Mumps Virus: ಮಂಗನಬಾವು ಎಂದರೇನು?; ಈ ರೋಗ ಮಕ್ಕಳಿಗೆ ಅಪಾಯಕಾರಿಯೇ?

|

Updated on: Jan 29, 2024 | 12:41 PM

ಮಂಗನಬಾವು ಸಾಂಕ್ರಾಮಿಕ ರೋಗವಾಗಿದೆ. ಅದು ಒಬ್ಬರಿಂದ ಒಬ್ಬರಿಗೆ ಸುಲಭವಾಗಿ ಹರಡುತ್ತದೆ. ಮಂಗನಬಾವು ಬಂದಾಗ ಮುಖದ ಕೆಳಗಿನ ಭಾಗ ಊದಿಕೊಳ್ಳುತ್ತದೆ. ಇದು ಅಪಾಯಕಾರಿಯೇ? ಇದು ಹೇಗೆ ಹರಡುತ್ತದೆ? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

Mumps Virus: ಮಂಗನಬಾವು ಎಂದರೇನು?; ಈ ರೋಗ ಮಕ್ಕಳಿಗೆ ಅಪಾಯಕಾರಿಯೇ?
ಮಂಗನ ಬಾವು
Image Credit source: iStock
Follow us on

ಮಕ್ಕಳ ದೇಹ ಬಹಳ ಸೂಕ್ಷ್ಮವಾಗಿರುವುದರಿಂದ ವೈರಸ್​ಗಳು ಬೇಗ ಹರಡುತ್ತದೆ. ಹೀಗಾಗಿ, ಮಗುವಿನ ಆರೋಗ್ಯದ ಬಗ್ಗೆ ಹೆಚ್ಚಿನ ಎಚ್ಚರ ವಹಿಸುವುದು ಅಗತ್ಯ. ಇತ್ತೀಚೆಗೆ ಮಕ್ಕಳಲ್ಲಿ ಮಂಗನ ಬಾವು ಅಥವಾ ಮಂಪ್ಸ್​ ರೋಗ ಹೆಚ್ಚಾಗಿ ಕಂಡುಬರುತ್ತಿದೆ. ಇದು ಅಪಾಯಕಾರಿಯೇ? ಇದು ಹೇಗೆ ಹರಡುತ್ತದೆ? ಎಂಬ ಬಗ್ಗೆ ಮಾಹಿತಿ ಇಲ್ಲಿದೆ. ಮಂಗನ ಬಾವು ಸೂಕ್ಷ್ಮಾಣುಗಳಿಂದ ಉಂಟಾಗುತ್ತದೆ. ಮಂಗನಬಾವು ಸಾಂಕ್ರಾಮಿಕ ರೋಗವಾಗಿದೆ. ಅದು ಒಬ್ಬರಿಂದ ಒಬ್ಬರಿಗೆ ಸುಲಭವಾಗಿ ಹರಡುತ್ತದೆ. ಯಾರಿಗಾದರೂ ಮಂಗನಬಾವು ಇದ್ದಾಗ ಕೆಮ್ಮುವಿಕೆ ಅಥವಾ ಸೀನುವಿಕೆಯಿಂದ ಅವರ ಲಾಲಾರಸದಲ್ಲಿರುವ ವೈರಸ್‌ ಗಾಳಿಯಲ್ಲಿ ಹರಡಿ ಬೇರೆಯವರಿಗೂ ಮಂಗನಬಾವು ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಮಂಗನ ಬಾವು ಅಥವಾ ಮಂಪ್ಸ್ ಎಂಬುದು ವೈರಸ್‌ನಿಂದ ಉಂಟಾಗುವ ಕಾಯಿಲೆಯಾಗಿದೆ. ಇದು ಸಾಮಾನ್ಯವಾಗಿ ಮುಖದ ಎರಡೂ ಬದಿಯಲ್ಲಿರುವ ಗ್ರಂಥಿಗಳ ಮೇಲೆ ಪರಿಣಾಮ ಬೀರುತ್ತದೆ. ಪರೋಟಿಡ್ ಗ್ರಂಥಿಗಳು ಎಂದು ಕರೆಯಲ್ಪಡುವ ಈ ಗ್ರಂಥಿಗಳು ಲಾಲಾರಸವನ್ನು ತಯಾರಿಸುತ್ತವೆ. ಊದಿಕೊಂಡ ಗ್ರಂಥಿಗಳು ನೋವನ್ನು ಉಂಟುಮಾಡುತ್ತವೆ. ಈ ಮಂಗನ ಬಾವು ರೋಗಕ್ಕೆ ಕೂಡ ಲಸಿಕೆ ಇದೆ. ಈ ರೋಗ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಅವರಲ್ಲಿ ಈ ಸೋಂಕು ಬೇಗ ಹರಡುತ್ತದೆ.

ಇದನ್ನೂ ಓದಿ: ಡಯಾಬಿಟಿಸ್ ಇರುವವರು ಯಾಕೆ ಮೊಸರು, ಉಪ್ಪು ಸೇವಿಸಬಾರದು?

ಮಂಗನಬಾವು ಹರಡಲು ಕಾರಣವೇನು?:

ಮಂಗನಬಾವಿನ ರೋಗಲಕ್ಷಣಗಳು ಹೆಚ್ಚಾಗಿ ಗೋಚರವಾಗುವುದಿಲ್ಲ. ಇದು ಸೌಮ್ಯವಾಗಿರುತ್ತದೆ. ಈ ರೋಗ ತೀರಾ ಅಪಾಯಕಾರಿಯೇನಲ್ಲ.

– ಮಂಗನಬಾವು ರೋಗ ಇರುವವರು ಸೀನಿದಾಗ ಅಥವಾ ಕೆಮ್ಮಿದಾಗ ಅವರ ಬಾಯಿಯಿಂದ ಹೊಮ್ಮುವ ಎಂಜಲನ್ನು ನಾವು ಮುಟ್ಟಿದರೂ ಅದರಿಂದ ವೈರಸ್ ಹರಡುತ್ತದೆ.

– ಚುಂಬನ ಅಥವಾ ಅವರು ಕುಡಿದ ನೀರಿನ ಬಾಟಲಿಯಲ್ಲಿ ನೀರು ಕುಡಿಯುವುದರಿಂದ ಅಥವಾ ನೇರ ಸಂಪರ್ಕದಿಂದಲೂ ಈ ವೈರಸ್ ಹರಡುತ್ತದೆ.

– ಸೋಂಕಿತ ಲಾಲಾರಸವನ್ನು ಹೊಂದಿರುವ ಆಟಿಕೆಗಳು, ಕಪ್​ಗಳು ಮತ್ತು ಪಾತ್ರೆಗಳಂತಹ ವಸ್ತುಗಳನ್ನು ಹಂಚಿಕೊಳ್ಳುವುದರಿಂದ ಇ ರೋಗ ಹರಡುತ್ತದೆ.

– ಮಂಗನಬಾವು ಇರುವವರೊಂದಿಗೆ ಕ್ರೀಡೆಗಳನ್ನು ಆಡುವುದು, ನೃತ್ಯ ಮಾಡುವುದು, ಚುಂಬಿಸುವುದು ಅಥವಾ ನಿಕಟ ಸಂಪರ್ಕವನ್ನು ಒಳಗೊಂಡಿರುವ ಇತರ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದಲೂ ಹರಡುತ್ತದೆ.

ಮಂಗನಬಾವು ಬಂದಾಗ ಮುಖದ ಕೆಳಗಿನ ಭಾಗ ಊದಿಕೊಳ್ಳುತ್ತದೆ. ಇದು ತಲೆನೋವು, ಜ್ವರ ಮತ್ತು ಆಯಾಸದಂತಹ ಸೌಮ್ಯ ಲಕ್ಷಣಗಳೊಂದಿಗೆ ಪ್ರಾರಂಭವಾಗುತ್ತದೆ. ಆದರೆ ನಂತರ ಗಂಟಲಿನಲ್ಲಿ ತೀವ್ರವಾದ ಊತ ಉಂಟಾಗುತ್ತದೆ. ಹಿಂದೆ ಮಂಗನಬಾವು ಮಕ್ಕಳಲ್ಲಿ ಉಂಟಾಗುವ ಬಹಳ ಸಾಮಾನ್ಯ ಕಾಯಿಲೆಯಾಗಿತ್ತು. 1967ರಲ್ಲಿ ಮಂಪ್ಸ್ ಲಸಿಕೆ ಲಭ್ಯವಾದ ನಂತರ ಈ ರೋಗದ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಯಿತು. ದಡಾರ-ಮಂಪ್ಸ್-ರುಬೆಲ್ಲಾ (MMR) ಲಸಿಕೆಯನ್ನು ಪಡೆಯುವ ಮೂಲಕ ನಿಮ್ಮ ಮಗುವಿಗೆ ಮಂಗನಬಾವು ಬಾರದಂತೆ ಮುನ್ನೆಚ್ಚರಿಕೆ ವಹಿಸಬಹುದು.

ಇದನ್ನೂ ಓದಿ: ಮಕ್ಕಳಲ್ಲಿ ಹೃದಯಾಘಾತ ಉಂಟಾಗುವ ಲಕ್ಷಣಗಳೇನು?

ಮಂಗನಬಾವು ಯಾರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ?:

ಮಂಗನಬಾವು ಲಸಿಕೆಯನ್ನು ಸ್ವೀಕರಿಸದ 2ರಿಂದ 12 ವರ್ಷದೊಳಗಿನ ಮಕ್ಕಳ ಮೇಲೆ ಈ ರೋಗ ಸಾಮಾನ್ಯವಾಗಿ ಹೆಚ್ಚು ಪರಿಣಾಮ ಬೀರುತ್ತದೆ. ಆದರೆ, ಹದಿಹರೆಯದವರು ಮತ್ತು ವಯಸ್ಕರು ಮಂಗನಬಾವು ವ್ಯಾಕ್ಸಿನೇಷನ್ ಪಡೆದಿದ್ದರೂ ಅವರಿಗೆ ಈ ರೋಗ ಉಂಟಾಗಬಹುದು. ಮಂಗನಬಾವು ಸೋಂಕಿನಿಂದ ರಕ್ಷಿಸಲು ಉತ್ತಮ ಮಾರ್ಗವೆಂದರೆ ಸಂಪೂರ್ಣವಾಗಿ ಲಸಿಕೆ ಹಾಕುವುದು.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ