ಪ್ರತಿಯೊಬ್ಬ ಮನುಷ್ಯನಲ್ಲೂ ಕೂಡ ನೆನಪಿನ ಶಕ್ತಿ ಎನ್ನುವುದು ತುಂಬಾ ಭಿನ್ನವಾಗಿ ಇರುತ್ತದೆ. ಕೆಲವರು ಅತೀ ಬುದ್ಧಿವಂತರಾಗಿದ್ದರೆ, ಇನ್ನು ಕೆಲವರು ನಿಧಾನವಾಗಿ ಆಲೋಚನೆ ಮಾಡುವವರಾಗಿರುತ್ತಾರೆ. ಆದರೆ ಯಾರೂ ಕೂಡ ದಡ್ಡರಲ್ಲ ಅದು ಅವರವರ ಸಾಮರ್ಥ್ಯವಾಗಿರುತ್ತದೆ. ಅಂದರೆ ಪ್ರತಿಯೊಬ್ಬರ ಮೆದುಳಿನ ಸಾಮರ್ಥ್ಯ ಒಂದೇ ರೀತಿಯಲ್ಲಿ ಇದ್ದರೂ ಅದು ಕಾರ್ಯ ನಿರ್ವಹಿಸುವ ರೀತಿ ಮಾತ್ರ ಭಿನ್ನವಾಗಿರುತ್ತದೆ. ಹಾಗಾಗಿ ನಾವು ಮೆದುಳನ್ನು ಸಕ್ರಿಯವಾಗಿಟ್ಟುಕೊಳ್ಳುವುದರ ಜೊತೆಗೆ ನಮ್ಮ ಸ್ಮರಣಶಕ್ತಿಯನ್ನು ಹೆಚ್ಚಿಸಿಕೊಳ್ಳುವಂತಹ ಅಭ್ಯಾಸ, ಆಹಾರ ಕ್ರಮಗಳನ್ನು ರೂಢಿಸಿಕೊಳ್ಳಬೇಕು. ಇದರಿಂದ ನಮ್ಮ ಆಲೋಚನಾ ಕ್ರಮಗಳು ಸುಧಾರಣೆಯಾಗುತ್ತದೆ ಜೊತೆಗೆ ಮೆದುಳಿಗೆ ವ್ಯಾಯಾಮವಾಗುತ್ತದೆ. ಅಲ್ಲದೆ ಮರೆವು ಕಡಿಮೆಯಾಗುತ್ತದೆ. ಹಾಗಾದರೆ ಮೆದುಳು ತೀಕ್ಷ್ಣವಾಗಿ ಕೆಲಸ ಮಾಡಲು ಯಾವ ರೀತಿಯ ಸಲಹೆಗಳನ್ನು ಪಾಲನೆ ಮಾಡಬೇಕು ತಿಳಿದುಕೊಳ್ಳಿ.
ನಿಮಗೆ ತಿಳಿದಿರಬಹುದು, ನಿಯಮಿತವಾಗಿ ಹೊಸ ಭಾಷೆ, ಆಟಗಳನ್ನು ಕಲಿಯುವುದರಿಂದ ಮೆದುಳಿಗೆ ವ್ಯಾಯಾಮ ಸಿಗುತ್ತದೆ. ಜೊತೆಗೆ ಅವು ಮೆದುಳಿನ ವಿವಿಧ ಭಾಗಗಳನ್ನು ಉತ್ತೇಜಿಸುತ್ತವೆ ಮತ್ತು ಸ್ಮರಣ ಶಕ್ತಿಯನ್ನು ಸುಧಾರಿಸುತ್ತವೆ. ಏಕೆಂದರೆ ಯಾವತ್ತಿಗೂ ಹೊಸ ವಿಷಯಗಳನ್ನು ಕಲಿಯುವುದು ಮೆದುಳನ್ನು ಹೆಚ್ಚು ಸಕ್ರಿಯಗೊಳಿಸುತ್ತದೆ. ಆದರೆ ಏನನ್ನಾದರೂ ಕಲಿಯುವಾಗ ಸಾಧ್ಯವಾದಷ್ಟು ಇಂದ್ರಿಯಗಳನ್ನು ಬಳಸಬೇಕು. ಇದು ಬಹಳ ಮುಖ್ಯವಾಗುತ್ತದೆ. ಅಂದರೆ ಓದುವಾಗ, ಕೇಳುವಾಗ, ನೋಡುವಾಗ, ಅಥವಾ ರುಚಿ ನೋಡುವಾಗ ಮತ್ತು ಪರಿಮಳವನ್ನು ಗ್ರಹಿಸುವಾಗ ಹೆಚ್ಚು ಇಂದ್ರಿಯಗಳನ್ನು ಬಳಸುವುದು ಮೆದುಳಿನ ಹೆಚ್ಚಿನ ಭಾಗಗಳನ್ನು ಉತ್ತೇಜಿಸುತ್ತದೆ. ಇದಲ್ಲದೆ, ಮಾಹಿತಿಯನ್ನು ಸಹ ಚೆನ್ನಾಗಿ ನೆನಪಿಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಹಾಗಾದರೆ ವಿಷಯಗಳನ್ನು ನೆನಪಿಟ್ಟುಕೊಳ್ಳಲು ಏನು ಮಾಡಬೇಕು?
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ