Benefits Of Sprouts: ತೂಕ ನಷ್ಟ ಹಾಗೂ ಕೂದಲಿನ ಆರೋಗ್ಯಕ್ಕೆ ಮೊಳಕೆ ಕಟ್ಟಿದ ಕಾಳುಗಳ ಸೇವನೆ ಉತ್ತಮ
ಕಾಳುಗಳು, ಧಾನ್ಯಗಳು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಅದರಲ್ಲೂ ಮೊಳಕೆಕಟ್ಟಿದ ಧಾನ್ಯಗಳು ಹಲವಾರು ಪೌಷ್ಟಿಕಾಂಶ ಗುಣಗಳನ್ನು ಹೊಂದಿದ್ದು, ಇದು ನಮ್ಮದೇಹಕ್ಕೆ ಶಕ್ತಿಯನ್ನು ನೀಡುವುದರ ಜೊತೆಗೆ ಅನೇಕ ಪೋಷಕಾಂಶಗಳ ಕೊರತೆಯನ್ನು ನೀಗಿಸುತ್ತದೆ. ಹಾಗಾದರೆ ಮೊಳಕೆ ಭರಿಸಿದ ಕಾಳುಗಳನ್ನು ಸೇವಿಸುವುದರಿಂದ ದೊರೆಯುವ ಪ್ರಯೋಜನಗಳಾವುವು ಎಂಬುದನ್ನು ನೋಡೋಣ.
ದೇಹದ ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಮತೋಲಿತ ಆಹಾರವನ್ನು ಸೇವನೆ ಮಾಡುವುದು ತುಂಬಾ ಮುಖ್ಯ. ಇದಕ್ಕಾಗಿ ಹೆಚ್ಚಿನ ಪ್ರಮಾಣದಲ್ಲಿ ಹಣ್ಣುಗಳು, ತರಕಾರಿಗಳನ್ನು ಸೇವನೆ ಮಾಡಬೇಕೆಂದು ಸಲಹೆ ನೀಡಲಾಗುತ್ತದೆ. ಹಣ್ಣುಗಳು ಹಾಗೂ ತರಕಾರಿಗಳಂತೆ ಹಲವು ಬಗೆಯ ಧಾನ್ಯಗಳು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಅದರಲ್ಲೂ ಮೊಳಕೆಕಟ್ಟಿದ ಕಾಳುಗಳ ಸೇವನೆ ತುಂಬಾ ಒಳ್ಳೆಯದು. ಏಕೆಂದರೆ ಇದರಲ್ಲಿ ವಿಟಮಿನ್ ಸಿ, ಎ ಮತ್ತು ವಿಟಮಿನ್ ಕೆ, ಫೋಲೇಟ್, ಒಮೆಗಾ-3 ಇತ್ಯಾದಿ ಪೋಷಕಾಂಶಗಳು ಹೇರಳವಾಗಿದ್ದು, ಇವು ದೇಹಕ್ಕೆ ಶಕ್ತಿಯನ್ನು ನೀಡುವುದರ ಜೊತಗೆ ಅನೇಕ ಪೋಷಕಾಂಶಗಳ ಕೊರತೆಯನ್ನು ನೀಗಿಸುತ್ತದೆ. ಹಾಗಾದರೆ ಮೊಳಕೆ ಕಟ್ಟಿದ ಕಾಳುಗಳ ಸೇವನೆಯಿಂದ ಲಭಿಸುವ ಆರೋಗ್ಯ ಪ್ರಯೋಜನಗಳಾವುವು ಎಂಬುದನ್ನು ನೋಡೋಣ.
ಮೊಳಕೆ ಕಟ್ಟಿದ ಕಾಳುಗಳನ್ನು ಪ್ರತಿದಿನ ತಿನ್ನುವುದು ಒಳ್ಳೆಯದೆ?
ಆರೋಗ್ಯ ಮತ್ತು ಪೌಷ್ಟಿಕ ತಜ್ಞರ ಪ್ರಕಾರ ಮೊಳಕೆಭರಿಸುವ ಪ್ರಕ್ರಿಯೆಯ ನಂತರ ಧಾನ್ಯಗಳು ಅಥವಾ ಕಾಳುಗಳ ಪೌಷ್ಟಿಕಾಂಶ ಮೌಲ್ಯದ ಪ್ರಮಾಣವು ಹೆಚ್ಚಾಗುತ್ತದೆ ಮತ್ತು ಅದು ಜೀರ್ಣಿಸಿಕೊಳ್ಳಲು ಸುಲಭವಾಗುತ್ತದೆ. ಇದಲ್ಲದೆ ಮೊಳಕೆ ಕಟ್ಟಿದ ಧಾನ್ಯಗಳಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಡಿ ಸೇರಿದಂತೆ ಅನೇಕ ಪೋಷಕಾಂಶಗಳ ಪ್ರಮಾಣವು ಹೆಚ್ಚಿರುತ್ತದೆ. ಆದ್ದರಿಂದ ಬೆಳಗಿನ ಉಪಹಾರಕ್ಕೆ ಮೊಳಕೆಕಟ್ಟಿದ ಕಾಳುಗಳನ್ನು ತಿನ್ನುವುದು ಖಂಡಿತವಾಗಿಯೂ ಆರೋಗ್ಯಕರ ಆಯ್ಕೆಯಾಗಿದೆ. ಇದು ದೇಹಕ್ಕೆ ಹಲವಾರು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಮೊಳಕೆ ಕಟ್ಟಿದ ಕಾಳುಗಳನ್ನು ಹಸಿಯಾಗಿ ತಿನ್ನುವ ಬದಲು ಬೇಯಿಸಿ ತಿಂದರೆ ಉತ್ತಮ. ಹೀಗೆ ಮಾಡುವುದರಿಂದ ಮೊಳಕೆ ಕಟ್ಟಿದ ಕಾಳುಗಳಲ್ಲಿನ ಬ್ಯಾಕ್ಟೀರಿಯಾಗಳು ಸಾಯುತ್ತವೆ.
ಮೊಳಕೆಕಟ್ಟಿದ ಕಾಳುಗಳನ್ನು ತಿನ್ನುವುದರಿಂದ ಲಭಿಸುವ ಪ್ರಯೋಜನಗಳು:
ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ: ಖಾಲಿ ಹೊಟ್ಟೆಯಲ್ಲಿ ಮೊಳಕೆ ಕಟ್ಟಿದ ಕಾಳುಗಳನ್ನು ಸೇವನೆ ಮಾಡುವುದು ಜೀರ್ಣಾಂಗ ವ್ಯವಸ್ಥೆಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ಕಿಣ್ವಗಳಿದ್ದು, ಇದು ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ. ಅಲ್ಲದೆ ಮೊಳಕೆಕಾಳುಗಳು ಫೈಬರ್ನ ಉತ್ತಮ ಮೂಲವಾಗಿದ್ದು, ಇದು ಆಹಾರವನ್ನು ಜೀರ್ಣಿಸಿಕೊಳ್ಳಲು ಬಹಳಷ್ಟು ಸಹಾಯ ಮಾಡುತ್ತದೆ. ಮತ್ತು ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.
ತೂಕ ಇಳಿಕೆಗೆ ಸಹಕಾರಿ: ನೀವು ತೂಕವನ್ನು ಇಳಿಸಿಕೊಳ್ಳಲು ಬಯಸಿದರೆ ಮೊಳಕೆಕಟ್ಟಿದ ಕಾಳುಗಳನ್ನು ಸೇವನೆ ಮಾಡಬಹುದು. ಮೊಳಕೆಕಾಳುಗಳಲ್ಲಿ ಹೆಚ್ಚಿನ ಪ್ರಮಾಣದ ನಾರಿನಂಶವಿದೆ. ಇದು ನಿಮ್ಮ ಹೊಟ್ಟೆಯನ್ನು ದೀರ್ಘಕಾಲ ತುಂಬಿರಲು ಸಹಾಯ ಮಾಡುತ್ತದೆ. ಅಲ್ಲದೆ ಇದರಲ್ಲಿರುವ ಕ್ಯಾಲೋರಿ ಪ್ರಮಾಣವೂ ಕಡಿಮೆ. ಆದ್ದರಿಂದ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವ ಜನರಿಗೆ ಇದು ಉತ್ತಮ ಆಯ್ಕೆಯಾಗಿದೆ.
ರೋಗನಿರೋಧಕ ಶಕ್ತಿ ಹೆಚ್ಚುತ್ತದೆ: ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಅನೇಕ ಪೋಷಕಾಂಶಗಳು ಬೇಕಾಗತ್ತವೆ. ಇದನ್ನು ಮೊಳಕೆ ಕಟ್ಟಿದ ಕಾಳುಗುಳು ಸುಲಭವಾಗಿ ಪೂರೈಸುತ್ತವೆ. ಹೌದು ಮೊಳಕೆಕಾಳುಗಳು ದೇಹವನ್ನು ಬಲಪಡಿಸುವುದಲ್ಲದೆ ವಿವಿಧ ಅಂಗಗಳ ಕಾರ್ಯನಿರ್ವಹಣೆಗೆ ಕೊಡುಗೆ ನೀಡುತ್ತವೆ. ಇವು ರೋಗಗಳ ವಿರುದ್ಧ ಹೋರಾಡಲು ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ.
ಇದನ್ನೂ ಓದಿ: ಹೆಸರುಕಾಳನ್ನು ಮೊಳಕೆಬರಿಸಿ ಬೇಯಿಸಿ ತಿನ್ನುವುದರಿಂದ ಆರೋಗ್ಯಕ್ಕೆ ಏನೇನು ಲಾಭ ತಿಳಿಯಿರಿ
ಕಣ್ಣಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು: ಮೊಳಕೆ ಕಾಳುಗಳ ಸೇವನೆಯಿಂದ ಕಣ್ಣುಗಳನ್ನು ಆರೋಗ್ಯಕರವಾಗಿರಿಸಿಕೊಳ್ಳಬಹುದು. ಈ ಕಾಳುಗಳಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಎ ಇದೆ. ಇದು ದೃಷ್ಟಿಯನ್ನು ಸುಧಾರಿಸುತ್ತದೆ. ಮತ್ತು ಇದರಲ್ಲಿರುವ ಊತ್ಕರ್ಷಣ ನಿರೋಧಕ ಅಂಶಗಳು ಕಣ್ಣಿನ ಕೋಶಗಳನ್ನು ಫ್ರೀ ರಾಡಿಕಲ್ಗಳ ಹಾನಿಯಿಂದ ರಕ್ಷಿಸುತ್ತದೆ. ಆದ್ದರಿಂದ ಪ್ರತಿದಿನ ನಿಮ್ಮ ಆಹಾರ ಕ್ರಮದಲ್ಲಿ ಮೊಳಕೆಕಟ್ಟಿದ ಕಾಳುಗಳನ್ನು ಸೇರಿಸಿಕೊಳ್ಳಿ.
ರಕ್ತವನ್ನು ಶುದ್ಧೀಕರಿಸಲು ಸಹಕಾರಿ: ಮೊಳಕೆಕಟ್ಟಿದ ಕಾಳುಗಳಲ್ಲಿ ಉತ್ಕರ್ಷಣ ನಿರೋಧಕಗಳು, ವಿಟಮಿನ್ ಎ, ಬಿ, ಸಿ, ಫಾಸ್ಪರಸ್, ಕಬ್ಬಿಣಾಂಶ, ಕ್ಯಾಲ್ಸಿಯಂ, ಸತು, ಮೆಗ್ನೇಸಿಯಂ ಮುಂತಾದ ಹಲವಾರು ಪೋಷಕಾಂಶಗಳಿವೆ. ಇವುಗಳು ರಕ್ತದಲ್ಲಿನ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಮತ್ತು ಇದರಲ್ಲಿರುವ ಕ್ಯಾಲ್ಸಿಯಂ ಮೂಳೆಗಳನ್ನು ಆರೋಗ್ಯಕರವಾಗಿಡಲು ಸಹಕಾರಿಯಾಗಿದೆ.
ಕೂದಲಿಗೆ ಪ್ರಯೋಜನಕಾರಿ: ಮೊಳಕೆ ಕಟ್ಟಿದ ಕಾಳು ತಲೆಹೊಟ್ಟು ಮತ್ತು ಕೂದಲು ಅಕಾಲಿಕವಾಗಿ ಬಿಳಿಯಾಗುವ ಸಮಸ್ಯೆಯನ್ನು ತಡೆಯಲು ಸಹಾಯಕವಾಗಿದೆ. ಅಲ್ಲದೆ ಇದರಲ್ಲಿ ಹಲವಾರು ಪೌಷ್ಟಿಕಾಂಶ ಗುಣಗಳಿದ್ದು, ಇವೆಲ್ಲವು ಕೂದಲಿನ ಬೆಳವಣಿಗೆಗೆ ಬಹಳ ಸಹಕಾರಿಯಾಗಿದೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ