ಬೆಳಿಗ್ಗೆ ಅಲಾರಂ ಆಗದ ಹೊರತು ಎಚ್ಚರಿಕೆಯೇ ಆಗುವುದಿಲ್ಲ ಎಂಬ ಮಾತನ್ನು ನೀವು ಆಗಾಗ ಕೇಳಿರಬಹುದು. ನಮಗೆ ಎಚ್ಚರ ಆಗಬೇಕಾದರೆ ಅಲಾರಂ ಸದ್ದು ನಮ್ಮ ಕಿವಿಗೆ ಬೀಳಬೇಕು ಆಗ ಮಾತ್ರ ನಾವು ಎದ್ದೇಳುತ್ತೇವೆ ಎನ್ನುವವರು ನಮ್ಮ ಮಧ್ಯೆಯೇ ಇದ್ದಾರೆ. ಇದರಿಂದ ನಮಗೆ ನೈಸರ್ಗಿಕವಾಗಿ ಏಳುವ ಕ್ರಮವೇ ತಪ್ಪಿಹೋಗಿದೆ. ನಿಮಗೆ ಅನಿಸಬಹುದು ಹೇಗೆ ಬೆಳಗಾದರೆ ಏನು? ಏಳುವುದು ಮುಖ್ಯ ಎಂದು ಹೇಳಬಹುದು. ಆದರೆ ಅದು ತಪ್ಪು. ನಾವು ಬೆಳಗ್ಗೆ ಏಳುವುದಕ್ಕಾಗಿ ರೂಢಿಸಿಕೊಂಡಿರುವ ಕ್ರಮ ಸರಿಯಾಗಿಲ್ಲ ಎಂದು ತಜ್ಞರು ಹೇಳುತ್ತಾರೆ. ಹಾಗಾದರೆ ಯಾಕೆ ಅಲಾರಂ ಇಟ್ಟು ಏಳಬಾರದು? ಇದು ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ? ಎಂಬುದರ ಬಗ್ಗೆ ತಜ್ಞರು ನೀಡಿರುವ ಸಂಪೂರ್ಣ ಮಾಹಿತಿ ಇಲ್ಲಿದೆ.
ಹೈದರಾಬಾದ್ ಅಪೋಲೋ ಆಸ್ಪತ್ರೆಯ ನರರೋಗ ತಜ್ಞ ಡಾ. ಸುಧೀರ್ ಕುಮಾರ್ ಅವರು ಈ ವಿಷಯವಾಗಿ ಕೆಲವು ಮಾಹಿತಿಗಳನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅವರು ಹೇಳುವ ಪ್ರಕಾರ “ಅಲಾರಂ ಇಟ್ಟು ಎದ್ದೇಳುವವರು, ನೈಸರ್ಗಿಕವಾಗಿ ಏಳುವವರಿಗಿಂತ (ಅಲಾರಂ ಇಲ್ಲದೆ) ಹೆಚ್ಚಾಗಿ ಬಿಪಿ ಸಮಸ್ಯೆಯಿಂದ ಬಳಲುತ್ತಾರೆ. ಹಾಗಾಗಿಯೇ ಅಲಾರಂ ಇಟ್ಟು ಏಳುವವರಲ್ಲಿ ಇತರರಿಗೆ ಹೋಲಿಸಿದರೆ 74% ಹೆಚ್ಚು ರಕ್ತದೊತ್ತಡ ಸಮಸ್ಯೆಯು ಗಮನಾರ್ಹವಾಗಿ ಏರಿಕೆಯಾಗಿರುವುದು ಕಂಡು ಬಂದಿದೆ. ಅಲ್ಲದೆ 7 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುವವರಲ್ಲಿಯೂ (ಬೇಗ ಎಚ್ಚರಗೊಳ್ಳುವವರಲ್ಲಿಯೂ) ಬಿಪಿ ಹೆಚ್ಚಳವು ಹೆಚ್ಚು” ಎಂದು ಅವರು ಹೇಳುತ್ತಾರೆ.
“ಈ ರೀತಿ ಬಿಪಿಯ ಉಲ್ಬಣವು ಹೃದಯಾಘಾತ ಮತ್ತು ಪಾರ್ಶ್ವವಾಯುವಿನ ಅಪಾಯವನ್ನು ಹೆಚ್ಚಿಸುತ್ತದೆ. ಅದರಲ್ಲಿಯೂ ಮೊದಲೇ ಹೃದ್ರೋಗ ಅಥವಾ ಅಧಿಕ ರಕ್ತದೊತ್ತಡ ಸಮಸ್ಯೆ ಇದ್ದರೆ ಅಂತವರಲ್ಲಿ ಈ ಅಪಾಯ ಹೆಚ್ಚು. ಗಾಢ ನಿದ್ರೆಯಲ್ಲಿದ್ದಾಗ ಅಲಾರಂ ಶಬ್ದ ನಿಮ್ಮನ್ನು ಇದ್ದಕ್ಕಿದ್ದಂತೆ ಎಚ್ಚರಗೊಳಿಸಬಹುದು ಇದರಿಂದ ನಿಮ್ಮ ದೇಹ ಗಲಿಬಿಲಿಗೊಳ್ಳಬಹುದು. ಜೊತೆಗೆ ಇದು ನಿಮ್ಮ ಒತ್ತಡವನ್ನೂ ಹೆಚ್ಚಿಸಬಹುದು” ಎಂದು ಡಾ. ಸುಧೀರ್ ಹೇಳುತ್ತಾರೆ.
ಇದನ್ನೂ ಓದಿ: ಮಳೆಗಾಲದಲ್ಲಿ ಅಡುಗೆಗೆ ಈ ಎಣ್ಣೆಯನ್ನು ಬಳಸಬೇಡಿ
ಆರೋಗ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ