Pilonidal Sinus: ಪಿಲೋನಿಡಲ್ ಸೈನಸ್ ಕಾಯಿಲೆ ಎಂದರೇನು? ಅದರ ರೋಗಲಕ್ಷಣ, ಚಿಕಿತ್ಸಾ ವಿಧಾನ ಇಲ್ಲಿದೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Jul 25, 2023 | 10:52 AM

ಪಿಲೋನಿಡಲ್ ಸೈನಸ್ ಎಂದರೆ ಬೆನ್ನಿನ ಕೆಳಭಾಗದಲ್ಲಿ ಅಂದರೆ ಬೆನ್ನ ಮೂಳೆಯ ತುದಿಯಲ್ಲಿ ಚಿಕ್ಕ ತೂತು ಅಥವಾ ರಂದ್ರದಂತಹ ಬೆಳವಣಿಗೆಯಾಗಿದೆ. ಈ ಚಿಕ್ಕ ರಂದ್ರದಲ್ಲಿ ಕೀವು ತುಂಬಿಕೊಂಡು ಬೊಬ್ಬೆ ಅಥವಾ ಕೀವುಗುಳ್ಳೆ ಉಂಟಾಗುತ್ತದೆ. ಇದರಲ್ಲಿ ಕೊಳೆ ಕೂದಲು ಮತ್ತು ಸತ್ತ ಜೀವಕೋಶಗಳು ತುಂಬಿರುತ್ತವೆ. ಪರಿಣಾಮವಾಗಿ ವಿಪರಿತ ನೋವು ಮತ್ತು ಸೋಂಕು ಕಾಣಿಸಿಕೊಳ್ಳುತ್ತದೆ.

Pilonidal Sinus: ಪಿಲೋನಿಡಲ್ ಸೈನಸ್ ಕಾಯಿಲೆ ಎಂದರೇನು? ಅದರ ರೋಗಲಕ್ಷಣ, ಚಿಕಿತ್ಸಾ ವಿಧಾನ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us on

ಪಿಲೋನಿಡಲ್ ಸೈನಸ್ (Pilonidal Sinus) ಎನ್ನುವುದು ಒಂದು ಬಗೆಯ ಬಾವು. ಸಾಮಾನ್ಯವಾಗಿ ಇದು ಬೆನ್ನಿನ ಕೆಳಭಾಗದಲ್ಲಿ (ಟೈಲ್ ಬೋನ್ ಪ್ರದೇಶದಲ್ಲಿ) ಕಾಣಿಸಿಕೊಳ್ಳುತ್ತದೆ. ಈ ಕಾಯಿಲೆಯ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಹಾಗಾಗಿ ಇದರ ರೋಗಲಕ್ಷಣಗಳು ಕಂಡು ಬಂದರೂ ಇದನ್ನು ಸಾಮಾನ್ಯ ಬಾವು ಅಥವಾ ಕುರ ಎಂದು ಪರಿಗಣಿಸಿ ಅದರ ನಿವಾರಣೆಯ ಚಿಕಿತ್ಸೆಗೆ ಹೆಚ್ಚು ಗಮನ ಕೊಡುವುದಿಲ್ಲ. ಆದರೆ ಈ ಸಮಸ್ಯೆ ಮತ್ತೆ ಮತ್ತೆ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ, ಆದ್ದರಿಂದ ಈ ಬಗ್ಗೆ ಯಾವುದೇ ನಿರ್ಲಕ್ಷ್ಯವನ್ನು ತೋರದೆ ವೈದ್ಯರ ಸಲಹೆಯ ಮೇರೆಗೆ ಸೂಕ್ತ ಚಿಕಿತ್ಸೆಗಳನ್ನು ಪಡೆಯಬೇಕು.

ಪಿಲೋನಿಡಲ್ ಸೈನಸ್​​ನ ಲಕ್ಷಣಗಳು:

ಪೈಲೋನಿಡಲ್ ಸೈನಸ್ ನಿಂದ ಬಳಲುತ್ತಿರುವ ಸಂದರ್ಭದಲ್ಲಿ ನೀವು ಕೆಲವು ರೋಗಲಕ್ಷಣಗಳನ್ನು ಅನುಭವಿಸಬಹುದು. ರೋಗಲಕ್ಷಣಗಳು ಪತ್ತೆಯಾದ ತಕ್ಷಣ ನೀವು ಚಿಕಿತ್ಸೆ ನೀಡಿದರೆ ಈ ಸಮಸ್ಯೆಯನ್ನು ಕಡಿಮೆ ಸಮಯದಲ್ಲಿ ಬಹಳ ಸುಲಭವಾಗಿ ಪರಿಹರಿಸಬಹುದು.

• ಪಿಲೋನಿಡಲ್ ಸೈನಸ್ ಸಾಮಾನ್ಯವಾಗಿ ಸೋಂಕಿಗೆ ಒಳಗಾದಾಗ ಮಾತ್ರ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ.

• ಬಾವು ಕಾಣಿಸಿಕೊಂಡ ಪ್ರದೇಶದಲ್ಲಿ ತೀವ್ರವಾದ ನೋವು, ಕುಳಿತುಕೊಂಡಾಗ ಆ ನೋವು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

• ಬಾವು ಉಲ್ಬಣಗೊಂಡಾಗ ಕೀವು ಮತ್ತು ರಕ್ತ ಕಾಣಿಸಿಕೊಳ್ಳುತ್ತದೆ.

• ಕೆಲವೊಮ್ಮೆ ನೋವಿನಿಂದ ಜ್ವರ ಕೂಡ ಬರುವ ಸಾಧ್ಯತೆಯಿದೆ.

ಪಿಲೋನಿಡಲ್ ಸೈನಸ್​​ಗೆ ಕಾರಣವೇನು:

ಪೈಲೋನಿಡಲ್ ಸೈನನ್ ಗೆ ನಿಖರವಾದ ಕಾರಣ ತಿಳಿದಿಲ್ಲ. ಹಾರ್ಮೋನು ಬದಲಾವಣೆ, ಕೂದಲಿನ ಬೆಳವಣಿಗೆ ಮತ್ತು ಬಿಗಿ ಉಡುಪುಗಳನ್ನು ಧರಿಸುವುದು ಮತ್ತು ಹೆಚ್ಚು ಕಾಲ ಕುಳಿತಿರುವುದರಿಂದ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅಲ್ಲದೆ ಅತಿಯಾದ ಬೆವರುವಿಕೆಯು ಪಿಲೋನಿಡಲ್ ಸೈನಸ್​ಗೆ ಕಾರಣವಾಗಬಹುದು. ಏಕೆಂದರೆ ಬೆವರು ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಈ ಬ್ಯಾಕ್ಟೀರಿಯಾವು ಪಿಲೋನಿಡಲ್ ರಂಧ್ರದೊಳಗೆ ಸೋಂಕನ್ನು ಉಂಟುಮಾಡಬಹುದು. ಇದು ವಿವಿಧ ರೋಗಲಕ್ಷಣಗಳನ್ನು ಉಂಟುಮಾಡಬಹುದು. ಸಾಮಾನ್ಯವಾಗಿ ಪಿಲೋನಿಡಲ್ ರೋಗಲಕ್ಷಣಗಳು ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಏಕೆಂದರೆ ಮಹಿಳೆಯರಿಗಿಂತ ಪುರುಷರು ಹೆಚ್ಚಾಗಿ ದೇಹದಲ್ಲಿ ಕೂದಲನ್ನು ಹೊಂದಿರುತ್ತಾರೆ.

ಇದನ್ನೂ ಓದಿ: ದೇಹಕ್ಕೆ ಯಾವ ರೀತಿಯ ಓಟ್ಸ್ ಉತ್ತಮ? ಅದರ ವಿಧಗಳಾವುವು? ಇಲ್ಲಿದೆ ಮಾಹಿತಿ

ಪಿಲೋನಿಡಲ್ ಸೈನಸ್​​​ನ ಕೆಲವು ಅಪಾಯಕಾರಿ ಅಂಶದ ಬಗ್ಗೆ ತಿಳಿಯಿರಿ:

ಲಿಂಗ: ಮಹಿಳೆಯರಿಗಿಂತ ಪುರುಷರಲ್ಲಿ ಈ ಸ್ಥಿತಿಯು 4 ಪಟ್ಟು ಹೆಚ್ಚು ಕಾಣಿಸಿಕೊಳ್ಳುತ್ತದೆ. ಅಂದರೆ ಈ ಕಾಯಿಲೆಯು ಸಾಮಾನ್ಯವಾಗಿ ಪುರುಷರಿಗೆ ಭಾದಿಸುತ್ತದೆ.

ವಯಸ್ಸು: 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜನರು ಈ ರೋಗವನ್ನು ಅಭಿವೃದ್ಧಿಪಡಿಸುವ ಸಾಧ್ಯತೆ ಹೆಚ್ಚು.

ಕೆಲಸದ ಪ್ರಕಾರ: ಡ್ರೆವಿಂಗ್ ಮತ್ತು ಕಛೇರಿಯಂತಹ ದೀರ್ಘಕಾಲ ಕುಳಿತುಕೊಂಡು ಕೆಲಸ ಮಾಡುವ ಜನರು ಈ ರೋಗಲಕ್ಷಣವನ್ನು ಉಂಟು ಮಾಡುವ ಸಾಧ್ಯತೆ ಹೆಚ್ಚು.

ತೂಕ: ಬೊಜ್ಜು ಮತ್ತು ಅಧಿಕ ತೂಕವನ್ನು ಹೊಂದಿರುವ ಜನರು ಪಿಲೋನಿಡಲ್ ಸೈನಸ್​​ನ್ನು ಹೆಚ್ಚಿಸುವ ಸಾಧ್ಯತೆಯಿದೆ.

ಕೂದಲು: ದಪ್ಪ ಅಥವಾ ಒರಟು ದೇಹಕೂದಲನ್ನು ಹೊಂದಿರುವವರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳಬಹುದು

ಬಟ್ಟೆ: ಬಿಗಿಯಾದ ಉಡುಪು ಧರಿಸುವುದು ಕೂಡಾ ಇದಕ್ಕೆ ಮುಖ್ಯ ಕಾರಣ.

ಪಿಲೋನಿಡಲ್ ಸೈನಸ್​​ಗೆ ಹೇಗೆ ಚಿಕಿತ್ಸೆ ನೀಡಲಾಗುತ್ತದೆ:

ಕನ್ಸರ್ವೇಟಿವ್ ಚಿಕಿತ್ಸೆ (ಪ್ರತಿಜೀವಕ ಔಷಧಿಗಳು):

ನೀವು ಈ ರೋಗದ ಪ್ರಕರಣವನ್ನು ಮೊದಲೇ ಗುರುತಿಸಿ, ನೋವು ಮತ್ತು ಉರಿಯೂತದ ಲಕ್ಷಣಗಳು ಇಲ್ಲವೆಂದಾದರೆ ವೈದ್ಯರು ಕೇವಲ ಪ್ರತಿಜೀವಕ ಔಷಧಿಗಳನ್ನು ನೀಡುವ ಸಾಧ್ಯತೆಯಿದೆ. ಏಕೆಂದರೆ ಪ್ರತಿಜೀವಕ ಔಷಧಿಗಳು ಕೀವು ಉಂಟಾದ ಪ್ರದೇಶದಲ್ಲಿನ ಬ್ಯಾಕ್ಟೀರಿಯಾಗಳನ್ನು ಕೊಲ್ಲಲು ಸಹಾಯ ಮಾಡುತ್ತದೆ. ಇದು ಸೈನಸ್​​​ನ್ನು ಸಂಪೂರ್ಣವಾಗಿ ಗುಣಪಡಿಸುವುದಿಲ್ಲ. ಆದರೆ ಇದು ನಿಮಗೆ ಸೋಂಕು ಮತ್ತು ಅಸ್ವಸ್ಥತೆಯಿಂದ ಪರಿಹಾರ ನೀಡುತ್ತದೆ.

ಲ್ಯಾನ್ಸಿಂಗ್:

ಪಿಲೋನಿಡಲ್ ಸೈನಸ್ ಒಳಗಿರುವ ಸೋಂಕು ಮತ್ತು ಕೀವುನ್ನು ತೆಗೆದು ಹಾಕಿ ನೋವನ್ನು ನಿವಾರಿಸುವ ವಿಧಾನವೇ ಲ್ಯಾನ್ಸಿಂಗ್. ಈ ಚಿಕಿತ್ಸಾ ವಿಧಾನದಲ್ಲಿ ಸ್ಥಳಿಯ ಅರವಳಿಕೆಯ ಮದ್ದನ್ನು ನೀಡಿ, ಸ್ಕಾಲ್ಪೆಲ್ ಎಂಬ ಉಪಕರಣವನ್ನು ಬಳಸಿ ಬಾವು ಕಾಣಿಸಿಕೊಂಡಿರುವ ಪ್ರದೇಶದ ಚರ್ಮವನ್ನು ಕತ್ತರಿಸಿ, ಚರ್ಮದೊಳಗಿನ ಕೀವು, ರಕ್ತ ಮತ್ತು ಅದರಲ್ಲಿ ಬೆಳೆದ ಕೂದಲನ್ನು ತೆಗೆದು ಸ್ವಚ್ಛಗೊಳಿಸುತ್ತಾರೆ. ಬಳಿಕ ಕತ್ತರಿಸಿದ ಚರ್ಮವನ್ನು ಹೊಲಿದು ಬ್ಯಾಂಡೆಜು ಹಾಕುತ್ತಾರೆ. ಸಾಮಾನ್ಯವಾಗಿ ಈ ಗಾಯವು ನಾಲ್ಕು ವಾರಗಳಲ್ಲಿ ವಾಸಿಯಾಗುತ್ತದೆ. ಮತ್ತು ಹೆಚ್ಚಿನ ಜನರಿಗೆ ಈ ಚಿಕಿತ್ಸೆಯ ಬಳಿಕ ಬೇರೆ ಯಾವುದೇ ಹೆಚ್ಚಿನ ಚಿಕಿತ್ಸೆಯ ಅಗತ್ಯವಿರುವುದಿಲ್ಲ.

ಫಿನಾಲ್ ಇಂಜೆಕ್ಷನ್:

ಇದೊಂದು ಬಗೆಯ ಚುಚ್ಚುಮದ್ದು ಚಿಕಿತ್ಸೆಯಾಗಿದೆ. ಮೊದಲಿಗೆ ಕೀವು ಕಾಣಿಸಿಕೊಂಡ ಸ್ಥಳಕ್ಕೆ ಅರವಳಿಕೆ ಮದ್ದನ್ನು ನೀಡಿ, ಬಳಿಕ ಪ್ರತಿಜೀವಕ ಔಷಧಿಯಾದ ಫಿನಾಲ್ ಎಂಬ ನಂಜುನಿವಾರಕ ರಾಸಾಯನಿಕ ದ್ರವವನ್ನು ಬೆನ್ನ ಕೆಳಭಾಗದಲ್ಲಿ ಕಾಣಿಸಿಕೊಂಡ ಬಾವುಗೆ ಚುಚ್ಚು ಮದ್ದಿನ ಮೂಲಕ ನೀಡಲಾಗುತ್ತದೆ. ರೋಗ ಲಕ್ಷಣದ ತೀವ್ರತೆ ಗಮನಿಸಿ ಒಂದಕ್ಕಿಂತ ಹೆಚ್ಚು ಬಾರಿ ಈ ಚುಚ್ಚು ಮದ್ದು ಚಿಕಿತ್ಸೆಯನ್ನು ಪಡೆಯಬೇಕಾಗುತ್ತದೆ. ಈ ಚಿಕಿತ್ಸೆಯ ಬಳಿಕ ಬಾವು ಪುನಃ ಕಾಣಿಸಿಕೊಂಡರೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡಲು ಸಲಹೆ ನೀಡಬಹುದು.

ಶಸ್ತ್ರ ಚಿಕಿತ್ಸೆ:

ಪಿಲೋನಿಡಲ್ ಸೈನಸ್ ಪದೇ ಪದೇ ಕಾಣಿಸಿಕೊಂಡರೆ ವೈದ್ಯರು ಇದನ್ನು ಶಸ್ತ್ರ ಚಿಕಿತ್ಸೆಯ ಮೂಲಕ ತೆಗೆದುಹಾಕುತ್ತಾರೆ. ವೈದ್ಯರು ಶಸ್ತ್ರಚಿಕಿತ್ಸೆಯ ಮೂಲಕ ಪಿಲೋನಿಡಲ್ ಸೈನಸ್ ಕಾಣಿಸಿಕೊಂಡ ಪ್ರದೇಶದಲ್ಲಿ ಕೀವು, ಕೂದಲು, ಮತ್ತು ಪದೇ ಪದೇ ಕಾಣಿಸಿಕೊಳ್ಳಲು ಕಾರಣವಾಗುವ ಸೋಂಕಿನ ಅಂಶವನ್ನು ತೆಗೆದುಹಾಕುತ್ತಾರೆ.

ಪಿಲೋನಿಡಲ್ ಸೈನಸ್​​ನಲ್ಲಿ ಗಮನಿಸಬೇಕಾದ ಅಂಶಗಳು:

• ಹತ್ತಿ ಬಟ್ಟೆಯ ಒಳ ಉಡುಪುಗಳನ್ನು ಧರಿಸಿ

• ಪೀಡಿತ ಪ್ರದೇಶವನ್ನು ಶುಷ್ಕ ಮತ್ತು ಸ್ವಚ್ಛವಾಗಿಡಿ

• ಹೆಚ್ಚು ಸಮಯ ಕುಳಿತುಕೊಳ್ಳಬೇಡಿ

• ನಿಮ್ಮ ಆಹಾರದಲ್ಲಿ ಬೆಳ್ಳುಳ್ಳಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿ

• ಓಡಬೇಡಿ ಅಥವಾ ಯಾವುದೇ ಭಾರೀ ವ್ಯಾಯಾಮ ಮಾಡಬೇಡಿ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:33 am, Tue, 25 July 23