ಕ್ಯಾಲೆಂಡರ್ ವರ್ಷದಲ್ಲಿ ಬರುವ ಮೊದಲ ಹಬ್ಬವೇ ಸುಗ್ಗಿ ಅಥವಾ ಸಂಕ್ರಾಂತಿ ಹಬ್ಬ. ಬಹುತೇಕ ಈ ಹಬ್ಬ ಜ. 14 ಅಥವಾ 15 ರಂದು ಬರುತ್ತದೆ. ಚಳಿಗಾಲದ ಮಧ್ಯಭಾಗ ಆಗಿರುವುದರಿಂದ ಈ ಸಮಯದಲ್ಲಿ ಹಬ್ಬದ ಆಚರಣೆಗೆ ನಿಸರ್ಗವು ತಲೆದೂಗಿದಂತೆ ಭಾಸವಾಗುತ್ತದೆ. ಈ ಬಾರಿಯೂ ಜ. 14 ರಂದು ಈ ಹಬ್ಬದ ಆಚರಣೆ ನಡೆಯುವುದರಿಂದ ತಯಾರಿ ಆರಂಭವಾಗಲಿದೆ. ಹಬ್ಬದ ದಿನ ಸಂಭ್ರಮ -ಸಡಗರದಿಂದ ಅಡುಗೆಯನ್ನು ಕೂಡ ಸಿದ್ದ ಮಾಡಲಾಗುತ್ತದೆ. ಆದರೆ ಸಂಕ್ರಾಂತಿ ಹಬ್ಬದ ದಿನ ಮಾಡುವ ಅಡುಗೆಗೆ ಒಂದು ಹಿನ್ನಲೆಯಿದೆ. ಹಾಗಾದರೆ ಹಬ್ಬದ ದಿನ ತಯಾರಿಸುವ ಆಹಾರದಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ.
ಸಾಮಾನ್ಯವಾಗಿ ಈ ಹಬ್ಬದಲ್ಲಿ ತಯಾರು ಮಾಡುವ ಅಡುಗೆ ದೇಹಕ್ಕೆ, ಹೊರಗಿನ ವಾತಾವರಣದ ವಿರುದ್ಧವಾಗಿ ಉಷ್ಣದ ಪ್ರಭಾವವನ್ನುಂಟು ಮಾಡಿ, ಬ್ಯಾಕ್ಟೀರಿಯ ಮತ್ತು ವೈರಲ್ ಸೋಂಕುಗಳನ್ನು ದೂರ ಮಾಡುತ್ತದೆ. ಅಲ್ಲದೆ ಅಡುಗೆಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಆರೋಗ್ಯ ಕಾಪಾಡುತ್ತದೆ ಎಂಬ ನಂಬಿಕೆ ಹಲವರಲ್ಲಿದೆ. ಏಕೆಂದರೆ ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ಪೊಂಗಲ್, ಎಳ್ಳು ಬೆಲ್ಲ, ಕಬ್ಬು ಇತ್ಯಾದಿ ಆಹಾರಗಳನ್ನು ಸೇವನೆ ಮಾಡುತ್ತಾರೆ. ಇದು ಆರೋಗ್ಯಕ್ಕೆ ಹಲವಾರು ರೀತಿಯ ಪ್ರಯೋಜನಗಳನ್ನು ನೀಡುತ್ತದೆ.
ಕಬ್ಬಿನಲ್ಲಿ ಎಲೆಕ್ಟ್ರೋಲೈಟ್ ಅಂಶ ಹೆಚ್ಚಾಗಿದ್ದು ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶ ಕಂಡು ಬರುವುದರಿಂದ ನಮ್ಮ ಲಿವರ್ ಭಾಗದಲ್ಲಿ ವಿಷಕಾರಿ ಅಂಶಗಳು ಶೇಖರಣೆ ಆಗದಂತೆ ನೋಡಿಕೊಳ್ಳುತ್ತದೆ. ಇದರಿಂದ ದೇಹದಲ್ಲಿ ರೋಗ -ನಿರೋಧಕ ಶಕ್ತಿ ಹೆಚ್ಚಾಗುವ ಜೊತೆಗೆ ಸೋಂಕು ದೂರವಾಗಿ ಶೀತ, ಕೆಮ್ಮು ಮತ್ತು ಜ್ವರದ ಸಮಸ್ಯೆ ಇಲ್ಲವಾಗುತ್ತದೆ.
ಸಂಕ್ರಾಂತಿ ಹಬ್ಬದ ದಿನ ತಿನ್ನುವ ಎಳ್ಳು -ಬೆಲ್ಲದಲ್ಲಿ ಕಾಪರ್, ಕ್ಯಾಲ್ಸಿಯಂ, ಜಿಂಕ್ ಮತ್ತು ಕಬ್ಬಿಣದ ಅಂಶವಿದೆ. ಜೊತೆಗೆ ವಿಟಮಿನ್ ಈ ಆಂಟಿ – ಆಕ್ಸಿಡೆಂಟ್ ಆಗಿ ರೂಪುಗೊಂಡು ದೇಹದ ರೋಗ -ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಚರ್ಮ ತೇವಾಂಶ ಕಾಯ್ದುಕೊಳ್ಳುವಂತೆ ಮಾಡುತ್ತದೆ.
ಇದನ್ನೂ ಓದಿ: ಫ್ರಿಡ್ಜ್ ನಲ್ಲಿ ನಿಂಬೆಹಣ್ಣಿನ ತುಂಡನ್ನು ಇಟ್ಟರೆ ಏನಾಗುತ್ತೆ ತಿಳಿದಿದೆಯೇ?
ಅದಲ್ಲದೆ ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಎಳ್ಳು ಮತ್ತು ಬೆಲ್ಲ ಸೇರಿಸಿ ಉಂಡೆ ಮಾಡಲಾಗುತ್ತದೆ. ಇದರ ಹಿಂದೆ ವೈಜ್ಞಾನಿಕ ಕಾರಣವಿದೆ. ಈ ಸಮಯದಲ್ಲಿ ಚಳಿ ಅಧಿಕವಾಗಿರುವುದರಿಂದ ನಮ್ಮ ದೇಹವನ್ನು ಬೆಚ್ಚಗಿಡಬೇಕಾಗುತ್ತದೆ. ಇದಕ್ಕೆ ಎಳ್ಳು ಮತ್ತು ಬೆಲ್ಲವನ್ನು ಬಳಕೆ ಮಾಡಲಾಗುತ್ತದೆ. ಎಳ್ಳಿನಲ್ಲಿ ಎಣ್ಣೆಯ ಅಂಶ ಸಮೃದ್ದವಾಗಿದ್ದು ಪ್ರೋಟೀನ್, ಕ್ಯಾಲ್ಸಿಯಂ, ಬಿ ಕಾಂಪ್ಲೆಕ್ಸ್ ಮತ್ತು ಕಾರ್ಬೋಹೈಡ್ರೇಟುಗಳಿವೆ. ಇವೆಲ್ಲವೂ ಅಗತ್ಯ ಶಕ್ತಿಯನ್ನು ಒದಗಿಸುತ್ತವೆ. ಜೊತೆಗೆ ಬೆಲ್ಲ ದೇಹದ ಬಿಸಿಯನ್ನು ಹೆಚ್ಚಿಸುತ್ತದೆ. ಇವೆರಡನ್ನೂ ಬೆರೆಸಿ ಮಾಡಿದ ಉಂಡೆಗಳ ಸೇವನೆಯಿಂದ ದೇಹಕ್ಕೆ ಬಿಸಿ ಮತ್ತು ಶಕ್ತಿ ಎರಡೂ ದೊರಕುತ್ತವೆ. ಇದರಿಂದ ದೇಹ ಬೆಚ್ಚಗಿಟ್ಟುಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಇದೇ ಕಾರಣಕ್ಕೆ ಎಳ್ಳು ಮತ್ತು ಬೆಲ್ಲವನ್ನು ಬೇಯಿಸಿ ಉಂಡೆ ಮಾಡಿ ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಸೇವಿಸಲಾಗುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ