ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಅವರ ಮುದ್ದಿನ ಮೊಮ್ಮಗಳ ಸಾವು ಇಡೀ ಕುಟುಂಬಕ್ಕೆ ನೋವು ತಂದಿದೆ. ಆದರೆ ಸೌಂದರ್ಯ ಆತ್ಮಹತ್ಯೆಗೆ (Soundarya Suicide) ಕಾರಣ ಮಾತ್ರ ಇನ್ನು ತಿಳಿದುಬಂದಿಲ್ಲ. ಪತಿ ಜೊತೆ ಚೆನ್ನಾಗಿಯೇ ಇದ್ದ ಸೌಂದರ್ಯಗೆ ಕುಟುಂಬ ಸಮಸ್ಯೆ ಇರಲಿಲ್ಲ ಅಂತ ಹೇಳಲಾಗುತ್ತಿದೆ. ಆದರೆ ಸದ್ಯ ಸೌಂದರ್ಯ ಆತ್ಮಹತ್ಯೆಗೆ ಪೋಸ್ಟ್ ಪಾರ್ಟಮ್ ಖಿನ್ನತೆ (Postpartum Depression) ಕಾರಣವಿರಬಹುದು ಅಂತ ಊಹಿಸಲಾಗಿದೆ. ಸಾಮಾನ್ಯವಾಗಿ ಮಗು ಜನಿಸಿದ ಬಳಿಕ ಬಾಣಂತಿಯರು ಪೋಸ್ಟ್ ಪಾರ್ಟಮ್ ಖಿನ್ನತೆಗೆ ಒಳಗಾಗುತ್ತಾರೆ. ಬಹುತೇಕ ಬಾಣಂತಿಯರು ಖಿನ್ನತೆಯಿಂದ ಬೇಗ ಹೊರಬರುತ್ತಾರೆ. ಆದರೆ ಸೌಂದರ್ಯ ಪೋಸ್ಟ್ ಪಾರ್ಟಮ್ ಖಿನ್ನತೆಯಿಂದ ಬಳಲುತ್ತಿದ್ದರಾ? ಈ ಪೋಸ್ಟ್ ಪಾರ್ಟಮ್ ಖಿನ್ನತೆ ಎಂದರೇನು? ಇದಕ್ಕೆ ಕಾರಣ ಮತ್ತು ಪರಿಹಾರವೇನು? ಅಂತ ಟಿವಿ9 ಡಿಜಿಟಲ್ ತಂಡ ಮಾಹಿತಿ ಕಲೆ ಹಾಕಿದೆ.
ಸ್ತ್ರೀರೋಗ ತಜ್ಞೆ ಡಾ.ಶೈಲಜಾ ಅವರನ್ನು ಮಾತನಾಡಿಸಿದ ಟಿವಿ9 ಡಿಜಿಟಲ್ ತಂಡಕ್ಕೆ ಪೋಸ್ಟ್ ಪಾರ್ಟಮ್ ಖಿನ್ನತೆ ಬಗ್ಗೆ ಮಾಹಿತಿ ನೀಡಿದರು. ಮಗು ಜನಿಸಿದ ಬಳಿಕ ಬಾಣಂತಿಯರು ಖಿನ್ನತ್ತೆಗೆ ಒಳಗಾಗುತ್ತಾರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಹಜವಾಗಿ ಮಗು ಜನಿಸಿದ ಬಳಿಕ ಖಿನ್ನತೆಗೆ ಒಳಗಾಗುವುದು ಸಹಜ. ಡೆಲಿವರಿ ಆದ ನಂತರ ದೇಹದಲ್ಲಿ ಹಾರ್ಮೋನ್ ಕಡಿಮೆಯಾಗುತ್ತದೆ. ಹೀಗಾಗಿ ಬಾಣಂತಿಯರು ಖಿನ್ನತ್ತೆಗೆ ಒಳಗಾಗುತ್ತಾರೆ ಎಂದು ತಿಳಿಸಿದರು.
ಬೇರೆ ಖಿನ್ನತೆಗೂ ಬಾಣಂತಿ ಸಮಯದಲ್ಲಿ ಆಗುವ ಪೋಸ್ಟ್ ಪಾರ್ಟಮ್ ಖಿನ್ನತೆಗೂ ವ್ಯತ್ಯಾಸ ಏನು?
ಪೋಸ್ಟ್ ಪಾರ್ಟಮ್ ಖಿನ್ನತೆಗೂ ಮತ್ತು ಇತರೆ ಖಿನ್ನತೆಗೂ ವ್ಯತ್ಯಾಸವಿದೆ ಅಂತ ಡಾ.ಶೈಲಜಾ ತಿಳಿಸಿದರು. ಹೆರಿಗೆಯ ನಂತರ ಮೊದಲ ಎರಡು ತಿಂಗಳ ಒಳಗಾಗಿ ಖಿನ್ನತೆ ಕಾಣಿಸಿಕೊಳ್ಳುತ್ತದೆ. ಜೊತೆಗೆ ಇದು ದೀರ್ಘ ಕಾಲದವರೆಗೆ ಇರಲ್ಲ. ಪೋಸ್ಟ್ ಪಾರ್ಟಮ್ ಖಿನ್ನತೆಯಿಂದ ಬಹುತೇಕ ಬಾಣಂತಿಯರು ಬೇಗ ಹೊರಗೆ ಬರುತ್ತಾರೆ. ಹೆರಿಗೆಯಾಗಿ ಒಂದು ವಾರದ ನಂತರ ಖಿನ್ನತೆ ಶುರುವಾಗುತ್ತದೆ. ಅಲ್ಲದೇ ಇದರಿಂದ ಮೂರು ವಾರಗಳ ಒಳಗಾಗಿ ಹೊರಗೆ ಬರುತ್ತಾರೆ. ಬಹು ಮುಖ್ಯವಾಗಿ ನಮ್ಮ ಸಮಾಜದಲ್ಲಿ ಹೆರಿಗೆಯಾದ ಬಳಿಕ ಮಹಿಳೆ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಹೀಗಾಗಿ ಖಿನ್ನತೆಗೆ ಒಳಗಾಗುವ ಪ್ರಮಾಣ ಕಡಿಮೆ ಇರುತ್ತದೆ.
ಪೋಸ್ಟ್ ಪಾರ್ಟಮ್ ಖಿನ್ನತೆಯ ಲಕ್ಷಣಗಳು?
1. ಪೋಸ್ಟ್ ಪಾರ್ಟಮ್ ಖಿನ್ನತೆಗೆ ಒಳಗಾಗುವವರು ಪದೇ ಪದೇ ಕಣ್ಣೀರು ಹಾಕುತ್ತಾರೆ ಅಥವಾ ದುಃಖಿಸುತ್ತಾರೆ.
2. ಹೆಚ್ಚು ಕೋಪದಲ್ಲಿರುತ್ತಾರೆ.
3. ಕುಟುಂಬಸ್ಥರೊಂದಿಗೆ ಚಿಕ್ಕ- ಚಿಕ್ಕ ವಿಷಯಕ್ಕೆ ಕಿರಿ ಕಿರಿ ಮಾಡಿಕೊಳ್ಳುತ್ತಾರೆ.
4. ಅನಗತ್ಯವಾಗಿ ಯೋಚನೆ ಮಾಡುತ್ತಿರುತ್ತಾರೆ.
5. ಊಟ ಮಾಡಲು ನಿರಾಕರಿಸುವುದು (ಮೊದಲು ಊಟ ಬೇಕು ಎನ್ನುವುದು. ಊಟ ತಂದು ಕೊಟ್ಟರೆ ಇವಾಗ ಬೇಡ ಅಂತ ತಿರಸ್ಕರಿಸುವುದು).
6. ಆಸಕ್ತಿ ಕಳೆದುಕೊಳ್ಳುವುದು.
7. ಏಕಾಂಗಿಯಾಗಿರಲು ಬಯಸುವುದು.
8. ಭಯ ಪಡುವುದು.
9. ಮಗುವಿಗೆ ಹಾಲು ಕೊಡಲು ನಿರಾಕರಿಸುವುದು.
ಖಿನ್ನತೆಗೆ ಪರಿಹಾರ ಏನು?
ಮೊದಲೇ ಹೇಳಿದಂತೆ ಹೆರಿಗೆ ಬಳಿಕ ಖಿನ್ನತೆ ಸಹಜ. ಆದರೆ ಈ ಖಿನ್ನತೆಯಿಂದ ಮುಕ್ತಗೊಳಿಸುವ ಶಕ್ತಿ ಕುಟುಂಬಸ್ಥರ ಕೈಯಲ್ಲಿ ಇರುತ್ತದೆ. ಬಾಣಂತಿ ಚಿಕ್ಕ ಚಿಕ್ಕ ವಿಚಾರಕ್ಕೆ ಕೋಪ ಮಾಡಿಕೊಂಡಾಗ ಮನೆಯವರು ಅದನ್ನು ಅನುಸರಿಸಿಕೊಂಡು ಹೋಗಬೇಕು. ನಿಧಾನವಾಗಿ ಆಕೆಗೆ ತಿಳಿಸಲು ಪ್ರಯತ್ನಿಸಬೇಕು. ಒಂಟಿತನ ಬರದಂತೆ ಜೊತೆಯಲ್ಲೆ ಇದ್ದೂ ಮಾತನಾಡುತ್ತಿರಬೇಕು. ಸರಿಯಾದ ಸಮಯಕ್ಕೆ ಊಟ ನೀಡುವುದು. ಮಗು ತುಂಬಾ ಹಠ ಮಾಡುತ್ತಿದ್ದರೆ, ಮನೆಯವರು ಸಮಧಾನಪಡಿಸಬೇಕು. ಕುಟುಂಬಸ್ಥರು ಮೇಲೆ ತಿಳಿಸಿದ ಲಕ್ಷಣಗಳು ಕಂಡುಬಂದರೆ ಅದನ್ನು ಗಮನಿಸಿ ಖಿನ್ನತೆಗೆ ಒಳಗಾಗಿದ್ದಾರೆ ಅಂತ ತಿಳಿದುಕೊಳ್ಳಬೇಕು. ಒಟ್ಟಾರೆಯಾಗಿ ಬಾಣಂತಿಯನ್ನು ಪೋಸ್ಟ್ ಪಾರ್ಟಮ್ ಖಿನ್ನತೆಯಿಂದ ಹೊರ ತರಲು ಮನೆಯವರು ಹೆಚ್ಚು ಕಾಳಜಿವಹಿಸಬೇಕು ಅಂತ ಸ್ತ್ರೀರೋಗ ತಜ್ಞೆ ಅಭಿಪ್ರಾಯಪಟ್ಟರು.
ಮಗು ಮೇಲೆ ಪರಿಣಾಮ ಬೀಳುತ್ತಾ?
ತಾಯಿಯಿಂದ ಅಗತ್ಯವಿರುವ ಕಾಳಜಿ ಮಗುವಿಗೆ ಸಿಗದೇ ಇದ್ದಾಗ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಊಟ ಮಾಡದೇ ತಾಯಿ ಎದೆ ಹಾಲು ಕಡಿಮೆ ಆದಾಗ ಮಗುವಿನ ಮೇಲೆ ಪರಿಣಾಮ ಬೀರಬಹುದು. ಆದರೆ ತಾಯಿ ಬದಲಿಗೆ ಬೇರೆಯವರು ಮಗುವಿನ ಬಗ್ಗೆ ಹೆಚ್ಚು ಕಾಳಜಿ ವಹಿಸಿದಾಗ ಸಮಸ್ಯೆ ಎದುರಾಗಲ್ಲ.
ಖಿನ್ನತೆ ಯಾವ ಮಟ್ಟಕ್ಕೆ ತಲುಪಿದಾಗ ಕೆಟ್ಟ ನಿರ್ಧಾರಗಳು ತೆಗೆದುಕೊಳ್ಳುತ್ತಾರೆ?
ಹೆರಿಗೆಯಾದ ಒಂದು ವಾರದ ನಂತರ ಖಿನ್ನತೆಗೆ ಒಳಗಾಬಹುದು. ಆದರೆ ಈ ಖಿನ್ನತೆ ದೀರ್ಘ ಕಾಲದ ವರೆಗೆ ಇರಲ್ಲ. ಹೆಚ್ಚೆಂದರೆ ಒಂದು ತಿಂಗಳ ಒಳಗಾಗಿ ಬಾಣಂತಿಯರೂ ಯಥಾಸ್ಥಿತಿಗೆ ಮರಳುತ್ತಾರೆ. ಆತ್ಮಹತ್ಯೆ ನಿರ್ಧರಿಸಲು ಬೇರೆ ಬೇರೆ ಸಮಸ್ಯೆಗಳು ಕಾರಣವಾಗಬಹುದು. ಹೆರಿಗೆ ಮೊದಲೇ ಖಿನ್ನತೆಗೆ ಒಳಗಾಗಿರಬಹುದು ಅಂತ ಸ್ತ್ರೀರೋಗ ತಜ್ಞೆ ಡಾ.ಶೈಲಜಾ ತಿಳಿಸಿದರು.
ಇದನ್ನೂ ಓದಿ
ಉತ್ತರ ಕನ್ನಡದಲ್ಲಿ 350ಕ್ಕೂ ಹೆಚ್ಚು ಅಡಕೆ ಮರಗಳ ಮಾರಣಹೋಮ! ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ರೈತರ ಆರೋಪ
Published On - 4:05 pm, Sat, 29 January 22