ಪ್ರತಿಯೊಂದು ಜೀವಿಯು ದಷ್ಟಪುಷ್ಟವಾಗಿ ಬೆಳೆಯಲು ಆಹಾರ ಮುಖ್ಯ. ಬರೀ ಆಹಾರವೊಂದೇ ಅಲ್ಲ ಪೌಷ್ಟಿಕ ಆಹಾರ ಮುಖ್ಯ. ಆಹಾರ ಸೇವನೆಯಲ್ಲಿಯೂ ಒಂದು ಶಿಸ್ತಿದೆ, ಕ್ರಮವಿದೆ ಎಂದು ಹೇಳುತ್ತಾರೆ ತಜ್ಞರು. ನಿಮ್ಮ ಆರೋಗ್ಯದ ಕುರಿತಾಗಿ ತಜ್ಞರಲ್ಲಿ ಸಲಹೆ ಪಡೆಯಲೇಬೇಕು. ತೆಳ್ಳಗಿದ್ದೇನೆ ಎಂದು ತಿಂಡಿಗಳನ್ನು ತಿನ್ನುತ್ತಲೇ ಇರುವುದು ಹಾಗೂ ತುಂಬಾ ದಪ್ಪಗಾಗಿದ್ದೇನೆ ಎಂದು ಊಟ ಬಿಡುವುದು.. ಇವುಗಳೆಲ್ಲಾ ನಿಮ್ಮನ್ನು ಮತ್ತಷ್ಟು ಅನಾರೋಗ್ಯ ಸಮಸ್ಯೆಯನ್ನು ತಂದೊಡ್ಡುತ್ತದೆ. ಅದರಲ್ಲಿಯೂ ಯುವತಿಯರು ಫಿಟ್ನೆಸ್ಗಾಗಿ ಏನೆಲ್ಲಾ ಮಾಡುತ್ತಾರೆ. ಕಡಿಮೆ ತೂಕವಿದೆ ದಪ್ಪಗಾಗಬೇಕು ಎಂಬ ಮಾತ್ರಕ್ಕೆ ಬೇಕರಿ ಫುಡ್ಗಳನ್ನು ಹೆಚ್ಚು ಹೆಚ್ಚು ತಿನ್ನುತ್ತಿದ್ದಾರೆ. ಇದು ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಯಾವ ಆಹಾರ ಸೇವಿಸಬೇಕು, ಯಾವ ಆಹಾರವನ್ನು ಅತಿಯಾಗಿ ಸೇವಿಸಬಾರದು ಎಂಬುದು ಅವರವರ ದೇಹ ಪ್ರಕೃತಿಗೆ ಸಂಬಂಧಿಸಿದ್ದು. ಪ್ರತಿಯೊಬ್ಬ ಮನುಷ್ಯನಲ್ಲಿಯೂ ಕೊಲೆಸ್ಟ್ರಾಲ್ ಇರಲೇಬೇಕು. ನಮ್ಮ ದೇಹಕ್ಕೆ ಸರಿಹೊಂದುವ ಕೊಲೆಸ್ಟ್ರಾಲ್ಗಿಂತಲೂ ಹೆಚ್ಚಿಗೆ ಕೊಲೆಸ್ಟ್ರಾಲ್ ಅಥವಾ ಕ್ಯಾಲೊರಿ ನಮ್ಮ ದೇಹದಲ್ಲಿ ಸೇರಿಕೊಂಡಾಗ ಬೊಜ್ಜಿನ ಸಮಸ್ಯೆ ಕಾಡ ತೊಡಗುತ್ತದೆ. ಕೆಲವರಿಗೆ ದಪ್ಪಗಾಗಿದ್ದೇನೆ ಎಂಬ ಚಿಂತೆ ಇದ್ದರೆ, ಇನ್ನು ಕೆಲವರು ತುಂಬ ತೆಳಗಿದ್ದೇನೆ. ಹಾಗಾಗಿ ಕಂಡಿದ್ದನ್ನೆಲ್ಲಾ ತಿನ್ನುತ್ತೇನೆ, ದಿನಪೂರ್ತಿ ತಿನ್ನುತ್ತಲೇ ಇರುತ್ತೇನೆ ಎಂದು ಹೆಳುತ್ತಾರೆ. ಈ ತಪ್ಪನ್ನು ಮಾತ್ರ ಎಂದಿಗೂ ಮಾಡದಿರಿ ಅನ್ನುತ್ತಾರೆ ತಜ್ಞರು. ನ್ಯೂಟ್ರೀಷಿಯನಿಸ್ಟ್ ತಜ್ಞರಾದ ವೀಣಾ ಭಟ್ ಶಿರಸಿ ಅವರು ಟಿವಿ9 ಕನ್ನಡದ ಜತೆ ಮಹಿಳೆಯರಿಗಾಗಿ ಹಾಗೂ ಯುವತಿಯರಿಗಾಗಿ ಕೆಲವೊಂದಿಷ್ಟು ಸಲಹೆಗಳನ್ನು ನೀಡಿದ್ದಾರೆ.
ಆಹಾರ ಕ್ರಮ
ಯಾವಾಗಲೂ ನಿಯಮಿತವಾದ ಆಹಾರ ಕ್ರಮವಿರಬೇಕು. ಸಮಯಕ್ಕೆ ಸರಿಯಾಗಿ ಆಹಾರವನ್ನು ಸೇವಿಸಬೇಕು. ಜತೆಗೆ ಪೌಷ್ಟಿಕಾಂಶಯುಕ್ತ ಆಹಾರವನ್ನು ಹೆಚ್ಚು ಸೇವಿಸಿ. ಕಾಲೇಜಿಗೆ ಹೋಗುವ ಯುವತಿಯರು ಅದೆಷ್ಟೋ ದಿನ ಮಧ್ಯಾಹ್ನದ ಊಟವನ್ನೇ ಮಾಡುವುದಿಲ್ಲ. ಇದು ನಿಮ್ಮ ಹೊಟ್ಟೆ ನೋವು, ಆಸಿಡಿಟಿ ಸಮಸ್ಯೆಗೆ ಕಾರಣವಾಗುತ್ತದೆ. ಅದರ ಬದಲಾಗಿ ಬೇಕರಿ ಫುಡ್ಗಳನ್ನು ಸೇವಿಸುತ್ತಾರೆ. ತೂಕ ಹೆಚ್ಚಾಗಲು ಬೇಕರಿ ಫುಡ್ಗಳು ಸಹಾಯ ಮಾಡಬಹುದು. ಆದರೆ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಯುವತಿಯರ ಋತುಚಕ್ರದ ಸಮಯದಲ್ಲಿ ಬೇಕರಿ ಫುಡ್ಗಳನ್ನು ಬಿಟ್ಟು ಪೌಷ್ಟಿಕ ಆಹಾರವನ್ನು ಹೊಟ್ಟೆಗೆ ಆಹಾರ ಹಾಕಲೇ ಬೇಕು. ಹಸಿದು ಕುಳಿತುಕೊಳ್ಳುವುದು ಇನ್ನಷ್ಟು ಅನಾರೋಗ್ಯವನ್ನು ಉಂಟು ಮಾಡುತ್ತದೆ.
ಜಂಕ್ಫುಡ್ಗಳನ್ನು ಸೇವಿಸಬೇಡಿ
ಜಂಕ್ಫುಡ್ಗಳು ರುಚಿ ಅನಿಸಬಹುದು. ಆದರೆ ಎಣ್ಣೆಯಲ್ಲಿ ಕರಿದ ಪದಾರ್ಥಗಳ ಆರೋಗ್ಯವನ್ನು ಇನ್ನಷ್ಟು ದುರ್ಬಲಗೊಳಿಸುತ್ತದೆ. ಅದರಲ್ಲಿಯೂ ಹಸಿದ ಸಮಯದಲ್ಲಿ ಜಂಕ್ಫುಡ್ಗಳನ್ನು ಸೇವಿಸುವದರಿಂದ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುತ್ತದೆ. ನೀವು ದಪ್ಪಗಾದರೂ ಸಹ ನಿಮ್ಮ ಆರೋಗ್ಯ ಕೆಡುತ್ತದೆ. ಹಾಗಿರುವಾಗ ದೇಹವನ್ನು ಸದೃಢವಾಗಿರಿಸಿಕೊಳ್ಳಬೇಕಾದರೆ ನಿಯಮಿತ ಆಹಾರದ ಜತೆಗೆ ಪೌಷ್ಟಿಕ ಆಹಾರವನ್ನು ಸೇವಿಸಿ. ದ್ವಿದಳ ಧಾನ್ಯಗಳು ನಿಮ್ಮ ಆಹಾರದಲ್ಲಿರಲಿ. ಹೆಸರು ಕಾಳು, ಮೊಳಕೆಯೊಡೆದ ಕಾಳುಗಳನ್ನು ಸೇವಿಸುವ ಅಭ್ಯಾಸ ಒಳ್ಳೆಯದು. ಇದರಿಂದ ದೇಹ ಸದೃಢವಾಗಿ ಬೆಳೆಯುತ್ತದೆ.
ಬೇಗ ಮಲಗಿ ಬೆಳಿಗ್ಗೆ ಬೇಗ ಏಳುವ ಅಭ್ಯಾಸ
ಯಾವಾಗಲೂ ಯುವತಿಯರು ಬೇಗ ಏಳುವ ಅಭ್ಯಾಸವನ್ನು ಮಾಡಿಕೊಳ್ಳಬೇಕು. ಪ್ರತಿನಿತ್ಯ ಬೇಗ ಎದ್ದು ಮುಖ ತೊಳೆದು ಒಂದುಷ್ಟು ವ್ಯಾಯಾಮದಲ್ಲಿ ತೊಡಗಿಕೊಳ್ಳಿ. ಇದು ನಿಮ್ಮ ದೇಹದ ಸದೃಢತೆಗೆ ಸಹಾಯಕವಾಗುತ್ತದೆ. ಪ್ರಾಣಾಯಾಮ, ಧ್ಯಾನ ಮಾಡುವುದರಿಂದ ಮನಸ್ಸು ನಿಗ್ರಹದಲ್ಲಿರುತ್ತದೆ. ಜತೆಗೆ ಹೊಟ್ಟೆ ಹಸಿವು ತಾನಾಗಿಯೇ ಆಗುತ್ತದೆ. ಬೆಳಿಗ್ಗಿನ ಉಪಹಾರ ತಿಂದಷ್ಟು ದೇಹಕ್ಕೆ ಒಗ್ಗುತ್ತದೆ. ಆಗ ನಿಮ್ಮ ದೇಹ ತಾನಾಗಿಯೇ ಸದೃಢಗೊಳ್ಳುತ್ತದೆ. ಆರೋಗ್ಯವೂ ಸುಧಾರಿಸುತ್ತದೆ.
ವ್ಯಾಯಾಮ ಅಭ್ಯಾಸ
ಬೆಳಿಗ್ಗೆ ಬೇಗ ಎದ್ದಾಗ ವ್ಯಾಯಾಮ ಮಾಡಿದರೆ ಸಂಜೆಯ ಹೊತ್ತಿನಲ್ಲಿಯೂ ವ್ಯಾಯಾಮ ಅಥವಾ ವಾಕಿಂಗ್, ಜಾಗಿಂಗ್ನಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುವುದು ಉತ್ತಮ. ನಿಮ್ಮ ದೇಹಕ್ಕೆ ಸುಸ್ತಾಗಬೇಕು, ವ್ಯಾಯಾಮದಿಂದ ಬೆವರಿಳಿಯಬೇಕು. ಆಗ ನಿಮ್ಮ ದೇಹದಲ್ಲಿನ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ. ಹೊಟ್ಟೆಯಲ್ಲಿ ಜೀರ್ಣ ವ್ಯವಸ್ಥೆ ಸುಧಾರಿಸುತ್ತದೆ. ಆಗಾ ತಿಂದ ಆಹಾರವು ನಿಮ್ಮ ಆರೋಗ್ಯಕ್ಕೆ ಒಗ್ಗಿಕೊಳ್ಳುತ್ತದೆ. ಈ ಅಭ್ಯಾಸ ಪ್ರತಿನಿತ್ಯವೂ ಇರಲಿ.
ಪ್ರತಿಯೊಬ್ಬರೂ ಕೂಡಾ ತುಂಬಾ ತೆಳ್ಳಗಿದ್ದೇನೆ ಅಥವಾ ತುಂಬಾ ದಪ್ಪಗಾಗಿ ಬಿಟ್ಟಿದ್ದೇನೆ ಎಂದು ಚಿಂತೆ ಪಡುವ ಅಗತ್ಯವಿಲ್ಲ. ನಿಮ್ಮ ಆರೋಗ್ಯದ ಕ್ರಮ ಮತ್ತು ವ್ಯಾಯಾಮ, ಯೋಗಗಳಿಂದ ನಿಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು. ಹತ್ತಿರದ ವೈದ್ಯರಲ್ಲಿ ನಿಮ್ಮ ಆರೋಗ್ಯವನ್ನು ಪರೀಕ್ಷಿಸಿಕೊಳ್ಳಿ. ಒಳ್ಳೆಯ ಯೋಗ ತಜ್ಞರಲ್ಲಿ ಸಲಹೆ ಪಡೆದು ಪ್ರತಿನಿತ್ಯವೂ ಯೋಗ-ಧ್ಯಾನದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ ಎಂದು ತಜ್ಞರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ:
Women Health: ನೋಡಲು ದಪ್ಪಗಾಗಿದ್ದೀರಾ? ತಿಳಿಯಲೇಬೇಕಾದ ಕೆಲವೊಂದಿಷ್ಟು ಸಲಹೆಗಳನ್ನು ತಜ್ಞರು ನೀಡಿದ್ದಾರೆ