
ಕೆಲವು ನಿಮಿಷಗಳ ಕಾಲ ಮಾತಾಡಲು ತೊಂದರೆ, ಕೈ- ಕಾಲುಗಳಲ್ಲಿ ದಿಢೀರ್ ದುರ್ಬಲತೆ ಅಥವಾ ದೃಷ್ಟಿ ಮಸುಕಾಗುವುದು ಕಾಣಿಸಿಕೊಂಡು ಬಳಿಕ ಸಹಜ ಸ್ಥಿತಿಗೆ ಮರಳಿದರೆ ಅದನ್ನು ಸಾಮಾನ್ಯ ಸಮಸ್ಯೆ ಎಂದು ನಿರ್ಲಕ್ಷಿಸಬೇಡಿ. ಇದು ಗಂಭೀರ ಆರೋಗ್ಯ ಸಮಸ್ಯೆಯ ಸೂಚನೆಯಾಗಿರಬಹುದು. ಹೌದು. ಈ ರೀತಿಯಾಗುವುದು ಟ್ರಾನ್ಸಿಯಂಟ್ ಇಸ್ಕೆಮಿಕ್ ಅಟ್ಯಾಕ್ (TIA) ಅಥವಾ ಮಿನಿ ಸ್ಟ್ರೋಕ್ (Mini Stroke) ಆಗಿರಬಹುದು. ಇದು ಮುಂದಿನ ದಿನಗಳಲ್ಲಿ ಸಂಭವಿಸಬಹುದಾದ ದೊಡ್ಡ ಸ್ಟ್ರೋಕ್‌ಗೆ ಮುನ್ನೆಚ್ಚರಿಕೆ ನೀಡುವ ಪ್ರಮುಖ ಸಂಕೇತವೂ ಆಗಿರಬಹುದು .
ಸಾಮಾನ್ಯವಾಗಿ ಮಿನಿ ಸ್ಟ್ರೋಕ್ (TIA) ಸಂದರ್ಭದಲ್ಲಿ ಮೆದುಳಿನ ಒಂದು ಭಾಗಕ್ಕೆ ಕೆಲಕಾಲ ರಕ್ತಸಂಚಾರ ಕಡಿಮೆಯಾಗುತ್ತದೆ. ಲಕ್ಷಣಗಳು ಕೆಲವೇ ನಿಮಿಷಗಳಲ್ಲಿ ಮಾಯವಾದರೂ ಅಪಾಯ ಸಂಪೂರ್ಣವಾಗಿ ತಪ್ಪಿದೆ ಎಂದರ್ಥವಲ್ಲ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದಿದ್ದರೆ ಭವಿಷ್ಯದಲ್ಲಿ ಗಂಭೀರ ಸ್ಟ್ರೋಕ್ ಸಂಭವಿಸುವ ಸಾಧ್ಯತೆ ಹೆಚ್ಚುತ್ತದೆ.
ಈ ಲಕ್ಷಣಗಳು 5–10 ನಿಮಿಷಗಳಲ್ಲಿ ಕಡಿಮೆಯಾದರೂ ಕೂಡ ತಕ್ಷಣ ಆಸ್ಪತ್ರೆಗೆ ತೆರಳಬೇಕು.
ಇದನ್ನೂ ಓದಿ: ಮೈಗ್ರೇನ್ ಮತ್ತು ರಕ್ತಹೀನತೆಗೆ ಸಂಬಂಧವಿದೆಯೇ? ಅಧ್ಯಯನದ ತಿಳಿದುಬಂದ ಅಚ್ಚರಿ ಮಾಹಿತಿ ಇಲ್ಲಿದೆ
ಅಧಿಕ ರಕ್ತದೊತ್ತಡ, ಮಧುಮೇಹ, ಅಧಿಕ ಕೊಲೆಸ್ಟ್ರಾಲ್, ಧೂಮಪಾನ, ಬೊಜ್ಜು, ಹೃದಯದ ಸಮಸ್ಯೆಗಳು, 55 ವರ್ಷಕ್ಕಿಂತ ಮೇಲ್ಪಟ್ಟವರು ಹಾಗೂ ಕುಟುಂಬದಲ್ಲಿ ಸ್ಟ್ರೋಕ್ ಇತಿಹಾಸವಿರುವವರಿಗೆ ಅಪಾಯ ಹೆಚ್ಚಿರುತ್ತದೆ.
ಸ್ಟ್ರೋಕ್ ಚಿಕಿತ್ಸೆಯಲ್ಲಿ ಪ್ರತಿಯೊಂದು ನಿಮಿಷವೂ ಅಮೂಲ್ಯ. ಸಮಯಕ್ಕೆ ಆಸ್ಪತ್ರೆಗೆ ತಲುಪಿದರೆ ಮೆದುಳಿನ ಹಾನಿಯನ್ನು ಕಡಿಮೆ ಮಾಡುವ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ.
ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ನಿಯಮಿತವಾಗಿ ಪರೀಕ್ಷಿಸಿಕೊಳ್ಳಿ. ಆರೋಗ್ಯಕರ ಆಹಾರ ಸೇವಿಸಿ, ಪ್ರತಿದಿನ ಕನಿಷ್ಠ 30 ನಿಮಿಷ ವ್ಯಾಯಾಮ ಮಾಡಿ, ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರಿ. ವೈದ್ಯರು ಸೂಚಿಸಿದ ಔಷಧಿಗಳನ್ನು ನಿಯಮಿತವಾಗಿ ಸೇವಿಸುವುದು ಹಾಗೂ ಮಿನಿ ಸ್ಟ್ರೋಕ್ ಆಗಿದ್ದರೆ ಫಾಲೋ-ಅಪ್ ಪರೀಕ್ಷೆಗಳನ್ನು ತಪ್ಪದೇ ಮಾಡಿಸಿಕೊಳ್ಳುವುದು ಅತ್ಯಗತ್ಯ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ