ಇಷ್ಟು ದಿನ ಅಬ್ಬರಿಸುತ್ತಿದ್ದ ಮಳೆ (Rainfall) ಕಡಿಮೆಯಾಗಿ ಇದೀಗ ಚಳಿ (Winter) ಹೆಚ್ಚಾಗಿದೆ. ವಾತಾವರಣದಲ್ಲಿ ದಿಢೀರನೆ ಬದಲಾಗುತ್ತಿರುವುದರಿಂದ ವೈರಲ್ ಜ್ವರ (Viral Fever), ಕೆಮ್ಮು, ಶೀತ ಮುಂತಾದ ರೋಗಗಳು ಹೆಚ್ಚಾಗತೊಡಗಿವೆ. ಇದರೊಂದಿಗೆ ಕೊವಿಡ್ ಕೂಡ ಮತ್ತೆ ಉಲ್ಬಣವಾಗುತ್ತಿದ್ದು, ಆತಂಕ ಹೆಚ್ಚಾಗಿದೆ. ಹೀಗಾಗಿ, ಚಳಿಗಾಲದಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ನೀವು ಯಾವ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಪ್ರತಿ ವರ್ಷ ಭಾರತದಲ್ಲಿ ಚಳಿಗಾಲವು ಕಡಿಮೆಯಾಗುತ್ತಿದೆ. ಆದರೂ ಚಳಿಗಾಲದಲ್ಲಿ ಅನಾರೋಗ್ಯಕ್ಕೆ ಒಳಗಾಗುವವರ ಸಂಖ್ಯೆ ಕಡಿಮೆಯಾಗಿಲ್ಲ. ಶೀತವು ಜನರನ್ನು ಸ್ವಲ್ಪ ಆಲಸ್ಯಗೊಳಿಸುತ್ತದೆ. ಇಬ್ಬನಿಯಿಂದಾಗಿ ಬೆಳಿಗ್ಗೆ ಜನರಿಗೆ ಹೊರಬರಲು ಕಷ್ಟವಾಗುತ್ತದೆ. ಶೀತವನ್ನು ಎದುರಿಸಲು ಬೆಚ್ಚಗಿನ ಬಟ್ಟೆ ಮತ್ತು ಬಿಸಿನೀರಿಗೆ ಆದ್ಯತೆ ನೀಡಲಾಗುತ್ತದೆ. ಈ ಚಳಿಗಾಲದಲ್ಲಿ ವ್ಯಾಯಾಮ ಮಾಡಿದರೆ ಆರೋಗ್ಯ ಚೆನ್ನಾಗಿರುತ್ತದೆ. ಆದರೆ, ಬೆಳಗ್ಗೆ ಎದ್ದು ವ್ಯಾಯಾಮ ಮಾಡಲು ಮನಸು ಬರುವುದೇ ಇಲ್ಲ.
ಇದನ್ನೂ ಓದಿ: Winter Care: ಚಳಿಗಾಲದಲ್ಲಿ ಮಕ್ಕಳ ಆರೈಕೆ ಹೇಗಿರಬೇಕು? ಯಾವ ತಪ್ಪುಗಳನ್ನು ಪೋಷಕರು ಮಾಡಕೂಡದು ಇಲ್ಲಿದೆ ಮಾಹಿತಿ
ಕಡಿಮೆ ದೈಹಿಕ ಚಟುವಟಿಕೆ ಮತ್ತು ತಾಪಮಾನದ ಕುಸಿತದಿಂದಾಗಿ ನಾವು ಶೀತ, ಕೆಮ್ಮು ಮತ್ತು ಜ್ವರದಿಂದ ಬಳಲುತ್ತೇವೆ. ಹಾಗಾಗಿ, ಚಳಿಗಾಲದಲ್ಲಿ ಆರೋಗ್ಯವಾಗಿರಲು ಕೆಲವು ಮಾರ್ಗಗಳು ಇಲ್ಲಿವೆ. ಚಳಿಗಾಲದಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ನೀವು ಮಾಡಬಹುದಾದ ಕೆಲಸಗಳು ಹೀಗಿವೆ.
ನಿಮ್ಮನ್ನು ಬೆಚ್ಚಗೆ ಇಟ್ಟುಕೊಳ್ಳಿ:
ವಾಕಿಂಗ್ಗೆ ಹೋಗುವಾಗ ಬೆಚ್ಚಗಿನ ಬಟ್ಟೆಗಳಿಲ್ಲದೆ ಹೋಗಬೇಡಿ. ಕುತ್ತಿಗೆ ಮತ್ತು ಕಾಲುಗಳನ್ನು ಸರಿಯಾಗಿ ಮುಚ್ಚಿಕೊಳ್ಳಿ. ದೇಹದ ಈ ಎರಡು ಭಾಗಗಳು ಶೀತಕ್ಕೆ ಹೆಚ್ಚು ಸೂಕ್ಷ್ಮವಾಗಿರುತ್ತವೆ. ಸಾಧ್ಯವಾದಷ್ಟು ಸೂರ್ಯನ ಬೆಳಕಿನಲ್ಲಿ ಇರಲು ಪ್ರಯತ್ನಿಸಿ.
ವಿಟಮಿನ್ ಡಿ:
ಸೂರ್ಯನ ಬೆಳಕಿನಿಂದ ದೇಹಕ್ಕೆ ವಿಟಮಿನ್ ಡಿ ಸಿಗುತ್ತದೆ. ವಿಟಮಿನ್ ಡಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿ. ಊಟದ ನಂತರ ಸ್ವಲ್ಪ ವಾಕಿಂಗ್ ಮಾಡಿ. ವೇಗವಾಗಿ ನಡೆಯಬೇಕಾದ ಅಗತ್ಯವಿಲ್ಲ. ನಿಧಾನವಾಗಿ ನಡೆದರೂ ನೀವು ಬಿಸಿಲಿನ ತಾಪವನ್ನು ಆನಂದಿಸಿ. ತಣ್ಣೀರು ಕುಡಿಯಬೇಡಿ. ಬಿಸಿಯಾದ ನೀರು, ಬಿಸಿ ಚಹಾ, ಕಾಫಿ ಅಥವಾ ಹಾಲು ಕುಡಿಯುವುದು ಒಳ್ಳೆಯದು.
ವಿಟಮಿನ್ ಸಿ:
ವಿಟಮಿನ್ ಸೇವನೆಯು ಸಾಮಾನ್ಯವಾಗಿ ದೇಹವನ್ನು ರೋಗಗಳಿಂದ ರಕ್ಷಿಸುತ್ತದೆ. ವಿಶೇಷವಾಗಿ ವಿಟಮಿನ್ ಸಿ ಶೀತ ಮತ್ತು ಕೆಮ್ಮಿನಿಂದ ನಿಮ್ಮನ್ನು ರಕ್ಷಿಸುತ್ತದೆ. ಸಿಟ್ರಸ್ ಹಣ್ಣುಗಳಾದ ಕಿತ್ತಳೆ ಮತ್ತು ನಿಂಬೆಹಣ್ಣುಗಳು ವಿಟಮಿನ್‌ನ ಅತ್ಯುತ್ತಮ ಮೂಲಗಳಾಗಿವೆ.
ಇದನ್ನೂ ಓದಿ: Diabetes: ಚಳಿಗಾಲದಲ್ಲಿ ಮಧುಮೇಹಿಗಳ ಪಾದಗಳಲ್ಲಿ ಈ ಸಮಸ್ಯೆಗಳು ಕಂಡು ಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ
ವ್ಯಾಯಾಮ ಮಾಡಿ:
ವ್ಯಾಯಾಮ ಮಾಡುವುದರಿಂದ ದೇಹ ಬೆಚ್ಚಗಿರುತ್ತದೆ. ಶೀತ ವಾತಾವರಣಕ್ಕೆ ವ್ಯಾಯಾಮ ಅತ್ಯಂತ ಅವಶ್ಯಕ. ನೀವು ತೀವ್ರವಾದ ಅಥವಾ ಬಿರುಸಾದ ವ್ಯಾಯಾಮವನ್ನು ಮಾಡಬೇಕಾಗಿಲ್ಲ. ಮೆಟ್ಟಿಲುಗಳನ್ನು ಹತ್ತುವುದು, ಬೆಳಿಗ್ಗೆ 10 ಪುಲ್-ಅಪ್ ವ್ಯಾಯಾಮಗಳನ್ನು ಮಾಡಿದರೆ ಸಾಕು.
ಒತ್ತಡವನ್ನು ನಿಯಂತ್ರಿಸಿ:
ಒತ್ತಡವು ನಿಮ್ಮ ರೋಗನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಇದು ಅನಾರೋಗ್ಯಕ್ಕೆ ಹೆಚ್ಚು ಒಳಗಾಗುವಂತೆ ಮಾಡುತ್ತದೆ. ಇದನ್ನು ಹೋಗಲಾಡಿಸಲು ಸರಳವಾದ ಮಾರ್ಗವೆಂದರೆ ಸಾಕಷ್ಟು ನಿದ್ದೆ ಮಾಡುವುದು. ರಾತ್ರಿ 7-8 ಗಂಟೆಗಳ ಕಾಲ ಸಾಕಷ್ಟು ನಿದ್ರೆ ಪಡೆಯಲು ಪ್ರಯತ್ನಿಸಿ.
ದೇಹವನ್ನು ಹೈಡ್ರೇಟ್ ಆಗಿಟ್ಟುಕೊಳ್ಳಿ:
ಭಾರತದ ಬಹುತೇಕ ಭಾಗಗಳಲ್ಲಿ ಚಳಿಗಾಲವು ತುಂಬಾ ಶುಷ್ಕವಾಗಿರುತ್ತದೆ. ತಾಪಮಾನದಲ್ಲಿನ ಕುಸಿತದಿಂದಾಗಿ, ತೇವಾಂಶದಲ್ಲಿ ಇಳಿಕೆ ಕಂಡುಬರುತ್ತದೆ. ಇದರಿಂದ ಚಳಿಗಾಲದಲ್ಲಿ ಚರ್ಮ ಒಣಗುವುದು, ಒಡೆಯುವುದು ಸಾಮಾನ್ಯ. ಶುಷ್ಕತೆ ಚರ್ಮವನ್ನು ಹೊರತುಪಡಿಸಿ ಉಸಿರಾಟದ ಸಮಸ್ಯೆಗಳನ್ನು ಉಂಟುಮಾಡಬಹುದು. ಉತ್ತಮವಾದ ಮಾಯಿಶ್ಚರೈಸರ್ ಸಹಾಯದಿಂದ ನಿಮ್ಮ ತ್ವಚೆಯನ್ನು ಆರೋಗ್ಯವಾಗಿರಿಸಿಕೊಳ್ಳಿ. ದೇಹವನ್ನು ಸಾಕಷ್ಟು ನೀರಿನಿಂದ ಹೈಡ್ರೇಟ್ ಮಾಡಿಕೊಳ್ಳಿ. ಚಳಿಗಾಲದಲ್ಲಿ ಬಾಯಾರಿಕೆ ಕಡಿಮೆ ಎಂದು ನೀರು ಕುಡಿಯುವುದನ್ನು ಕಡಿಮೆ ಮಾಡಬೇಡಿ.