ದಿನಾ ಅಗರಬತ್ತಿ ಹೊಗೆ ಸೇವನೆಯಿಂದ ಬರಬಹುದು ಶ್ವಾಸಕೋಶದ ಕ್ಯಾನ್ಸರ್‌‌! ತಜ್ಞರಿಂದ ಆಘಾತಕಾರಿ ಸಂಗತಿ ಬಯಲು

ನಮ್ಮಲ್ಲಿ ಹೆಚ್ಚಿನವರು ಪ್ರತಿನಿತ್ಯ ದೇವರ ಮನೆಯಲ್ಲಿ ಧೂಪದ್ರವ್ಯ, ಅಗರಬತ್ತಿಗಳನ್ನು ಹಚ್ಚುತ್ತಾರೆ. ಆಹ್ಲಾದಕರ ಪರಿಮಳ ನೀಡಲು ಮತ್ತು ಸಕಾರಾತ್ಮಕ ಭಾವನೆಯನ್ನು ಹೆಚ್ಚಿಸಲು ವಿವಿಧ ರೀತಿಯ ಸುವಾಸನೆಯುಕ್ತ ಅಗರಬತ್ತಿಗಳನ್ನು ಬಳಸುತ್ತಾರೆ. ಆದರೆ ಡಾ. ಸೋನಿಯಾ ಗೋಯಲ್ ಅವರು ಹೇಳುವ ಪ್ರಕಾರ ಧೂಪ, ಅಗರಬತ್ತಿಗಳನ್ನು ಅತಿಯಾಗಿ ಬಳಕೆ ಮಾಡಬಾರದು ಏಕೆಂದರೆ ಇದರಿಂದ ಬರುವಂತಹ ಹೊಗೆ ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳುತ್ತಾರೆ. ಹಾಗಾದರೆ ಅವುಗಳಿಂದ ನಮ್ಮ ಆರೋಗ್ಯಕ್ಕೆ ಯಾವ ರೀತಿಯ ತೊಂದರೆಯಾಗುತ್ತದೆ, ಇವುಗಳಲ್ಲಿ ಯಾವ ರೀತಿಯ ರಾಸಾಯನಿಕಗಳು ಇರುತ್ತದೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ದಿನಾ ಅಗರಬತ್ತಿ ಹೊಗೆ ಸೇವನೆಯಿಂದ ಬರಬಹುದು ಶ್ವಾಸಕೋಶದ ಕ್ಯಾನ್ಸರ್‌‌! ತಜ್ಞರಿಂದ ಆಘಾತಕಾರಿ ಸಂಗತಿ ಬಯಲು
ಅಗರಬತ್ತಿಯಿಂದ ಬರುವ ಹೊಗೆ

Updated on: Oct 15, 2025 | 4:45 PM

ಮನೆ ಎಂದ ಮೇಲೆ ದೇವರ ಪೂಜೆ ನಡೆಯಲೇಬೇಕು. ನಂಬುವ ದೇವ ಬೇರೆ ಬೇರೆಯಾದರೂ, ಪೂಜೆ- ಪುನಸ್ಕಾರಗಳು ವಿಭಿನ್ನವಾಗಿದ್ದರೂ ಪ್ರತಿನಿತ್ಯ ದೇವರಿಗೆ ಹೂವನ್ನು ಏರಿಸಿ ಧೂಪ, ಅಗರಬತ್ತಿಯನ್ನು ಹಚ್ಚದಿರುವ ಮನೆ ಇರುವುದು ತೀರಾ ಕಡಿಮೆ. ಹಬ್ಬದ ದಿನಗಳಲ್ಲಾದರೂ ಧೂಪ, ದೀಪಗಳನ್ನು ಹಚ್ಚುತ್ತಾರೆ. ಆದರೆ ಡಾ. ಸೋನಿಯಾ ಗೋಯಲ್ (Dr. Sonia Goel) ಅವರು ಹೇಳುವ ಪ್ರಕಾರ ಧೂಪ, ಅಗರಬತ್ತಿಗಳನ್ನು ಅತಿಯಾಗಿ ಬಳಕೆ ಮಾಡಬಾರದು. ಇದರಿಂದ ಬರುವಂತಹ ಹೊಗೆ ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳುತ್ತಾರೆ. ಈ ಧೂಪ ಅಥವಾ ಅಗರಬತ್ತಿಗಳಿಂದ ಬರುವ ಹೊಗೆಯಿಂದ (Agarbattis Smoke) ಬಿಡುಗಡೆಯಾಗುವ ರಾಸಾಯನಿಕಗಳು ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಮಾತ್ರವಲ್ಲ ಇವು ನಾವು ಉಸಿರಾಡುವಂತಹ ಗಾಳಿಯಲ್ಲಿ ಸೇರಿಕೊಂಡು ಸಿಗರೇಟ್‌ಗಳಿಗಿಂತ ಹೆಚ್ಚಿನ ಪರಿಣಾಮ ಬೀರುತ್ತದೆ. ಹಾಗಾದರೆ ಇವುಗಳಲ್ಲಿ ಯಾವ ರೀತಿಯ ರಾಸಾಯನಿಕಗಳು ಇರುತ್ತದೆ, ಅವುಗಳಿಂದ ನಮ್ಮ ಆರೋಗ್ಯಕ್ಕೆ ಯಾವ ರೀತಿಯ ತೊಂದರೆಯಾಗುತ್ತದೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಧೂಪ, ಅಗರಬತ್ತಿಯ ಹೊಗೆಯಿಂದ ಯಾವ ರೀತಿ ತೊಂದರೆಯಾಗುತ್ತೆ?

ಸಾಮಾನ್ಯವಾಗಿ ಅವುಗಳಿಂದ ಬರುವ ಹೊಗೆ ಪರಿಮಳದಾಯಕವಾಗಿದ್ದರು ಕೂಡ ಈ ಹೊಗೆ ನಮ್ಮ ಉಸಿರಾಟದಲ್ಲಿ ಸೇರಿಕೊಂಡು ಹಾನಿಯುಂಟು ಮಾಡುತ್ತದೆ. ಕೆಲವರಿಗೆ ಈ ಹೊಗೆಯಿಂದ ಕಣ್ಣುಗಳು, ಮೂಗು ಮತ್ತು ಗಂಟಲು ಕೂಡ ಉರಿಯುತ್ತದೆ. ಅಲರ್ಜಿ ಇರುವವರಿಗೆ ಉಸಿರಾಟದ ತೊಂದರೆ ಮತ್ತು ಸೈನಸ್ ಸಮಸ್ಯೆಗಳು ಹೆಚ್ಚಾಗುತ್ತವೆ. ಕೆಲವರಿಗೆ ತೀವ್ರ ಕೆಮ್ಮು ಕೂಡ ಕಂಡುಬರಬಹುದು. ಏಕೆಂದರೆ ಧೂಪದ್ರವ್ಯದ ಕಡ್ಡಿಗಳು ಇಂಗಾಲದ ಮಾನಾಕ್ಸೈಡ್ ಮತ್ತು ಹಾನಿಕಾರಕ ಅನಿಲಗಳನ್ನು ಒಳಗೊಂಡಿರುವ ಹೊಗೆಯನ್ನು ಬಿಡುಗಡೆ ಮಾಡುತ್ತವೆ. ಇವು ಒಳಾಂಗಣ ಗಾಳಿಯನ್ನು ವಿಷಕಾರಿಯಾಗಿಸುತ್ತದೆ. ಮಾತ್ರವಲ್ಲ ದೀರ್ಘಕಾಲದ ವರೆಗೆ ಈ ರೀತಿಯ ಗಾಳಿಯನ್ನು ತೆಗೆದುಕೊಳ್ಳುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಒಂದು ಊದುಬತ್ತಿ ಅಥವಾ ಅಗರಬತ್ತಿಯ ಹೊಗೆಯು ಸಿಗರೇಟ್ ನಿಂದ ಬರುವ ಹೊಗೆಗೆ ಸಮಾನವಾಗಿರುತ್ತದೆ ಹಾಗಾಗಿ ಈ ಎರಡು ಹೊಗೆಯು ನಮ್ಮ ಉಸಿರಾಟದ ಗಾಳಿಯಲ್ಲಿ ಸೇರಿದಾಗ ಒಂದೇ ರೀತಿಯ ಪರಿಣಾಮಕ್ಕೆ ಕಾರಣವಾಗುತ್ತದೆ. ಮಾತ್ರವಲ್ಲ ಧೂಮಪಾನ ಮಾಡದೇ ಇರುವ ವ್ಯಕ್ತಿಗಳು ಕೂಡ ಮನೆಯಲ್ಲಿ ನಿತ್ಯ ನಡೆಯುವ ಪೂಜಾ ಕೈಂಕರ್ಯಗಳ ಸಂದರ್ಭದಲ್ಲಿ ಹಚ್ಚುವಂತಹ ಅಗರಬತ್ತಿಯಿಂದ ಬರುವ ಹೊಗೆಯನ್ನು ನಿರರಂತರವಾಗಿ ಸೇವನೆ ಮಾಡಿದಲ್ಲಿ ಹೃದಯಾಘಾತದ ಸಮಸ್ಯೆ, ಕ್ಯಾನ್ಸರ್ ಸೇರಿದಂತೆ ಅನೇಕ ರೀತಿಯ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು.

ಯಾವ ರೀತಿಯ ಆರೋಗ್ಯ ಸಮಸ್ಯೆಗಳು ಕಂಡುಬರುತ್ತದೆ?

ಈ ಧೂಪ ಅಥವಾ ಅಗರಬತ್ತಿ ಕಡ್ಡಿಗಳಿಂದ ಹೊರಬರುವ ಹೊಗೆಯು ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರ ವರೆಗೆ ಎಲ್ಲರ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಈ ಹೊಗೆಯು ಉಸಿರಾಟದ ತೊಂದರೆ, ಕೆಮ್ಮು ಮತ್ತು ಅಲರ್ಜಿಗೆ ಕಾರಣವಾಗುತ್ತದೆ ಆದ್ದರಿಂದ, ಮನೆಯಲ್ಲಿ ಹೆಚ್ಚು ಧೂಪ ಮತ್ತು ಅಗರಬತ್ತಿ ಕಡ್ಡಿಗಳನ್ನು ಹಚ್ಚದಿರುವುದು ಒಳ್ಳೆಯದು. ಏಕೆಂದರೆ ಎಲ್ಲಿಯೂ ಗಾಳಿಯಾಡದಂತಹ ಕೋಣೆಯಲ್ಲಿ ಇವುಗಳನ್ನು ಹಚ್ಚುವುದರಿಂದ ಅವುಗಳಿಂದ ಬಂದ ಹೊಗೆ ನಾವು ಉಸಿರಾಡುವಂತಹ ಗಾಳಿಯಲ್ಲಿ ಸೇರಿಕೊಂಡು ಬ್ರಾಂಕೈಟಿಸ್, ಅಸ್ತಮಾ ಮತ್ತು ಸಿಒಪಿಡಿಯಂತಹ ಕಾಯಿಲೆಗಳಿಗೆ ಕಾರಣವಾಗುತ್ತದೆ. ಮಾತ್ರವಲ್ಲ ಪರಿಣಾಮ ಹೆಚ್ಚು ತೀವ್ರವಾಗಿದ್ದಲ್ಲಿ ಅದು ಶ್ವಾಸಕೋಶದ ಕ್ಯಾನ್ಸರ್‌ಗೂ ಕಾರಣವಾಗಬಹುದು. ಅವುಗಳಲ್ಲಿರುವ ರಾಸಾಯನಿಕಗಳು ನಮಗೆ ತಿಳಿಯದೆಯೇ ನಮ್ಮ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಪರಿಣಾಮ ಬೀರುತ್ತವೆ. ನಾವು ಧೂಮಪಾನ ಮತ್ತು ತಂಬಾಕಿನಿಂದ ದೂರವಿದ್ದೇವೆ ಎಂದು ಅಂದುಕೊಂಡಿರುತ್ತೇವೆ. ಆದರೆ ಮನೆಯಲ್ಲಿ ಪ್ರತಿನಿತ್ಯ ನಾವು ಬಳಸುವ ಅಗರಬತ್ತಿ ಅನೇಕ ರೀತಿಯ ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು.

ಇದನ್ನೂ ಓದಿ: Eye Cancer: ಕಣ್ಣಿನ ಕ್ಯಾನ್ಸರ್ ಬಗ್ಗೆ ಕೇಳಿದ್ದೀರಾ? ಲಕ್ಷಣಗಳು ಹೇಗಿರುತ್ತವೆ ನೋಡಿ

ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು?

ಪೂಜಾ ಸಮಯದಲ್ಲಿ ಧೂಪ ಅಥವಾ ಅಗರಬತ್ತಿಯನ್ನು ಹಚ್ಚಬೇಕಾದರೆ ಕಿಟಕಿ, ಬಾಗಿಲು ತೆರೆದಿರಲಿ. ಮನೆಯಲ್ಲಿರುವ ಹೊಗೆ ಹೊರಗೆ ಹೋಗುವಂತೆ ಫ್ಯಾನ್ ಆನ್ ಮಾಡಿ. ಉತ್ತಮ ಸುಗಂಧ ಬಯಸುವುದಾದರೆ ಎಣ್ಣೆ ಡಿಫ್ಯೂಸರ್‌ಗಳು ಮತ್ತು ರಾಸಾಯನಿಕ ಮುಕ್ತ ಧೂಪದ್ರವ್ಯದ ಕಡ್ಡಿಗಳನ್ನು ಬಳಸುವುದು ಉತ್ತಮ. ಆದರೆ ಇವುಗಳನ್ನು ಪ್ರತಿನಿತ್ಯ ಬಳಸಬೇಡಿ. ಆದಷ್ಟು ರಾಸಾಯನಿಕ ಅಗರಬತ್ತಿಗಳ ಬಳಕೆಯನ್ನು ಕಡಿಮೆ ಮಾಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ