ಮೊಜಾಂಬಿಕ್ನಲ್ಲಿ 30 ವರ್ಷಗಳಲ್ಲೇ ಮೊದಲ ಬಾರಿ ಪೋಲಿಯೋವೈರಸ್ ಪ್ರಕರಣವೊಂದು ಪತ್ತೆಯಾಗಿದೆ. 1992ರ ಬಳಿಕ ಪತ್ತೆಯಾದ ಮೊದಲ ಪ್ರಕರಣ ಇದಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಆಫ್ರಿಕಾದ ಪ್ರಾದೇಶಿಕ ನಿರ್ದೇಶಕ ಡಾ.ಮತ್ಶಿಡಿಸೊ ಮೊಯೆಟಿ ಅವರು ನೀಡಿರುವ ಮಾಹಿತಿ ಪ್ರಕಾರ ಹೊಸ ಪ್ರಕರಣದ ಹುಟ್ಟು ಅಪಾಯದ ಮುನ್ಸೂಚನೆ ಎಂದು ಹೇಳಿದ್ದಾರೆ. ಈ ವರ್ಷ ದಕ್ಷಿಣ ಆಫ್ರಿಕಾದಲ್ಲಿ ಒಟ್ಟು 2 ಪ್ರಕರಣಗಳು ಪತ್ತೆಯಾಗಿವೆ.
ಪೋಲಿಯೊವೈರಸ್ ಸೋಂಕಿನಿಂದ ಪಾರ್ಶ್ವವಾಯು ಹೊಂದಿರುವ 100 ಜನರಲ್ಲಿ 2 ರಿಂದ 10 ಜನರು ಸಾಯುತ್ತಾರೆ. ಏಕೆಂದರೆ ವೈರಸ್ ಉಸಿರಾಡಲು ಸಹಾಯ ಮಾಡುವ ಸ್ನಾಯುಗಳ ಮೇಲೆ ಪರಿಣಾಮ ಬೀರುತ್ತದೆ. ಪ್ರತಿ 200 ಮಂದಿಯಲ್ಲಿ ಒಬ್ಬರು ಪಾರ್ಶ್ವವಾಯುವಿಗೆ ತುತ್ತಾಗುತ್ತಾರೆ. ಒಂದೊಮ್ಮೆ ಮಕ್ಕಳು ಗುಣವಾದಂತೆ ಕಾಣಿಸಿದರೂ ಕೂಡ ನಂತರದ ದಿನಗಳಲ್ಲಿ ಸುಸ್ತು, ಸ್ನಾಯು ಸೆಳೆತವನ್ನು ಅನುಭವಿಸಲಿದ್ದಾರೆ.
ಪೋಲಿಯೋ ವೈರಸ್ ಎಂದರೇನು?
ಪೋಲಿಯೋವೈರಸ್ ಎಂಬುದು ಸಾಂಕ್ರಾಮಿಕ ರೋಗವಾಗಿದ್ದು, ಮಲದ ಮೂಲಕ ಬೇರೆಯವರಿಗೆ ಹರಡಬಹುದಾದ ವೈರಸ್ ಇದಾಗಿದೆ. ಮುಖ್ಯವಾಗಿ ಮಲದ ವಸ್ತುವಿನಿಂದ ಮೌಖಿಕ ಮಾಲಿನ್ಯದ ಮೂಲಕ ಹರಡುತ್ತದೆ. ಸೋಂಕಿತರು ಮಲವಿಸರ್ಜನೆ ಬಳಿಕ ತಮ್ಮ ಕೈಗಳನ್ನು ಚೆನ್ನಾಗಿ ತೊಳೆಯದಿದ್ದರೆ ಅದರಿಂದಲೂ ಹರಡಬಹುದು.
ಮಕ್ಕಳಲ್ಲಿ ಪಾರ್ಶ್ವವಾಯುವನ್ನು ಉಂಟು ಮಾಡಲಿದೆ ಪೋಲಿಯೋ
ಪೋಲಿಯೋವೈರಸ್ ಮಕ್ಕಳಲ್ಲಿ ಶಾಶ್ವತವಾಗಿ ಪಾರ್ಶ್ವವಾಯುವನ್ನು ಉಂಟು ಮಾಡಲಿದೆ, ಸಾವಿನ ಅಪಾಯವೂ ಇರಬಹುದು. ಇದಕ್ಕೆ ಯಾವುದೇ ಚಿಕಿತ್ಸೆ ಇಲ್ಲದ ಕಾರಣ ಪಾರ್ಶ್ವವಾಯು ಶಾಶ್ವತವಾಗಿ ಉಳಿದುಬಿಡಬಹುದು.
ಆಫ್ರಿಕಾವನ್ನು ವೈಲ್ಡ್ ಪೋಲಿಯೋ ಮುಕ್ತ ಎಂದು ಘೋಷಿಸಲಾಗಿತ್ತು
ಮೊಜಾಂಬಿಕ್‌ನಲ್ಲಿನ ಪ್ರಕರಣವನ್ನು ಈಶಾನ್ಯ ಟೆಟೆ ಪ್ರಾಂತ್ಯದಲ್ಲಿ ಗುರುತಿಸಲಾಗಿದೆ. ಸೋಂಕಿತ ಮಗು ಮಾರ್ಚ್ ಅಂತ್ಯದಲ್ಲಿ ಪಾರ್ಶ್ವವಾಯುಗೆ ತುತ್ತಾಗಿದೆ. ಆಫ್ರಿಕಾವನ್ನು 2020 ರಲ್ಲಿ ವೈಲ್ಡ್ ಪೋಲಿಯೊ ಮುಕ್ತ ಎಂದು ಘೋಷಿಸಲಾಗಿತ್ತು.
ವೈಲ್ಡ್ ಪೋಲಿಯೋವೈರಸ್ ಲಕ್ಷಣಗಳು
-ಪೋಲಿಯೊ ವೈರಸ್ ಸೋಂಕಿನೊಂದಿಗೆ 4 ರಲ್ಲಿ 1 ಜನರು ಸಾಮಾನ್ಯ ಜ್ವರದ ಲಕ್ಷಣಗಳನ್ನು ಹೊಂದಿರುತ್ತಾರೆ.
-ವಾಕರಿಗೆ, ತಲೆನೋವು, ಜ್ವರ, ಆಯಾಸ, ಗಂಟಲು ನೋವು, ಹೊಟ್ಟೆನೋವು
-ಬೆನ್ನುಹುರಿ ಹಾಗೂ ಮೆದುಳಿನ ಮೇಲೂ ದುಷ್ಪರಿಣಾಮ ಬೀರಬಹುದು
ಸೋಂಕು ಹರಡುವುದು ಹೇಗೆ?
ಪೋಲಿಯೋವೈರಸ್ ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ಸಾಂಕ್ರಾಮಿಕ ರೋಗವಾಗಿದೆ. ಇದು ಸೋಂಕಿತ ವ್ಯಕ್ತಿಯ ಗಂಟಲು ಮತ್ತು ಕರುಳಿನಲ್ಲಿ ವಾಸಿಸುತ್ತದೆ. ಸೋಂಕು ಬಾಯಿಯ ಮೂಲಕ ದೇಹದೊಳಗೆ ಪ್ರವೇಶಿಸುತ್ತದೆ. ಹಾಗೆಯೇ ಸೋಂಕಿತ ವ್ಯಕ್ತಿಯ ಮಲ ಅಥವಾ ಸೋಂಕಿತ ವ್ಯಕ್ತಿಯ ಸೀನು ಅಥವಾ ಕೆಮ್ಮಿನಿಂದ ಬರುವ ಲಾಲಾರಸದ ಮೂಲಕವೂ ಸೋಂಕು ಹರಡಬಹುದು.
ಪೋಲಿಯೋ ಮುಕ್ತ ಭಾರತ
ವಿಶ್ವ ಆರೋಗ್ಯ ಸಂಸ್ಥೆಯು 2014ರ ಫೆಬ್ರವರಿ 24ರಂದು ಭಾರತವನ್ನು ಪೋಲಿಯೋ ಮುಕ್ತ ಎಂದು ಘೋಷಿಸಿತು. ಹಾಗೆಯೇ ಪೋಲಿಯೋ ಪ್ರಕರಣಗಳಿರುವ ದೇಶಗಳ ಪಟ್ಟಿಯಿಂದ ಭಾರತವನ್ನು ತೆಗೆದುಹಾಕಿತು.
ಆರೋಗ್ಯ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ