World Lung Cancer Day 2024 : ಏನಿದು ಶ್ವಾಸಕೋಶದ ಕ್ಯಾನ್ಸರ್? ಇದರ ಲಕ್ಷಣಗಳು ಹಾಗೂ ಚಿಕಿತ್ಸೆ ವಿಧಾನ ಹೇಗೆ?
ಇತ್ತೀಚಿನ ದಿನಗಳಲ್ಲಿ ಹಲವು ಕಾಯಿಲೆಗಳು ಹೆಚ್ಚುತ್ತಿವೆ. ಅದರಲ್ಲಿಯೂ ಈ ಶ್ವಾಸಕೋಶದ ಕ್ಯಾನ್ಸರ್ ಮಹಾಮಾರಿಯು ಜನರ ಜೀವ ಮತ್ತು ಜೀವನವನ್ನೇ ಕಸಿದುಕೊಂಡಿದೆ. ಶ್ವಾಸಕೋಶ ಕ್ಯಾನ್ಸರ್ ಕುರಿತು ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ವಿಶ್ವ ಶ್ವಾಸಕೋಶ ಕ್ಯಾನ್ಸರ್ ದಿನವನ್ನು ಪ್ರತಿವರ್ಷ ಆಗಸ್ಟ್ 1 ರಂದು ಆಚರಿಸಲಾಗುತ್ತದೆ. ಹಾಗಾದ್ರೆ ಈ ದಿನದ ಇತಿಹಾಸ ಹಾಗೂ ಮಹತ್ವದ ಬಗೆಗಿನ ಹೆಚ್ಚಿನ ಮಾಹಿತಿಯೂ ಈ ಕೆಳಗಿದೆ.
ದೇಶದಾದ್ಯಂತ ಅನಾರೋಗ್ಯದಿಂದ ಸಾವನ್ನಪ್ಪುವವರ ಪೈಕಿ ಕ್ಯಾನ್ಸರ್ ರೋಗಿಗಳ ಸಂಖ್ಯೆಯೇ ಹೆಚ್ಚಾಗಿದೆ. ಪ್ರತಿ ವರ್ಷ ಸುಮಾರು 10 ಮಿಲಿಯನ್ ಗೂ ಹೆಚ್ಚು ಜನರು ವಿವಿಧ ರೀತಿಯ ಕ್ಯಾನ್ಸರ್ ಗೆ ತುತ್ತಾಗುತ್ತಿದ್ದು ಆತಂಕಕ್ಕೆ ಕಾರಣವಾಗಿದೆ. ಅದರಲ್ಲಿಯೂ ಈ ಶ್ವಾಸಕೋಶದ ಕ್ಯಾನ್ಸರ್ ಗೆ ಬಲಿಯಾಗುತ್ತಿರುವವರ ಸಂಖ್ಯೆಯೂ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಆದರೆ ಈ ರೋಗ ಲಕ್ಷಣಗಳು ಕಾಣಿಸಿಕೊಂಡ ಪ್ರಾರಂಭದಲ್ಲಿಯೇ ಸರಿಯಾದ ಚಿಕಿತ್ಸೆ ನೀಡಿದರೆ ಈ ರೋಗದಿಂದ ಸ್ವಲ್ಪ ಮಟ್ಟಿಗೆ ಪಾರಾಗಬಹುದು. ಈ ಮಹಾಮಾರಿಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಆಗಸ್ಟ್ 1 ರಂದು ವಿಶ್ವ ಶ್ವಾಸಕೋಶ ಕ್ಯಾನ್ಸರ್ ದಿನವನ್ನು ಆಚರಿಸುತ್ತ ಬರಲಾಗುತ್ತಿದೆ.
ವಿಶ್ವ ಶ್ವಾಸಕೋಶದ ಕ್ಯಾನ್ಸರ್ ದಿನದ ಇತಿಹಾಸ ಹಾಗೂ ಮಹತ್ವ:
ಫೋರಮ್ ಆಫ್ ಇಂಟರ್ ನ್ಯಾಷನಲ್ ರೆಸ್ಪಿರೇಟರಿ ಸೊಸೈಟೀಸ್, ಇಂಟರ್ ನ್ಯಾಷನಲ್ ಅಸೋಸಿಯೇಷನ್ ಫಾರ್ ದಿ ಸ್ಟಡಿ ಆಫ್ ಲಂಗ್ ಕ್ಯಾನ್ಸರ್ ಮತ್ತು ಅಮೇರಿಕನ್ ಕಾಲೇಜ್ ಆಫ್ ಚೆಸ್ಟ್ ಫಿಸಿಶಿಯನ್ಸ್ ಸಹಯೋಗದೊಂದಿಗೆ 2012ರಲ್ಲಿ ಮೊದಲ ಬಾರಿಗೆ ವಿಶ್ವ ಶ್ವಾಸಕೋಶದ ಕ್ಯಾನ್ಸರ್ ದಿನವನ್ನು ಆಚರಿಸಿತು. ಈ ದಿನದ ಮುಖ್ಯ ಉದ್ದೇಶವೇನೆಂದರೆ ಶ್ವಾಸಕೋಶದ ಕ್ಯಾನ್ಸರ್‌ಗೆ ಕಾರಣವಾಗುವ ಅಭ್ಯಾಸಗಳ ಬಗ್ಗೆ ಜನರಿಗೆ ಶಿಕ್ಷಣ ನೀಡುವುದು ಹಾಗೂ ಈ ರೋಗದ ಜಾಗೃತಿ ಮೂಡಿಸುವ ಸಲುವಾಗಿ ಈ ದಿನವು ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ವಿವಿಧ ಆರೋಗ್ಯ ಸಂಸ್ಥೆಗಳು ಶ್ವಾಸಕೋಶದ ಕ್ಯಾನ್ಸರ್ ಬಗ್ಗೆ ಜಾಗೃತಿ ಕಾರ್ಯಕ್ರಮ ಹಾಗೂ ಅಭಿಯಾನಗಳನ್ನು ಹಮ್ಮಿಕೊಳ್ಳುತ್ತವೆ.
ಶ್ವಾಸಕೋಶದ ಕ್ಯಾನ್ಸರ್ ಎಂದರೇನು?
ಶ್ವಾಸಕೋಶದ ಕ್ಯಾನ್ಸರ್ ಎನ್ನುವುದು ಶ್ವಾಸಕೋಶದಲ್ಲಿ ಕಂಡು ಬರುವ ಜೀವಕೋಶಗಳ ಅನಿಯಂತ್ರಿತ ಬೆಳವಣಿಗೆಯಾಗಿದೆ. ಪ್ರಾರಂಭಿಕ ಹಂತದಲ್ಲಿ ಲಕ್ಷಣಗಳು ಗೋಚರವಾಗದಿದ್ದರೂ ಶ್ವಾಸಕೋಶದ ಕ್ಯಾನ್ಸರ್ ಗೆಡ್ಡೆ ಹತ್ತಿರದ ಅಂಗಗಳಿಗೆ ಹರಡುವ ಸಾಧ್ಯತೆಯೇ ಅಧಿಕ. ಇಲ್ಲದಿದ್ದರೆ ಕ್ಯಾನ್ಸರ್ ಕೋಶಗಳು ಇತರ ಅಂಗಗಳಲ್ಲಿ ಬೆಳೆಯಬಹುದು. ಆರಂಭದಲ್ಲೇ ಚಿಕಿತ್ಸೆಯನ್ನು ಪಡೆದುಕೊಂಡರೆ ಅಪಾಯವು ಕಡಿಮೆಯಿರುತ್ತದೆ.
ಶ್ವಾಸಕೋಶದ ಕ್ಯಾನ್ಸರ್ ಲಕ್ಷಣಗಳು:
- ದೀರ್ಘಕಾಲದ ಕೆಮ್ಮು
- ಉಸಿರಾಡಲು ಸಾಧ್ಯವಾಗದೇ ಇರುವುದು
- ಕೆಮ್ಮಿನಲ್ಲಿ ರಕ್ತ ಕಂಡು ಬರುವುದು
- ಬೆನ್ನು ನೋವು
- ಖಿನ್ನತೆ ಹಾಗೂ ಮನಸ್ಥಿತಿಯಲ್ಲಿನ ಬದಲಾವಣೆಗಳು
- ವಿಪರೀತವಾದ ತೂಕ ನಷ್ಟ
- ಆಯಾಸ
- ಎದೆ ನೋವು ಹಾಗೂ ತಲೆ ನೋವು
ಶ್ವಾಸಕೋಶದ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆಯೇನು?
ವ್ಯಕ್ತಿಯ ರೋಗ ಲಕ್ಷಣಗಳು ಹಾಗೂ ಕ್ಯಾನ್ಸರ್‌ನ ಹಂತಗಳ ಮೇಲೆ ಆಧಾರದ ಮೇಲೆ ಚಿಕಿತ್ಸೆಯನ್ನು ನೀಡಲಾಗುತ್ತದೆ. ಈ ರೋಗಕ್ಕೆ ಶಸ್ತ್ರಚಿಕಿತ್ಸೆ, ಕೀಮೋಥೆರಡಿ, ರೇಡಿಯೊಥೆರಪಿ ಹಾಗೂ ಇಮ್ಯುನೊಥೆರಪಿಗಳಂತಹ ಚಿಕಿತ್ಸೆಗಳಿವೆ.
ಇದನ್ನೂಓದಿ: ಗೊರಕೆ ಸಮಸ್ಯೆಗೆ ಈ ಮನೆಮದ್ದುಗಳನ್ನು ಬಳಸಿ ನಿವಾರಣೆ ಮಾಡಿಕೊಳ್ಳಿ
ಶ್ವಾಸಕೋಶದ ಕ್ಯಾನ್ಸರ್ ಅಪಾಯವನ್ನು ತಡೆಗಟ್ಟುವುದು ಹೇಗೆ?
- ಶೇಕಡಾ 90% ರಷ್ಟು ಶ್ವಾಸಕೋಶದ ಕ್ಯಾನ್ಸರಿಗೆ ತಂಬಾಕಿನ ಹೊಗೆಯೇ ಕಾರಣ ಎನ್ನಬಹುದು. ಹೀಗಾಗಿ ಆದಷ್ಟು ಧೂಮಪಾನ ಮಾಡುವುದು, ಅಂತಹ ವ್ಯಕ್ತಿಗಳಿಂದ ಅಂತರವನ್ನು ಕಾಯ್ದುಕೊಳ್ಳುವುದು ಒಳ್ಳೆಯದು.
- ಅಪಾಯಕಾರಿ ರಾಸಾಯನಿಕಗಳು ಮತ್ತು ಪಾಟಕ್ಯುಲೇಟ್ ಕಣಗಳನ್ನು ಉಸಿರಾಡುವುದನ್ನು ತಪ್ಪಿಸಲು ಮಾಸ್ಕ್ ಧರಿಸುವುದು ಉತ್ತಮ.
- ಶ್ವಾಸಕೋಶವನ್ನು ಆರೋಗ್ಯಯುತವಾಗಿರಿಸುವ ಆಹಾರಗಳ ಸೇವನೆಯತ್ತ ಹೆಚ್ಚು ಗಮನ ಕೊಡಿ, ಎಣ್ಣೆಯುಕ್ತ ಆಹಾರ ಸೇವನೆಯನ್ನು ಕಡಿಮೆ ಮಾಡಿ
- ವಾಕಿಂಗ್ ಮತ್ತು ವ್ಯಾಯಾಮ ಮಾಡಲು ಮಾಲಿನ್ಯ ಕಡಿಮೆ ಇರುವ ಬೆಳಗ್ಗಿನ ಸಮಯವನ್ನು ಆಯ್ಕೆ ಮಾಡಿಕೊಳ್ಳಿ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ