ಹೇಳಿಕೇಳಿ ಇದು ಚಳಿಗಾಲ (Winter Season). ವಿಪರೀತ ಚಳಿಯಿಂದ ಬಹುತೇಕ ಜಿಲ್ಲೆಗಳ ಜನರು ಪರದಾಡುತ್ತಿದ್ದಾರೆ. ಈ ಚಳಿಗಾಲದಲ್ಲಿ ಮಂಡಿ ನೋವು (Knee Pain) ಹೆಚ್ಚಾಗುವುದು ಸಾಮಾನ್ಯ. ಈಗಂತೂ ವಯಸ್ಸಾದವರಿಗೆ ಮಾತ್ರ ಮೊಣಕಾಲು ನೋವು ಬರುತ್ತದೆ ಎನ್ನುವ ಹಾಗಿಲ್ಲ. ಎಳೆ ವಯಸ್ಸಿನವರಿಗೂ ಮಂಡಿ ನೋವು ಹೆಚ್ಚಾಗುತ್ತಿದೆ. ನಿಮಗೂ ಮೊಣಕಾಲು ನೋವು ಅಥವಾ ಕೀಲು ನೋವು ಇದ್ದರೆ ಅದರಿಂದ ಪಾರಾಗಲು ಯಾವ ರೀತಿಯ ಸರಳ ವ್ಯಾಯಾಮ ಮಾಡಬೇಕು, ಮನೆಮದ್ದುಗಳು ಯಾವುವು, ಯಾವ ರೀತಿ ಕಾಲಿಗೆ ಮಸಾಜ್ ಮಾಡಿಕೊಳ್ಳಬೇಕು ಎಂಬಿತ್ಯಾದಿ ಮಾಹಿತಿ ಇಲ್ಲಿದೆ.
ಮೊಣಕಾಲು ಸಾಮಾನ್ಯವಾಗಿ ಎಲ್ಲ ವಯೋಮಾನದವರಿಗೂ ಕಾಡುವ ಸಮಸ್ಯೆ. ಶೀತ ಹವಾಮಾನದಲ್ಲಿ ಮಂಡಿ ನೋವು ಉಲ್ಬಣಗೊಳ್ಳುತ್ತದೆ. ಈ ಚಳಿಯ ವಾತಾವರಣ ರಕ್ತ ಪರಿಚಲನೆಯನ್ನು ನಿಧಾನಗೊಳಿಸುತ್ತದೆ ಮತ್ತು ಸ್ನಾಯು ಸೆಳೆತವನ್ನು ಉಂಟುಮಾಡುತ್ತದೆ. ಈ ಹಿನ್ನೆಲೆಯಲ್ಲಿ ಯೋಗ ಶಿಕ್ಷಕಿ ಸ್ಮೃತಿ ಇನ್ಸ್ಟಾಗ್ರಾಂನಲ್ಲಿ ಮಂಡಿ ನೋವಿಗೆ ನೀಡಬಹುದಾದ ಕೆಲವು ಮನೆಮದ್ದುಗಳನ್ನು ಹಂಚಿಕೊಂಡಿದ್ದಾರೆ.
ಮೊಣಕಾಲು ಮಸಾಜ್:
ಎಳ್ಳೆಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಕರ್ಪೂರವನ್ನು ಹಾಕಿ. ಇದನ್ನು ದಿನಕ್ಕೆ 2 ಬಾರಿ ರಾತ್ರಿ ಮತ್ತು ಬೆಳಿಗ್ಗೆ ಕಾಲಿಗೆ ಹಚ್ಚಿಕೊಳ್ಳಬೇಕು. ಬೆಳಗ್ಗೆ ಎಣ್ಣೆ ಹಚ್ಚಿಕೊಂಡ ನಂತರ ಸೂರ್ಯನ ಬೆಳಕಿನಲ್ಲಿ ನಿಂತರೆ ಅದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ನಂತರ ಸರಿಯಾಗಿ ಕಾಲಿಗೆ ಮಸಾಜ್ ಮಾಡಿಕೊಳ್ಳಬೇಕು.
ಇದನ್ನೂ ಓದಿ: ಹುಣಸೆ ಬೀಜ: ನೀವು ಮೊಣಕಾಲು ನೋವು ಮತ್ತು ಕೀಲು ನೋವಿನಿಂದ ಬಳಲುತ್ತಿದ್ದೀರಾ?
ವಿಟಮಿನ್ ಡಿ:
ನಮ್ಮ ದೇಹಕ್ಕೆ ವಿಟಮಿನ್ ಡಿ ಬಹಳ ಅಗತ್ಯ. ಸೂರ್ಯನ ಶಾಖದಲ್ಲಿ ಈ ವಿಟಮಿನ್ ಡಿ ಅಂಶ ಹೆಚ್ಚಾಗಿರುತ್ತದೆ. ಹೀಗಾಗಿ, ಚಳಿಗಾಲದಲ್ಲಿ ಹೆಚ್ಚೆಚ್ಚು ಬಿಸಿಲಿಗೆ ಮೈ ಒಡ್ಡುವುದರಿಂದ ನಮ್ಮ ದೇಹದಲ್ಲಿ ವಿಟಮಿನ್ ಡಿ ಉತ್ಪತ್ತಿಯಾಗುತ್ತದೆ. ಇದರಿಂದ ಮೂಳೆಗಳು ಕೂಡ ಸ್ಟ್ರಾಂಗ್ ಆಗುತ್ತದೆ. ನಿಮ್ಮ ವೈದ್ಯರನ್ನು ಸಂಪರ್ಕಿಸಿ ವಿಟಮಿನ್ ಡಿ ಮಾತ್ರೆ, ಜೆಲ್ಲಿ ಮುಂತಾದ ಮೆಡಿಸಿನ್ಗಳನ್ನು ಕೂಡ ತೆಗೆದುಕೊಳ್ಳಬಹುದು. ಇದರಿಂದ ಮೂಳೆಗಳು ಗಟ್ಟಿಯಾಗುತ್ತದೆ.
ಗಡಿಬಿಡಿಯಿಂದ ನೀರು ಕುಡಿಯಬೇಡಿ:
ಕೆಲವರಿಗೆ ಗಟಗಟನೆ ನೀರು ಕುಡಿಯುವ ಅಭ್ಯಾಸ ಇರುತ್ತದೆ. ಆದರೆ, ನಿಧಾನವಾಗಿ ನೀರನ್ನು ಕುಡಿಯುವುದರಿಂದ ಮೊಣಕಾಲು ನೋವನ್ನು ತಪ್ಪಿಸಬಹುದು. ಬೇಗ ಬೇಗನೆ ನೀರು ಕುಡಿದರೆ ಹೊಟ್ಟೆಯಲ್ಲಿ ಗ್ಯಾಸ್ ಉಂಟಾಗಿ ಅದು ಮೂಳೆಗಳಿಗೂ ವ್ಯಾಪಿಸುತ್ತದೆ. ಇದರಿಂದ ಮೊಣಕಾಲು ನೋವು ಅಥವಾ ಕೀಲು ನೋವು ಉಂಟಾಗುತ್ತದೆ.
ಇದನ್ನೂ ಓದಿ: ಮೊಣಕಾಲು ನೋವು ಕಡಿಮೆಯಾಗಲು ಈ ಯೋಗಾಸನಗಳನ್ನು ಮಾಡಿ
ಯೋಗ ಮಾಡಿ:
ಸುಲಭವಾದ ಯೋಗಾಭ್ಯಾಸಗಳನ್ನು ಮಾಡಿ ನೋಡಿ. ಆರಾಮಾಗಿ ಕುಳಿತು 30-40 ಬಾರಿ ಉಸಿರನ್ನು ಎಳೆದುಕೊಳ್ಳಿ, ನಂತರ ಹಾಗೇ ಉಸಿರನ್ನು ಬಿಡಿ. ನೀವು ಮೇಲಕ್ಕೆ ಹತ್ತಿ, ಇಳಿಯುವಾಗ ನಿಧಾನವಾಗಿ ಉಸಿರನ್ನು ಎಳೆದುಕೊಳ್ಳಿ. ನಿಮ್ಮ ಮೊಣಕಾಲಿನ ಮೇಲೆ ಭಾರವನ್ನು ಹೊರಲು ಸಾಧ್ಯವಾಗದಿದ್ದರೆ ಅಥವಾ ನಿಮ್ಮ ಮೊಣಕಾಲು ಅದುರ್ಬಲವಾಗಿ ಎಂದು ಅನಿಸಿದರೆ ನಿಮ್ಮ ಮೊಣಕಾಲುಗಳನ್ನು ಆಗಾಗ ಸ್ಟ್ರೆಚ್ ಮಾಡುತ್ತಿರಿ. ಕಾಲನ್ನು ಒಂದೇ ರೀತಿಯಲ್ಲಿ ಇಟ್ಟುಕೊಳ್ಳಬೇಡಿ. ಆಗಾಗ ವಾಕ್ ಮಾಡುತ್ತಿರಿ.