World Organ Donation Day 2023: ವಿಶ್ವ ಅಂಗಾಂಗ ದಾನ ದಿನ ಯಾವಾಗ? ಇದರ ಮಹತ್ವ ಏನು?

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 11, 2023 | 6:44 PM

ಅಂಗಾಂಗ ದಾನ ಮಾಡುವುದು ಎಂದರೆ ನೀವು ಯಾರಿಗಾದರೂ ಹೊಸ ಜೀವನವನ್ನು ನೀಡುತ್ತಿದ್ದೀರಿ ಎಂದರ್ಥ. ಆದರೆ ಅರಿವಿನ ಕೊರತೆಯಿಂದಾಗಿ ಜನರಲ್ಲಿ ಅಂಗಾಂಗ ದಾನದ ಬಗ್ಗೆ ತಪ್ಪುಕಲ್ಪನೆಗಳಿವೆ. ಈ ಕಾರಣದಿಂದ ಅಂಗಾಂಗ ದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಮರಣಾನಂತರ ಅಂಗಗಳನ್ನು ದಾನ ಮಾಡಲು ಜನರನ್ನು ಪ್ರೇರೇಪಿಸಲು ಪ್ರತಿವರ್ಷ ಆಗಸ್ಟ್ 13 ರಂದು ವಿಶ್ವ ಅಂಗದಾನ ದಿನವನ್ನು ಆಚರಿಸಲಾಗುತ್ತದೆ.

World Organ Donation Day 2023: ವಿಶ್ವ ಅಂಗಾಂಗ ದಾನ ದಿನ ಯಾವಾಗ? ಇದರ ಮಹತ್ವ ಏನು?
ಸಾಂದರ್ಭಿಕ ಚಿತ್ರ
Follow us on

ಅಂಗಾಂಗ ದಾನವನ್ನು ಶ್ರೇಷ್ಠ ದಾನವೆಂದು ಪರಿಗಣಿಸಲಾಗಿದೆ. ಅಂಗ ದಾನ ಮಾಡುವುದರಿಂದ ಒಬ್ಬ ವ್ಯಕ್ತಿಗೆ ಹೊಸ ಜೀವನವನ್ನು ನೀಡಬಹುದು. ಆದರೆ ಈಗಲೂ ಅರಿವಿನ ಕೊರತೆಯಿಂದಾಗಿ ಅಂಗಾಂಗ ದಾನದ ಬಗ್ಗೆ ಜನರಲ್ಲಿನ ತಪ್ಪು ಕಲ್ಪನೆಯಿದೆ. ಈ ಕಾರಣದಿಂದ ಅಂಗಾಂಗ ದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಸ್ವಯಂ ಪ್ರೇರಿತರಾಗಿ ಅಂಗಾಂಗ ದಾನ ಮಾಡಲು ಜನರನ್ನು ಉತ್ತೇಜಿಸಲು ಪ್ರತಿವರ್ಷ ಆಗಸ್ಟ್ 13 ರಂದು ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶ್ವ ಅಂಗದಾನ ದಿನವನ್ನು ಆಚರಿಸಲಾಗುತ್ತದೆ. ಪ್ರಪಂಚದಾದ್ಯಂತ ಅದೆಷ್ಟೋ ಜನರು ನಿರ್ಣಾಯಕ ಅಂಗಗಳ ಅಗತ್ಯವನ್ನು ಹೊಂದಿದ್ದಾರೆ. ಮೂತ್ರಪಿಂಡ, ಹೃದಯ, ಮೇದೋಜ್ಜೀರಕ ಗ್ರಂಥಿ, ಕಣ್ಣು, ಶ್ವಾಸಕೋಶ ಮುಂತಾದ ಅಂಗಗಳನು ದಾನ ಮಾಡುವುದರಿಂದ ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವ ಜನರ ಜೀವವನ್ನು ಉಳಿಸಬಹುದು.

ವಿಶ್ವದ ಮೊದಲ ಅಂಗದಾನವನ್ನು ಯಾವಾಗ ಮಾಡಲಾಯಿತು:

ವಿಶ್ವದ ಮೊದಲ ಅಂಗದಾನವನ್ನು ಅಮೇರಿಕಾದಲ್ಲಿ 1954ರಲ್ಲಿ ಮಾಡಲಾಯಿತು. ರೊನಾಲ್ಡ್ ಲೀ ಹೆರಿಕ್ ಎಂಬ ವ್ಯಕ್ತಿ 1954ರಲ್ಲಿ ತನ್ನ ಅವಳಿ ಸಹೋದರನಿಗೆ ಮೂತ್ರಪಿಂಡವನ್ನು ದಾನ ಮಾಡಿದನು. ಈ ಶಸ್ತ್ರಚಿಕಿತ್ಸೆ ಹಾಗೂ ಮೂತ್ರಪಿಂಡದ ಕಸಿಯನ್ನು ಡಾ. ಜೋಸೆಫ್ ಮರ್ರೆ ಎಂಬವರು ಮಾಡಿದರು. ಈ ಯಶಸ್ವಿ ಶಸ್ತ್ರಚಿಕಿತ್ಸೆಗಾಗಿ ಡಾ. ಜೋಸೆಫ್ ಮರ್ರೆ ಅವರಿಗೆ 1990 ರಲ್ಲಿ ವೈದ್ಯಕೀಯ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಲಭಿಸಿತು.

ವಿಶ್ವ ಅಂಗ ದಾನವನ್ನು ಆಚರಿಸುವ ಉದ್ದೇಶವು ಗಾಯಗೊಂಡ ಮತ್ತು ಗಂಭೀರವಾಗಿ ಅನಾರೋಗ್ಯಕ್ಕೆ ತುತ್ತಾದದವರ (ಅಂಗಗಳ ಅಗತ್ಯವಿರುವವರ) ಜೀವವನ್ನು ಉಳಿಸುವುದಾಗಿದೆ. ವ್ಯಕ್ತಿಯ ಜೀವ ಉಳಿಸುವಲ್ಲಿ ಅಂಗಾಂಗ ದಾನ ಪ್ರಮುಖ ಪಾತ್ರ ವಹಿಸುತ್ತದೆ. ಈಗ ಯಾವುದೇ ವಯಸ್ಸಿನ ವ್ಯಕ್ತಿಯೂ ಅಂದರೆ ಹುಟ್ಟಿನಿಂದ 65 ವರ್ಷ ವಯಸ್ಸಿನ ಒಳಗಿನ ವ್ಯಕ್ತಿ ತನ್ನ ಅಂಗಗಳನ್ನು ದಾನ ಮಾಡಬಹುದು. ಇತ್ತೀಚಿನ ದಿನಗಳಲ್ಲಿ ಅಂಗಾಂಗ ದಾನದ ಸಂಖ್ಯೆಯು ಹೆಚ್ಚುತ್ತಿದೆ. ಇದರಿಂದ ಅದೆಷ್ಟೋ ಜೀವಗಳಿಗೆ ಹೊಸ ಜೀವನ ದೊರೆತಂತಾಗಿದೆ.

ಅಂಗದಾನ ದಿನದ ಮಹತ್ವ:

ಅಂಗಾಂಗ ದಾನದ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ವಿಶ್ವ ಅಂಗದಾನ ದಿನವನ್ನು ಆಚರಿಸಲಾಗುತ್ತದೆ. ಪ್ರತಿದಿನ ಆರೋಗ್ಯಕರ ಅಂಗಗಳ ಅಲಭ್ಯತೆಯಿಂದ ಅನೇಕ ಜನರು ಸಾಯುತ್ತಾರೆ. ಮೂತ್ರಪಿಂಡ, ಹೃದಯ, ಮೇದೋಜೀರಕ ಗ್ರಂಥಿ, ಕಣ್ಣುಗಳು ಮತ್ತು ಶ್ವಾಸಕೋಶದಂತಹ ಅಂಗಗಳನ್ನು ದಾನ ಮಾಡುವುದರಿಂದ ಯಾವುದೇ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿರುವವರ ಜೀವವನ್ನು ಉಳಿಸಬಹುದು. ಆದ್ದರಿಂದ ಈ ದಿನವು ಅಂಗಾಂಗ ದಾನದ ಪ್ರಾಮುಖ್ಯತೆಯ ಬಗ್ಗೆ ಜನರಿಗೆ ಅರಿವು ಮೂಡಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ವಿಶ್ವ ಅಂಗಾಂಗ ದಾನ ದಿನ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಅದರ ಇತಿಹಾಸ, ಮಹತ್ವ

ಅಂಗದಾನದ ವಿಧಗಳು:

ಬದುಕಿರುವಾಗ ಅಂಗದಾನ:

ಅಂಗಾಂಗ ದಾನದಲ್ಲಿ ಎರಡು ವಿಧಗಳಿವೆ. ಮೊದಲ ರೂಪದಲ್ಲಿ ಜೀವಂತ ವ್ಯಕ್ತಿ ಮೂತ್ರಪಿಂಡ ಮತ್ತು ಯಕೃತ್ತಿನ ಒಂದು ಭಾಗವನ್ನು ದಾನ ಮಾಡಬಹುದು. ಒಬ್ಬ ವ್ಯಕ್ತಿಯು ಒಂದು ಮೂತ್ರಪಿಂಡದೊಂದಿದೆ ಬದಕಬಲ್ಲನು ಮತ್ತು ಯಕೃತ್ತು ತನ್ನನ್ನು ತಾನೇ ಪುನರುತ್ಪಾದಿಸಲು ತಿಳಿದಿರುವ ದೇಹದ ಏಕೈಕ ಅಂಗವಾಗಿದೆ. ಹಾಗಾಗಿ ಬದುಕಿರುವಾಗ ಈ ಅಂಗಗಳನ್ನು ಕಸಿ ಮಾಡಿ ಇನ್ನೊಬ್ಬರ ಜೀವ ಉಳಿಸಬಹುದು.

ಸಾವಿನ ನಂತರ ಅಂಗಾಂಗ ದಾನ:

ಮರಣದ ನಂತರವೂ ಅಂಗಾಂಗ ದಾನ ಮಾಡಲಾಗುತ್ತದೆ. ಮೃತ ದೇಹದ ಅಂಗಗಳನ್ನು ಜೀವಂತ ವ್ಯಕ್ತಿಗೆ ಕಸಿ ಮಾಡಲಾಗುತ್ತದೆ. ಅಂಗಾಂಗ ದಾನಿಯ ಮರಣದ ನಂತರ ಅವನ ಅಂಗಗಳಾದ ಹೃದಯ, ಯಕೃತ್ತು, ಮೂತ್ರಪಿಂಡ, ಕರುಳು, ಶ್ವಾಸಕೋಶ, ಕಣ್ಣು ಮತ್ತು ಮೇದೋಜೀರಕ ಗ್ರಂಥಿಯನ್ನು ಅಂಗಗಳ ಅಗತ್ಯವಿರುವ ಇನ್ನೊಬ್ಬ ಮನುಷ್ಯನಿಗೆ ಕಸಿ ಮಾಡಬಹುದು.

ಭಾರತದಲ್ಲಿ ಅಂಗಾಂಗ ದಿನ ಯಾವಾಗ:

ಭಾರತವು ತನ್ನದೇ ಆದ ಅಂಗಾಂಗ ದಿನವನ್ನು ಹೊಂದಿದೆ. ಇದನ್ನು ಪ್ರತಿವರ್ಷ ನವೆಂಬರ್ 27 ರಂದು ಆಚರಿಸಲಾಗುತ್ತದೆ. ಈ ದಿನದಂದು ಸರ್ಕಾರವು ಭಾರತೀಯ ನಾಗರಿಕರನ್ನು ಸ್ವಯಂ ಪ್ರೇರಣೆಯಿಂದ ತಮ್ಮ ಅಂಗಗಳನ್ನು ದಾನ ಮಾಡಲು ಪ್ರೋತ್ಸಾಹಿಸುತ್ತದೆ.

ಮತ್ತಷ್ಟು ವಿಶೇಷ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.