ಇತ್ತೀಚಿನ ದಿನಗಳಲ್ಲಿ ಎದೆ ಹಾಲು ದಾನ ಮಾಡುವ ಬಗ್ಗೆ ಹೊಸ ತಾಯಂದಿರಲ್ಲಿ ಜಾಗೃತಿ ಹೆಚ್ಚುತ್ತಿದೆ, ಇದು ಅನೇಕ ಅಕಾಲಿಕ ಶಿಶುಗಳಿಗೆ ಹೊಸ ಜೀವನ ಪಡೆಯಲು ಸಹಾಯ ಮಾಡುತ್ತದೆ. ಉದಾಹರಣೆಗೆ, ರಾಜ್ಯದ ಮೊದಲ ಎದೆಹಾಲು ಬ್ಯಾಂಕ್ ಆಗಿರುವ ಅಮರಾ ಹಾಲಿನ ಬ್ಯಾಂಕ್ನಲ್ಲಿ ದಾನಿಗಳ ಸಂಖ್ಯೆ ಹೆಚ್ಚಾಗಿದೆ. 2018 ರಲ್ಲಿ ತಿಂಗಳಿಗೆ ಕೇವಲ 5 ಲೀ. ಹಾಲು ಒಟ್ಟಾಗುತ್ತಿತ್ತು ಆದರೆ ಈಗ ತಿಂಗಳಿಗೆ 35 ಲೀ. ಗಳಿಗೆ ಏರಿದೆ. ಇದು ಸಾವಿರಾರು ಮಕ್ಕಳ ಜೀವನಕ್ಕೆ ವರದಾನವಾಗಿದೆ.
ನಾವೀಗ ಕೋರಿಕೆಯ ಮೇರೆಗೆ ಬೆಂಗಳೂರಿನಾದ್ಯಂತ 35- 40 ಆಸ್ಪತ್ರೆಗಳಿಗೆ ಎದೆಹಾಲನ್ನು ಪೂರೈಸುತ್ತೇವೆ. ತಾಯಂದಿರಲ್ಲಿ ಈ ಬಗ್ಗೆ ಜಾಗೃತಿ ನಿಜವಾಗಿಯೂ ಹೆಚ್ಚಳವಾಗಿದೆ. ಈಗ ಅನೇಕ ತಾಯಂದಿರು ಸಾಮಾಜಿಕ ಮಾಧ್ಯಮಗಳ ಮೂಲಕ ನಮ್ಮನ್ನು ಸಂಪರ್ಕಿಸಿ, ಎದೆ ಹಾಲು ದಾನ ಮಾಡುವ ಬಗ್ಗೆ ವಿಚಾರಿಸಿ, ತಮ್ಮ ಹಂಬಲ ವ್ಯಕ್ತಪಡಿಸುತ್ತಿದ್ದಾರೆ ಎಂದು ನವಜಾತ ಶಿಶುವಿಜ್ಞಾನಿ ಮತ್ತು ಅಮರ ಹ್ಯೂಮನ್ ಮಿಲ್ಕ್ ಬ್ಯಾಂಕ್ ಸಂಸ್ಥಾಪಕ ಡಾ. ರಘುರಾಮ್ ಮಲ್ಲಯ್ಯ ಹೇಳಿದರು. ರಾಜ್ಯದ ಮೊದಲ ಸರ್ಕಾರಿ ಎದೆಹಾಲು ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ವಾಣಿ ವಿಲಾಸ ಆಸ್ಪತ್ರೆಯ ಅಮೃತಧಾರೆ ಹಾಲಿನ ಬ್ಯಾಂಕ್ ಈಗ ಆಸ್ಪತ್ರೆಯಿಂದ ಮಾತ್ರವಲ್ಲ, ಹೊರಗಿನಿಂದ ದಾನಿಗಳನ್ನು ಹೊಂದಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ. ಸವಿತಾ ಸಿ. ತಿಳಿಸಿದರು.
“ನಾವು ಈ ವಿಷಯದಲ್ಲಿ ಬಹಳ ದೂರ ಸಾಗಿ ಬಂದಿದ್ದೇವೆ. ಏಕೆಂದರೆ ಈ ಮೊದಲು ನಾವು ವಾರ್ಡ್ಗಳಿಗೆ ಹೋಗಿ ತಾಯಂದಿರಿಗೆ ಹೆಚ್ಚುವರಿ ಎದೆಹಾಲನ್ನು ನೀಡಿ ಎಂದು ಸಲಹೆ ನೀಡಬೇಕಾಗಿತ್ತು ಮತ್ತು ದಾನ ಮಾಡಲು ಒತ್ತಾಯಿಸಬೇಕಾಗಿತ್ತು. ಈಗ ಹಾಗಲ್ಲ, ಅನೇಕ ತಾಯಿಂದಿರು ಹೆಚ್ಚು ಜಾಗೃತರಾಗಿರುವುದನ್ನು ನಾವು ನೋಡುತ್ತಿದ್ದೇವೆ. ಕಳೆದ ಎರಡು ತಿಂಗಳುಗಳಿಂದ, ಆಸ್ಪತ್ರೆಗೆ ದಾಖಲಾಗದ ಮತ್ತು ಹಾಲು ದಾನ ಮಾಡುವ ತಾಯಂದಿರಿಂದ ನಮಗೆ ಅನೇಕ ಪ್ರಶ್ನೆಗಳು ಬರುತ್ತಿವೆ ಎಂದು ಡಾ. ಸವಿತಾ ಈ ಬಗ್ಗೆ ಹೇಳಿದರು.
ದಾನಿಗಳ ಹೆಚ್ಚಳದ ಪರಿಣಾಮವಾಗಿ, ವಾಣಿ ವಿಲಾಸ ಆಸ್ಪತ್ರೆಯ ನವಜಾತ ತೀವ್ರ ನಿಗಾ ಘಟಕ (ಎನ್ಐಸಿಯು) ಜನವರಿಯಿಂದ ಫಾರ್ಮುಲಾ ಮುಕ್ತವಾಗಿದೆ ಹಾಗಾಗಿ ಎನ್ಐಸಿಯುನಲ್ಲಿರುವ ಎಲ್ಲಾ ಶಿಶುಗಳಿಗೆ ಈಗ ಪೌಷ್ಟಿಕ ಎದೆಹಾಲನ್ನು ನೀಡಲಾಗುತ್ತಿದೆ. ಇದನ್ನು ಆರಂಭಿಸಿದ 18 ತಿಂಗಳಲ್ಲಿ, ಬ್ಯಾಂಕ್ ಸುಮಾರು 234 ಲೀಟರ್ ಹಾಲನ್ನು ಸಂಗ್ರಹಿಸಿದೆ, ಇದು ಕನಿಷ್ಠ 1,500 ಶಿಶುಗಳಿಗೆ ಸಹಾಯ ಮಾಡಿದೆ.
ಇದನ್ನೂ ಓದಿ: ಮಾತೃ ಹೃದಯ! 6 ತಿಂಗಳಲ್ಲಿ 42 ಲೀಟರ್ ಎದೆಹಾಲು ದಾನ ಮಾಡಿದ ಸಿನಿ ನಿರ್ಮಾಪಕಿ
ದಾನ ಮಾಡಲು ಬಂದ ಹೆಚ್ಚಿನ ಮಹಿಳೆಯರು ಉದ್ಯೋಗದಲ್ಲಿರುವವರು ಮತ್ತು ವಿದ್ಯಾವಂತ ತಾಯಂದಿರು ಎಂದು ಡಾ. ಮಲ್ಲಯ್ಯ ಹೇಳಿದ್ದಾರೆ. ಜಾಗೃತಿ ಹೆಚ್ಚಿದ್ದರೂ, ಈ ನಿಟ್ಟಿನಲ್ಲಿ ಮಹಿಳೆಯರಿಗೆ ಸಲಹೆ ನೀಡುವ ಅಗತ್ಯವಿದೆ ಎಂದು ಮಕ್ಕಳ ತಜ್ಞ ಮತ್ತು ಮಣಿಪಾಲ್ ಆಸ್ಪತ್ರೆಯ ಸಲಹೆಗಾರ ಡಾ. ರವ್ನೀತ್ ಜೋಶಿ ಅಭಿಪ್ರಾಯಪಟ್ಟಿದ್ದಾರೆ . ದಾನ ಮಾಡಲು ಸ್ವಯಂಪ್ರೇರಿತರಾಗಿ ಬರುವ ಹೆಚ್ಚಿನ ತಾಯಂದಿರು ಗರ್ಭಾವಸ್ಥೆಯಲ್ಲಿ ಅಥವಾ ಹೆರಿಗೆಯ ನಂತರ ಈ ಬಗ್ಗೆ ಸಲಹೆ ಪಡೆದವರು. ಹಾಗಾಗಿ ಹೆಚ್ಚುವರಿ ಎದೆಹಾಲನ್ನು ನೀಡುವ ತಾಯಂದಿರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ಅವರು ಹೇಳಿದರು.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ