ರಾಗಿ ರೊಟ್ಟಿ ಹುಚ್ಚೆಳ್ ಚಟ್ನಿ ತಂದೀನಿ ನನ್ನ ಮಗನೆ: ತಿಳಿಯಿರಿ ಗುರೆಳ್ಳು ಚಟ್ನಿ ಪುಡಿಯ ಮಹಿಮೆಯನ್ನು!
ಗುರೆಳ್ಳನ್ನು ರಾಗಿ, ಸಜ್ಜೆ, ನವಣೆ, ಹುರುಳಿ ಬೆಳೆಗಳೊಂದಿಗೆ ಮಿಶ್ರ ಬೆಳೆಯಾಗಿ ಬೆಳೆಯುತ್ತಾರೆ. ಆಕರ್ಷಕವಾದ ಹಳದಿ ಬಣ್ಣದ ಹೂಗಳು, ವಿಶಿಷ್ಟ ಪರಿಮಳ ಬೀರುತ್ತವೆ. ಗುರೆಳ್ಳು ಅಥವಾ ಹುಚ್ಚೆಳ್ಳು ಚಟ್ನಿಪುಡಿ ಎಲ್ಲರಿಗೂ ಪರಿಚಿತ. ಈ ಕಾಳುಗಳಿಂದ ಎಣ್ಣೆಯನ್ನು ತೆಗೆಯುತ್ತಾರೆ. ಪ್ರೊಟೀನ್ ಕಾರ್ಬೋಹೈಡ್ರೇಟ್, ಫೈಬರ್, ಕ್ಯಾಲ್ಸಿಯಂ ವಿಟಮಿನ್ ಗಳಿರುವ ಹುಚ್ಚೆಳ್ಳು ಹಾಗೂ ಹುಚ್ಚೆಳ್ಳೆಣ್ಣೆ ಆರೋಗ್ಯಕ್ಕೆ ಹಿತಕರವಾಗಿರುತ್ತದೆ (uchellu gurellu chutney powder). ದೂರದಿಂದ ನೋಡಿದರೆ ಕಪ್ಪು ಎಳ್ಳಿನ ಹಾಗೆ ಕಾಣುವ ಆಕಾರದಲ್ಲಿ ಭಿನ್ನವಾಗಿರುವ ಈ ಕಾಳುಗಳಿಗೆ ಕನ್ನಡ ಭಾಷೆಯಲ್ಲಿ ಗುರೆಳ್ಳು , ಕರೆಳ್ಳು, ಕಾರೆಳ್ಳು, ಕಾರ್ಯೊಳು, ಹುಚ್ಚೆಳ್ಳು ಎಂದೂ ಸಂಸ್ಕೃತ ಭಾಷೆಯಲ್ಲಿ ರಾಮ ತಿಲ್, ಹಿಂದಿ ಹಾಗೂ ಉರ್ದು ಭಾಷೆಯಲ್ಲಿ ಕಾರಲ್ ಎಂದೂ ಕರೆಯುತ್ತಾರೆ.
- ಅಗಸಿ ಚಟ್ನಿ, ಸೇಂಗಾ ಚಟ್ನಿಯ ಹಾಗೆ ಗುರೆಳ್ಳು ಚಟ್ನಿ ಕೂಡ ಉತ್ತರ ಕರ್ನಾಟಕದಲ್ಲಿ ದಿನ ನಿತ್ಯ ಬಳಸುತ್ತಾರೆ. ಸಜ್ಜೆ ರೊಟ್ಟಿ, ಮೊಸರು, ಗುರೆಳ್ಳು ಚಟ್ನಿ ಈ ಭಾಗದಲ್ಲಿ ಫೇಮಸ್ ಆಗಿದೆ. ಹಾಗೆಯೇ ದಕ್ಷಿಣ ಕರ್ನಾಟಕದಲ್ಲಿ ರಾಗಿ ರೊಟ್ಟಿ ಹುಚ್ಚೆಳ್ಳು (niger seeds) ಚಟ್ನಿ ಫೇಮಸ್ ಅನ್ನಬಹುದು. ಇದಕ್ಕೆ ಪೂರಕವಾಗಿರುವ ಈ ಕನ್ನಡ ಚಿತ್ರಗೀತೆಯನ್ನು ಮೆಲುಕು ಹಾಕಬಹುದು:
‘ರಾಗಿ ರೊಟ್ಟಿ ಹುಚ್ಚೆಳ್ ಚಟ್ನಿ ತಂದೀನಿ ನನ್ನ ಮಗನೆ… ಮೂಗಿನ ಮಟ್ಟ ಜಡಿದು ಮಲಗೋ ನನ್ನ ಮಗನೇ’
- ಗುರೆಳ್ಳು ಚಟ್ನಿ ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಹುಚ್ಚೆಳ್ಳು ಎಣ್ಣೆ ಪಾರದರ್ಶಕವಾಗಿದ್ದು ತಿನ್ನಲು ಬಳಸುತ್ತಾರೆ.
- ಗುರೆಳ್ಳು ಪುಡಿಯನ್ನು ಬದನೆಕಾಯಿ ಪಲ್ಯ, ಚೌಳಿ ಕಾಯಿ ಪಲ್ಯ ಸಮೇತ ಇತರೆ ಪಲ್ಯಗಳಿಗೆ ಬಳಸುತ್ತಾರೆ.
- ಗುರೆಳ್ಳು ಸೇವನೆ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಹೃದಯಕ್ಕೆ ಒಳ್ಳೆಯದು. ಎಣ್ಣೆಯು ಚರ್ಮಕ್ಕೆ ಕಾಂತಿ ನೀಡುತ್ತದೆ. ಎಣ್ಣೆಯನ್ನು ನೋವು ನಿವಾರಕವಾಗಿ, ಗಂಟುಗಳನ್ನು ಕರಗಿಸಲು ಬಳಸುತ್ತಾರೆ.
- ಈ ಎಣ್ಣೆಯ ಹಿಂಡಿಯು ದನಕರುಗಳಿಗೆ ಉತ್ತಮ ಪಶು ಆಹಾರವಾಗಿದೆ. (ಬರಹ: ಎಸ್.ಹೆಚ್. ನದಾಫ್)