ವಿರಾಟ್ ಕೊಹ್ಲಿ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ವಿಶ್ವದ ಅತ್ಯಂತ ಜನಪ್ರಿಯ ಕ್ರಿಕೆಟಿಗರಲ್ಲಿ ಕೊಹ್ಲಿ ಅಗ್ರಗಣ್ಯರಾಗಿದ್ದಾರೆ. ಅವರ ಅದ್ಭುತ ಬ್ಯಾಟಿಂಗ್ ಶೈಲಿ ಮಾತ್ರವಲ್ಲ ಇಲ್ಲಿಯವರೆಗೆ ಅವರು ಕಾಪಾಡಿಕೊಂಡು ಬಂದ ಫಿಟ್ನೆಸ್ ಮತ್ತು ಆರೋಗ್ಯಕರ ಜೀವನಶೈಲಿ ಎಲ್ಲರನ್ನು ಆಕರ್ಷಿಸುವಂತದ್ದು. ನಿಮಗೆ ತಿಳಿದಿರಬಹುದು ಅಷ್ಟು ಆರೋಗ್ಯವಾಗಿ ದೇಹವನ್ನು ನೋಡಿಕೊಳ್ಳಲು ಅವರು ವ್ಯಾಯಾಮದ ಜೊತೆಗೆ ಆರೋಗ್ಯಕರ ಆಹಾರವನ್ನು ಸಹ ಸೇವನೆ ಮಾಡುತ್ತಾರೆ. ಇತ್ತೀಚೆಗೆ, ವಿರಾಟ್ ಕೊಹ್ಲಿ ಅವರು ಸಂದರ್ಶನವೊಂದರಲ್ಲಿ, ತಮ್ಮ ಫಿಟ್ನೆಸ್ ಗೆ ಸಂಬಂಧಿಸಿದ ಕೆಲವು ಸೀಕ್ರೆಟ್ ಗಳನ್ನು ಬಹಿರಂಗಪಡಿಸಿದ್ದಾರೆ. ಅದರಲ್ಲಿ ಅವರು ತಾನು ಯಾಕಾಗಿ ಮಾಂಸಾಹಾರ ತೊರೆದು ಸಸ್ಯಾಹಾರಿ ಆದೆ, ಅದಕ್ಕೆ ಕಾರಣವೇನಿತ್ತು? ಎಂಬುದರ ಕುರಿತು ಕೆಲವು ಆರೋಗ್ಯಕರ ಮಾಹಿತಿಗಳನ್ನು ಹಂಚಿಕೊಂಡಿದ್ದು ನಿಮಗೂ ಈ ರೀತಿಯ ಸಮಸ್ಯೆಗಳು ಕಂಡು ಬಂದರೆ ಕೊಹ್ಲಿ ಅವರ ಫಿಟ್ನೆಸ್ ಸೀಕ್ರೆಟ್ ಅನ್ನು ಅನುಸರಿಸಬಹುದಾಗಿದೆ.
ಜಗತ್ತಿನ ಅತ್ಯಂತ ಶ್ರೇಷ್ಠ ಆಟಗಾರ ವಿರಾಟ್ ಕೊಹ್ಲಿ ಸಸ್ಯಾಹಾರಿಯಾಗುವುದರ ಹಿಂದೆಯೂ ಒಂದು ಬಲವಾದ ಕಾರಣವಿದೆ. ಸಂದರ್ಶನದಲ್ಲಿ ಹೇಳಿರುವ ಪ್ರಕಾರ ಅವರಿಗೆ 2018 ರ ಸಮಯದಲ್ಲಿ ದೇಹದಲ್ಲಿ ಸಾಕಷ್ಟು ನೋವು ಕಂಡು ಬರುತ್ತಿದ್ದು ವೈದ್ಯರ ಬಳಿ ಈ ವಿಚಾರವಾಗಿ ಪರೀಕ್ಷೆ ಮಾಡಿಸಿಕೊಂಡಾಗ ಅವರ ದೇಹದಲ್ಲಿ ಯೂರಿಕ್ ಆಮ್ಲದ ಪ್ರಮಾಣ ಹೆಚ್ಚಾಗಿದ್ದು, ಯೂರಿಕ್ ಆಸಿಡ್ ಸಮಸ್ಯೆ ಇರುವುದು ತಿಳಿದು ಬಂದಿದೆ. ಇದರಿಂದಾಗಿ ಅವರಿಗೆ ಆರೋಗ್ಯ ಸಮಸ್ಯೆ ಹೆಚ್ಚಾಗಿದೆ ಎಂಬುದು ಅವರಿಗೆ ಅರಿವಾಗಿದ್ದು ಇದನ್ನು ಕಡಿಮೆ ಮಾಡಿಕೊಂಡು ಆರೋಗ್ಯವಾಗಿರಲು, ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳುವುದು ಬಹಳ ಮುಖ್ಯವಾದ್ದರಿಂದ, ತಮ್ಮ ಆಹಾರಕ್ರಮವನ್ನು ಬದಲಾಯಿಸಲು ನಿರ್ಧರಿಸಿ ಮಾಂಸಾಹಾವನ್ನು ತ್ಯಜಿಸಿ ಸಸ್ಯಾಹಾರಿಯಾದರು.
ಯೂರಿಕ್ ಆಮ್ಲವು ದೇಹದಲ್ಲಿ ಉತ್ಪತ್ತಿಯಾಗುವ ಒಂದು ರೀತಿಯ ತ್ಯಾಜ್ಯವಾಗಿದೆ. ಇದು ದೇಹದಲ್ಲಿ ದೊಡ್ಡ ಪ್ರಮಾಣದಲ್ಲಿ ಸಂಗ್ರಹವಾದಾಗ, ಇದು ಸಂಧಿವಾತ, ಮೂತ್ರಪಿಂಡದಲ್ಲಿ ಕಲ್ಲುಗಳ ಸಮಸ್ಯೆ ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಮಾಂಸಾಹಾರವನ್ನು ತ್ಯಜಿಸಿದ ಮೇಲೆ ಅವರ ದೇಹದಲ್ಲಿ ಅನೇಕ ರೀತಿಯ ಬದಲಾವಣೆಗಳಾಗಿದ್ದು ಯೂರಿಕ್ ಆಸಿಡ್ ಸಮಸ್ಯೆಯೂ ಕಡಿಮೆಯಾಯಿತು ಎಂದು ವಿರಾಟ್ ಕೊಹ್ಲಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ತಡವಾದ ಗರ್ಭಧಾರಣೆ, ನಿಮ್ಮ ಮಗುವಿನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದೇ?
ಪ್ಯೂರಿನ್ ಅಧಿಕವಾಗಿ ಇರುವ ಆಹಾರ ಸೇವನೆ ಮಾಡಿದರೆ, ಯೂರಿಕ್ ಆಮ್ಲವು ಉತ್ಪತ್ತಿ ಆಗುತ್ತದೆ. ಹಾಗಾಗಿ ಇದನ್ನು ತಡೆಯಲು ಪ್ಯೂರಿನ್ ಕಡಿಮೆ ಇರುವ ಆಹಾರ ಸೇವನೆ ಮಾಡುವುದು ತುಂಬಾ ಉತ್ತಮ. ಅಂದರೆ ಹೆಚ್ಚಿನ ಹಣ್ಣುಗಳಲ್ಲಿ ಪ್ಯೂರಿನ್ ಕಡಿಮೆ ಇದ್ದು ಅದನ್ನು ಸೇವಿಸಬಹುದು. ಕೆಲವು ತರಕಾರಿಗಳಲ್ಲಿ ಪ್ಯೂರಿನ್ ಕಡಿಮೆ ಇರುತ್ತದೆ ಅವುಗಳನ್ನು ಸೇವನೆ ಮಾಡಬಹುದು. ಉದಾಹರಣೆಗೆ: ದೊಣ್ಣೆ ಮೆಣಸು, ಸೌತೆಕಾಯಿ, ಕ್ಯಾರೇಟ್ ಮತ್ತು ಹಸಿರೆಲೆ ತರಕಾರಿಗಳನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ ಇದು ಆರೋಗ್ಯಕ್ಕೆ ಒಳ್ಳೆಯದು. ಇದಲ್ಲದೆ ಕಡಿಮೆ ಕೊಬ್ಬಿನಂಶವಿರುವ ಹಾಲಿನ ಉತ್ಪನ್ನಗಳನ್ನು ಅಂದರೆ ಹಾಲು, ಮೊಸರು ಮತ್ತು ಚೀಸ್ ಗಳನ್ನು ಸೇವನೆ ಮಾಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ