ಆರೋಗ್ಯಕರ ಆಹಾರವು ಮಧುಮೇಹವನ್ನು (Diabetes) ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ. ನೀವು ದಿನನಿತ್ಯ ಸೇವಿಸುವ ಕೆಲವು ಆಹಾರ ಮತ್ತು ಪಾನೀಯಗಳನ್ನು ತ್ಯಜಿಸಲು ಕಷ್ಟವಾಗಬಹುದು, ಅಂತಹ ಆಹಾರಗಳಲ್ಲಿ ಕಾಫಿ (Coffee) ಕೂಡ ಒಂದು. ಅನೇಕರು ಒಂದು ಕಪ್ ಕಾಫಿ ಇಲ್ಲದೆ ತಮ್ಮ ದಿನವನ್ನು ಪ್ರಾರಂಭಿಸಲು ಸಾಧ್ಯವಿಲ್ಲ. ಆದರೆ ನೀವು ಮಧುಮೇಹದಿಂದ ಬಳಲುತ್ತಿದ್ದರೆ (Diabetics), ಕೆಫೀನ್ ಅನ್ನು ಸಂಪೂರ್ಣವಾಗಿ ತ್ಯಜಿಸಬೇಕಾ? ಆದರೆ ಈ ವಿಷಯ ನಿಮಗೆ ಆಶ್ಚರ್ಯ ಅನಿಸಬಹುದು, ಕಾಫಿ ಕುಡಿಯುವುದರಿಂದ ನಿಮ್ಮ ಮಧುಮೇಹದ ಅಪಾಯವನ್ನು ಕಡಿಮೆ ಮಾಡಬಹುದು. ಆದರೆ ಈಗಾಗಲೇ ಮಧುಮೇಹವನ್ನು ನೀವು ಹೊಂದಿದ್ದಾರೆ ಕಾಫಿ ಸೇವನೆ ಸಂರಕ್ಷಿತವಲ್ಲ.
ಕಾಫಿ ಕುಡಿಯುವುದರಿಂದ ಟೈಪ್-2 ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅಧ್ಯಯನವೊಂದು ಬಹಿರಂಗಪಡಿಸಿದೆ. ಪ್ರತಿದಿನ ಒಂದು ಕಪ್ ಕಾಫಿ ಕುಡಿಯುವುದರಿಂದ ಮಧುಮೇಹ ಬರುವ ಅಪಾಯವನ್ನು 4% ರಷ್ಟು ಕಡಿಮೆ ಮಾಡಬಹುದು ಎಂದು ಅಧ್ಯಯನವು ವಿವರಿಸಿದೆ. ಅಲ್ಲದೆ, ಕಾಫಿ ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಗಮನಿಸಲಾಗಿದೆ.
ಪಟ್ಪರ್‌ಗಂಜ್‌ನ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಡಯೆಟಿಷಿಯನ್ ಜ್ಯೋತಿ ಖನಿಯೋಜ್ NDTV ವರದಿಯಲ್ಲಿ ಹೇಳಿದ ಪ್ರಕಾರ, “ಕೆಫೀನ್ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು. ಆದರೆ ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟಗಳ ಮೇಲೆ ಕೆಫೀನ್ ಪ್ರಭಾವವನ್ನು ಸ್ಪಷ್ಟಪಡಿಸಲು ಹೆಚ್ಚಿನ ಸಂಶೋಧನೆಯ ಅಗತ್ಯವಿದೆ. ಆದರೆ ದಿನಕ್ಕೆ ಒಂದು ಅಥವಾ ಎರಡು ಕಪ್ ಕಾಫಿ ಯಾವುದೇ ಪ್ರಮುಖ ಪರಿಣಾಮಕ್ಕೆ ಕಾರಣವಾಗುವುದಿಲ್ಲ. ಅಲ್ಲದೆ, ನಿಮ್ಮ ಕಾಫಿಗೆ ಸಕ್ಕರೆ ಸೇರಿಸುವುದನ್ನು ತಪ್ಪಿಸಬೇಕು. ಮಧುಮೇಹಿಗಳು ಕಾಫಿಯನ್ನು ತ್ಯಜಿಸುವುದು ಉತ್ತಮ. ಅದರ ಬದಲು ಚಾ, ಹಸಿರು ಚಹಾ ಅಥವಾ ನಿಂಬೆ ಚಹಾವನ್ನು ಕುಡಿಯಬಹುದು. ಈ ಪಾನೀಯಗಳು ಇತರ ಆರೋಗ್ಯ ಪ್ರಯೋಜನಗಳನ್ನು ಸಹ ನೀಡುತ್ತದೆ.
ಬೆಂಗಳೂರಿನ ಯಶವಂತಪುರದ ಮಣಿಪಾಲ್ ಆಸ್ಪತ್ರೆಯ ಮುಖ್ಯ ಆಹಾರ ತಜ್ಞರಾದ ಪವಿತ್ರ.ಎನ್.ರಾಜ್ ಅವರ ಪ್ರಕಾರ, ಕಾಫಿಯಲ್ಲಿ ಕೆಫೀನ್, ಪಾಲಿಫಿನಾಲ್ ಮತ್ತು ಮೆಗ್ನೀಸಿಯಮ್ ಮತ್ತು ಕ್ರೋಮಿಯಂನಂತಹ ಖನಿಜಗಳಿವೆ. ಕೆಫೀನ್ ನಿಮ್ಮ ಇನ್ಸುಲಿನ್ ಸೂಕ್ಷ್ಮತೆಯನ್ನು ಕಡಿಮೆ ಮಾಡಬಹುದು ಏಕೆಂದರೆ ಕೆಫೀನ್ ಪ್ರತಿಬಂಧಕ ಅಂಶವಾಗಿದೆ. ಇದು ಅಡೆನೊಸಿನ್ ಎಂಬ ಪ್ರೋಟೀನ್ ಅನ್ನು ನಿರ್ಬಂಧಿಸುತ್ತದೆ. ದೇಹವು ಎಷ್ಟು ಇನ್ಸುಲಿನ್ ಮಾಡುತ್ತದೆ ಎಂಬುದರಲ್ಲಿ ಅಡೆನೊಸಿನ್ ದೊಡ್ಡ ಪಾತ್ರವನ್ನು ವಹಿಸುತ್ತದೆ. ಸುಮಾರು 200 ಮಿಲಿಗ್ರಾಂ ಕೆಫೀನ್ ರಕ್ತದಲ್ಲಿನ ಸಕ್ಕರೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಅಧ್ಯಯನಗಳು ತೋರಿಸಿವೆ. (ಇದು ಒಬ್ಬ ವ್ಯಕ್ತಿಯು ಕುಡಿಯುವ ಕಾಫಿಯ ಸಾಂದ್ರತೆಯನ್ನು ಅವಲಂಬಿಸಿ ಒಂದು ಅಥವಾ ಎರಡು ಕಪ್ಗಳಷ್ಟು ಕುದಿಸಿದ ಕಾಫಿಯಾಗಿದೆ – ಮಧ್ಯಮ ಅಥವಾ ಸ್ಟ್ರಾಂಗ್ ಕಾಫಿ).”
ತಜ್ಞರ ಪ್ರಕಾರ, ನೀವು ಮಧುಮೇಹ ಹೊಂದಿದ್ದರೆ ಕಾಫಿ ಕುಡಿಯಬಹುದು, ಏಕೆಂದರೆ ಕಾಫಿ ಮಿಶ್ರಿತ ಪ್ರಯೋಜನಗಳನ್ನು ಹೊಂದಿದೆ. “ಪಾಲಿಫಿನಾಲ್‌ಗಳು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಹೊಂದಿರುವ ಅಣುಗಳಾಗಿವೆ. ಆಂಟಿಆಕ್ಸಿಡೆಂಟ್‌ಗಳು ಟೈಪ್ -2 ಮಧುಮೇಹ, ಹೃದ್ರೋಗ ಮತ್ತು ಕ್ಯಾನ್ಸರ್‌ಗಳನ್ನು ತಡೆಯಲು ಸಹಾಯ ಮಾಡುತ್ತದೆ. ಮಧುಮೇಹ ಹೊಂದಿರುವ ಜನರು ಹೃದ್ರೋಗ ಮತ್ತು ಪಾರ್ಶ್ವವಾಯುವನ್ನು ಅಭಿವೃದ್ಧಿಪಡಿಸುವ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ಆದರೆ ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು,” ಎಂದು ಆಹಾರ ತಜ್ಞ ಪವಿತ್ರಾ ಹೇಳಿದ್ದಾರೆ.
ಸಕ್ಕರೆ ಇಲ್ಲದೆ ದಿನಕ್ಕೆ ಎರಡು ಕಪ್ ಕೆಫೀನ್ ಅಥವಾ ಕೆಫೀನ್ ರಹಿತ ಕಾಫಿ ಸೇವಿಸುವುದು ಸುರಕ್ಷಿತ ಎಂದು ಆಹಾರ ತಜ್ಞರು ಹೇಳಿದ್ದಾರೆ. ಮಧುಮೇಹ ಹೊಂದಿರುವ ಯಾರಾದರೂ ಕಾಫಿ ಕುಡಿಯುವುದನ್ನು ತ್ಯಜಿಸಿದರೆ, ಅದು ಅವರ ಆರೋಗ್ಯಕ್ಕೆ ಪ್ರಯೋಜನಕಾರಿಯಾಗುತ್ತದೆ.
ಇದನ್ನೂ ಓದಿ: ಟೊಮೆಟೊ ಕೆಚಪ್ ತಿನ್ನುವುದನ್ನು ಇಂದೇ ನಿಲ್ಲಿಸಿ! ಪೌಷ್ಟಿಕ ತಜ್ಞರು ಏನು ಹೇಳುತ್ತಾರೆ ನೋಡಿ
ತಜ್ಞರು ಶಿಫಾರಸು ಮಾಡಿದ ಕೆಲವು ಆಯ್ಕೆಗಳೆಂದರೆ: ಮಜ್ಜಿಗೆ, ನಿಂಬೆ ರಸ (ಸಕ್ಕರೆ ಇಲ್ಲದೆ), ಕ್ಲಿಯರ್ ಸೂಪ್‌ಗಳು, ಬೆಣ್ಣೆ ಅಥವಾ ಕೆನೆ ಇಲ್ಲದ ಸೂಪ್‌ಗಳು, ತರಕಾರಿ ರಸ (ಸೌತೆಕಾಯಿ ಪುದೀನಾ) ಮತ್ತು ಹಸಿರು ಸ್ಮೂಥಿಗಳು.