
ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿರುವ ಅನೇಕರಿಗೆ ಡಯಾಲಿಸಿಸ್ ಅನಿವಾರ್ಯವಾಗುತ್ತದೆ. ಇದು ಹಾನಿಗೊಳಗಾದ ಕಿಡ್ನಿ (Kidney) ಮಾಡಲಾಗದ ಕೆಲಸವನ್ನು ಮಾಡುತ್ತದೆ. ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕಲು ಮತ್ತು ದ್ರವಗಳ ಸಮತೋಲನ, ಹಾಗೂ ಆರೋಗ್ಯವನ್ನು ಕಾಪಾಡಲು ಇದು ಸಹಕಾರಿ. ಆದರೆ, ಡಯಾಲಿಸಿಸ್ ಕೇವಲ ಚಿಕಿತ್ಸೆಯಲ್ಲ, ಇದು ವ್ಯಕ್ತಿಯ ವೃತ್ತಿ, ಸಂಬಂಧಗಳು ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನೇ ಬದಲಾಯಿಸುತ್ತದೆ. ವೈದ್ಯರ ಪ್ರಕಾರ, ಡಯಾಲಿಸಿಸ್ ಅಂತಿಮ ಹಂತ ಎಂದು ಪರಿಗಣಿಸುವುದು ಸರಿಯಲ್ಲ, ಬದಲಿಗೆ ರೋಗಿಗಳಿಗೆ ಹೊಸ ಜೀವನದ ದಾರಿ ಎಂದು ಪರಿಗಣಿಸಬೇಕು. ಆದರೆ ಹಲವು ರೋಗಿಗಳಲ್ಲಿ ದೀರ್ಘಕಾಲದ ಪರಿಹಾರಕ್ಕಾಗಿ ಕಿಡ್ನಿ ಕಸಿ ಉತ್ತಮ ಆಯ್ಕೆಯಾಗಿರುತ್ತದೆ. ಹಾಗಾದರೆ ಜೀವಂತ ದಾನಿಗಳಿಂದ ಕಿಡ್ನಿ ಕಸಿ ಏಕೆ ಮುಖ್ಯವಾಗುತ್ತದೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಕನಕಪುರ ರೋಡ್ ಮಣಿಪಾಲ್ ಆಸ್ಪತ್ರೆಯ ಯುರಾಲಜಿ, ಆಂಡ್ರಾಲಜಿ, ರೋಬೋಟಿಕ್ ಮತ್ತು ರೀನಲ್ ಟ್ರಾನ್ಸ್‌ಪ್ಲಾಂಟ್ ಸರ್ಜರಿಯ ಕನ್ಸಲ್ಟಂಟ್ ಡಾ. ರವಿಶಂಕರ್ ಜೆ.ಸಿ. ಅವರು ತಿಳಿಸಿರುವ ಮಾಹಿತಿ ಅನುಸಾರ, ಮೂತ್ರಪಿಂಡದ ಹಾನಿಯು ಸಾಮಾನ್ಯವಾಗಿ ಸೂಚನೇ ನೀಡದೇ ಆವರಿಸುತ್ತದೆ. ವಿಶೇಷವಾಗಿ ದೀರ್ಘಕಾಲದ ಮಧುಮೇಹ ಮತ್ತು ರಕ್ತದೊತ್ತಡ ಸಮಸ್ಯೆ ಇರುವವರಲ್ಲಿ. ರೋಗ ಲಕ್ಷಣಗಳು ಗೋಚರಗವಾಗುವ ಹಂತದಲ್ಲಿ, ಮೂತ್ರಪಿಂಡದ ಕಾರ್ಯದಲ್ಲಿ ಸಾಕಷ್ಟು ಸಮಸ್ಯೆ ಎದುರಾಗಿರುತ್ತದೆ. ಈ ರೀತಿ ಮೂತ್ರಪಿಂಡದ ವೈಫಲ್ಯವು ತೀವ್ರ ಹಂತಕ್ಕೆ ತಲುಪಿದಾಗ ಡಯಾಲಿಸಿಸ್ ಅನಿವಾರ್ಯವಾಗುತ್ತದೆ. ಆದರೆ ಹಲವು ರೋಗಿಗಳಲ್ಲಿ ದೀರ್ಘಕಾಲದ ಪರಿಹಾರಕ್ಕಾಗಿ ಕಿಡ್ನಿ ಕಸಿ ಉತ್ತಮ ಆಯ್ಕೆಯಾಗಿರುತ್ತದೆ. ಇದಕ್ಕೊಂದು ಉದಾಹರಣೆಯೆಂದರೆ ಒಬ್ಬ 54 ವರ್ಷದ ವ್ಯಕ್ತಿಗೆ ಮಧುಮೇಹ ಮತ್ತು ರಕ್ತದೊತ್ತಡದಿಂದಾಗಿ ಮೂತ್ರಪಿಂಡದ ವೈಫಲ್ಯ ಉಂಟಾಗಿತ್ತು. ಆರು ತಿಂಗಳ ಕಾಲ ಡಯಾಲಿಸಿಸ್ ಪಡೆಯುತ್ತಿದ್ದರು. ಈ ಹಂತದಲ್ಲಿ, ಅವರ ಕುಟುಂಬವು ಶಾಶ್ವತ ಪರಿಹಾರಕ್ಕಾಗಿ ಕಿಡ್ನಿ ಕಸಿಯ ಬಗ್ಗೆ ಯೋಚಿಸಿತು. ವ್ಯಕ್ತಿಯ ಪತ್ನಿ ತಮ್ಮ ಒಂದು ಕಿಡ್ನಿಯನ್ನು ದಾನ ಮಾಡಲು ಮುಂದೆ ಬಂದರು. ವೈದ್ಯಕೀಯ ತಪಾಸಣೆ ಮತ್ತು ನೈತಿಕ ಅನುಮತಿಗಳ ನಂತರ, ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಯಿತು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಅಪ್ಪಿತಪ್ಪಿಯೂ ಈ ಆಹಾರಗಳ ಸೇವನೆ ಮಾಡಬೇಡಿ ಇದು ಕಿಡ್ನಿ ಸ್ಟೋನ್ ಆಗಲು ಕಾರಣವಾಗುತ್ತೆ ಎಚ್ಚರ!
ಡಾ. ರವಿಶಂಕರ್ ಜೆ.ಸಿ. ಅವರ ಪ್ರಕಾರ, ಯಶಸ್ವಿ ಕಿಡ್ನಿ ಕಸಿಯು ರೋಗಿಗೆ ಸ್ವಾತಂತ್ರ್ಯ ಮತ್ತು ಗುಣಮಟ್ಟದ ಜೀವನವನ್ನು ಮರಳಿ ನೀಡುತ್ತದೆ. ಜೀವಂತ ದಾನಿಗಳಿಂದ ಕಿಡ್ನಿ ಪಡೆದಾಗ ಚಿಕಿತ್ಸೆಯು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಮತ್ತು ಯಶಸ್ಸಿನ ಪ್ರಮಾಣವೂ ಹೆಚ್ಚಿರುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:43 pm, Wed, 20 May 26