
ಒಂದು ಸಮಯದಲ್ಲಿ ಮಚ್ಚೆಗಳು, ಗಲ್ಲ ಅಥವಾ ತುಟಿಗಳ ಮೇಲಿದ್ದರೆ ಅದೇ ಫ್ಯಾಷನ್ ಆಗಿತ್ತು. ಈ ರೀತಿ ಹುಟ್ಟುತ್ತಾ, ಅಥವಾ ಬಾಲ್ಯದಲ್ಲಿ ದೇಹದ ವಿವಿಧ ಭಾಗಗಳಲ್ಲಿ ಮಚ್ಚೆಗಳು ಕಂಡು ಬರುವುದು ಬಹಳ ಸಾಮಾನ್ಯ. ಅದರಲ್ಲಿಯೂ ಕಾಲಾನಂತರದಲ್ಲಿ ಗಾತ್ರ ಮತ್ತು ಆಕಾರದಲ್ಲಿ ಇದು ಬದಲಾಗಬಹುದು. ಇನ್ನು ಇವು ನಿರುಪದ್ರವವಾಗಿದ್ದರೂ, ಕೆಲವೊಂದು ಮಚ್ಚೆಗಳು ಚರ್ಮದ ಕ್ಯಾನ್ಸರ್ ಗೆ (Skin Cancer) ಕಾರಣವಾಗುತ್ತವೆ ಎಂದು ವೈದ್ಯರು ಹೇಳುತ್ತಾರೆ. ಸಾಮಾನ್ಯವಾಗಿ ಜನರು ದೇಹದ ಬೇರೆಲ್ಲಾ ಭಾಗವನ್ನು ವಿಶೇಷವಾಗಿ ಗಮನಹರಿಸಿದರೂ ಕೂಡ ಚರ್ಮದ ಬಗ್ಗೆ ಅದರಲ್ಲಿಯೂ ಮಚ್ಚೆಗಳ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಅದಕ್ಕಾಗಿಯೇ ಇತ್ತೀಚಿನ ದಿನಗಳಲ್ಲಿ ಚರ್ಮ ಸಂಬಂಧಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿದೆ. ಅದಕ್ಕಾಗಿಯೇ ಪ್ರತಿಯೊಂದು ಕ್ಯಾನ್ಸರ್ ಗಳ ಬಗ್ಗೆ ತಿಳಿಸುವುದಕ್ಕಾಗಿ ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನವನ್ನು ಆಚರಣೆ ಮಾಡಲಾಗುತ್ತದೆ. ಆದರೆ ಇದು ಒಂದು ದಿನಕ್ಕೆ ಸೀಮಿತವಾಗಿರದೆ ಪ್ರತಿದಿನವೂ ಇವುಗಳ ಕುರಿತ ಮಾಹಿತಿ ಜನರಿಗೆ ತಲುಪುವಂತಾಗಬೇಕು. ಅದರಲ್ಲಿಯೂ ಚರ್ಮದ ಕ್ಯಾನ್ಸರ್ ಕುರಿತು ಅರಿವಿನ ಕಾರ್ಯ ಹೆಚ್ಚೆಚ್ಚು ನಡೆಯುವುದು ಬಹಳ ಅನಿವಾರ್ಯವಾಗಿದೆ. ಹಾಗಾಗಿಯೇ, ಮಚ್ಚೆಗಳು ಯಾವ ರೀತಿ ಕ್ಯಾನ್ಸರ್ ಕಾರಣವಾಗುತ್ತದೆ, ಬಹುತೇಕ ಮಚ್ಚೆಗಳು ಅಪಾಯಕಾರಿಯಲ್ಲದಿದ್ದರೂ ಕೂಡ ಯಾವ ಸಮಯದಲ್ಲಿ ವೈದ್ಯರ ಸಂಪರ್ಕ ಮಾಡಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಆಂಡ್ರೊಮಿಡಾ ಕ್ಯಾನ್ಸರ್ ಆಸ್ಪತ್ರೆಯ ಸರ್ಜಿಕಲ್ ಆಂಕೊಲಾಜಿಯ ಅಧ್ಯಕ್ಷ ಡಾ. ಅರುಣ್ ಕುಮಾರ್ ಗೋಯೆಲ್ ತಿಳಿಸಿರುವ ಮಾಹಿತಿ ಪ್ರಕಾರ, ನಿರುಪದ್ರವ ಚುಕ್ಕೆ ಅಥವಾ ಒರಟಾದ ತೇಪೆಯಂತೆ ಕಾಣುವ ಮಚ್ಚೆಗಳ ಬಗ್ಗೆ ಹೆಚ್ಚಿನ ಗಮನಹರಿಸಬೇಕಾಗುತ್ತದೆ. ಸಾಮಾನ್ಯ ಕೋಶಗಳು ಬದಲಾದಾಗ, ಆಗಾಗ ಅವುಗಳ ಡಿಎನ್‌ಎಗೆ ಹಾನಿಯಾಗುವ ಮೂಲಕ ಮತ್ತು ಅನಿಯಂತ್ರಿತವಾಗಿ ಬೆಳೆಯಲು ಪ್ರಾರಂಭಿಸಿದಾಗ ಚರ್ಮದ ಕ್ಯಾನ್ಸರ್ ಪ್ರಾರಂಭವಾಗುತ್ತದೆ. ಸಾಮಾನ್ಯವಾಗಿ ಬಹುತೇಕ ಎಲ್ಲರ ದೇಹದಲ್ಲಿಯೂ 10ರಿಂದ 45 ಮಚ್ಚೆಗಳು ಇರುತ್ತವೆ. ವಿಶೇಷವಾಗಿ ಹದಿಹರೆಯದವರಲ್ಲಿ ಮತ್ತು ಮಹಿಳೆಯರಿಗೆ ಗರ್ಭಾವಸ್ಥೆಯ ಸಮಯದಲ್ಲಿ ಅವು ಗಾಢವಾಗುತ್ತವೆ ಮತ್ತು ದೊಡ್ಡದಾಗುತ್ತವೆ.
ಸಾಮಾನ್ಯವಾಗಿ, ದೇಹದಲ್ಲಿರುವ ಮಚ್ಚೆಯ ಗಾತ್ರ, ಆಕಾರ, ಬಣ್ಣದಲ್ಲಿ ಬದಲಾದರೆ ಅಥವಾ ಅದರಲ್ಲಿ ತುರಿಕೆ, ರಕ್ತಸ್ರಾವ ಅಥವಾ ಉರಿಯೂತ ಕಂಡುಬಂದರೆ ನಿರ್ಲಕ್ಷ್ಯ ಮಾಡದೆಯೇ ವೈದ್ಯರ ಬಳಿ ಹೋಗಬೇಕು. ಮಾತ್ರವಲ್ಲ 6 ಮಿಮೀಗಿಂತ ಹೆಚ್ಚು ದೊಡ್ಡದಾದರೂ ಕೂಡ ವೈದ್ಯರ ಸಲಹೆ ಪಡೆಯಬೇಕು. ಇನ್ನು, ಯಾರ ದೇಹದಲ್ಲಿ 50ಕ್ಕಿಂತ ಹೆಚ್ಚು ಮಚ್ಚೆಗಳು ಇದ್ದಲ್ಲಿ ಇದು ಆರಂಭಿಕ ಮೆಲನೋಮಕ್ಕೆ ಅಪಾಯಕಾರಿ ಅಂಶವಾಗಿರಬಹುದು.
ಡಾ. ಗೋಯೆಲ್ ಚರ್ಮದ ಕ್ಯಾನ್ಸರ್ ಪ್ರಕಾರಗಳ ಬಗ್ಗೆ ಮಾಹಿತಿ ನೀಡಿದ್ದು, ಈ ರೀತಿಯ ಲಕ್ಷಣ ಕಂಡು ಬಂದಾಗ ನಿರ್ಲಕ್ಷ್ಯ ಮಾಡಬಾರದು ಎಂದಿದ್ದಾರೆ.
ಬೇಸಲ್ ಸೆಲ್ ಕಾರ್ಸಿನೋಮ (BCC): ಅತ್ಯಂತ ಸಾಮಾನ್ಯ ವಿಧ, ಉಬ್ಬು ಅಥವಾ ಗುಲಾಬಿ ಬಣ್ಣದ ತೇಪೆಯಾಗಿ ಕಾಣಿಸಿಕೊಳ್ಳುತ್ತದೆ.
ಸ್ಕ್ವಾಮಸ್ ಸೆಲ್ ಕಾರ್ಸಿನೋಮ (SCC): ಸಾಮಾನ್ಯವಾಗಿ ಕೆಂಪಾಗಿ ಉಬ್ಬಿದ ಹಾಗೆ ಅಥವಾ ಸಣ್ಣ ಹುಣ್ಣುಗಳ ರೀತಿ ಆಗುವುದು.
ಮೆಲನೋಮ: ಕಂಡುಬರುವುದು ಬಹಳ ಕಡಿಮೆ ಆದರೆ ಹೆಚ್ಚು ಅಪಾಯಕಾರಿ. ಇದು ಮೋಲ್ ನ ರೀತಿಯಲ್ಲಿ ಪ್ರಾರಂಭವಾಗುತ್ತದೆ.
ಈ ಕ್ಯಾನ್ಸರ್‌ಗಳಲ್ಲಿ ಹಲವು ಕ್ಯಾನ್ಸರ್‌ಗಳನ್ನು ಮೊದಲೇ ಪತ್ತೆಹಚ್ಚಿದರೆ ಸುಲಭವಾಗಿ ಚಿಕಿತ್ಸೆ ನೀಡಬಹುದಾದರೂ, ವಿಳಂಬ ಮಾಡಿದಷ್ಟು ಚಿಕಿತ್ಸೆ ಕಷ್ಟವಾಗುತ್ತದೆ. ಅದರಲ್ಲಿಯೂ ಮೆಲನೋಮ ಒಮ್ಮೆ ಹರಡಿದರೆ ಬಹಳ ಅಪಾಯಕಾರಿಯಾಗಬಹುದು.
ಇದನ್ನೂ ಓದಿ: ವೃದ್ಧಾಪ್ಯದಲ್ಲಿ ಚರ್ಮ ತೆಳ್ಳಗಾಗಲು ಕಾರಣವೇನು? ತಜ್ಞರು ನೀಡಿದ ಮಾಹಿತಿ ಇಲ್ಲಿದೆ
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ