ಮಂಕಿಪಾಕ್ಸ್ (Monkeypox)ಸೋಂಕಿಗೆ ಒಳಗಾಗಿರುವ ಜನರು ತಮ್ಮ ಸಾಕುಪ್ರಾಣಿಗಳಿಂದ ದೂರವಿರಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಫ್ರಾನ್ಸ್‌ನಲ್ಲಿ ವ್ಯಕ್ತಿಯಿಂದ ನಾಯಿಗೆ ವೈರಸ್ ಹರಡಿದ ಮೊದಲ ಪ್ರಕರಣ ದಾಖಲಾಗಿದ್ದು, ಸೋಂಕು ತಗುಲಿದ ವ್ಯಕ್ತಿಯು ಪ್ರಾಣಿಗಳಿಂದ ದೂರವಿರಬೇಕು ಎಂದು ಹೇಳಲಾಗಿದೆ.
ನಾಯಿಗಳು ಈ ಹಿಂದೆ ಸೋಂಕಿಗೆ ಒಳಗಾಗಿವೆ ಎಂದು ಎಲ್ಲಿಯೂ ವರದಿಯಾಗಿಲ್ಲ. ಆದ್ದರಿಂದ, ಇದೊಂದು ಹೊಸ ಪ್ರಕರಣ ಎಂದೇ ಹೇಳಬಹುದು, ಆದರೆ ಇದು ಆಶ್ಚರ್ಯಕರವಾದ ಮಾಹಿತಿಯಲ್ಲ, ಮತ್ತು ಈ ಮೊದಲೇ ಗಮನಹರಿಸಿದ್ದೇವೆ ಎಂದು ಡಾ. ಲೆವಿಸ್ ಉಲ್ಲೇಖಿಸಿದ್ದಾರೆ.
ಈಗಾಗಲೇ ಬಹುತೇಕ ರಾಷ್ಟ್ರಗಳಲ್ಲಿ ಮಂಕಿಪಾಕ್ಸ್ ಸೋಂಕು ತಗುಲಿ ಹಲವು ಜನರು ಮೃತಪಟ್ಟಿದ್ದಾರೆ. ಮಂಕಿಪಾಕ್ಸ್ ಪ್ರಪಂಚದಾದ್ಯಂತ ಹಲವಾರು ದೇಶಗಳಲ್ಲಿ ಕಳವಳಕ್ಕೆ ಒಂದು ಪ್ರಮುಖ ಕಾರಣವಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯು ಜಾಗತಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸುವುದರಿಂದ USನಲ್ಲಿ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯಾಗುವವರೆಗೆ, ಇದುವರೆಗೆ 80ಕ್ಕೂ ಹೆಚ್ಚು ದೇಶಗಳಲ್ಲಿ ವೈರಲ್ ರೋಗವನ್ನು ಪತ್ತೆಹಚ್ಚಲಾಗಿದೆ. ಇದು ಪ್ರಪಂಚದಾದ್ಯಂತ 17000 ಕ್ಕೂ ಹೆಚ್ಚು ಪ್ರಕರಣಗಳನ್ನು ಹೊಂದಿದೆ.
ತಜ್ಞರು ಸಮಸ್ಯೆಯನ್ನು ಪರಿಹರಿಸಲು ವರ್ಲ್ಡ್ ಆರ್ಗನೈಸೇಶನ್ ಆಫ್ ಅನಿಮಲ್ ಹೆಲ್ತ್ ಮತ್ತು ಫುಡ್ ಅಂಡ್ ಅಗ್ರಿಕಲ್ಚರ್ ಆರ್ಗನೈಸೇಶನ್‌ನಂತಹ ಪಾಲುದಾರರೊಂದಿಗೆ ಕೆಲಸ ಮಾಡುತ್ತಿದ್ದಾರೆ. ಸಾಕುಪ್ರಾಣಿಗಳನ್ನು ಸೋಂಕಿಗೆ ಒಳಗಾದ ಕುಟುಂಬ ಸದಸ್ಯರಿಂದ ಪ್ರತ್ಯೇಕಿಸಬೇಕು ಎಂದು ಸೂಚಿಸಲಾಗಿದೆ.
ಕಳೆದ ತಿಂಗಳಿನಿಂದ ಯುಎಸ್‌ನಲ್ಲಿ ಮಂಕಿಪಾಕ್ಸ್ ಹರಡುತ್ತಿದ್ದಂತೆ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು ಕೆಲ ಸಲಹೆಗಳನ್ನು ಹೊರಡಿಸಿದೆ. ಇದರ ಬೆನ್ನಲ್ಲೇ, ಫ್ರಾನ್ಸ್‌ನಲ್ಲಿ ನಾಯಿಯಲ್ಲಿ ವೈರಸ್ ಪತ್ತೆಯಾದ ಬಗ್ಗೆ ವರದಿಯಾಗಿದೆ.
ಫ್ರಾನ್ಸ್ ಕಳೆದ ವಾರ ಪ್ರಕಟಗೊಂಡ ವೈದ್ಯಕೀಯ ಜರ್ನಲ್‌ನಲ್ಲಿ, ಮಂಕಿಪಾಕ್ಸ್ ಸೋಂಕಿತ ದಂಪತಿಗಳಿಬ್ಬರು ತಮ್ಮ ಸಾಕು ನಾಯಿಯೊಂದಿಗೆ ಇದ್ದರು. ಇವರ ಸಂಪರ್ಕಕ್ಕೆ ಬಂದ ನಾಯಿಗೂ ಕೂಡ ವೈರಸ್ ಹರಡಿದೆ ಎಂದು ವರದಿ ತಿಳಿಸಿದೆ. ಈ ಹಿಂದೆ ಕಾಡು ಪ್ರಾಣಿಗಳಲ್ಲಿ ಮಂಕಿಪಾಕ್ಸ್ ಸೋಂಕು ಪತ್ತೆಯಾಗಿವೆ.
ಇದು ವೈರಸ್ ಅನ್ನು ಮನುಷ್ಯರಿಗೆ ಹರಡುತ್ತದೆ. ಆದರೆ, ನಾಯಿ ಅಥವಾ ಬೆಕ್ಕಿನಂತಹ ಸಾಕುಪ್ರಾಣಿಗಳಲ್ಲಿ ಮಂಕಿಪಾಕ್ಸ್ ಸೋಂಕಿನ ಮೊದಲ ವರದಿ ಇದಾಗಿದೆ.
ಮಂಕಿಪಾಕ್ಸ್ ರೋಗಲಕ್ಷಣ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕಕ್ಕೆ ಬರುವ ಸಾಕುಪ್ರಾಣಿಗಳನ್ನು 21 ದಿನಗಳವರೆಗೆ ಮನೆಯಲ್ಲಿ ಪ್ರತ್ಯೇಕವಾಗಿ ಇರಿಸಬೇಕು ಎಂದು CDC ಸಲಹೆ ನೀಡಿದೆ.
ಮಂಕಿಪಾಕ್ಸ್ ಎಂದರೇನು?
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಮಂಕಿಪಾಕ್ಸ್ ಒಂದು ವೈರಲ್ ಝೂನೋಸಿಸ್ (ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ವೈರಸ್) ಆಗಿದ್ದು, ಈ ಹಿಂದೆ ಸಿಡುಬು ರೋಗಿಗಳಲ್ಲಿ ಕಂಡುಬಂದಿದ್ದ ರೋಗಲಕ್ಷಣಗಳನ್ನು ಹೋಲುತ್ತದೆ. ಆದರೂ ಇದು ವೈದ್ಯಕೀಯವಾಗಿ ಕಡಿಮೆ ತೀವ್ರವಾಗಿರುತ್ತದೆ.
1980 ರಲ್ಲಿ ಸಿಡುಬು ನಿರ್ಮೂಲನೆಗೊಂಡಿದ್ದು ಹಾಗೂ ಅದರ ನಂತರ ಸಿಡುಬು ಲಸಿಕೆಯನ್ನು ನಿಲ್ಲಿಸಿದ ನಂತರ ಮಂಕಿಪಾಕ್ಸ್ ಪ್ರಮುಖವಾದ ಆರ್ಥೋಪಾಕ್ಸ್ ವೈರಸ್ ಆಗಿ ಹೊರಹೊಮ್ಮಿದೆ.
ಮಂಕಿಪಾಕ್ಸ್ ಲಕ್ಷಣಗಳೇನು?
ಮಂಕಿಪಾಕ್ಸ್‌ನ ಸಾಮಾನ್ಯ ಲಕ್ಷಣಗಳೆಂದರೆ ಸ್ನಾಯು ನೋವು, ತಲೆನೋವು, ಜ್ವರ, ಕಡಿಮೆ ಶಕ್ತಿ ಮತ್ತು ದುಗ್ಧರಸ ಗ್ರಂಥಿಗಳು ಊದಿಕೊಳ್ಳುವುದು. ಎಐಐಎಂಎಸ್‌ನ ವೈದ್ಯಕೀಯ ವಿಭಾಗದ ಡಾ.ಪಿಯೂಷ್ ರಂಜನ್ ಅವರ ಪ್ರಕಾರ, ಮಂಕಿಪಾಕ್ಸ್ ಲಕ್ಷಣಗಳು ಸಿಡುಬು ಮತ್ತು ಚಿಕನ್‌ಪಾಕ್ಸ್‌ನಂತಿವೆ. ರೋಗಿಗಳಿಗೆ ಜ್ವರ ಮತ್ತು ದುಗ್ಧರಸ ಗ್ರಂಥಿಗಳ ಹಿಗ್ಗುವಿಕೆ ಕಾಣಿಸಿಕೊಳ್ಳುತ್ತದೆ. 1-5 ದಿನಗಳ ನಂತರ ರೋಗಿಯು ಮುಖ, ಅಂಗೈಗಳಲ್ಲಿ ದದ್ದುಗಳು ಕಾಣಿಸಬಹುದು.
ಹಾಗೆಯೇ ಕಾರ್ನಿಯಾದಲ್ಲಿ ದದ್ದುಗಳಾಗಿ ಇದು ಕುರುಡುತನಕ್ಕೆ ಕಾರಣವಾಗಬಹುದು. ಗಾಯಗಳಿಗೆ ಕಾರಣವಾಗುವ ದದ್ದುಗಳ ಸಂಖ್ಯೆಯು ಒಂದರಿಂದ ಹಲವಾರು ಸಾವಿರದವರೆಗೆ ಇರುತ್ತದೆ.
ಆರೋಗ್ಯ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ