Health Benefits: ಹೂವು ಕೇವಲ ಅಂದಕ್ಕಷ್ಟೇ ಅಲ್ಲ ಅನೇಕ ಆರೋಗ್ಯಕರ ಗುಣಗಳು ಇದರಲ್ಲಿ ಅಡಗಿದೆ

| Updated By: preethi shettigar

Updated on: Aug 02, 2021 | 7:24 AM

ಕಾಲೋಚಿತ ಕಾಯಿಲೆಗಳನ್ನು ಕಡಿಮೆ ಮಾಡುವುದರ ಜತೆಗೆ ಚರ್ಮದ ಸಮಸ್ಯೆಗಳನ್ನು ಹೂವು ಕಡಿಮೆ ಮಾಡುತ್ತದೆ. ಕೇಸರಿ ಮತ್ತು ಗುಲಾಬಿಯಂತಹ ಹೂವುಗಳನ್ನು ಅನೇಕ ಔಷಧಿಗಳಲ್ಲಿ ಬಳಸಲಾಗುತ್ತದೆ.

Health Benefits: ಹೂವು ಕೇವಲ ಅಂದಕ್ಕಷ್ಟೇ ಅಲ್ಲ ಅನೇಕ ಆರೋಗ್ಯಕರ ಗುಣಗಳು ಇದರಲ್ಲಿ ಅಡಗಿದೆ
ಗುಲಾಬಿ ಹೂವು
Follow us on

ಸುಂದರವಾದ ಹೂವುಗಳು ಮನಸ್ಸಿಗೆ ಖುಷಿಯ ಜತೆಗೆ ನೆಮ್ಮದಿಯನ್ನು ನೀಡುತ್ತವೆ. ಹೀಗಾಗಿಯೇ ಕೆಲವರು ಅದನ್ನು ಪ್ರೀತಿಪಾತ್ರರ ಮನವೊಲಿಸುವ ಅಸ್ತ್ರವಾಗಿ ಬಳಸುತ್ತಾರೆ. ಇನ್ನು ಮನೆಯಂಗಳದಲ್ಲಿ ಅರಳುವ ಹೂವುಗಳನ್ನು ದೇವರ ಪೂಜೆಗೆ, ಅಲಂಕಾರಕ್ಕೆ, ಅಷ್ಟೇ ಏಕೆ ಮಹಿಳೆಯರು ಮುಡಿಯಲು ಕೂಡ ಬಳಸುತ್ತಾರೆ. ಆದರೆ ಸುಂಗಂಧ ಬೀರುವ ಅನೇಕ ಹೂವುಗಳು ಕೇವಲ ಅಂದಕ್ಕೆ ಅಷ್ಟೇ ಅಲ್ಲ, ಅನೇಕ ಆರೋಗ್ಯಕರ ಗುಣಗಳನ್ನು ಹೊಂದಿದೆ. ಆಯುರ್ವೇದದಲ್ಲಿ ವಿಶೇಷವಾಗಿ ಹೂವು(Flower)ಗಳನ್ನು ಈ ಕಾರಣಕ್ಕಾಗಿಯೇ ಬಳಸಲಾಗಿದೆ. ಕೆಲವು ಹೂವುಗಳಲ್ಲಿ ಇರುವ ಪೋಷಕಾಂಶಗಳನ್ನು ಅನೇಕ ಔಷಧಿಗಳಲ್ಲಿ ಬಳಸಲಾಗುತ್ತದೆ. ಇದು ಕಾಲೋಚಿತ ಕಾಯಿಲೆಗಳನ್ನು ಕಡಿಮೆ ಮಾಡುವುದರ ಜತೆಗೆ ಚರ್ಮದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಕೇಸರಿ ಮತ್ತು ಗುಲಾಬಿ( Rose) ಯಂತಹ ಹೂವುಗಳನ್ನು ಅನೇಕ ಔಷಧಿಗಳಲ್ಲಿ ಬಳಸಲಾಗುತ್ತದೆ. ಹೂವುಗಳು ರೋಗಗಳನ್ನು ಗುಣಪಡಿಸುವ ಅಂಶವನ್ನು ಹೊಂದಿದೆ. ಅದು ಹೇಗೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ಗುಲಾಬಿ
ಗುಲಾಬಿ ಹೂವುಗಳಲ್ಲಿ ಟ್ಯಾನಿನ್, ವಿಟಮಿನ್ ಎ, ಬಿ ಮತ್ತು ಸಿ ಇರುತ್ತದೆ. ಗುಲಾಬಿ ಹೂವುಗಳ ರಸವು ದೇಹದ ಶಾಖ ಮತ್ತು ತಲೆನೋವನ್ನು ಕಡಿಮೆ ಮಾಡುತ್ತದೆ. ಒಣಗಿದ ಗುಲಾಬಿ ಹೂವುಗಳು ಗರ್ಭಿಣಿ ಮಹಿಳೆಯರಲ್ಲಿ ಮೂತ್ರದ ಸಮಸ್ಯೆಗಳನ್ನು ನಿವಾರಿಸುತ್ತದೆ. ಹಾಗೆಯೇ ಗುಲಾಬಿ ಹೂವು ಒಣಗಿಸಿ ಮಾಡಿದ ಪುಡಿಯನ್ನು ನೀರಿಗೆ ಬೆರೆಸಿ ಕುಡಿಯುವುದರಿಂದ ಹೊಟ್ಟೆಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತವೆ. ಗುಲಾಬಿಯನ್ನು ಮಾರ್ಮಲೇಡ್ ನಂತಹ ಸಿಹಿತಿಂಡಿಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಹಾಗೆಯೇ ಕೆಮ್ಮು, ಅಸ್ತಮಾ, ಬ್ರಾಂಕೈಟಿಸ್, ಅಜೀರ್ಣ ಮತ್ತು ವಾಯು ಮುಂತಾದ ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸಲು ಇದು ಸಹಾಯ ಮಾಡುತ್ತದೆ. ಗುಲಾಬಿ ಹೂವಿನ ನೀರು ಕಣ್ಣಿನ ಉರಿಯೂತವನ್ನು ಕಡಿಮೆ ಮಾಡುತ್ತದೆ. ಮಲಬದ್ಧತೆಯನ್ನು ಸಹ ಇದು ನಿಯಂತ್ರಿಸುತ್ತದೆ.

ದಾಸವಾಳ
ಸಾಮಾನ್ಯವಾಗಿ ದಾಸವಾಳ ಕೂದಲಿನ ಸಮಸ್ಯೆಗಳಿಗೆ ಪರಿಹಾರವಾಗಿ ಕೆಲಸ ಮಾಡುತ್ತದೆ. ಕೆಂಪು, ಬಿಳಿ, ಹಳದಿ ಮತ್ತು ಕಿತ್ತಳೆ ಬಣ್ಣದ ಹೂವುಗಳು ಕೂದಲು ಮತ್ತು ಚರ್ಮದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ದಾಸವಾಳ ಹೂವುಗಳನ್ನು ಆಯುರ್ವೇದದ ಚಹಾ ತಯಾರಿಕೆಯಲ್ಲಿಯೂ ಬಳಸಲಾಗುತ್ತದೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜತೆಗೆ ರಕ್ತಸ್ರಾವ, ಕೂದಲು ಉದುರುವುದು, ಅಧಿಕ ರಕ್ತದೊತ್ತಡ, ಕೆಮ್ಮು ಮುಂತಾದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.

ಮಲ್ಲಿಗೆ ಹೂವು
ಮಲ್ಲಿಗೆ ಹೂವಿನ ಪರಿಮಳ ಮನಸ್ಸನ್ನು ಶಾಂತವಾಗಿಸುತ್ತದೆ. ಮಲ್ಲಿಗೆ ಹೂವಿನಿಂದ ತಯಾರಿಸಿದ ಚಹಾವು ಆತಂಕ, ಒತ್ತಡ, ನಿದ್ರಾಹೀನತೆ ಮತ್ತು ನರಮಂಡಲದ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಮಲ್ಲಿಗೆ ಹೂವು ಜೀರ್ಣಕಾರಿ ಸಮಸ್ಯೆಗಳನ್ನು ದೂರ ಮಾಡುತ್ತದೆ. ಅಲ್ಲದೆ ಮಹಿಳೆಯರಿಗೆ ಮುಟ್ಟಿನ ಸಂದರ್ಭದಲ್ಲಿ ಉಂಟಾಗುವ ನೋವು ಮತ್ತು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.

ಇದನ್ನೂ ಓದಿ:
Noni Fruit: ನೋಣಿ ಹಣ್ಣಿನ ಬಗ್ಗೆ ನಿಮಗೆ ತಿಳಿದಿದೆಯೇ? ಇದರ ಬೇರು, ಹಣ್ಣು ಮತ್ತು ಎಲೆ ಅನೇಕ ಆರೋಗ್ಯಕರ ಗುಣಗಳಿಂದ ಕೂಡಿದೆ

ನೀವು ಎಂದಾದರೂ ಹಸಿರು ಬಾದಾಮಿಯನ್ನು ಸೇವಿಸಿದ್ದೀರಾ? ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಿ