ಕಣ್ಣೀರು ಯಾವಾಗಲೂ ಮಾನವನ ಭಾವನೆಗಳ ಮೇಲೆ ಅಡಕವಾಗಿರುತ್ತದೆ ಎಂಬುದು ನಿಮಗೆ ತಿಳಿದಿದೆ. ನಾವು ಜೀವನದ ಸವಾಲುಗಳಿರಲಿ ಅಥವಾ ಗೆಲುವಿರಲಿ ಅದನ್ನು ಅನುಭವಿಸುವಾಗ ಕಣ್ಣೀರು ಸುರಿಸುವುದು ಸಹಜ ಮತ್ತು ಕಣ್ಣೀರು ಚಿಕಿತ್ಸಕವೂ ಹೌದು. ಅಳುವುದು ದೌರ್ಬಲ್ಯದ ಸಂಕೇತವಲ್ಲ, ಬದಲಿಗೆ ನಮ್ಮ ಮಾನಸಿಕ ಯೋಗಕ್ಷೇಮವನ್ನು ಗಮನಾರ್ಹವಾಗಿ ಹೆಚ್ಚಿಸುವ ನೈಸರ್ಗಿಕ ಪ್ರಕ್ರಿಯೆಯಾಗಿದೆ. ಮಾನಸಿಕ ಆರೋಗ್ಯದ ಮೇಲೆ ಅಳುವುದರಿಂದ ಉಂಟಾಗುವ ಕೆಲವು ಲಾಭಗಳ ಬಗ್ಗೆ ಇಲ್ಲಿದೆ ಮಾಹಿತಿ.
ಅಳುವುದರಿಂದಾಗುವ ಅತ್ಯಂತ ಸ್ಪಷ್ಟ ಪ್ರಯೋಜನವೆಂದರೆ, ಇದು ಎಷ್ಟೇ ಒತ್ತಡವಿದ್ದರೂ ಅದನ್ನು ನಿವಾರಿಸುತ್ತದೆ. ನಾವು ಅತ್ತಾಗ ಮಾತ್ರ ನಮ್ಮ ದೇಹದ ಜೊತೆಗೆ ಮನಸ್ಸಿಗೆ ಹೆಚ್ಚು ಆರಾಮವಾಗುತ್ತದೆ. ಕಣ್ಣೀರು ಸುರಿಸುವ ಕ್ರಿಯೆಯು ದೇಹದ ನೈಸರ್ಗಿಕ ನೋವು ನಿವಾರಕಗಳು ಮತ್ತು ಆರೋಗ್ಯಕರ ಮನಸ್ಥಿತಿಯನ್ನು ಹೆಚ್ಚಿಸುತ್ತದೆ ಎಂಬುದು ಸಂಶೋಧನೆಗಳಿಂದ ತಿಳಿದು ಬಂದಿದೆ.
ಮಳೆ ಹೇಗೆ ಭೂವಿಯನ್ನು ಸ್ವಚ್ಛಗೊಳಿಸುತ್ತದೆಯೋ ಹಾಗೇ ಕಣ್ಣೀರು ಭಾವನಾತ್ಮಕವಾಗಿ ನಮ್ಮನ್ನು ಶುದ್ಧೀಕರಿಸುತ್ತದೆ. ದುಃಖ, ಕೋಪ ಅಥವಾ ಹತಾಶೆಯ ಭಾವನೆಗಳನ್ನು ನಿಗ್ರಹಿಸಿ, ದೀರ್ಘಕಾಲೀನ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಲ್ಲಿ ಸಹಕಾರಿಯಾಗಿದೆ.
ನಾವು ಅಳುವ ಮೂಲಕ ಭಾವನಾತ್ಮಕವಾಗಿ ನಮ್ಮ ಒತ್ತಡಗಳಿಂದ ಬಿಡುಗಡೆ ಅನುಭವಿಸುತ್ತೇವೆ, ಇದರಿಂದ ನಮ್ಮ ಮನಸ್ಥಿತಿಯು ಸುಧಾರಿಸುತ್ತದೆ, ಜೊತೆಗೆ ನಮ್ಮನ್ನು ಭಾವನಾತ್ಮಕವಾಗಿ ಗಟ್ಟಿಗೊಳಿಸುತ್ತದೆ. ಇತರರು ಅಳುವುದನ್ನು ನಾವು ನೋಡಿದಾಗ, ಭಾವನಾತ್ಮಕವಾಗಿ ಸ್ಪಂದಿಸುತ್ತೇವೆ. ಇದು ಬೇರೆಯವರಿಗೆ ಬೆಂಬಲ ಮತ್ತು ಸಾಂತ್ವನ ನೀಡಲು ನಮ್ಮನ್ನು ಪ್ರೇರೇಪಿಸುತ್ತದೆ. ಭಾವನೆಗಳ ಈ ವಿನಿಮಯವು ತಿಳುವಳಿಕೆ, ಸಹಾನುಭೂತಿ ಮತ್ತು ಅನುಭೂತಿಯನ್ನು ಹೆಚ್ಚಿಸುತ್ತದೆ, ಇದು ಬಲವಾದ ಮತ್ತು ಅರ್ಥಪೂರ್ಣ ಸಂಬಂಧಗಳನ್ನು ಬೆಳೆಸಲು ಅಗತ್ಯವಾಗಿ ಬೇಕಾದ ಅಂಶಗಳಾಗಿವೆ.
ಇದನ್ನೂ ಓದಿ: ಮಾನಸಿಕ ಆರೋಗ್ಯ ಸಮಸ್ಯೆಯ ಚಿಕಿತ್ಸೆಗಾಗಿ ಮ್ಯಾಜಿಕ್ ಮಶ್ರೂಮ್…!
ಅಳುವುದು ಆಕ್ಸಿಟೋಸಿನ್ ಬಿಡುಗಡೆಯನ್ನು ಪ್ರಚೋದಿಸುತ್ತದೆ ಎಂದು ಇತ್ತೀಚಿನ ಅಧ್ಯಯನಗಳು ತೋರಿಸಿವೆ, ಇದನ್ನು ಸಾಮಾನ್ಯವಾಗಿ “ಲವ್ ಹಾರ್ಮೋನ್” ಎಂದು ಕರೆಯಲಾಗುತ್ತದೆ. ಆಕ್ಸಿಟೋಸಿನ್ ನಂಬಿಕೆ ಮತ್ತು ಬಾಂಧವ್ಯದ ಭಾವನೆಗಳನ್ನು ಬೆಳೆಸುವಲ್ಲಿ ಸಹಾಯ ಮಾಡುತ್ತದೆ. ಇತರರೊಂದಿಗೆ ನಮ್ಮ ಸಂಪರ್ಕ ಆಳಗೊಳಿಸುತ್ತದೆ ಮತ್ತು ನಮ್ಮದು ಎಂಬ ಭಾವನೆಗಳನ್ನು ಬಲಪಡಿಸುತ್ತದೆ. ಇದಲ್ಲದೆ, ಅಳುವುದು ಮೆದುಳಿನಲ್ಲಿ ನರ ಚಟುವಟಿಕೆಯನ್ನು ಉತ್ತೇಜಿಸುತ್ತದೆ, ಭಾವನಾತ್ಮಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ ಎಂದು ಸಂಶೋಧನೆಗಳು ತಿಳಿಸಿವೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: