ಹೆರಿಗೆಯೆನ್ನುವುದು ಹೆಣ್ಣಿಗೆ ಮರುಜನ್ಮವಿದ್ದಂತೆ. 9 ತಿಂಗಳ ಕಾಲ ಮಗುವನ್ನು ಗರ್ಭದಲ್ಲಿ ಹೊತ್ತ ಮಹಿಳೆ ಆ ಮಗುವನ್ನು ಭೂಮಿಗೆ ತರುವಷ್ಟರಲ್ಲಿ ಸಾಕಷ್ಟು ರೀತಿಯ ಮಾನಸಿಕ ಮತ್ತು ದೈಹಿಕ ಬದಲಾವಣೆ, ಒತ್ತಡಗಳನ್ನು ಅನುಭವಿಸುತ್ತಾಳೆ. ಮುಂದಿನ ಪೀಳಿಗೆಯೊಂದನ್ನು ಸೃಷ್ಟಿಸುವ ಅಪರೂಪದ ಶಕ್ತಿ ಇರುವ ಮಹಿಳೆ ಹೆರಿಗೆಯ ನಂತರ ಮಾನಸಿಕವಾಗಿ ಜರ್ಜರಿತಳಾಗಿರುತ್ತಾಳೆ. ಗ್ರಾಮೀಣ ಭಾಷೆಯಲ್ಲಿ ಇದನ್ನೇ ಬಾಣಂತಿ ಸನ್ನಿ ಎಂದು ಕರೆಯುತ್ತಾರೆ. ವೈದ್ಯಕೀಯ ಭಾಷೆಯಲ್ಲಿ ಅದನ್ನು ಪೋಸ್ಟ್ಪಾರ್ಟಮ್ ಡಿಪ್ರೆಷನ್ (Postpartum Depression), ಬೇಬಿ ಬ್ಲೂಸ್ (Baby Blues) ಎಂದೆಲ್ಲ ಕರೆಯುತ್ತಾರೆ. ಇದು ಒಂದು ರೀತಿಯ ಮಾನಸಿಕ ಖಿನ್ನತೆ.
ಹೆರಿಗೆಯಾದ ಬಳಿಕ ಮನೆಯಲ್ಲಿ ಮಗು ಬಂದ ಸಂತೋಷದ ಕ್ಷಣವನ್ನು ಇಡೀ ಕುಟುಂಬವೇ ಸಂಭ್ರಮಿಸುತ್ತದೆ. ಆದರೆ, ಬಾಣಂತಿಯ ಮಾನಸಿಕ ಆರೋಗ್ಯದ ಬಗ್ಗೆ ಬಹುತೇಕ ಜನರು ಗಮನ ಹರಿಸುವುದಿಲ್ಲ. ಎಲ್ಲರ ಗಮನ ಮಗುವಿನ ಮೇಲಿರುವುದರಿಂದ ಹೆರಿಗೆ ಸಂದರ್ಭದಲ್ಲಿ ಜೀವನ್ಮರಣದ ನಡುವೆ ಹೋರಾಟ ನಡೆಸಿ, ಕೂಸೊಂದನ್ನು ಪ್ರಪಂಚಕ್ಕೆ ತಂದ ತಾಯಿಗೆ ಸಹಜವಾಗಿಯೇ ತನ್ನ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ ಎಂಬ ಅಸಮಾಧಾನ ಕಾಡುತ್ತದೆ.
ಇದನ್ನೂ ಓದಿ: ಗರ್ಭಿಣಿಯರು ಯಾವ ರೀತಿಯ ಡಯಟ್ ಮಾಡಬೇಕು? ಮಗುವಿನ ಆರೋಗ್ಯಕ್ಕೆ ಈ ಆಹಾರ ಬಳಸಿ
ಹೆರಿಗೆ ಸಮಯದಲ್ಲಿ ದೇಹದ ಮೇಲಾಗುವ ಗಾಯಗಳು ಒಂದೆಡೆ ಬಾಣಂತಿಯನ್ನು ಕಾಡಿದರೆ, ಇನ್ನೊಂದೆಡೆ ಅತಿಯಾದ ಪಥ್ಯ, ಮಗುವಿನ ಆರೈಕೆ ಇವೆಲ್ಲವೂ ಸೇರಿ ಆಕೆಯ ಮೂಡ್ ಬದಲಾಗುತ್ತಲೇ ಇರುತ್ತದೆ. ಆಕೆ ಕೂಡ ಹೊಸ ತಾಯಿ ಆಗಿರುವುದರಿಂದ ಆಕೆಗೂ ಮಗುವಿನ ಜೊತೆ ಹೊಂದಿಕೊಳ್ಳಲು ಸಮಯ ಬೇಕಾಗುತ್ತದೆ. ಕೆಲವು ಮಹಿಳೆಯರು ತಾವು ಬಯಸಿದ ಮಗು ಹುಟ್ಟಲಿಲ್ಲ ಎಂಬ ಕಾರಣಕ್ಕೆ ಆ ಮಗುವನ್ನು ತನ್ನ ಮಗುವೆಂದು ಸ್ವೀಕಾರ ಮಾಡಲು ಕೂಡ ಸಮಯ ತೆಗೆದುಕೊಳ್ಳುತ್ತಾರೆ. ತನ್ನಿಷ್ಟದ ಮಗುವಾಗಲಿಲ್ಲವೆಂದು ಖಿನ್ನತೆಗೆ ಒಳಗಾಗಿ ಪ್ರಾಣಕ್ಕೇ ಆಪತ್ತು ತಂದುಕೊಳ್ಳುವ ತಾಯಂದಿರೂ ಇದ್ದಾರೆ. ಇನ್ನು ಕೆಲವರಿಗೆ ತಮ್ಮ ಮಗುವಿಗೆ ಏನಾದರೂ ತೊಂದರೆ ಆಗಿಬಿಡುತ್ತದೆ ಎಂಬ ಅತಿಯಾದ ಆತಂಕ ಕಾಡುತ್ತಿರುತ್ತದೆ. ಹೀಗಾಗಿ, ಈ ಹೆರಿಗೆ ನಂತರದ ಖಿನ್ನತೆಯನ್ನು ಕೆಲವೊಮ್ಮೆ ಮನೆಯವರೇ ಆಕೆಗೆ ಪ್ರೀತಿ, ಕಾಳಜಿ ತೋರಿಸುವ ಮೂಲಕ ಬಗೆಹರಿಸಬಹುದು. ಆದರೆ, ಇನ್ನು ಕೆಲವು ಪ್ರಕರಣಗಳಲ್ಲಿ ವೈದ್ಯರ ಸಮಾಲೋಚನೆಯೂ ಅಗತ್ಯವಾಗಿರುತ್ತದೆ.
ಬೇಬಿ ಬ್ಲೂಸ್ ಎಂಬುದು ಹೆರಿಗೆ ನಂತರ ತಾಯಂದಿರಲ್ಲಿ ಉಂಟಾಗುವ ಹಾರ್ಮೋನುಗಳ ಬದಲಾವಣೆಯಾಗಿದ್ದು, ಇದರಿಂದ ಕೆಲವೊಮ್ಮೆ ಹೊಸ ತಾಯಂದಿರು ವಿಪರೀತ ಭಯ ಪಡುತ್ತಾರೆ, ಇನ್ನು ಕೆಲವೊಮ್ಮೆ ಅಳುತ್ತಾರೆ, ಕೆಲವರು ಮಗುವಿನ ಬಗ್ಗೆ ತಿರಸ್ಕಾರ ಭಾವನೆ ಬೆಳೆಸಿಕೊಳ್ಳುತ್ತಾರೆ. ಸಾಮಾನ್ಯವಾಗಿ ಇದು ಹೆರಿಗೆಯ ನಂತರ ಮೊದಲ 2 ವಾರಗಳಲ್ಲಿ ಕಂಡುಬರುವ ಬದಲಾವಣೆಯಾಗಿದೆ. ಹಾರ್ಮೋನ್ ಸರಿಯಾಗುತ್ತಿದ್ದಂತೆ ಈ ತಾತ್ಕಾಲಿಕ ಖಿನ್ನತೆಯೂ ಸರಿಯಾಗುತ್ತದೆ.
ಇದನ್ನೂ ಓದಿ: Postpartum Fatigue: ಮಹಿಳೆಯರ ಆರೋಗ್ಯ; ಪ್ರಸವಾನಂತರದ ಆಯಾಸವನ್ನು ನಿಭಾಯಿಸಲು ಆಹಾರಗಳು
ಸಾಮಾನ್ಯವಾಗಿ ಶೇ. 85ರಷ್ಟು ಮಹಿಳೆಯರು ಹೆರಿಗೆ ನಂತರ ಈ ಬೇಬಿ ಬ್ಲೂಸ್ ಅನ್ನು ಅನುಭವಿಸುತ್ತಾರೆ. ಗರ್ಭಿಣಿಯಾಗಿದ್ದಾಗ ತನ್ನನ್ನು ಎಲ್ಲರೂ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದರು, ಈಗ ನಾನು ಯಾರಿಗೂ ಬೇಡವಾಗಿದ್ದೇನೆ, ಎಲ್ಲರಿಗೂ ಮಗುವೇ ಮುಖ್ಯ ಎಂಬ ಭಾವನೆ ಆಕೆಯಲ್ಲಿ ಖಿನ್ನತೆಯನ್ನು ಹೆಚ್ಚಿಸುತ್ತದೆ. ತಾಯ್ತನವೆಂಬುದು ಮಹಿಳೆಯ ಜೀವನದ ಪ್ರಮುಖ ಘಟ್ಟವಾದರೂ ಮಗುವಿನ ಆಗಮನವನ್ನು ಆಕೆ ಎಂಜಾಯ್ ಮಾಡಲು ಸಮಯ ತೆಗೆದುಕೊಳ್ಳುತ್ತಾಳೆ. ಆಕೆಗೂ ಹೊಸ ಜೀವನಕ್ಕೆ ಹೊಂದಿಕೊಳ್ಳಲು ಸಮಯ ಬೇಕಾಗುತ್ತದೆ ಎಂದು ತಜ್ಞ ವೈದ್ಯರು ಅಭಿಪ್ರಾಯಪಡುತ್ತಾರೆ.
ಬಹುತೇಕ ಸಂದರ್ಭಗಳಲ್ಲಿ ಇಂತಹ ಖಿನ್ನತೆಗೆ ಚಿಕಿತ್ಸೆ ಬೇಕಾಗುವುದಿಲ್ಲ. ಆದರೆ, ಕೆಲವೊಂದು ಮಿತಿಮೀರಿದ ಸಂದರ್ಭಗಳಲ್ಲಿ ವೈದ್ಯರ ಕೌನ್ಸೆಲಿಂಗ್ ಅತ್ಯಗತ್ಯ. ಹೆರಿಗೆಯಾಗಿ 1 ತಿಂಗಳಾದರೂ ಮಹಿಳೆ ಡಿಪ್ರೆಷನ್, ಮೂಡ್ ಸ್ವಿಂಗ್ನಿಂದ ಹೊರಬಾರದಿದ್ದರೆ ವೈದ್ಯರನ್ನು ಕಾಣುವುದು ಉತ್ತಮ. ಈ ಪೋಸ್ಟ್ಪಾರ್ಟಮ್ ಡಿಪ್ರೆಷನ್ ಅನುವಂಶಿಕವಾಗಿಯೂ ಕಂಡುಬರುತ್ತದೆ.
ಇದನ್ನೂ ಓದಿ: Maternity Benefits: ಗುತ್ತಿಗೆ ಉದ್ಯೋಗದಲ್ಲಿನ ಅವಧಿ ಮುಗಿದಿದ್ದರೂ ಹೆರಿಗೆ ರಜೆಯನ್ನು ನೀಡಬಹುದು: ಸುಪ್ರೀಂಕೋರ್ಟ್
ಪ್ರಸವಾನಂತರದ ಖಿನ್ನತೆಯ ಲಕ್ಷಣಗಳೆಂದರೆ,
– ಆತಂಕ
– ದುಃಖ
– ಕೋಪ ಮತ್ತು ಕಿರಿಕಿರಿ
– ನಿದ್ರಿಸಲು ತೊಂದರೆ ಅನುಭವಿಸುವುದು
ಈ ರೋಗಲಕ್ಷಣಗಳು ತೀವ್ರವಾಗಿದ್ದರೆ ಅಥವಾ 2 ವಾರಗಳಿಗಿಂತ ಹೆಚ್ಚು ಕಾಲ ಇದ್ದರೆ ಹೊಸ ತಾಯಿಯ ಬಗ್ಗೆ ಮನೆಯವರು ಹೆಚ್ಚಿನ ಕಾಳಜಿ ವಹಿಸಬೇಕು. ಮಗುವಿಗೆ ಜನ್ಮ ನೀಡುವ ಮೊದಲು ಆತಂಕ ಅಥವಾ ಖಿನ್ನತೆಯನ್ನು ಹೊಂದಿರುವ ಮಹಿಳೆಯರಲ್ಲಿ ಈ ಹೆರಿಗೆ ನಂತರದ ಖಿನ್ನತೆ ಹೆಚ್ಚಿನ ಅಪಾಯವನ್ನು ಉಂಟುಮಾಡಬಹುದು.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ