ನೊಣ ಬಿದ್ದ ಆಹಾರ ಸೇವಿಸುತ್ತೀರಾ?; ನಿಮಗೆ ಗೊತ್ತಿಲ್ಲದ ಸಂಗತಿ ಇಲ್ಲಿದೆ

|

Updated on: Jan 17, 2024 | 7:17 PM

ನೊಣಗಳು ಕೇವಲ ನಿರುಪದ್ರವಿ ಕೀಟಗಳಷ್ಟೇ ಅಲ್ಲ. ಅದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಕೂಡ ಉಂಟಾಗುತ್ತವೆ. ಹೀಗಾಗಿ, ನೊಣ ಬಿದ್ದ ಕಾಫಿಯಿಂದ ನೊಣ ಎತ್ತಿ ಹಾಕಿ ಕುಡಿಯುವ ಮುನ್ನ, ಊಟದಲ್ಲಿ ಕುಳಿತ ನೊಣವನ್ನು ಓಡಿಸಿ, ಉಣ್ಣುವ ಮುನ್ನ ಯೋಚಿಸಿ. ಏಕೆಂದರೆ, ನೊಣಗಳನ್ನು ನಿರ್ಲಕ್ಷ್ಯ ಮಾಡುವಂತಿಲ್ಲ!

ನೊಣ ಬಿದ್ದ ಆಹಾರ ಸೇವಿಸುತ್ತೀರಾ?; ನಿಮಗೆ ಗೊತ್ತಿಲ್ಲದ ಸಂಗತಿ ಇಲ್ಲಿದೆ
ನೊಣ
Image Credit source: iStock
Follow us on

ನಿಮಗಿಷ್ಟವಾದ ಆಹಾರ ನಿಮ್ಮ ಕೈಯಲ್ಲಿರುತ್ತದೆ. ಅದನ್ನು ಎಂಜಾಯ್ ಮಾಡುತ್ತಾ ತಿನ್ನಬೇಕು ಎನ್ನುವಷ್ಟರಲ್ಲಿ ಆ ಆಹಾರದಲ್ಲಿ ನೊಣವೋ, ಕೀಟವೋ, ಸಣ್ಣ ಹುಳವೋ ಬಿದ್ದಿರುವುದು ಕಾಣುತ್ತದೆ. ಆಗ ನಿಮ್ಮಿಷ್ಟದ ಆ ಆಹಾರವನ್ನು ಬಿಸಾಡುತ್ತೀರಾ? ಅಥವಾ ಆ ಹುಳವನ್ನು ತೆಗೆದುಹಾಕಿ ಆ ಆಹಾರವನ್ನು ತಿನ್ನುತ್ತೀರಾ? ನಿಮ್ಮ ಆಹಾರದಲ್ಲಿ ನೊಣ ಬಿದ್ದರೆ ಅದು ದೊಡ್ಡ ವಿಷಯವೆಂದು ನಿಮಗೆ ಅನಿಸದೇ ಇರಬಹುದು. ಬಹುತೇಕ ಜನರು ಕಾಫಿಯಲ್ಲೋ, ತಿಂಡಿಯಲ್ಲೋ ಬಿದ್ದ ನೊಣವನ್ನು ತೆಗೆದುಹಾಕಿ ಅದನ್ನು ಸೇವಿಸುತ್ತಾರೆ. ಆದರೆ, ಅದರಿಂದ ನಿಮ್ಮ ಆರೋಗ್ಯಕ್ಕೆ ಏನೆಲ್ಲ ತೊಂದರೆಗಳು ಉಂಟಾಗುತ್ತವೆ ಎಂಬುದು ನಿಮಗೆ ಗೊತ್ತಾ?

ನೊಣಗಳು ಕೇವಲ ನಿರುಪದ್ರವಿ ಕೀಟಗಳಷ್ಟೇ ಅಲ್ಲ. ಅದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಕೂಡ ಉಂಟಾಗುತ್ತವೆ. ಅಮೆರಿಕಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಪ್ರಕಾರ, ನೊಣದಿಂದ ಕ್ಷಯ, ಟೈಫಾಯಿಡ್ ಜ್ವರ, ಭೇದಿ ಮತ್ತು ಕಾಲರಾದಂತಹ ತೀವ್ರ ಮತ್ತು ಮಾರಣಾಂತಿಕ ಕಾಯಿಲೆಗಳು ಕೂಡ ಹರಡುತ್ತವೆ. ಈ ಚಿಕ್ಕ ಜೀವಿಗಳು ಸಾಮಾನ್ಯವಾಗಿ ಕಸದ ತೊಟ್ಟಿಗಳು, ಕೊಳೆಯುತ್ತಿರುವ ವಸ್ತುಗಳು ಮತ್ತು ಮಲದಂತಹ ಕೆಟ್ಟ ಹಾಗೂ ಗಲೀಜು ಸ್ಥಳಗಳಿಗೆ ಹೋಗಿ, ಅಲ್ಲಿಂದ ನಿಮ್ಮ ಅಡುಗೆ ಮನೆ, ಆಹಾರದ ತಟ್ಟೆಗೂ ಬರುತ್ತವೆ. ಆ ಅವು ನಿಮ್ಮ ನೆಚ್ಚಿನ ಚಾಟ್‌ಗಳು, ಪಾನಿಪುರಿ, ಬೇಲ್‌ಪುರಿ, ಪೂರಿ ಸಬ್ಜಿ, ರೋಲ್‌ಗಳು, ಅನ್ನ, ಸಾಂಬಾರ್, ಕಾಫಿಯ ಮೇಲೆ ಕುಳಿತಾಗ ಹಾನಿಕಾರಕ ಬ್ಯಾಕ್ಟೀರಿಯಾವನ್ನು ಹರಡಬಹುದು. ಆಗ ನಿಮ್ಮ ಆರೋಗ್ಯ ಕೆಡುವುದರಲ್ಲಿ ಅನುಮಾನವೇ ಇಲ್ಲ.

ಇದನ್ನೂ ಓದಿ: ಚಳಿಗಾಲದಲ್ಲಿ ಮಹಿಳೆಯರ ಡಯೆಟ್​ನಲ್ಲಿ ಇರಲೇಬೇಕಾದ ಆಹಾರಗಳಿವು

ಮನೆಯಲ್ಲಿರುವ ನೊಣಗಳು ನಿಯಮಿತವಾಗಿ ಮಲ ಮತ್ತು ಇತರ ಕೊಳೆಯುವ ಸಾವಯವ ವಸ್ತುಗಳನ್ನು ತಿನ್ನುತ್ತವೆ. ಅವುಗಳ ಕೂದಲುಳ್ಳ ದೇಹಗಳಲ್ಲಿ ಅಸಂಖ್ಯಾತ ಬ್ಯಾಕ್ಟೀರಿಯಾ, ಶಿಲೀಂಧ್ರಗಳು ಮತ್ತು ಇತರ ಮಾಲಿನ್ಯಕಾರಕಗಳು ಇರುತ್ತವೆ. ಅದು ನಿಮ್ಮ ಆಹಾರಕ್ಕೂ ವರ್ಗಾವಣೆ ಆಗುತ್ತವೆ. ಇದು ನಿಮ್ಮ ಆಹಾರವನ್ನು ಕಲುಷಿತಗೊಳಿಸುವುದಲ್ಲದೆ ನೊಣದ ಲಾಲಾರಸದಿಂದ ರೋಗಕಾರಕಗಳನ್ನು ಕೂಡ ಹರಡುತ್ತದೆ.

2018ರಲ್ಲಿ ‘ಬಿಎಂಸಿ ಪಬ್ಲಿಕ್ ಹೆಲ್ತ್’ ಜರ್ನಲ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ನೊಣಗಳ ಆಹಾರ ಪ್ರಕ್ರಿಯೆಯಲ್ಲಿ ರೋಗಕಾರಕಗಳು ತಮ್ಮ ಬಾಯಿಯ ಭಾಗಗಳು, ರೆಕ್ಕೆಗಳು, ಕಾಲುಗಳು ಮತ್ತು ದೇಹದ ಇತರ ಮೇಲ್ಮೈಗಳಿಗೆ ಅಂಟಿಕೊಳ್ಳುತ್ತವೆ. ನೊಣಗಳು ಸ್ಪಂಜಿನ ಬಾಯಿಯ ಭಾಗಗಳನ್ನು ಹೊಂದಿವೆ. ಸ್ಪಂಜ್ ತರಹದ ರಚನೆಯು ದ್ರವಗಳನ್ನು ಹೀರಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇದು ಚೆಲ್ಲಿದ ಪಾನೀಯಗಳಿಂದ ಹಿಡಿದು ಚರಂಡಿ, ನಿಮ್ಮ ಅಡುಗೆಮನೆಯ ಸಿಂಕ್‌ನ ಮೂಲೆಗಳವರೆಗೆ ಎಲ್ಲವನ್ನೂ ಒಳಗೊಂಡಿರುತ್ತದೆ.

ಇದನ್ನೂ ಓದಿ: ಮಧುಮೇಹ ಬಾರದಂತೆ ತಡೆಯಲು ಈ 10 ಆಹಾರ ಸೇವಿಸಿ

ಇಷ್ಟೇ ಅಲ್ಲ, ನೊಣಗಳು ತಮ್ಮ ಹೊಟ್ಟೆಯಲ್ಲಿರುವ ವಸ್ತುಗಳನ್ನು ನಿಮ್ಮ ಆಹಾರದ ಮೇಲೆ ಹೊರಹಾಕುವ ಸಾಧ್ಯತೆಯೂ ಇರುತ್ತದೆ. ಅಂದರೆ ನೊಣಗಳು ನಿಮ್ಮ ಆಹಾರದ ಮೇಲೆ ವಾಂತಿ ಕೂಡ ಮಾಡಬಹುದು. ಅದು ನಿಮಗೆ ಗೊತ್ತಾಗುವುದೇ ಇಲ್ಲ! ಗ್ಯಾಸ್ಟ್ರಿಕ್ ಜ್ಯೂಸ್ ಮತ್ತು ಜೀರ್ಣಕಾರಿ ಕಿಣ್ವಗಳ ಮಿಶ್ರಣವನ್ನು ಹೊಂದಿರುವ ಈ ವಾಂತಿ ಹಲವು ಬ್ಯಾಕ್ಟೀರಿಯಾಗಳನ್ನು ಹರಡುತ್ತವೆ. ಹೀಗಾಗಿ, ನೊಣವನ್ನು ಹಗುರವಾಗಿ ಪರಿಗಣಿಸದೆ ಮನೆಯಲ್ಲಿರುವ ನೊಣಗಳನ್ನು ನಿವಾರಿಸಲು ಪ್ರಯತ್ನಿಸಿ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ