
ಚಳಿಗಾಲದಲ್ಲಿ (Winter), ಅನೇಕರ ಕೈ, ಕಾಲು ಮರಗಟ್ಟುತ್ತದೆ (Hands & Feet Numbness). ಈ ರೀತಿಯಾಗುವುದು ಚಳಿಗೋ ಅಥವಾ ನರ (Nerve) ಸಮಸ್ಯೆಯ ಆರಂಭಿಕ ಲಕ್ಷಣವೋ ಎಂದು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ. ಸಾಮಾನ್ಯವಾಗಿ ಚಳಿ ಹೆಚ್ಚಾದಂತೆ, ಕೈಕಾಲುಗಳು ತಣ್ಣಗಾಗುವುದು, ಜುಮ್ಮೆನಿಸುವಿಕೆ ಮತ್ತು ಮರಗಟ್ಟುವಿಕೆ ಮುಂತಾದ ಸಮಸ್ಯೆಗಳು ಕಂಡುಬರುತ್ತದೆ. ಅದರಲ್ಲಿಯೂ ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ಈ ರೀತಿಯಾಗುತ್ತದೆ. ಆದರೆ ಕೆಲವರು ಇದನ್ನು ಚಳಿಯಿಂದ ಆಗುತ್ತದೆ ಎಂದು ತಿಳಿದುಕೊಂಡು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ಆರೋಗ್ಯ ತಜ್ಞರು ಇದು ನರ ಸಂಬಂಧಿತ ಸಮಸ್ಯೆಯ ಆರಂಭಿಕ ಲಕ್ಷಣವಾಗಿರಬಹುದು ಎನ್ನುತ್ತಾರೆ. ಹಾಗಾದರೆ ಇದನ್ನು ಕಂಡು ಹಿಡಿಯುವುದು ಹೇಗೆ, ಈ ಸಮಸ್ಯೆಯನ್ನು ತಡೆಯಲು ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.
ಆರ್‌ಎಂಎಲ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ಡಾ. ಸುಭಾಷ್ ಗಿರಿ ಅವರ ಪ್ರಕಾರ, ಚಳಿಗಾಲದಲ್ಲಿ ಕೈಕಾಲುಗಳು ಮರಗಟ್ಟುವುದು ದೇಹದ ಸಾಮಾನ್ಯ ಪ್ರಕ್ರಿಯೆ. ಹೃದಯ ಮತ್ತು ಮೆದುಳಿನಂತಹ ಅಗತ್ಯ ಅಂಗಗಳನ್ನು ರಕ್ಷಿಸಲು ದೇಹವು ಕೈಕಾಲುಗಳಿಗೆ ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ. ಅದಕ್ಕಾಗಿಯೇ ಕೈ ಬೆರಳು ಮತ್ತು ಪಾದಗಳು ಜುಮ್ಮೆನಿಸುತ್ತದೆ ಕೆಲವರಲ್ಲಿ ಮರಗಟ್ಟಿದ ಅನುಭವವಾಗುತ್ತದೆ. ಇಂತಹ ಸಮಯದಲ್ಲಿ ಕೈಕಾಲುಗಳನ್ನು ಬೆಚ್ಚಗಾಗಿಸುವ ಮೂಲಕ, ಕೈಗವಸುಗಳನ್ನು ಧರಿಸುವ ಮೂಲಕ ಅಥವಾ ಸ್ವಲ್ಪ ಸಮಯ ವಿಶ್ರಾಂತಿ ಪಡೆಯುವ ಮೂಲಕ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಆದರೆ ಈ ರೀತಿ ಪದೇ ಪದೇ ಆಗುತ್ತಿದ್ದರೆ ಅಥವಾ ಚಳಿ ಇಲ್ಲದ ಸಮಯದಲ್ಲಿ ಕಂಡುಬಂದರೆ ಇದು ನರ ಸಮಸ್ಯೆಯ ಆರಂಭಿಕ ಲಕ್ಷಣವಾಗಿರಬಹುದು. ಇದರ ಜೊತೆಗೆ, ಸುಡುವ ಸಂವೇದನೆ, ನೋವು, ದೌರ್ಬಲ್ಯ ಅಥವಾ ನಡೆಯಲು ಅಥವಾ ವಸ್ತುಗಳನ್ನು ಹಿಡಿದಿಡಲು ತೊಂದರೆಯಾಗುವುದು ನರ ಸಂಬಂಧಿತ ಸಮಸ್ಯೆಯನ್ನು ಸೂಚಿಸುತ್ತದೆ. ವಿಟಮಿನ್ ಬಿ 12 ಕೊರತೆ, ಮಧುಮೇಹ, ಒಂದೇ ಸ್ಥಾನದಲ್ಲಿ ದೀರ್ಘಕಾಲ ಕುಳಿತುಕೊಳ್ಳುವುದು ಅಥವಾ ನರಗಳ ಮೇಲಿನ ಒತ್ತಡವು ಕೂಡ ಇದಕ್ಕೆ ಕಾರಣಗಳಾಗಿರಬಹುದು. ಇಂತಹ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ, ಸಮಯಕ್ಕೆ ಸರಿಯಾಗಿ ವೈದ್ಯರನ್ನು ಸಂಪರ್ಕಿಸಿ.
ಇದನ್ನೂ ಓದಿ: ಚಳಿಗಾಲದಲ್ಲಿ ಇತರರಿಗಿಂತ ತುಸು ಹೆಚ್ಚೆ ನಿಮ್ಗೆ ಚಳಿಯಾಗುತ್ತಾ? ಇದಕ್ಕೆ ಈ ವಿಟಮಿನ್ ಕೊರತೆಯೇ ಕಾರಣ
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ