ಮನಸು (Mind) ಸರಿಯಾಗಿದ್ದರೆ ಆರೋಗ್ಯವೂ ಸರಿಯಾಗಿರುತ್ತದೆ. ದೇಹದ ಆರೋಗ್ಯದಷ್ಟೇ ಮನಸಿನ ಆರೋಗ್ಯವೂ (Mental Focus) ಬಹಳ ಮುಖ್ಯ. ಕೆಲವೊಮ್ಮೆ ನಮ್ಮ ಮಾನಸಿಕ ದೌರ್ಬಲ್ಯವೇ ಅನೇಕ ಅನಾರೋಗ್ಯಗಳಿಗೆ, ದೈಹಿಕ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತದೆ. ಹಾಗಾದರೆ, ಮಾನಸಿಕ ಆರೋಗ್ಯ (Mental Health) ಕಾಪಾಡಿಕೊಳ್ಳುವುದು ಹೇಗೆ? ಅದಕ್ಕಾಗಿ 7 ಸುಲಭ ಮಾರ್ಗಗಳು ಇಲ್ಲಿವೆ…
1. ನಿಮ್ಮ ಮಾನಸಿಕ ಗಮನಕ್ಕೆ ಆದ್ಯತೆ ನೀಡಿ:
ಜ್ವರ, ಕೆಮ್ಮು, ಮುಂತಾದ ದೈಹಿಕ ಸಮಸ್ಯೆಗಳು ಬಂದಾಗ ಹೇಗೆ ವೈದ್ಯರ ಬಳಿ ತೆರಳಿ ಚಿಕಿತ್ಸೆ ಪಡೆಯುತ್ತೀರೋ ಅದೇ ರೀತಿ ಮಾನಸಿಕ ಆರೋಗ್ಯಕ್ಕೂ ಗಮನ ನೀಡಿ. ಯಾವುದೇ ಕೆಲಸ ಆರಂಭಿಸುವ ಮೊದಲು ಆ ಕ್ಷಣದಲ್ಲಿ ನಿಮ್ಮ ಮಾನಸಿಕ ಗಮನ ಎಷ್ಟು ಪ್ರಬಲವಾಗಿದೆ ಎಂಬುದನ್ನು ನಿರ್ಣಯಿಸಿ. ನಿಮ್ಮಲ್ಲಿ ಇರುವ ಸಾಮರ್ಥ್ಯ, ಏಕಾಗ್ರತೆಯನ್ನೇ ಮತ್ತಷ್ಟು ಬಲಿಷ್ಠಗೊಳಿಸಲು ಪ್ರಯತ್ನಿಸಿ.
2. ಅಡೆತಡೆಗಳನ್ನು ನಿವಾರಿಸಿಕೊಳ್ಳಿ:
ಏನಾದರೂ ಕೆಲಸ ಮಾಡುವಾಗ ಅಡೆತಡೆಗಳು ಸಾಮಾನ್ಯ. ಮೂಡ್ ಎನ್ನುವುದು ಟಿವಿ, ರೇಡಿಯೋ ಆನ್-ಆಫ್ ಮಾಡಿದಷ್ಟು ಸುಲಭವಲ್ಲ. ಕೆಲವರ ಮೂಡ್ ಬಹಳ ಬೇಗ ಸರಿಹೋಗುವುದಾದರೂ ಯಾವುದಾದರೂ ಕೆಲಸ ಮಾಡುವಾಗ ಡಿಸ್ಟರ್ಬೆನ್ಸ್ ಇರದಂತೆ ಮುನ್ನೆಚ್ಚರಿಕೆ ವಹಿಸಿ. ಇದರಿಂದ ನೆಮ್ಮದಿಯಿಂದ ನಿಮ್ಮ ಗುರಿಯನ್ನು ಮುಟ್ಟಬಹುದು. ಸಹೋದ್ಯೋಗಿ, ಸಂಗಾತಿ, ಮಗು ಅಥವಾ ರೂಮ್‌ಮೇಟ್‌ನೊಂದಿಗೆ ವ್ಯವಹರಿಸುವುದು ಹೆಚ್ಚು ಸವಾಲಿನ ಸಂಗತಿಯಾಗಿದೆ. ಎಲ್ಲಾ ಗೊಂದಲಗಳು ಹೊರಗಿನ ಮೂಲಗಳಿಂದ ಬರುವುದಿಲ್ಲ. ಆಯಾಸ, ಚಿಂತೆ, ಆತಂಕ ಮತ್ತು ಇತರ ಆಂತರಿಕ ಅಡಚಣೆಗಳನ್ನು ನಿವಾರಿಸಿಕೊಳ್ಳಬಹುದು.
3. ನಿಮ್ಮ ಗಮನವನ್ನು ಮಿತಿಗೊಳಿಸಿಕೊಳ್ಳಿ:
ಒಂದೇ ಬಾರಿ ಹಲವು ಕೆಲಸ ಮಾಡುತ್ತೇನೆ ಎಂದು ಹುಂಬತನದಿಂದ ನಿರ್ಧಾರ ತೆಗೆದುಕೊಳ್ಳಬೇಡಿ. ನಿಮ್ಮ ಫೋಕಸ್ ಚೆನ್ನಾಗಿರಬೇಕೆಂದರೆ ಒಂದೇ ಕೆಲಸದ ಮೇಲೆ ಗಮನಹರಿಸುವುದು ಉತ್ತಮ. ನಿಮ್ಮ ಗಮನವನ್ನು ಸ್ಪಾಟ್‌ಲೈಟ್ ಎಂದು ಪರಿಗಣಿಸಿ. ನೀವು ಒಂದು ನಿರ್ದಿಷ್ಟ ಪ್ರದೇಶದಲ್ಲಿ ಆ ಸ್ಪಾಟ್‌ಲೈಟ್ ಅನ್ನು ಬೆಳಗಿಸಿದರೆ ಮಾತ್ರ ನೀವು ವಿಷಯಗಳನ್ನು ಬಹಳ ಸ್ಪಷ್ಟವಾಗಿ ನೋಡಬಹುದು. ಹೀಗಾಗಿ, ಏಕಾಗ್ರತೆ ಬಹಳ ಮುಖ್ಯ.
ಇದನ್ನೂ ಓದಿ: Mental Health: ನಿಮ್ಮ ದೈಹಿಕ ಸಮಸ್ಯೆಗಳು ಮಾನಸಿಕ ಆರೋಗ್ಯವನ್ನೂ ಕುಗ್ಗಿಸುತ್ತೆ, ಕಾಯಿಲೆಗೆ ಔಷಧ ನೀಡಿ, ಕೊರಗಬೇಡಿ
4. ಪ್ರತಿಕ್ಷಣವನ್ನೂ ಅನುಭವಿಸಿ:
ನೀವು ಈಗಾಗಲೇ ಆಗಿ ಹೋದ ದಿನಗಳ ಬಗ್ಗೆ ಮೆಲುಕು ಹಾಕುವಾಗ, ಭವಿಷ್ಯದ ಬಗ್ಗೆ ಚಿಂತಿಸುತ್ತಿರುವಾಗ ಮಾನಸಿಕವಾಗಿ ಗಮನಹರಿಸುವುದು ಕಷ್ಟ. ಹೀಗಾಗಿ, ನಿಮ್ಮ ಬಳಿ ಏನಿದೆಯೋ ಅದರ ಬಗ್ಗೆ ಖುಷಿಪಡಿ. ಅಂತಹ ಸಮಯದಲ್ಲಿ ನಿಮಗೆ ಆಪ್ತರಾದವರ ಜೊತೆ ಮೊಬೈಲ್ನಲ್ಲಿ ಮಾತನಾಡಿ, ನಿಮಗಿಷ್ಟವಾದ ಕೆಲಸ ಮಾಡಿ ನಿಮ್ಮ ಮಾನಸಿಕ ನೆಮ್ಮದಿಯನ್ನು ಪಡೆಯಬಹುದು. ಈ ಕ್ಷಣವಷ್ಟೇ ನನ್ನದು ಎಂದು ಖುಷಿಯಿಂದ ಜೀವಿಸಿದರೆ ಹಲವು ಮಾನಸಿಕ ಸಮಸ್ಯೆಗಳಿಂದ ಮುಕ್ತಿನ ಪಡೆಯಬಹುದು.
5. ಸಮಾಧಾನದಿಂದ ಇರಲು ಅಭ್ಯಾಸ ಮಾಡಿ:
ಸಮಾಧಾನದಿಂದ ಇದ್ದರೆ ಮನಸಿಗೂ ನೆಮ್ಮದಿ ಇರುತ್ತದೆ. ಅದಕ್ಕಾಗಿ ಧ್ಯಾನ, ಯೋಗದಂತಹ ಅಭ್ಯಾಸಗಳನ್ನು ರೂಢಿಸಿಕೊಳ್ಳಬಹುದು. ಇದರಿಂದ ಮಾನಸಿಕ ಆರೋಗ್ಯ ಸುಧಾರಿಸುತ್ತದೆ. ಮೊಬೈಲ್, ಕಂಪ್ಯೂಟರ್, ವೇಗದ ಜೀವನಶೈಲಿ ಮುಂತಾದವುಗಳಿಂದ ಮನಸು ಚಂಚಲವಾಗುತ್ತಿರುತ್ತದೆ. ಆದರೆ, ಧ್ಯಾನ, ಯೋಗಾಭ್ಯಾಸದಿಂದ ಆ ಮನಸನ್ನು ಹತೋಟಿಯಲ್ಲಿಟ್ಟುಕೊಳ್ಳಬಹುದು. ಸಮಾಧಾನವಾಗಿದ್ದರೆ ನಿಮ್ಮ ಮನಸಿನ ಆರೋಗ್ಯ ಸುಧಾರಿಸುವುದು ಮಾತ್ರವಲ್ಲದೆ ದೈಹಿಕ ಆರೋಗ್ಯವೂ ಸುಧಾರಿಸುತ್ತದೆ.
6. ಸ್ವಲ್ಪ ವಿರಾಮ ತೆಗೆದುಕೊಳ್ಳಿ:
ನೀವು ದೀರ್ಘಕಾಲದವರೆಗೆ ಒಂದೇ ವಿಷಯದ ಮೇಲೆ ಗಮನವನ್ನು ಕೇಂದ್ರೀಕರಿಸಲು ಪ್ರಯತ್ನಿಸಿದ್ದೀರಾ? ಹಾಗಾದರೆ ಸ್ವಲ್ಪ ಸಮಯದ ನಂತರ ನಿಮ್ಮ ಗಮನವು ಬೇರೆಡೆ ಹರಿಯಲು ಪ್ರಾರಂಭವಾಗುತ್ತದೆ. ಹೀಗಾಗಿ, ಆಗಾಗ ಸಣ್ಣ ಬ್ರೇಕ್ ತೆಗೆದುಕೊಳ್ಳುತ್ತಿದ್ದರೆ ಗಮನವನ್ನು ಕೇಂದ್ರೀಕರಿಸಲು ಸಹಾಯವಾಗುತ್ತದೆ. ಒಂದೇ ವಿಷಯದ ಮೇಲೆ ದೀರ್ಘ ಕಾಲ ಗಮನ ಹರಿಸುವುದು ಅಸಾಧ್ಯ. ಹೀಗಾಗಿ, ನೀವೇ ಆಗಾಗ ಗಮನವನ್ನು ಬೇರೆಡೆ ತಿರುಗಿಸಿ ಮನಸಿಗೆ ಬ್ರೇಕ್ ನೀಡಿ.
7. ಅಭ್ಯಾಸವನ್ನು ಮುಂದುವರಿಸಿ:
ನಿಮ್ಮ ಮಾನಸಿಕ ಗಮನವನ್ನು ಕೇಂದ್ರೀಕರಿಸುವುದು ರಾತ್ರೋರಾತ್ರಿ ಆಗುವ ಸಂಗತಿಯಲ್ಲ. ವೃತ್ತಿಪರ ಕ್ರೀಡಾಪಟುಗಳು ತಮ್ಮ ಏಕಾಗ್ರತೆಯ ಕೌಶಲ್ಯಗಳನ್ನು ಬಲಪಡಿಸಲು ಸಾಕಷ್ಟು ಸಮಯ ಮತ್ತು ಅಭ್ಯಾಸವನ್ನು ಮಾಡುತ್ತಾರೆ. ಏಕಾಗ್ರತೆಯೆನ್ನುವುದು ಸಾಕಷ್ಟು ಅಭ್ಯಾಸದಿಂದ ಉಂಟಾಗುವಂಥದ್ದು. ಹೀಗಾಗಿ, ನಿಮ್ಮ ಗಮನ ಮತ್ತು ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಲು ಅಭ್ಯಾಸ ಮಾಡುತ್ತಲೇ ಇರಬೇಕು. ನಿಮ್ಮ ಮಾನಸಿಕ ಗಮನ ಸರಿಯಾದರೆ ಹೆಚ್ಚು ಯಶಸ್ಸು, ಸಂತೋಷ, ತೃಪ್ತಿಯನ್ನು ಸಾಧಿಸಬಹುದು.
Published On - 11:21 am, Mon, 23 January 23