Namma Clinic: ವರ್ಷಾಂತ್ಯಕ್ಕೆ 438 ನಮ್ಮ ಕ್ಲಿನಿಕ್‌ ಆಸ್ಪತ್ರೆಗಳ ಕಾರ್ಯಾರಂಭ -ಬಿಬಿಎಂಪಿ ವ್ಯಾಪ್ತಿಯಲ್ಲಿ 243 ಕ್ಲಿನಿಕ್‌, 160 ವೈದ್ಯರ ನೇಮಕ ಪೂರ್ಣ – ಡಾ. ಕೆ ಸುಧಾಕರ್‌

Dr K Sudhakar: ಬಡತನ ರೇಖೆಗಿಂತ ಕೆಳಗಿರುವ ಜನರು, ಗುಡಿಸಲುಗಳಲ್ಲಿ ವಾಸಿಸುವ ಕಡು ಬಡವರಿಗಾಗಿ ಈ ಯೋಜನೆ ರೂಪಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದಂತೆಯೇ ಇದು ಕಾರ್ಯ ನಿರ್ವಹಿಸಲಿದೆ.

Namma Clinic: ವರ್ಷಾಂತ್ಯಕ್ಕೆ 438 ನಮ್ಮ ಕ್ಲಿನಿಕ್‌ ಆಸ್ಪತ್ರೆಗಳ ಕಾರ್ಯಾರಂಭ -ಬಿಬಿಎಂಪಿ ವ್ಯಾಪ್ತಿಯಲ್ಲಿ 243 ಕ್ಲಿನಿಕ್‌, 160 ವೈದ್ಯರ ನೇಮಕ ಪೂರ್ಣ - ಡಾ. ಕೆ ಸುಧಾಕರ್‌
ಬಿಬಿಎಂಪಿ ವ್ಯಾಪ್ತಿಯಲ್ಲಿ 243 ಕ್ಲಿನಿಕ್‌, 160 ವೈದ್ಯರ ನೇಮಕ ಪೂರ್ಣ -ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌
Updated By: ಸಾಧು ಶ್ರೀನಾಥ್​

Updated on: Oct 06, 2022 | 6:29 PM

ಬೆಂಗಳೂರು: ರಾಜ್ಯದಲ್ಲಿ 438 ‘ನಮ್ಮ ಕ್ಲಿನಿಕ್‌ʼ ಆಸ್ಪತ್ರೆಗಳನ್ನು (Namma Clinic) ನವೆಂಬರ್‌ ಅಂತ್ಯ ಅಥವಾ ಡಿಸೆಂಬರ್‌ 15 ರ ವೇಳೆಗೆ ಕಾರ್ಯಾರಂಭಿಸಲಾಗುವುದು. ಬಿಬಿಎಂಪಿ ವ್ಯಾಪ್ತಿಯಲ್ಲಿ 243 ಕ್ಲಿನಿಕ್‌ಗಳು ಆರಂಭವಾಗಲಿವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ (Karnataka Health Minister Dr K Sudhakar) ತಿಳಿಸಿದರು.

ಬಿಬಿಎಂಪಿ (BBMP) ವ್ಯಾಪ್ತಿಯ ಮಹಾಲಕ್ಷ್ಮಿ ಲೇಔಟ್‌ನ ವಾರ್ಡ್‌-58 ರ ಪಂಚಮುಖಿ ದೇವಸ್ಥಾನದ ಸಮೀಪ ‘ನಮ್ಮ ಕ್ಲಿನಿಕ್‌ʼ ಮಾದರಿ ಆಸ್ಪತ್ರೆಯನ್ನು ರೂಪಿಸಿದ್ದು, ಇದನ್ನು ಸಚಿವರು ವೀಕ್ಷಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಒಂದು ಕ್ಲಿನಿಕ್‌ನಲ್ಲಿ ವೈದ್ಯ, ನರ್ಸಿಂಗ್‌ ಸಿಬ್ಬಂದಿ, ಲ್ಯಾಬ್‌ ಟೆಕ್ನೀಶಿಯನ್‌ ಹುದ್ದೆಗಳಿರುತ್ತವೆ. ಬಿಬಿಎಂಪಿ ವ್ಯಾಪ್ತಿಯ ಕ್ಲಿನಿಕ್‌ಗಳಿಗೆ ವೈದ್ಯರ ನೇಮಕಕ್ಕೆ ಅಧಿಸೂಚನೆ ಹೊರಡಿಸಿದ್ದು, 160 ವೈದ್ಯರು ಈಗಾಗಲೇ ನೇಮಕ ಆಗಿದ್ದಾರೆ. ಉಳಿದ ಎಲ್ಲಾ ಸಿಬ್ಬಂದಿ ಹುದ್ದೆ ತುಂಬಿದೆ. ಬಾಕಿ ಉಳಿದ 83 ಕ್ಕೆ ಮತ್ತೆ ಅಧಿಸೂಚನೆ ಹೊರಡಿಸಲಾಗಿದೆ. ಇನ್ನೂ ಹತ್ತು ದಿನಗಳೊಳಗೆ ಇದು ಕೂಡ ಆಗಲಿದೆ ಎಂದರು.

ಬಡತನ ರೇಖೆಗಿಂತ ಕೆಳಗಿರುವ ಜನರು, ಗುಡಿಸಲುಗಳಲ್ಲಿ ವಾಸಿಸುವ ಕಡು ಬಡವರಿಗಾಗಿ ಈ ಯೋಜನೆ ರೂಪಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದಂತೆಯೇ ಇದು ಕಾರ್ಯ ನಿರ್ವಹಿಸಲಿದೆ. ಪ್ರತಿ ವಾರ್ಡ್‌ನಲ್ಲಿ ಒಂದು ಕ್ಲಿನಿಕ್‌ ಆರಂಭವಾಗುವುದರಿಂದ ಜನರಿಗೆ ಆರೋಗ್ಯ ಹಾಗೂ ಸರ್ಕಾರಿ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಅರಿವು ಹೆಚ್ಚಲಿದೆ ಎಂದರು.

ಮಾರ್ಗಸೂಚಿಯ ಪ್ರಕಾರ, ಗ್ರಾಮೀಣ ಪ್ರದೇಶಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಆದರೆ ನಗರ ಪ್ರದೇಶಗಳಲ್ಲಿ ಇದು ಕಡಿಮೆ ಇದೆ. ಆದ್ದರಿಂದಲೇ ಈ ಯೋಜನೆ ರೂಪಿಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಕೇಂದ್ರ ಸರ್ಕಾರ ಸಂಪೂರ್ಣ ಆರ್ಥಿಕ ಸಹಕಾರ ನೀಡಿದೆ. ಹೆಚ್ಚು ಜನರು ಬಂದು ಆರೋಗ್ಯ ತಪಾಸಣೆ, ಚಿಕಿತ್ಸೆಯ ಸೇವೆ ಪಡೆಯಬೇಕು. ಬಿಬಿಎಂಪಿಯಲ್ಲಿ ಈಗ 198 ವಾರ್ಡ್‌ಗಳಿವೆ. ಮುಂದೆ ವಾರ್ಡ್‌ಗಳ ಸಂಖ್ಯೆ ಹೆಚ್ಚಾಗಬಹುದು. ಇದಕ್ಕೆ ಪೂರಕವಾಗಿ ವಾರ್ಡ್‌ಗೆ ಒಂದರಂತೆ ಈಗಲೇ ಹೆಚ್ಚಿನ ಕ್ಲಿನಿಕ್‌ಗಳನ್ನು ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.

ಸರ್ಕಾರಿ ಕಟ್ಟಡಗಳಲ್ಲಿ, ಬಾಡಿಗೆ ಕಟ್ಟಡಗಳಲ್ಲಿ 1,000-1,200 ಚದರ ಅಡಿ ವಿಸ್ತೀರ್ಣದ ಜಾಗದಲ್ಲಿ ಕ್ಲಿನಿಕ್‌ ರೂಪಿಸಲಾಗುತ್ತಿದೆ. ಪ್ರತಿ ವರ್ಷ ಸಿಬ್ಬಂದಿಗಾಗಿ 138 ಕೋಟಿ ರೂ. ವೆಚ್ಚವಾಗಲಿದೆ. ನಾನ್‌ ರಿಕರಿಂಗ್‌ 17.52 ಕೋಟಿ ರೂ. ಸೇರಿ ಒಟ್ಟು 155 ಕೋಟಿ ರೂ. ವೆಚ್ಚವಾಗಲಿದೆ. ಯೋಗ, ಪ್ರಾಣಾಯಾಮ, ಧ್ಯಾನ, ಆಹಾರ ಪದ್ಧತಿ ಮೊದಲಾದವುಗಳ ಕುರಿತು ಕ್ಲಿನಿಕ್‌ ಮೂಲಕ ಜಾಗೃತಿ ಮೂಡಿಸಲಾಗುವುದು ಎಂದರು.

ಜಿವಿಕೆ ಸಂಸ್ಥೆ ಆಂಬ್ಯುಲೆನ್ಸ್‌ ಸೇವೆ -ನಾಳೆ ಸಭೆ:

ಕಳೆದ 16 ವರ್ಷದಿಂದ ಜಿವಿಕೆ ಸಂಸ್ಥೆ ಆಂಬ್ಯುಲೆನ್ಸ್‌ ಸೇವೆ ನೀಡುತ್ತಿದೆ. ಒಪ್ಪಂದದ ಪ್ರಕಾರ ಸಂಸ್ಥೆಯೇ ಸಿಬ್ಬಂದಿಗೆ ವೇತನ ನೀಡಬೇಕು. ಸರ್ಕಾರದಿಂದ ಹಣ ಪಾವತಿ ಮಾಡಲಾಗುತ್ತಿದೆ. ಸಿಬ್ಬಂದಿಗೆ ವೇತನ ನೀಡದಿದ್ದರೆ, ಸಂಸ್ಥೆಯವರು ಹಾಗೂ ಸಿಬ್ಬಂದಿ ಕಡೆಯವರನ್ನು ಕರೆಸಿ ನಾಳೆ ಸಭೆ ನಡೆಸಲಾಗುವುದು. ಈಗಾಗಲೇ ಅಧಿಕಾರಿಗಳು ಚರ್ಚೆ ಮಾಡಿದ್ದು, ಒಂದು ವಾರದಲ್ಲಿ ಸಮಸ್ಯೆ ಇತ್ಯರ್ಥಪಡಿಸಲಾಗುವುದು ಎಂದು ತಿಳಿಸಲಾಗಿದೆ. ಈ ಸಮಸ್ಯೆಯಿಂದ ಜನರಿಗೆ ತೊಂದರೆಯಾಗಬಾರದು ಎಂದು ಹೇಳಲಾಗಿದೆ ಎಂದರು.

ಆಂಬ್ಯುಲೆನ್ಸ್‌ ಟೆಂಡರ್‌ ಅಂತಿಮಗೊಳ್ಳುತ್ತಿದ್ದು, ಎರಡು ತಿಂಗಳೊಳಗೆ ಮುಗಿಯಲಿದೆ. ಬಳಿಕ ಸೇವೆ ನೀಡುವವರು ಯಾರೆಂದು ತೀರ್ಮಾನವಾಗಲಿದೆ. ಹಳೆಯ ಸಂಸ್ಥೆಯಿಂದ 2008 ರಲ್ಲಿ ಸೇವೆ ಆರಂಭಿಸಿತ್ತು. ಆದರೆ ಈ ಸಂಸ್ಥೆಯಿಂದ ನಿರೀಕ್ಷಿತ ಸೇವೆ ದೊರೆಯತ್ತಿಲ್ಲ. ಅತ್ಯುತ್ತಮವಾದ ಆಂಬ್ಯುಲೆನ್ಸ್‌ ಸೇವೆ ನೀಡಲೆಂದೇ ಸರ್ಕಾರ ಹೊಸ ಯೋಜನೆ ರೂಪಿಸಿದೆ ಎಂದರು.

ಬೈಕ್‌ ಆಂಬ್ಯುಲೆನ್ಸ್‌ ಸಂಬಂಧ ರಚಿಸಿದ ಸಮಿತಿಗಳು, ಇದರ ಅವಶ್ಯಕತೆ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದವು. ಆದ್ದರಿಂದ ಹೊಸ ಟೆಂಡರ್‌ನಲ್ಲಿ ಬೈಕ್‌ ಆಂಬ್ಯುಲೆನ್ಸ್‌ ಪ್ರಸ್ತಾಪ ಇಲ್ಲ. ಆದರೂ ಅಂಗಾಂಗ ದಾನದ ಸಂದರ್ಭ, ರೋಗಿಗಳ ವರ್ಗಾವಣೆಗೆ ಏರ್‌ ಆಂಬ್ಯುಲೆನ್ಸ್‌ ಪರಿಚಯಿಸಲು ಸರ್ಕಾರ ಉದ್ದೇಶಿಸಿದೆ. ಇನ್ನೂ ರೂಪರೇಷೆ ಅಂತಿಮವಾಗಿಲ್ಲ ಎಂದು ಮಾಹಿತಿ ನೀಡಿದರು.

ಅಸಾಂಕ್ರಾಮಿಕ ರೋಗಗಳನ್ನು ಪತ್ತೆ ಮಾಡುವ ಅಭಿಯಾನ ಮಾಡಲಾಗುತ್ತಿದೆ. 30 ವರ್ಷ ಮೇಲ್ಪಟ್ಟ ಎಲ್ಲರೂ ಆರೋಗ್ಯ ತಪಾಸಣೆ ಮಾಡಿಸಲು ಜಾಗೃತಿ ಮೂಡಿಸಲಾಗುತ್ತಿದೆ. ಆಹಾರ ಸುರಕ್ಷತಾ ಅಧಿಕಾರಿಗಳೊಂದಿಗೆ ಚರ್ಚಿಸಿ, ಜಿಮ್‌ಗಳಲ್ಲಿ ಬಳಸುವ ಪೌಡರ್‌ ಬಗ್ಗೆ ಮಾಹಿತಿ ಕಲೆಹಾಕಲು ಸೂಚಿಸಲಾಗಿದೆ. ಆಹಾರದಲ್ಲಿ ಗುಣಮಟ್ಟ ಇಲ್ಲದಿದ್ದರೆ, ಅನುಮತಿ ಇಲ್ಲದಿದ್ದರೆ ಕ್ರಮ ವಹಿಸಲು ಸೂಚಿಸಲಾಗಿದೆ ಎಂದರು.