಸ್ಯೆಗೆ ಒಂದು ಚಮಚ ಕಾಮ ಕಸ್ತೂರಿ ಬೀಜಗಳನ್ನು ಒಂದು ಲೋಟಕ್ಕೆ ನೀರು ಹಾಕಿ ರಾತ್ರಿ ನೆನಸಿಟ್ಟು ಬೆಳಿಗ್ಗೆ ಕುಡಿಯಿರಿ
- ಮಲಬದ್ಧತೆಯ ಸಮಸ್ಯೆ ಇರುವವರು ರಾತ್ರಿ ಸಮಯದಲ್ಲಿ 8- 10 ಒಣದ್ರಾಕ್ಷಿಗಳನ್ನು ನೆನೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ.
- ವಾಂತಿ, ಪಿತ್ತ, ವಾಕರಿಕೆ ಇರುವವರು ಒಂದು ಚಮಚ ಜೀರಿಗೆಯನ್ನು ಎರಡು ಲೋಟ ನೀರಿಗೆ ಹಾಕಿ ಕುದಿಸಿ ಒಂದು ಲೋಟ ಮಾಡಿಕೊಂಡು ಸ್ವಲ್ಪ ಜೇನುತುಪ್ಪ ಬೆರೆಸಿ ಸೇವಿಸಿರಿ.
- ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರು ಎರಡು ಚಮಚ ಮೆಂತ್ಯೆಯನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಜಗಿದು ತಿನ್ನುವುದು.
- ಮಲಬದ್ಧತೆಯಿಂದ ಹೊಟ್ಟೆ ಕೆಟ್ಟಿದ್ದರೆ ಬಿಸಿ ನೀರಿಗೆ ಸ್ವಲ್ಪ ಹರಳೆಣ್ಣೆ ಬೆರೆಸಿ ಕುಡಿಯುವುದರಿಂದ ಹೊಟ್ಟೆ ಶುದ್ಧಿಯಾಗುತ್ತದೆ.
- ಕಫ ಕಟ್ಟಿದ್ದರೆ ವೀಳ್ಯದೆಲೆ, ಒಂದೆರಡು ಬೆಳ್ಳುಳ್ಳಿ ಎಸಳುಗಳು, ಎರಡು ಕಾಳು ಮೆಣಸು ಸ್ವಲ್ಪ ಕಲ್ಲು ಉಪ್ಪನ್ನು ಸೇರಿಸಿ ಚೆನ್ನಾಗಿ ಜಗಿದು ತಿನ್ನುವುದು.
- ಮುಖದಲ್ಲಿ ಸೂರ್ಯನ ಬಿಸಿಲಿಗೆ ಚರ್ಮ ಕಳೆಗುಂದಿದ್ದರೆ ಸ್ವಲ್ಪ ಹಸಿ ಹಾಲಿಗೆ ಅರಿಶಿನ, ಅಕ್ಕಿ ಹಿಟ್ಟು ಸೇರಿಸಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿಕೊಂಡು 10 ನಿಮಿಷದ ನಂತರ ತೊಳೆಯುವುದು.
- ಉದ್ದವಾದ ದಟ್ಟ ಕೂದಲಿಗೆ ಔಡಲದ ಎಣ್ಣೆಯನ್ನು ಹಚ್ಚುವುದರಿಂದ ಕೂದಲು ಕಪ್ಪಾಗಿ ದಟ್ಟವಾಗಿ ಬೆಳೆಯುತ್ತದೆ.
- ಖರ್ಜೂರವನ್ನು ಹಾಲಿನಲ್ಲಿ ನೆನೆಸಿ ತಿನ್ನುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ.
- ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 2 ರಿಂದ 3 ಬೆಳ್ಳುಳ್ಳಿ ಎಸಳುಗಳನ್ನು ತಿನ್ನುವುದರಿಂದ ಹೊಟ್ಟೆಯ ಬೊಜ್ಜು ಅತಿ ಬೇಗನೆ ಕಡಿಮೆಯಾಗುತ್ತದೆ.
- ಪ್ರತಿದಿನ ಸ್ವಲ್ಪ ಶುದ್ಧ ಅರಿಶಿನವನ್ನು ಹಾಲು ಅಥವಾ ನೀರಿನ ಜೊತೆ ಬೆರೆಸಿ ಕುಡಿಯುವುದರಿಂದ ರಕ್ತ ಶುದ್ಧಿಯಾಗುತ್ತದೆ. ಜೊತೆಗೆ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.
- ಬಾಳೆದಿಂಡಿನ ಪಲ್ಯವನ್ನು ಮಾಡಿ ತಿನ್ನುವುದರಿಂದ ಮೂತ್ರಕೋಶದಲ್ಲಿರುವ ಕಲ್ಲುಗಳು ಪುಡಿ ಪುಡಿಯಾಗಿ ಬೀಳುತ್ತದೆ.
- ವರ್ಷದಲ್ಲಿ ಒಮ್ಮೆಯಾದರೂ ಕೆಸುವಿನ ಎಲೆಯಿಂದ ಗೊಜ್ಜು ಅಥವಾ ಪಲ್ಯ ಮಾಡಿ ತಿಂದರೆ ಹೊಟ್ಟೆ ಶುದ್ಧಿಯಾಗುತ್ತದೆ.
- ಕೊಬ್ಬರಿ ಎಣ್ಣೆಯಿಂದ ವಾರಕ್ಕೆ ಎರಡು ಬಾರಿಯಾದರೂ ಬಾಯಿಯನ್ನು ಮುಕ್ಕಳಿಸುವುದರಿಂದ ವಸಡುಗಳು ಗಟ್ಟಿಯಾಗಿ ಬಾಯಿಯ ದುರ್ವಾಸನೆ ಮಾಯವಾಗುತ್ತದೆ.
- ಬಿಸಿಲಿನಲ್ಲಿ ಹೊರಗಡೆ ತಿರುಗಾಡಿ ಬಂದು ಆಯಾಸವಾದಾಗ ಸ್ವಲ್ಪ ಬೆಲ್ಲ ಹಾಗೂ ನೀರು ಕುಡಿದರೆ ಆಯಾಸ ತಕ್ಷಣ ಕಡಿಮೆಯಾಗುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ