ತೂಕ ನಷ್ಟದ ವಿಷಯಕ್ಕೆ ಬಂದಾಗ, ಅಡುಗೆ ಮನೆಯ ಪದಾರ್ಥಗಳು ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಅಂತಹ ಒಂದು ಶಕ್ತಿ ಕೇಂದ್ರವೆಂದರೆ ಅದು ಮೆಂತ್ಯ ಬೀಜಗಳು, ಇವು ನಿಮಗೆ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಜೊತೆಗೆ ಆಹಾರದಲ್ಲಿ ಸ್ವಲ್ಪ ಕಹಿ ರುಚಿಕೊಟ್ಟರೂ ಸಹ ಇದರ ಸುವಾಸನೆ ನಿಮಗೆ ಖಂಡಿತವಾಗಿಯೂ ಇಷ್ಟವಾಗುತ್ತದೆ. ಇದೆಲ್ಲದರ ಹೊರತಾಗಿ ಇವುಗಳ ಅತ್ತ್ಯುತ್ತಮ ಆರೋಗ್ಯ ಪ್ರಯೋಜನಗಳಿಂದಾಗಿ ಅವುಗಳನ್ನು ಅಡುಗೆಯಲ್ಲಿ ನಿರ್ದಿಷ್ಟವಾಗಿ ಬಳಸಲಾಗುತ್ತದೆ. ಈ ಸಣ್ಣ ಬೀಜಗಳಲ್ಲಿ ನಾರಿನಂಶ ಸಮೃದ್ಧವಾಗಿದ್ದು, ಇದು ಹೊಟ್ಟೆ ತುಂಬಿದ ಭಾವನೆಯನ್ನು ಉತ್ತೇಜಿಸುತ್ತದೆ, ಇದರಿಂದ ಅತಿಯಾಗಿ ತಿನ್ನುವ ಅಪಾಯವನ್ನು ಕಡಿಮೆ ಮಾಡಬಹುದು. ಹೆಚ್ಚುವರಿಯಾಗಿ, ಅವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ, ಆದ್ದರಿಂದ, ತೂಕ ಇಳಿಸಿಕೊಳ್ಳಲು ಮೆಂತ್ಯ ಬೀಜಗಳನ್ನು ಹೇಗೆ ಸೇವಿಸುವುದು ಎಂಬುದನ್ನು ನೀವು ತಿಳಿದುಕೊಂಡರೇ ಇದು ಯಾವ ರೀತಿಯಲ್ಲಿ ಪರಿಣಾಮ ಬೀರಬಹುದು ಎಂಬುದು ನಿಮ್ಮ ಅರಿವಿಗೆ ಬರುತ್ತದೆ.
ಮೆಂತ್ಯ ಬೀಜಗಳು ಸೂಪರ್ ಫುಡ್ ಆಗಿದ್ದು, ಇದು ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಅವುಗಳ ಔಷಧೀಯ ಗುಣಗಳು ಮತ್ತು ಇತರ ಅಗತ್ಯ ಪೋಷಕಾಂಶಗಳಾದ ರಿಬೋಫ್ಲೇವಿನ್, ತಾಮ್ರ, ಪೊಟ್ಯಾಸಿಯಮ್, ಫೋಲಿಕ್ ಆಮ್ಲ, ಲಿನೋಲಿಕ್ ಆಮ್ಲ, ಕ್ಯಾಲ್ಸಿಯಂ, ಕಬ್ಬಿಣ, ಮ್ಯಾಂಗನೀಸ್ ಮತ್ತು ವಿಟಮಿನ್ ಎ, ಬಿ 6, ಸಿ ಮತ್ತು ಕೆ ಯನ್ನು ಒಳಗೊಂಡಿರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ಈ ಬೀಜಗಳು ಫೈಬರ್ ಮತ್ತು ಅಮೈನೋ ಆಮ್ಲಗಳಿಂದ ತುಂಬಿದೆ, ಇದು ತೂಕ ನಷ್ಟವನ್ನು ಉತ್ತೇಜಿಸುತ್ತದೆ. ಹಾಗಾದರೆ ತೂಕ ನಷ್ಟಕ್ಕೆ ಸಹಾಯ ಮಾಡುವ ಮಾರ್ಗಗಳು ಯಾವವು? ಈ ಬಗ್ಗೆ ಇಲ್ಲಿವೆ ಮಾಹಿತಿ:
1. ಹಸಿವನ್ನು ನಿಯಂತ್ರಿಸುತ್ತದೆ: ಮೆಂತ್ಯ ಬೀಜಗಳಲ್ಲಿ ಫೈಬರ್ ಸಮೃದ್ಧವಾಗಿದೆ, ಇದು ಹೊಟ್ಟೆ ತುಂಬಿದ ಭಾವನೆಯನ್ನು ಸೃಷ್ಟಿಸುತ್ತದೆ ಮತ್ತು ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ಬೊಜ್ಜು ಹೊಂದಿರುವ 18 ಆರೋಗ್ಯವಂತ ಜನರು ಸತತವಾಗಿ ಮೆಂತ್ಯ ಸೇವಿಸುವುದರಿಂದ ಹೊಟ್ಟೆ ತುಂಬಿದ ಸಂತೃಪ್ತಿಯನ್ನು ಗಮನಾರ್ಹವಾಗಿ ಹೆಚ್ಚಿಸುವುದರ ಜೊತೆಗೆ ಕ್ಯಾಲೊರಿ ಸೇವನೆಯನ್ನು ಕಡಿಮೆ ಮಾಡುತ್ತದೆ ಎಂದು ತಿಳಿದು ಬಂದಿದೆ. ಇದು ತೂಕ ಇಳಿಸಿಕೊಳ್ಳಲು ಬಯಸುತ್ತಿರುವವರಿಗೆ ನಿರ್ಣಾಯಕ ಅಂಶವಾಗಿದೆ.
2. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ: ಮೆಂತ್ಯ ಬೀಜದ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಸ್ಥಿರವಾದ ರಕ್ತದಲ್ಲಿನ ಸಕ್ಕರೆ ಮಟ್ಟವು ಹಠಾತ್ ಏರಿಕೆ ಮತ್ತು ಇಳಿತ ಕಾಣುವುದನ್ನು ತಡೆಯುತ್ತದೆ, ಅನಾರೋಗ್ಯಕರ ತಿಂಡಿ ಮತ್ತು ಸಕ್ಕರೆ ತಿಂಡಿಯನ್ನು ಪದೇ ಪದೇ ತಿನ್ನುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
3. ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ: ಈ ಬೀಜಗಳು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುವಲ್ಲಿ ನಿರ್ಣಾಯಕವಾಗಿದೆ. ಇದರ ಜೊತೆಗೆ ಸಮತೋಲಿತ ಆಹಾರ ಮತ್ತು ನಿಯಮಿತ ವ್ಯಾಯಾಮದೊಂದಿಗೆ ಸಂಯೋಜಿಸಿದಾಗ ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
-ನೆನೆಸಿದ ಬೀಜಗಳು: ಮೆಂತ್ಯ ಬೀಜಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೇಕಾದಲ್ಲಿ ಸ್ವಲ್ಪ ಬೆಲ್ಲದೊಂದಿಗೆ ಸೇವಿಸಿ.
-ಮೆಂತ್ಯ ಚಹಾ: ಬೀಜಗಳನ್ನು ಬಿಸಿ ನೀರಿನಲ್ಲಿ ಕುದಿಸಿ ಹಿತವಾದ ಮೆಂತ್ಯ ಚಹಾವನ್ನು ತಯಾರಿಸಿ. ನಿಮ್ಮ ದೈನಂದಿನ ದಿನಚರಿಯಲ್ಲಿ ಮೆಂತ್ಯವನ್ನು ಅಳವಡಿಸಿಕೊಳ್ಳಲು ಇದು ಆಹ್ಲಾದಕರ ಮತ್ತು ಪರಿಣಾಮಕಾರಿ ಮಾರ್ಗವಾಗಿದೆ.
-ಮೊಳಕೆಯೊಡೆದ ಮೆಂತ್ಯ: ಮೊಳಕೆಯೊಡೆದ ಮೆಂತ್ಯ ಬೀಜಗಳು ಪೌಷ್ಠಿಕಾಂಶದ ಅಂಶವನ್ನು ಇನ್ನಷ್ಟು ಹೆಚ್ಚಿಸುತ್ತವೆ. ಈ ಮೊಳಕೆ ಕಾಳುಗಳನ್ನು ಸಲಾಡ್ಗಳಿಗೆ ಸೇರಿಸಬಹುದು ಅಥವಾ ಲಘು ಆಹಾರವಾಗಿ ಸೇವಿಸಬಹುದು, ಇದು ನಿಮ್ಮ ಆಹಾರಕ್ಕೆ ಆರೋಗ್ಯಕರ ಸೇರ್ಪಡೆಯಾಗಿದೆ.
-ರುಬ್ಬಿದ ಮೆಂತ್ಯ ಪುಡಿ: ಬೀಜಗಳನ್ನು ನುಣ್ಣಗೆ ಪುಡಿ ಮಾಡಿ ಸೂಪ್ ಅಥವಾ ಸ್ಮೂಥಿಗಳಂತಹ ವಿವಿಧ ಭಕ್ಷ್ಯಗಳಿಗೆ ಸೇರಿಸಿಕೊಳ್ಳಬಹುದು.
ಮೆಂತ್ಯ ಬೀಜಗಳು, ತೂಕ ಇಳಿಕೆಯ ಪ್ರಯೋಜನಗಳ ಹೊರತಾಗಿ, ಈ ಬೀಜಗಳು ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ಇನ್ನೂ ಉತ್ತಮವಾಗಿವೆ. ಅದರ ಆರೋಗ್ಯ ಪ್ರಯೋಜನಗಳು ಇಲ್ಲಿವೆ:
ಮೆಂತ್ಯ ಬೀಜಗಳಲ್ಲಿ ಫೈಬರ್ ಅಧಿಕವಾಗಿದೆ, ಇದು ಅಜೀರ್ಣ ಮತ್ತು ಹೊಟ್ಟೆ ಉಬ್ಬರವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಉತ್ತಮ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ.
ಬೀಜಗಳು ಉರಿಯೂತ ಕೆಡಿಮೆ ಮಾಡುವ ಗುಣವನ್ನು ಹೊಂದಿವೆ, ಇದು ಒಟ್ಟಾರೆ ಆರೋಗ್ಯಕ್ಕೆ ಕೊಡುಗೆ ನೀಡುತ್ತವೆ ಮತ್ತು ತೂಕ ಹೆಚ್ಚಳಕ್ಕೆ ಸಂಬಂಧಿಸಿದ ಉರಿಯೂತವನ್ನು ಕೂಡ ಕಡಿಮೆ ಮಾಡುತ್ತದೆ.
ಮೆಂತ್ಯವು ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿರುವ ಪೋಷಕಾಂಶಯುಕ್ತ ಮಸಾಲೆಯಾಗಿದ್ದು, ಇದು ಒಟ್ಟಾರೆ ಯೋಗಕ್ಷೇಮಕ್ಕೆ ಸಹಕಾರಿಯಾಗಿದೆ.
ಸ್ತನ್ಯಪಾನ ಮಾಡುವ ತಾಯಂದಿರಲ್ಲಿ ಹಾಲುಣಿಸುವಿಕೆಯನ್ನು ಉತ್ತೇಜಿಸಲು ಮೆಂತ್ಯವನ್ನು ಸಾಂಪ್ರದಾಯಿಕವಾಗಿ ಬಳಸಲಾಗುತ್ತದೆ ಏಕೆಂದರೆ ಇದು ನಿಮ್ಮ ಎದೆ ಹಾಲಿನ ಪೂರೈಕೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಮೆಂತ್ಯ ಬೀಜಗಳು ಹಲವಾರು ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತವೆ, ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಕೂದಲು ಉದುರುವಿಕೆಯನ್ನು ನಿಯಂತ್ರಿಸುತ್ತದೆ. ಇದರಲ್ಲಿರುವ ನಿಕೋಟಿನಿಕ್ ಆಮ್ಲವೂ ತಲೆಹೊಟ್ಟು ಮತ್ತು ಕೂದಲು ಅಕಾಲಿಕ ಬೂದು ಬಣ್ಣಕ್ಕೆ ತಿರುಗುವುದನ್ನು ತಡೆಯುತ್ತದೆ ಮತ್ತು ಇದರಲ್ಲಿರುವ ಲೆಸಿಥಿನ್ ಅಂಶವು ನಿಮ್ಮ ಕೂದಲನ್ನು ಹೈಡ್ರೇಟ್ ಮಾಡುತ್ತದೆ.
ಮೆಂತ್ಯ ಬೀಜಗಳಲ್ಲಿನ ಫೈಬರ್ ಅಂಶವು ಸಕ್ಕರೆ ಮತ್ತು ಅನಾರೋಗ್ಯಕರ ಕೊಬ್ಬುಗಳನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಮತ್ತು ಮಧುಮೇಹ ಹೊಂದಿರುವ ಜನರ ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಮೆಂತ್ಯ ಬೀಜಗಳಲ್ಲಿ ಬೀಟಾ- ಕ್ಯಾರೋಟಿನ್ ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ, ಇದು ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ಮುಖಕ್ಕೆ ಹೊಳಪನ್ನು ನೀಡುತ್ತದೆ.
ಆರೋಗ್ಯಕರ ಆಹಾರದ ಜೊತೆಗೆ, ತೂಕ ಇಳಿಸಿಕೊಳ್ಳಲು ನಿಮ್ಮ ವ್ಯಾಯಾಮದ ದಿನಚರಿಯ ಬಗ್ಗೆಯೂ ಗಮನ ಹರಿಸಿ!
Published On - 5:36 pm, Wed, 29 November 23