ಟಿಬಿ ಅಥವಾ ಕ್ಷಯ ರೋಗದ ಬಗ್ಗೆ ಕೇಳಿರಬಹುದು. ಇದೊಂದು ಅತ್ಯಂತ ಅಪಾಯಕಾರಿ ಸಾಂಕ್ರಾಮಿಕ ರೋಗವಾಗಿದ್ದು, ಇದು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಸುಲಭವಾಗಿ ಹರಡಬಹುದಾದ ರೋಗವಾಗಿದೆ. ಇತ್ತೀಚಿನ ವರ್ಷಗಳಲ್ಲಿ ನಮ್ಮ ದೇಶದಲ್ಲಿ ಬಹಳಷ್ಟು ಕ್ಷಯ ರೋಗಿಗಳು ಕಂಡುಬರುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಇತ್ತೀಚಿನ ವರದಿಯ ಪ್ರಕಾರ, ಭಾರತ ಸೇರಿದಂತೆ ಐದು ದೇಶಗಳಲ್ಲಿ ಅತಿ ಹೆಚ್ಚು ಟಿಬಿ ರೋಗ ದೃಢ ಪಟ್ಟವರು ಇದ್ದಾರೆ ಎಂದು ಎಚ್ಚರಿಕೆ ನೀಡಿದೆ. ಅದಲ್ಲದೆ ತಜ್ಞರು ಹೇಳುವ ಪ್ರಕಾರ ಈ ಕಾಯಿಲೆ ಕೋವಿಡ್ಗಿಂತ ಹೆಚ್ಚು ಅಪಾಯಕಾರಿಯಾದ ಸಾಂಕ್ರಾಮಿಕ ರೋಗ. ಹಾಗಾಗಿ ಬಹಳ ಎಚ್ಚರಿಕೆಯಿಂದ ಇರುವುದು ಅವಶ್ಯವಾಗಿದೆ.
ಒಂದು ವರದಿಯ ಪ್ರಕಾರ ಭಾರತದಲ್ಲಿ ಶೇ. 26, ಇಂಡೋನೇಷ್ಯಾದಲ್ಲಿ ಶೇ.10, ಚೀನಾದಲ್ಲಿ ಶೇ. 6. 8, ಫಿಲಿಪೈನ್ಸ್ ನಲ್ಲಿ ಶೇ.6. 8 ಮತ್ತು ಪಾಕಿಸ್ತಾನದಲ್ಲಿ ಶೇ.6. 3ರಷ್ಟು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಜಾಗತಿಕ ಕ್ಷಯರೋಗ ವರದಿ 2024 ರ ಪ್ರಕಾರ, ಈ ರೋಗ ಜಾಗತಿಕವಾಗಿ ಶೇಕಡಾ 56 ರಷ್ಟಿದೆ. ಅದರಲ್ಲಿ 55 ಪ್ರತಿಶತ ಪುರುಷರು, 33 ಪ್ರತಿಶತ ಮಹಿಳೆಯರು ಮತ್ತು 12 ಪ್ರತಿಶತ ಮಕ್ಕಳು ಮತ್ತು ಯುವಕರಲ್ಲಿ ಕಂಡುಬಂದಿದೆ. 2025 ರ ವೇಳೆಗೆ ಭಾರತದಲ್ಲಿ ಈ ರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿದ್ದರೂ ಕೂಡ ಇದು ಎಷ್ಟರ ಮಟ್ಟಿಗೆ ನಿವಾರಣೆಯಾಗುತ್ತದೆ ಎಂಬುದನ್ನು ಊಹಿಸಲು ಸಾಧ್ಯವಾಗುತ್ತಿಲ್ಲ. ಬದಲಾಗಿ ಈ ರೋಗಿಗಳ ಸಂಖ್ಯೆ ಹೆಚಾಗುತ್ತಿದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ಡಬ್ಲ್ಯುಎಚ್ಒ ವರದಿಯ ಪ್ರಕಾರ, 2023 ರಲ್ಲಿ ಅಂದಾಜು 8.2 ಮಿಲಿಯನ್ ಜನರು ಈ ರೋಗದಿಂದ ಬಳಲುತ್ತಿದ್ದರು, ಅದೇ ವರದಿಯ ಪ್ರಕಾರ, ಟಿಬಿ ಸಂಬಂಧಿತ ಸಾವುಗಳ ಸಂಖ್ಯೆ 2022 ರಲ್ಲಿ 1.32 ಮಿಲಿಯನ್ ನಿಂದ 2023 ರಲ್ಲಿ 1.25 ಮಿಲಿಯನ್ ಗೆ ಇಳಿದಿದೆ, ಆದರೂ ಟಿಬಿಯಿಂದ ಅನಾರೋಗ್ಯಕ್ಕೆ ಒಳಗಾಗುವವರ ಸಂಖ್ಯೆ 2023 ರಲ್ಲಿ ಅಂದಾಜು 10.8 ಮಿಲಿಯನ್ ಆಗಿದೆ. ಹಾಗಾಗಿ ಇದನ್ನು ನಿರ್ಲಕ್ಷಿಸುವಂತಿಲ್ಲ. ಇದು ಅತ್ಯಂತ ಅಪಾಯಕಾರಿ ಸಾಂಕ್ರಾಮಿಕ ರೋಗವಾಗಿದ್ದು, ಪ್ರತಿವರ್ಷ ಲಕ್ಷಾಂತರ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಅದಕ್ಕಾಗಿ ಇದು ಕೋವಿಡ್ ಗಿಂತಲೂ ಹೆಚ್ಚು ಅಪಾಯಕಾರಿ ಎಂದು ಹೇಳಲಾಗುತ್ತಿದೆ. ಅಲ್ಲದೆ ಈ ರೋಗಕ್ಕೆ ಚಿಕಿತ್ಸೆ ನೀಡಬಹುದಾಗಿದೆ. ಆದರೆ ಒಮ್ಮೆ ವಿಳಂಬವಾದರೆ, ರೋಗಿ ಸಾಯಬಹುದು. ಆದ್ದರಿಂದ, ನಿರಂತರ ಕೆಮ್ಮು ಇದ್ದರೆ, ಅದನ್ನು ಪರೀಕ್ಷಿಸಬೇಕು ಮತ್ತು ಸರಿಯಾದ ಚಿಕಿತ್ಸೆ ತೆಗೆದುಕೊಳ್ಳುವುದು ಬಹಳ ಸೂಕ್ತ.
ಟಿಬಿ ರೋಗವು ಮೈಕೋಬ್ಯಾಕ್ಟೀರಿಯಂ ಟ್ಯೂಬರ್ಕ್ಯುಲೋಸಿಸ್ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಒಬ್ಬ ವ್ಯಕ್ತಿಯು ಈ ಟಿಬಿ ಬ್ಯಾಕ್ಟೀರಿಯಾದ ಸಂಪರ್ಕಕ್ಕೆ ಬಂದಾಗ, ಅದು ಉಸಿರಾಟದ ಮೂಲಕ ಆರೋಗ್ಯವಂತ ವ್ಯಕ್ತಿಯ ದೇಹವನ್ನು ಪ್ರವೇಶಿಸುತ್ತದೆ. ಬಳಿಕ ಶ್ವಾಸಕೋಶಕ್ಕೆ ಹೋಗುತ್ತದೆ. ಹೆಚ್ಚಾಗಿ ಈ ಬ್ಯಾಕ್ಟೀರಿಯಾಗಳು ಸೋಂಕಿತ ವ್ಯಕ್ತಿಯ ಸಂಪರ್ಕದಿಂದ ಹರಡುತ್ತವೆ. ಸೋಂಕಿತ ವ್ಯಕ್ತಿಯ ಕೆಮ್ಮು ಮತ್ತು ಸೀನುವಿಕೆಯಿಂದಾಗಿ ಅವು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಹರಡುತ್ತವೆ.
ಇದನ್ನೂ ಓದಿ: ತೂಕ ಕಡಿಮೆ ಮಾಡಿಕೊಳ್ಳಲು 30- 60 ನಿಮಿಷಗಳ ಕಾಲ ವ್ಯಾಯಾಮ ಮಾಡಲು ಸಾಧ್ಯವಾಗದಿದ್ದರೆ ಈ ರೀತಿ ಮಾಡಿ
– ಕೆಮ್ಮು
– ಕೆಮ್ಮಿನ ಜೊತೆಗೆ ರಕ್ತ ಮತ್ತು ಕಫ
– ಎದೆಯಲ್ಲಿ ನೋವಿನ ಅನುಭವ
– ಉಸಿರಾಟದಲ್ಲಿ ನೋವು ಅಥವಾ ಕೆಮ್ಮು
-ಜ್ವರ
– ಶೀತ
– ರಾತ್ರಿ ಬೆವರುವುದು
– ತೂಕ ನಷ್ಟ
– ತಿನ್ನುವ ಬಯಕೆ ಕಡಿಮೆಯಾಗುವುದು
– ದಣಿದ ಭಾವನೆ
ಟಿಬಿಯ ಸಾಮಾನ್ಯ ಲಕ್ಷಣವೆಂದರೆ ನಿರಂತರ ಕೆಮ್ಮು, ಆದ್ದರಿಂದ ಕೆಮ್ಮು ಮೂರು ವಾರಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಮುಂದುವರಿದರೆ, ನೀವು ಅದನ್ನು ಪರೀಕ್ಷಿಸಿಕೊಳ್ಳಬೇಕು ಜೊತೆಗೆ ಸಂಪೂರ್ಣ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಬೇಕು ಮತ್ತು ಅದಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯಬೇಕು.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ