Pranayama: ಹೃದ್ರೋಗದಿಂದ ದೂರವಿರಬೇಕೆ? ಈ ಪ್ರಾಣಾಯಾಮಗಳನ್ನು ಮಾಡಿ

| Updated By: ನಯನಾ ರಾಜೀವ್

Updated on: Jun 05, 2022 | 9:56 AM

ಹೃದಯ ಸಂಬಂಧಿ ಕಾಯಿಲೆಯನ್ನು ದೂರವಿಡಬೇಕು ಎಂದುಕೊಂಡಿದ್ದರೆ ನಿತ್ಯ ಸ್ವಲ್ಪ ಹೊತ್ತು ಯೋಗ ಹಾಗೂ ಪ್ರಾಣಾಯಾಮಗಳಿಗೆ ನಿಮ್ಮ ಅಮೂಲ್ಯ ಸಮಯವನ್ನು ಮೀಸಲಿಡಿ

Pranayama: ಹೃದ್ರೋಗದಿಂದ ದೂರವಿರಬೇಕೆ? ಈ ಪ್ರಾಣಾಯಾಮಗಳನ್ನು ಮಾಡಿ
Pranayama
Follow us on

ಹೃದಯ ಸಂಬಂಧಿ ಕಾಯಿಲೆಯನ್ನು ದೂರವಿಡಬೇಕು ಎಂದುಕೊಂಡಿದ್ದರೆ ನಿತ್ಯ ಸ್ವಲ್ಪ ಹೊತ್ತು ಯೋಗ ಹಾಗೂ ಪ್ರಾಣಾಯಾಮಗಳಿಗೆ ನಿಮ್ಮ ಅಮೂಲ್ಯ ಸಮಯವನ್ನು ಮೀಸಲಿಡಿ. ಹೃದ್ರೋಗ ಇರುವವರಿಗೆ ಆಕಸ್ಮಿಕವಾಗಿ ಆಘಾತವಾಗುವ ಮತ್ತು ಹಠಾತ್ತಾಗಿ ಸಾವು ಸಂಭವಿಸುವ ಪ್ರಮಾಣ ಹೆಚ್ಚು. ಒಮ್ಮೆ ಹೃದಯಾಘಾತವಾದರೆ ನಂತರ ಹಿಂದಿನಷ್ಟು ಸಹಜ ಜೀವನ ನಡೆಸುವುದು ಕಷ್ಟವಾಗುತ್ತದೆ.

ಯೋಗದಿಂದ ಆರೋಗ್ಯ ಎಂದು ಎಲ್ಲರೂ ಕಂಡುಕೊಂಡಿದ್ದಾರೆ. ಆದರೆ ವೈಜ್ಞಾನಿಕವಾಗಿ ಇದು ಸಾಜೀತಾಗದಿರುವುದರಿಂದ ಹೃದಯ ಸಮಸ್ಯೆ ಇರುವವರು ಯೋಗ ಮಾಡಿದರೆ ತೊಂದರೆಯಾಗುತ್ತದೆ ಎಂಬ ಮನೋಭಾವವಿದೆ.

ಹೃದ್ರೋಗಿಗಳು ಯೋಗಾಭ್ಯಾಸ, ದೈಹಿಕ ವ್ಯಾಯಾಮ ಮಾಡುವಾಗ ಅವರ ನಾಡಿಮಿಡಿತ, ರಕ್ತದೊತ್ತಡ ಮತ್ತು ರೋಗಿಗಳ ಹೃದಯದ ಮೇಲೆ ಒತ್ತಡ ಹೆಚ್ಚಾಗುವುದಿಲ್ಲ ಎಂದು ತಿಳಿದುಬಂದಿದೆ. ಹಾಗೆಯೇ ನೀವು ಈ ಕೆಲವು ಪ್ರಾಣಾಯಾಮಗಳನ್ನು ಮಾಡುವುದರಿಂದ ಹೃದಯ ಸಂಬಂಧಿ ಕಾಯಿಲೆಗಳಿಂದ ದೂರವಿರಬಹುದು.

ಈ ಪ್ರಾಣಾಯಾಮಗಳನ್ನು ಮಾಡಿ

ಭಸ್ತ್ರಿಕಾ ಪ್ರಾಣಾಯಾಮ:
ಈ ವಿಧದ ಪ್ರಾಣಾಯಾಮದಲ್ಲಿ ಉಚ್ಛ್ವಾಸ ಹಾಗೂ ನಿಶ್ವಾಸಗಳ ಸಮಯದಲ್ಲಿ ದೇಹಕ್ಕೆ
ಅತಿ ಹೆಚ್ಚು ಆಮ್ಲಜನಕ ದೊರಕುತ್ತದೆ.

ಭಸ್ತ್ರಿಕ ಪ್ರಾಣಾಯಾಮ ಮಾಡುವ ವಿಧಾನ

-ಸಪಾಟಾದ ನೆಲದ ಮೇಲೆ ಆರಾಮವಾಗಿ ಕುಳಿತುಕೊಳ್ಳಿ

-ಮೂಗಿನ ಎರಡೂ ಹೊಳ್ಳೆಗಳ ಮೂಲಕ ಆಳವಾದ ಉಸಿರನ್ನು ಎಳೆದುಕೊಂಡು
-ಶ್ವಾಸಕೋಶವನ್ನು ತುಂಬಿಸಿ. ನಂತರ ಹಿಸ್ ಎಂಬ ಶಬ್ದ ಬರುವ ಹಾಗೆ

-ಸಂಪೂರ್ಣ ಉಸಿರನ್ನು ಹೊರಗೆ ಬಿಡಿ.

-ಈ ಕ್ರಿಯೆಯನ್ನು ಪುನರಾವರ್ತಿಸಿ.

ಭ್ರಾಮರಿ ಪ್ರಾಣಾಯಾಮ: ಭ್ರಾಮರಿ ಪ್ರಾಣಾಯಾಮ
ಮನಸ್ಸಿನ ಹತಾಶೆ, ಕೋಪ ಹಾಗೂ ಸಿಡಿಮಿಡಿಗಳನ್ನು ಕಡಿಮೆ ಮಾಡಲು ಭ್ರಾಮರಿ ಪ್ರಾಣಾಯಾಮ ಅತ್ಯಂತ ಉಪಯುಕ್ತವಾಗಿದೆ. ಮೆದುಳನ್ನು ಶಾಂತವಾಗಿಸಲು ಈ ಯೋಗವಿಧಾನ ಅತಿ ಸೂಕ್ತ.

-ಭ್ರಾಮರಿ ಪ್ರಾಣಾಯಾಮ ಮಾಡುವ ವಿಧಾನ
-ಸಪಾಟಾದ ನೆಲದ ಮೇಲೆ ಆರಾಮವಾಗಿ ಕುಳಿತುಕೊಳ್ಳಿ.
-ತೋರುಬೆರಳುಗಳನ್ನು ಹಣೆಯ ಮೇಲಿಟ್ಟು ಉಳಿದ ಬೆರಳುಗಳಿಂದ ಕಣ್ಣುಗಳನ್ನು
ಮುಚ್ಚಿ.
-ಎರಡೂ ಹೊಳ್ಳೆಗಳಿಂದ ಆಳವಾಗಿ ಉಸಿರೆಳೆದುಕೊಳ್ಳಿ.
-ಬಾಯಿಯನ್ನು ಮುಚ್ಚಿ ಮೂಗಿನಿಂದಲೇ ಹಂ ಎಂದ ಹಮ್ಮಿಂಗ್ ಸದ್ದಿನೊಂದಿಗೆ
-ಉಸಿರು ಬಿಡಿ. ಉಸಿರು ಬಿಡುವಾಗ ಮೆಲುವಾಗಿ ಓಂ ಎಂದು ಹೇಳಿ.
-ಕ್ರಿಯೆಯನ್ನು ಪುನರಾವರ್ತಿಸಿ.

ಅನುಲೋಮ ವಿಲೋಮ:

ಚಂದ್ರ ಸೂರ್ಯರ ಪ್ರಾಣಾಯಾಮದಿಂದ(ಅನುಲೋಮ ವಿಲೋಮ ಮತ್ತು ನಾಡಿ ಶುದ್ಧಿಕ್ರಿಯೆ) ಕರುಳಿನಲ್ಲಿನ ಕಲ್ಮಷವು ನಿವಾರಣೆಯಾಗುತ್ತದೆ.

ಅನು ಎಂದರೆ ಅನುಸರಿಸು ಜೊತೆಗೂಡಿಸು, ಒಂದೇ ದಿಶೆಯಲ್ಲಿ ಅಥವಾ ಒಂದಾದ ಮೇಲೊಂದರಂತೆ ಕ್ರಮವನ್ನು ಅನುಸರಿಸು ಎಂದರ್ಥ.

ನಿಲುವು: ಕತ್ತು, ಬೆನ್ನು, ಸೊಂಟ ನೇರವಾಗಿದ್ದು ಕಾಲಿನ ಪೀಠವು ಸಂಪೂರ್ಣವಾಗಿ ನೆಲಕ್ಕೆ ತಾಗುವಂತಿರಬೇಕು. ಮೊದಲು ಪದ್ಮಾಸನ, ಸಿದ್ಧಾಸನ ಅಥವಾ ವೀರಾಸನ ಇಲ್ಲವೆ ನಿಮಗೆ ಅನುಕೂಲವಾದ ಸ್ಥಿತಿಯಲ್ಲಿ ಕುಳಿತುಕೊಳ್ಳಿ. ಪ್ರಾರಂಭದಲ್ಲಿ ಸಾವಕಾಶವಾಗಿ ಮೂಗಿನ ಎರಡೂ ಹೊಳ್ಳೆಗಳಿಂದ ಪ್ರಾಣಾವಾಯುವನ್ನು ರೇಚಕ(ಉಸಿರನ್ನು ಬಿಡುವುದು) ಈ ಸಮಯದಲ್ಲಿ ನಾಭಿಯ ಸಹಿತವಾಗಿ ಒಳಗೆ ಎಳೆದು ಕೊಳ್ಳಬೇಕು.

ಬಳಿಕ ಹಿಂದಿನಂತೆಯೇ ಮೂಗಿನ ಎರಡೂ ಹೊಳ್ಳೆಗಳಿಂದ ನಿಧಾನವಾಗಿ ಪೂರಕ(ಉಸಿರನ್ನು ಒಳಗೆ ತೆಗೆದುಕೊಳ್ಳುವುದು) ತೆಗೆದುಕೊಂಡು ಉಸಿರು ಮೂಲಾಧಾರದವರೆಗೂ ಮುಟ್ಟಬೇಕು. ರೇಚಕದಲ್ಲಿ ಹೊಟ್ಟೆ ಮತ್ತು ಎದೆ ತಗ್ಗಬೇಕು ಮತ್ತು ಪೂರಕದಲ್ಲಿ ಹೊಟ್ಟೆ ಮತ್ತು ಎದೆ ಉಬ್ಬಬೇಕು. ಮನಸ್ಸಿನ ಭಾವನೆಯು ಪ್ರವಿತ್ರವಾಗಿರಬೇಕು. ಇದೇ ಕ್ರಮವನ್ನು ದೀರ್ಘ ಗೊಳಿಸುತ್ತ ಅಭ್ಯಾಸ ಮಾಡುವುದರಿಂದ ಆಯಸ್ಸು ವೃದ್ಧಿಯಾಗುತ್ತದೆ.

ಸೂಚನೆ: ಖಾಲಿ ಹೊಟ್ಟೆಯಯಲ್ಲಿ 15 ಸುತ್ತು ಮತ್ತು ಸಂಜೆಯ ಹೊತ್ತು ಊಟಕ್ಕೆ ಮೊದಲು 15 ಸುತ್ತು ಅನುಲೋಮ ವಿಲೋಮ ಪ್ರಾಣಾಯಾಮವನ್ನು ಅಭ್ಯಾಸ ಮಾಡಬೇಕು.

ಕಪಾಲಭಾತಿ:
ಹೊಟ್ಟೆಯಲ್ಲಿನ ಸಮಸ್ಯೆ, ಬೊಜ್ಜು, ಜೀರ್ಣಶಕ್ತಿ ಸಮಸ್ಯೆ ಮುಂತಾದುವುಗಳ ನಿವಾರಣೆಗೆ ಕಪಾಲಭಾತಿ ಉಪಯುಕ್ತವಾಗಿದೆ.

-ಕಪಾಲಭಾತಿ ಪ್ರಾಣಾಯಾಮ ಮಾಡುವ ವಿಧಾನ

-ಸಪಾಟಾದ ನೆಲದ ಮೇಲೆ ಕಾಲು ಮಡಚಿ ಕುಳಿತುಕೊಳ್ಳಿ. ಬೆನ್ನು ನೇರವಾಗಿರಲಿ ಹಾಗೂ ಕಣ್ಣು ಮುಚ್ಚಿ.

-ಬಲ ಅಂಗೈಯನ್ನು ಬಲ ಮೊಣಕಾಲಿಗೆ ಹಾಗೂ ಎಡ ಅಂಗೈಯನ್ನು ಎಡ ಮೊಣಕಾಲಿಗೆ ತಾಕಿಸಿ.

ಈಗ ಆಳವಾಗಿ ಉಸಿರೆಳೆದುಕೊಂಡು ನಂತರ ನಿಮ್ಮ ಎಲ್ಲಾ ಶಕ್ತಿಯನ್ನು ಬಳಸಿ ಹೊಟ್ಟೆ ಒಳಗಡೆ ಹೋಗುವಂತೆ ಉಸಿರು ಹೊರಗೆ ಬಿಡಿ.

ಹಿಸ್ ಎಂಬ ಶಬ್ದದೊಂದಿಗೆ ಉಸಿರು ಹೊರಗೆ ಬಿಡುವಾಗ ನಿಮ್ಮ ಎಲ್ಲ ರೋಗಗಳು ಅದರೊಂದಿಗೆ ಹೊರಗೆ ಹೋಗುತ್ತಿವೆ ಎಂದುಕೊಳ್ಳಿ.

ಉಸಿರು ಒಳಗೆ ತೆಗೆದುಕೊಳ್ಳುವಾಗ ಯಾವುದೇ ಬಲ ಪ್ರಯೋಗಿಸಬೇಡಿ. ಪ್ರತಿ ನಿಶ್ವಾಸದ ನಂತರ ಉಚ್ಛ್ವಾಸವು ಸಹಜವಾಗಿಯೇ ಇರಲಿ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ