
ಅತಿಯಾಗಿ ತಿನ್ನುವ ಅಭ್ಯಾಸವು ಗಂಭೀರ ಆರೋಗ್ಯ (Health) ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂಬುದರ ಬಗ್ಗೆ ನಿಮಗೆ ತಿಳಿದಿರಬಹುದು. ಇದೀಗ ದೆಹಲಿಯ ಜನರು ಕೂಡ ಇದೆ ರೀತಿಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅನಾರೋಗ್ಯಕರ ಆಹಾರವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುತ್ತಿದ್ದು, ಇದು ಯಕೃತ್ತಿನ ಅಥವಾ ಲಿವರ್ (liver) ಸಮಸ್ಯೆಗಳ ಉಲ್ಬಣಕ್ಕೆ ಕಾರಣವಾಗಿದೆ. ಅದರಲ್ಲಿಯೂ ಕೊಬ್ಬಿನ ಯಕೃತ್ತಿನ ಕಾಯಿಲೆ ದೆಹಲಿಯ ಜನರಲ್ಲಿ ಹೆಚ್ಚಾಗಿದೆ. ಏಮ್ಸ್ (AIIMS) ಆಸ್ಪತ್ರೆಯ ಡಾ. ಶಾಲಿಮಾರ್ ಅವರು ಈ ಬಗ್ಗೆ ಕೆಲವು ಮಾಹಿತಿಯನ್ನು ಹಂಚಿಕೊಂಡಿದ್ದು ಕಳಪೆ ಆಹಾರ ಪದ್ಧತಿ, ಅತಿಯಾಗಿ ತಿನ್ನುವುದು ಮತ್ತು ಒತ್ತಡದ ಜೀವನಶೈಲಿಯಿಂದಾಗಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಫ್ಯಾಟಿ ಲಿವರ್ (fatty liver) ಸಮಸ್ಯೆ ವೇಗವಾಗಿ ಏರಿಕೆಯಾಗುತ್ತಿದೆ ಎಂದಿದ್ದಾರೆ. ಹಾಗಾದರೆ ಈ ಸಮಸ್ಯೆಯನ್ನು ತಡೆಯುವುದು ಹೇಗೆ? ಲಿವರ್ ಆರೋಗ್ಯವಾಗಿರಲು ನಮ್ಮ ಜೀವನಶೈಲಿ ಹೇಗಿರಬೇಕು ಎಂಬುದನ್ನು ತಿಳಿದುಕೊಳ್ಳಿ.
ಅಧ್ಯಯನದಿಂದ ತಿಳಿದು ಬಂದ ಮಾಹಿತಿಯ ಪ್ರಕಾರ, ದೆಹಲಿಯಲ್ಲಿ 30 ರಿಂದ 60 ವರ್ಷದೊಳಗಿನ 60 ಪ್ರತಿಶತದಷ್ಟು ಜನರು ಕೊಬ್ಬಿನ ಯಕೃತ್ತಿನ ಸಮಸ್ಯೆ ಅಥವಾ ಫ್ಯಾಟಿ ಲಿವರ್ ಸಮಸ್ಯೆಯನ್ನು ಹೊಂದಿದ್ದಾರೆ. ಭಾರತದಲ್ಲಿ, ಪ್ರತಿ 3 ಜನರಲ್ಲಿ ಒಬ್ಬರು ಫ್ಯಾಟಿ ಲಿವರ್ ನಿಂದ ಬಳಲುತ್ತಿದ್ದಾರೆ. ಅದಲ್ಲದೆ ಈ ಸಮಸ್ಯೆ ಮಕ್ಕಳನ್ನು ಬಿಟ್ಟಿಲ್ಲ. 3 ರಲ್ಲಿ 1 ಮಕ್ಕಳು ಕೊಬ್ಬಿನ ಯಕೃತ್ತಿನಿಂದ ಬಳಲುತ್ತಿದ್ದಾರೆ. ಸಾಮಾನ್ಯವಾಗಿ ಲಿವರ್ ಭಾಗದಲ್ಲಿ ಹೆಚ್ಚಿನ ಪ್ರಮಾಣದ ಕೊಬ್ಬಿನಂಶ ಶೇಖರಣೆಯಾಗುತ್ತಾ ಹೋದರೆ ಅದನ್ನು ಫ್ಯಾಟಿ ಲಿವರ್ ಎನ್ನಲಾಗುತ್ತದೆ. ಹಾಗಾದರೆ ಇದಕ್ಕೆ ಕಾರಣವೇನು? ಈ ರೀತಿ ಸಮಸ್ಯೆ ಬರದಂತೆ ತಡೆಯಲು ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.
ವೈದ್ಯರ ಪ್ರಕಾರ, ದೊಡ್ಡ ದೊಡ್ಡ ನಗರದಲ್ಲಿ, ಫ್ಯಾಟಿ ಲಿವರ್ ಸಮಸ್ಯೆ ಕಂಡು ಬರಲು ಮುಖ್ಯ ಕಾರಣವೆಂದರೆ ಅತಿಯಾಗಿ ತಿನ್ನುವುದು. ಜನರು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆಹಾರ ಸೇವನೆ ಮಾಡುತ್ತಾರೆ. ಹಸಿವು ಇಲ್ಲದಿದ್ದರೂ ಕೂಡ ತಿನ್ನುತ್ತಾರೆ. ಇನ್ನು ಆಹಾರದ ಗುಣಮಟ್ಟವೂ ಕೂಡ ಹದಗೆಟ್ಟಿದ್ದು, ಕಲಬೆರಕೆ ಹೆಚ್ಚಿದೆ. ಜೊತೆಗೆ ಜನರು ಸಂಸ್ಕರಿಸಿದ ಆಹಾರಗಳ ಸೇವನೆ ಮಾಡುವುದು ಕೂಡ ಹೆಚ್ಚಾಗಿದೆ. ಅಂದರೆ ಹಿಟ್ಟು, ಸಿಹಿತಿಂಡಿ, ಪ್ಯಾಕ್ ಮಾಡಿಟ್ಟ ಆಹಾರ ಮತ್ತು ಹೊರಗಿನ ಆಹಾರವನ್ನು ಅತಿಯಾಗಿ ಸೇವನೆ ಮಾಡಲು ಪ್ರಾರಂಭಿಸಿದ್ದಾರೆ, ಇದರಿಂದಾಗಿ ಕೊಬ್ಬಿನ ಯಕೃತ್ತು ಅಥವಾ ಫ್ಯಾಟಿ ಲಿವರ್ ಸಮಸ್ಯೆ ಹೆಚ್ಚುತ್ತಿದೆ. ಇದಲ್ಲದೆ, ವ್ಯಾಯಾಮದ ಕೊರತೆ ಮತ್ತು ಕೆಟ್ಟ ಜೀವನಶೈಲಿ ಕೂಡ ಯಕೃತ್ತಿಗೆ ಹಾನಿ ಮಾಡುತ್ತಿದೆ.
ನಮ್ಮ ಆಹಾರ ಪದ್ಧತಿಯನ್ನು ಬದಲಾಯಿಸುವ ಮೂಲಕ, ಪಿತ್ತಜನಕಾಂಗವನ್ನು ಆರೋಗ್ಯವಾಗಿ ಇಟ್ಟುಕೊಳ್ಳಬಹುದು. ಇದು ಯಕೃತ್ತಿನ ಕಾಯಿಲೆ ಬರುವ ಅಪಾಯವನ್ನು ಶೇ. 50 ರಷ್ಟು ಕಡಿಮೆ ಮಾಡುತ್ತದೆ. ಅದರಲ್ಲಿಯೂ ಲಿವರ್ ಗೆ ತನ್ನನ್ನು ತಾನು ಗುಣಪಡಿಸಿಕೊಳ್ಳುವ ಶಕ್ತಿ ಇರುವುದರಿಂದ, ನೀವು ಒಳ್ಳೆಯ ಜೀವನಶೈಲಿಯನ್ನು ಅಳವಡಿಸಿಕೊಂಡು ನಿಮ್ಮ ಯಕೃತ್ತನ್ನು ಆರೋಗ್ಯವಾಗಿಟ್ಟುಕೊಳ್ಳಬಹುದು. ಅದಕ್ಕಾಗಿಯೇ ಪ್ರತಿನಿತ್ಯ ತಾಜಾ ಹಣ್ಣು, ಹಸಿರು ತರಕಾರಿ, ಧಾನ್ಯ ಮತ್ತು ತೆಳ್ಳಗಿನ ಪ್ರೋಟೀನ್ ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ. ಇಂತಹ ಆಹಾರಗಳು ಫ್ಯಾಟಿ ಲಿವರ್ ಸಮಸ್ಯೆಯನ್ನು ಕಡಿಮೆ ಮಾಡಿ ಯಕೃತ್ತು ಆರೋಗ್ಯವಾಗಿರುವಿರಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: Pregnancy tips for husbands: ಹೆಂಡತಿ ಗರ್ಭಿಣಿ ಇರುವಾಗ ಗಂಡ ತಿಳಿದಿರಬೇಕಾದ ವಿಚಾರಗಳು
ನಿಮ್ಮ ಮಕ್ಕಳು ಆರೋಗ್ಯಕರ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಲು ಅವರಿಗೆ ಸಹಾಯ ಮಾಡಿ. ಸಕ್ಕರೆ ಪಾನೀಯ ಮತ್ತು ಸಂಸ್ಕರಿಸಿದ ಆಹಾರ ಸೇವನೆ ಮಾಡುವುದನ್ನು ತಪ್ಪಿಸಿ. ಆಹಾರವು ನಮ್ಮ ಹೊಟ್ಟೆ ತುಂಬುವುದಕ್ಕೆ ಮಾತ್ರವಲ್ಲ ಅದು ಔಷಧಿಯಾಗಿಯೂ ಕಾರ್ಯನಿರ್ವಹಿಸುತ್ತದೆ. ಪಿತ್ತಜನಕಾಂಗವನ್ನು ಆರೋಗ್ಯಕರವಾಗಿಡಲು, ಅನಗತ್ಯ ಔಷಧಿಗಳನ್ನು ಸೇವಿಸುವುದನ್ನು ತಪ್ಪಿಸಿ. ರೋಗಗಳ ವಿರುದ್ಧ ಹೋರಾಡಲು ನಿಮ್ಮ ದೇಹವನ್ನು ಒಳ್ಳೆಯ ಆಹಾರಗಳ ಸೇವನೆ ಮಾಡುವ ಮೂಲಕ ಬಲಪಡಿಸಿಕೊಳ್ಳಿ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ