ತಾಯಿಯ ಎದೆಹಾಲು ಅಮೃತಕ್ಕೆ ಸಮ. ಹುಟ್ಟಿದ ಮಗುವು ಆರೋಗ್ಯಯುತವಾಗಿ ಬೆಳೆಯಲು ತಾಯಿಯ ಎದೆಹಾಲು ಅತ್ಯಂತ ಅವಶ್ಯಕವಾಗಿದೆ. ಹುಟ್ಟಿದ ಮಗುವಿಗೆ ಎದೆ ಹಾಲು ಕುಡಿಸುವುದು ಕೂಡ ಸ್ವಾಭಾವಿಕ ಕ್ರಿಯೆಯಾಗಿದೆ. ಮಗುವಿನ ಬೆಳವಣಿಗೆಗೆ ಬೇಕಾಗುವ ಪೌಷ್ಟಿಕಾಂಶ ಮತ್ತು ಕಾರ್ಬೋಹೈಡ್ರೇಟ್‌ಗಳು ಎದೆ ಹಾಲಿನಲ್ಲಿ ಹೇರಳವಾಗಿದ್ದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹೀಗಾಗಿ ಶಿಶುಗಳಿಂದ ಹಿಡಿದು ಎರಡು ಮೂರು ವರ್ಷದ ಮಕ್ಕಳಲ್ಲಿ ಅಪೌಷ್ಠಿಕತೆಯನ್ನು ನಿವಾರಿಸಲು ಸ್ತನ್ಯಪಾನಕ್ಕೆ ಹೆಚ್ಚು ಒತ್ತು ನೀಡಲಾಗುತ್ತದೆ. ಆದರೆ ಇಂದಿನ ಮಹಿಳೆಯರು ಕೆಲಸಕ್ಕೆ ಹೋಗುವುದರಿಂದ ಅಥವಾ ಸೌಂದರ್ಯವು ಮಾಸುತ್ತದೆ ಎನ್ನುವ ಕಾರಣದಿಂದಾಗಿ ಮಗುವಿಗೆ ಹಾಲುಣಿಸಲು ಹಿಂದೇಟು ಹಾಕುತ್ತಾರೆ. ಆದರೆ ಎದೆಹಾಲು ಉಣಿಸುವ ಪ್ರಕ್ರಿಯೆಯಿಂದ ತಾಯಿ ಹಾಗೂ ಮಗುವಿನ ಬಂಧವು ಹೆಚ್ಚಾಗುತ್ತದೆ. ಹೀಗಾಗಿ ಎದೆಹಾಲಿನ ಮಹತ್ವವನ್ನು ತಿಳಿಸುವ ನಿಟ್ಟಿನಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹವನ್ನು ಆಚರಿಸಲಾಗುತ್ತದೆ.
1991ರಲ್ಲಿ ವರ್ಲ್ಡ್ ಅಲೈಯನ್ಸ್ ಫಾರ್ ಬ್ರೆಸ್ಟ್ ಫೀಡಿಂಗ್ ಆಕ್ಷನ್ ಅನ್ನು ರಚಿಸಲಾಯಿತು. ಆರಂಭದಲ್ಲಿ ವರ್ಷಕ್ಕೆ ಒಂದು ದಿನ ಸ್ತನ್ಯಪಾನ ದಿನವನ್ನು ಆಚರಿಸಲು ನಿರ್ಧರಿಸಲಾಗಿತ್ತು. ಆದರೆ ಈ ವಿಷಯವು ಮಹತ್ವವಾಗಿರುವುದರಿಂದ ಒಂದು ವಾರಗಳ ಕಾಲ ಈ ಜಾಗೃತಿ ಕಾರ್ಯವನ್ನು ಆಚರಿಸಲು ನಿರ್ಧರಿಸಲಾಯಿತು. ಇದಕ್ಕೆ ವಿಶ್ವ ಸ್ತನ್ಯಪಾನ ಸಪ್ತಾಹ ಎಂದು ಹೆಸರಿಡಲಾಯಿತು. ವಿಶ್ವ ಸ್ತನ್ಯಪಾನ ಸಪ್ತಾಹವನ್ನು ಮೊದಲ ಬಾರಿಗೆ 1992ರಲ್ಲಿ ಆಯೋಜಿಸಲಾಯಿತು. ಅಂದಿನಿಂದ ಪ್ರತಿ ವರ್ಷ ಆಗಸ್ಟ್ 1 ರಿಂದ ಆಗಸ್ಟ್ 7ರ ವರೆಗೆ ಒಂದು ವಾರಗಳ ತನಕ ವಿಶ್ವ ಸ್ತನ್ಯಪಾನ ಸಪ್ತಾಹ ದಿನವನ್ನು ಆಚರಿಸುತ್ತ ಬರಲಾಗುತ್ತಿದೆ.
ಇದನ್ನೂ ಓದಿ: ಮಹಿಳೆಯರಿಗೆ ಈ ವಿಟಮಿನ್ ಗಳು ತುಂಬಾ ಮುಖ್ಯ, ಪ್ರತಿದಿನ ಸೇವಿಸಲು ಮರೆಯಬೇಡಿ..!
ಮೊದಲ ಹೆರಿಗೆಯ ಬಳಿಕ ತಾಯಂದಿರಿಗೆ ಹಾಲುಣಿಸುವ ಪ್ರಕ್ರಿಯೆ ಬಗ್ಗೆ ತಿಳಿದಿರುವುದಿಲ್ಲ. ಮಕ್ಕಳಿಗೆ ಎದೆಹಾಲು ಮುಖ್ಯವಾಗಿರುವುದರಿಂದ ತಾಯಿಂಯದಿರು ತಿಳಿದುಕೊಳ್ಳುವುದು ಮುಖ್ಯ. ಹೀಗಾಗಿ ಈ ದಿನವು ಸ್ತನ್ಯಪಾನದ ಪ್ರಾಮುಖ್ಯತೆಯನ್ನು ಉತ್ತೇಜಿಸುತ್ತದೆ ಮತ್ತು ಪ್ರಪಂಚದಾದ್ಯಂತ ಮಹಿಳೆಯರಿಗೆ ತಮ್ಮ ಶಿಶುಗಳಿಗೆ ನಿರ್ದಿಷ್ಟ ಅವಧಿಯವರೆಗೆ ಹಾಲುಣಿಸಲು ಪ್ರೋತ್ಸಾಹಿಸುವ ಉದ್ದೇಶವನ್ನು ಈ ದಿನವೂ ಹೊಂದಿದೆ. ಅದಲ್ಲದೇ ಈ ಸಪ್ತಾಹದಲ್ಲಿ ತಾಯಿಯ ಎದೆಹಾಲಿನ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡುವುದು ಹಾಗೂ ಮಗುವಿನ ಬೆಳವಣಿಗೆಗೆ ತಾಯಿಯ ಹಾಲು ಎಷ್ಟು ಮುಖ್ಯ ಎನ್ನುವ ಬಗ್ಗೆ ಮಾಹಿತಿ ನೀಡುವ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:36 am, Thu, 1 August 24