World Cancer Day 2021 ‘ಸಾವಿನ ಭಯ ಬಿಟ್ಟು ನಗುತ್ತಾ ಜೀವಿಸಿ..’: ಕ್ಯಾನ್ಸರ್ ಗೆದ್ದ ಭಾರತಿಯವರ ಜೀವನ ಪ್ರೀತಿ
ಒಂದು ಮುಖ್ಯವಾದ ಅಂಶ ಹೇಳಬೇಕೆಂದರೆ ಕ್ಯಾನ್ಸರ್ ವಿಚಾರದಲ್ಲಿ ಇಂಥದ್ದೇ ನಿರ್ದಿಷ್ಟ ಲಕ್ಷಣಗಳು ಅಂತಿಲ್ಲ. ಕಿಮೋಥೆರಪಿ ತೆಗೆದುಕೊಂಡ ಬಳಿಕವೂ ಅಷ್ಟೇ, ನನ್ನಲ್ಲಿನ ಲಕ್ಷಣವೇ ಇನ್ನೊಬ್ಬ ರೋಗಿಯಲ್ಲಿ ಕಾಣಿಸಿಕೊಳ್ಳತ್ತದೆ ಎಂದೂ ಹೇಳಲಾಗದು.
ಇಂದು ವಿಶ್ವ ಕ್ಯಾನ್ಸರ್ ದಿನ ( World Cancer Day 2021). ಅದೆಷ್ಟೇ ವರ್ಷಗಳು ಕಳೆದರೂ ಕ್ಯಾನ್ಸರ್ ಬಗೆಗಿನ ಭೀತಿ ಮಾತ್ರ ತಪ್ಪಿದ್ದಲ್ಲ. ವೈದ್ಯಕೀಯ ಲೋಕ ಎಷ್ಟೇ ಮುಂದುವರಿದಿರಲಿ, ಕ್ಯಾನ್ಸರ್ಗಾಗಿ ಹಲವು ಚಿಕಿತ್ಸೆಗಳೇ ಅಭಿವೃದ್ಧಿಯಾಗಿರಲಿ ಆ ರೋಗಕ್ಕೆ ಒಳಗಾದವರಿಗೆ ದುಗುಡ, ಆತಂಕ, ಸಾವಿನ ಭಯ ಮಾತ್ರ ತಪ್ಪುತ್ತಿಲ್ಲ. ಇದು ಅವರ ಮನಸಿಗೆ ಸಂಬಂಧಪಟ್ಟ ವಿಚಾರ. ಹೀಗೆ ತನಗೆ ಕ್ಯಾನ್ಸರ್ ಇದೆ ಎಂದು ಗೊತ್ತಾದ ತಕ್ಷಣ ಒಂದು ಕ್ಷಣ ಸಾವನ್ನೇ ಕಣ್ಣೆದುರು ತಂದುಕೊಂಡು, ನಂತರ ಧೈರ್ಯವಾಗಿ ಹೋರಾಡಿ ಮರಣ ಭಯದೊಂದಿಗೆ ಕ್ಯಾನ್ಸರ್ನ್ನೂ ಮಣಿಸಿದ ಲೇಖಕಿ ಬಿ.ವಿ.ಭಾರತಿಯವರು ನಮ್ಮ ಟಿವಿ 9 ಕನ್ನಡ ಡಿಜಿಟಲ್ ಜತೆ ಮಾತನಾಡಿದ್ದಾರೆ..
ನನಗೆ ಕ್ಯಾನ್ಸರ್ ಇದೆ ಎಂದು ಗೊತ್ತಾದಾಗ ಮೊದಲು ಮನಸಲ್ಲಿ ಮೂಡಿದ್ದು ಸಾವು. ಇನ್ನೇನು ಮರಣ ಹತ್ತಿರದಲ್ಲೇ ಇದೆ ಎಂದು ನಿರ್ಧಾರ ಮಾಡಿಬಿಟ್ಟಿದ್ದೆ. ಎಲ್ಲರಂತೆ ಕ್ಯಾನ್ಸರ್ ಎಂದರೆ ನನಗೆ ಮೊದಲಿನಿಂದಲೂ ಭಯವಿತ್ತು. ಯಾಕೆಂದರೆ ಕ್ಯಾನ್ಸರ್ ಎಂದರೆ ಸಾವು ಎಂಬುದೇ ನನ್ನಲ್ಲಿ ಅಚ್ಚೊತ್ತಿತ್ತು. ಹಾಗಾಗಿ ತುಂಬ ಭಯವಾಯಿತು.
ಆದರೆ ನನಗೆ ಮನೆಯವರು, ಸ್ನೇಹಿತರ ಸಪೋರ್ಟ್ ಇತ್ತು. ಕಾಯಿಲೆಗೆ ಚಿಕಿತ್ಸೆ ಪಡೆಯಲು ಆರ್ಥಿಕವಾಗಿಯೂ ನಿಭಾಯಿಸಬಹುದಾದಂಥ ಸಂದರ್ಭ ಇತ್ತು. ನನ್ನ ಟ್ರೀಟ್ಮೆಂಟ್ಗೆ ಇದ್ದುದರಲ್ಲೇ ಕಡಿಮೆ ಖರ್ಚಾಯಿತು. ಇದು ನನ್ನ ದುರಾದೃಷ್ಟದ ಮಧ್ಯದ ಅದೃಷ್ಟ ಎಂದೇ ಹೇಳಬೇಕು. ಯಾಕೆಂದರೆ ಅದೆಷ್ಟೋ ಜನರಿಗೆ ಕ್ಯಾನ್ಸರ್ ಚಿಕಿತ್ಸೆಯೇ ದುಬಾರಿಯಾಗುತ್ತಿದೆ. ಅದೇ ದೊಡ್ಡ ಸಮಸ್ಯೆಯಾಗಿಬಿಟ್ಟಿದೆ. ಇದೇ ಕಾರಣಕ್ಕೂ ಕುಗ್ಗುತ್ತಾರೆ. ಇನ್ನು ಸುತ್ತಲಿನವರು ಕೊಡುವ ಬೆಂಬಲ, ನಮ್ಮ ಆರ್ಥಿಕ ದೃಢತೆ ನಮ್ಮಲ್ಲಿ ಒಂದು ಆಶಾಭಾವನೆ ಹುಟ್ಟಿಸಿದರೂ, ಕಾಯಿಲೆ ಹುಟ್ಟಿಸುವ ಭಯದಿಂದ ಹೊರಬರುವಷ್ಟು ದೃಢತೆಯನ್ನು ನಮ್ಮ ಮನಸಿಗೆ ನಾವೇ ರೂಢಿ ಮಾಡಿಸಿಕೊಡಬೇಕಾಗುತ್ತದೆ. ನಮ್ಮೊಂದಿಗೆ ಇದ್ದವರು ಬಿಡಿ, ವೈದ್ಯರೇ ಎಷ್ಟು ಸಮಾಧಾನ ಮಾಡಿದರೂ, ಭರವಸೆ ತುಂಬಿದರೂ ಆಳದಲ್ಲೊಂದು ಭಯ ಇದ್ದೇ ಇರುತ್ತದೆ. ಅದರಿಂದ ನಮ್ಮಷ್ಟಕ್ಕೇ ನಾವೇ ಹೊರಬರಬೇಕಾಗುತ್ತದೆ.
ಕ್ಯಾನ್ಸರ್ ಇದೆ ಎಂದು ಗೊತ್ತಾದ ತಕ್ಷಣ ಆದಷ್ಟು ತಜ್ಞ ವೈದ್ಯರ ಬಳಿಯೇ ಚಿಕಿತ್ಸೆ ಪಡೆಯುವುದು ತುಂಬ ಒಳ್ಳೆಯದು. ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಯಾವಾಗಲೂ ಸುದೀರ್ಘವಾಗಿರುತ್ತದೆ. ರೋಗದ ಹಂತ, ಗಂಭೀರತೆಯನ್ನು ಆಧರಿಸಿ ದೀರ್ಘ ಸಮಯದವರೆಗೆ ಚಿಕಿತ್ಸೆ ಪಡೆಯಬೇಕಾಗುತ್ತದೆ. ಹಾಗಾಗಿ ಮನಸಿನ ಸ್ಥೈರ್ಯ ತಂದುಕೊಳ್ಳದೆ ಇದ್ದರೆ ಬೇರೆ ದಾರಿ ಇಲ್ಲ. ನನಗೂ ಹಾಗೇ, ಎರಡನೇ ಹಂತದಲ್ಲಿದ್ದಾಗ ರೋಗ ಪತ್ತೆಯಾಯ್ತು. ಭಯವಿದ್ದರೂ ಚಿಕಿತ್ಸೆಗೆ ಸಿದ್ಧಳಾದೆ. ಕಿಮೋಥೆರಪಿ ಬಗ್ಗೆ ನನಗೂ ಸಹಜವಾಗಿಯೇ ಆತಂಕವಿತ್ತು. ಅದರಿಂದ ಆಗುವ ಅಡ್ಡಪರಿಣಾಮಗಳನ್ನು ವೈದ್ಯರು ಮೊದಲೇ ತಿಳಿಸಿದ್ದರು. ವಾಂತಿಯಾಗಬಹುದು, ಲೂಸ್ ಮೋಶನ್ ಆಗಬಹುದು, ಆರ್ಬಿಸಿ (ಕೆಂಪು ರಕ್ತ ಕಣ) ಕಡಿಮೆ ಆಗಬಹುದು. ಹೀಗೆ ಆಗಬಹುದಾದ ಅಡ್ಡಪರಿಣಾಮಗಳನ್ನು ಮೊದಲೇ ತಿಳಿಸಿಬಿಟ್ಟಿದ್ದರು. ನಾನೂ ಮಾನಸಿಕಳಾಗಿ ಸಿದ್ಧಳಾಗುತ್ತ ಹೋದೆ. ಕಿಮೋಥೆರಪಿ ತೆಗೆದುಕೊಂಡಾಗ ವಿಪರೀತ ಸುಸ್ತಾಗುತ್ತಿತ್ತು. ಜಾಸ್ತಿ ಹಸಿವಾಗುತ್ತಿತ್ತು. ಮಾಮೂಲಿ ತಿನ್ನುತ್ತಿದ್ದುದಕ್ಕಿಂತ ಮೂರರಷ್ಟು ಜಾಸ್ತಿ ತಿನ್ನುತ್ತಿದ್ದೆ. ಉಳಿದಂತೆ ಆರ್ಬಿಸಿ ಕಡಿಮೆಯಾಗುವುದಾಗಲೀ, ವಾಂತಿಯಾಗುವುದಾಗಲೀ ಆಗುತ್ತಿರಲಿಲ್ಲ.
ಒಂದು ಮುಖ್ಯವಾದ ಅಂಶ ಹೇಳಬೇಕೆಂದರೆ ಕ್ಯಾನ್ಸರ್ ವಿಚಾರದಲ್ಲಿ ಇಂಥದ್ದೇ ನಿರ್ದಿಷ್ಟ ಲಕ್ಷಣಗಳು ಅಂತಿಲ್ಲ. ಕಿಮೋಥೆರಪಿ ತೆಗೆದುಕೊಂಡ ಬಳಿಕವೂ ಅಷ್ಟೇ, ನನ್ನಲ್ಲಿನ ಲಕ್ಷಣವೇ ಇನ್ನೊಬ್ಬ ರೋಗಿಯಲ್ಲಿ ಕಾಣಿಸಿಕೊಳ್ಳುತ್ತದೆ ಎಂದೂ ಹೇಳಲಾಗದು. ಕೆಲವರು ತುಂಬ ಆರಾಮಾಗಿ ಇರುತ್ತಾರೆ. ಕಿಮೋ ತೆಗೆದುಕೊಂಡು ಹೋಗಿ ಕೆಲಸ ಮಾಡಿದವರೂ ಇದ್ದಾರೆ. ಹಾಗೇ ಒಂದು ಅಗುಳು ತಿನ್ನಲ್ಲಾಗದೆ, ತಿಂದಿದ್ದೆಲ್ಲ ವಾಂತಿಯಾಗಿ ಕಷ್ಟಪಟ್ಟವರೂ ಇದ್ದಾರೆ. ಹಾಗಾಗಿ ನೋಡಿ, ಕ್ಯಾನ್ಸರ್ ಬಂದರೆ ಹೀಗೇ ಆಗುತ್ತದೆ, ಕಿಮೋಥೆರಪಿ ತೆಗೆದುಕೊಂಡರೆ ಈ ಲಕ್ಷಣಗಳೆಲ್ಲ ಕಾಣಿಸಿಕೊಳ್ಳುತ್ತವೆಂದು ಸ್ಪಷ್ಟವಾಗಿ ಹೇಳಲು ಸಾಧ್ಯವೇ ಇಲ್ಲ. ಇನ್ನು ಕೆಲವು ಕೇಸ್ಗಳಲ್ಲಿ, ಕಿಮೋಥೆರಪಿ ಕೊಡಲು ಸಾಧ್ಯವಿಲ್ಲ, ನಿಮ್ಮ ದೇಹ ಅದನ್ನು ತಡೆದುಕೊಳ್ಳುವುದಿಲ್ಲ ಎಂದು ರೋಗಿಗಳಿಗೆ ವೈದ್ಯರೇ ಹೇಳಿಬಿಡುತ್ತಾರೆ. ಅದಕ್ಕೆ ಹಲವು ಕಾರಣಗಳೂ ಇರುತ್ತವೆ.
ಜೀವನ ಪ್ರೀತಿ ಬೆಳೆಸಿಕೊಳ್ಳುವುದು ಮುಖ್ಯ ಒಮ್ಮೆ ಕ್ಯಾನ್ಸರ್ ಗೆದ್ದುಬಿಟ್ಟೆವೆಂದರೆ ಅಲ್ಲಿಗೆ ಆತಂಕ ಮುಗಿದೇಹೋಯಿತು ಎಂದಲ್ಲ. ಅದು ಮತ್ತೆ ಬರಬಹುದಾ ಎಂಬ ಭಯ ಕಾಡುತ್ತಲೇ ಇರುತ್ತದೆ. ನನಗೂ ಹಾಗಾಗಿತ್ತು. ಒಮ್ಮೆ ಕ್ಯಾನ್ಸರ್ ಪೂರ್ತಿ ಹೋಯಿತು ಎಂದರೂ ಪ್ರತಿ ಬಾರಿಯೂ PET ಸ್ಕ್ಯಾನ್ಗೆ ಹೋಗುವಾಗ ಭಯವಾಗುತ್ತಿತ್ತು. ಎಲ್ಲಾದರೂ ಮತ್ತೆ ಕ್ಯಾನ್ಸರ್ ಕಾಣಿಸಿಕೊಂಡರೆ ಎಂಬ ದುಗುಡ ಇದ್ದೇ ಇರುತ್ತಿತ್ತು. ಆದರೆ ನನಗೆ ನಾನೇ ಧೈರ್ಯ ತುಂಬಿಕೊಂಡೆ. ಸಾವು ಎಂಬುದು ಯಾರಿಗೆ, ಯಾವಾಗ, ಹೇಗೆ ಬರುತ್ತದೆ ಎಂಬುದೇ ಗೊತ್ತಿರುವುದಿಲ್ಲ. ಒಮ್ಮೆಲೇ ಹಾರ್ಟ್ ಫೇಲ್ಯೂರ್ ಆಗಬಹುದು. ಆ್ಯಕ್ಸಿಡೆಂಟ್ ಆಗಿ ಪ್ರಾಣ ಹೋಗಿಬಿಡಬಹುದು.
ಹೀಗಾಗಿ ನಮ್ಮ ಜೀವನ ಯಾವತ್ತಿದ್ದರೂ ಅನಿಶ್ಚಿತವೇ. ನಾನು ಈ ಅನಿಶ್ಚಿತತೆಯನ್ನು ಅರ್ಥ ಮಾಡಿಕೊಂಡು, ನನ್ನ ಮನಸನ್ನು ನಾನು ಸಿದ್ಧಪಡಿಸಿಕೊಂಡೆ. ಈಗಂತೂ ಸಾವು ಬಂದರೆ ಬರಲಿ ಬಿಡು ಎಂಬ ಭಾವವನ್ನೇ ಗಟ್ಟಿಮಾಡಿಕೊಂಡುಬಿಟ್ಟಿದ್ದೇನೆ. ದಿನವೂ ಹೆದರಿಕೊಂಡೇ ಬದುಕಬಾರದು. ಆದರೆ ಕೆಲವರು ಮಾನಸಿಕವಾಗಿ ತುಂಬ ಕುಗ್ಗಿಹೋಗುತ್ತಾರೆ. ಕ್ಯಾನ್ಸರ್ ಗೆದ್ದರೂ ಅದು ಹುಟ್ಟಿಸಿದ ಭಯವನ್ನು ಮನಸಿನ ಆಳದಲ್ಲಿ ಹಾಗೇ ಇಟ್ಟುಕೊಂಡಿರುತ್ತಾರೆ. ಹಾಗೇ ಭಯಪಡುತ್ತ ಹೋದರೆ ಸಾವು ನಮ್ಮ ಬಳಿಯೇ ಇದೆ ಎಂದು ಎನ್ನಿಸುತ್ತ ಇರುತ್ತದೆ. ಹಾಗಾಗಿ ನಮ್ಮ ಮನಸಿನ ಶಕ್ತಿಯನ್ನು ನಾವೇ ಹೆಚ್ಚಿಸಿಕೊಳ್ಳಬೇಕು. ಮುಂದೆಂದೋ ಒಂದಿನ ಬರುವ ಸಾವಿಗಾಗಿ ಇಡೀ ಬದುಕನ್ನು ಕೊರಗುತ್ತಲೇ ಕಳೆಯಬಾರದು. ಇರುವಷ್ಟು ದಿನ ಖುಷಿಯಿಂದ, ನಗುತ್ತ ಜೀವಿಸಿಬಿಡಿ.
World Cancer Day 2021 ಕ್ಯಾನ್ಸರ್ಗೆ ಕಾರಣಗಳು ಒಂದೆರಡಲ್ಲ.. ಬೊಜ್ಜು, ಅತಿಯಾದ ತೂಕದಿಂದಲೂ ಅಪಾಯ !
World Cancer Day 2021 | ಆಹಾರದ ಬಗ್ಗೆ ಇರಲಿ ಎಚ್ಚರ, ಸಂಸ್ಕರಿಸಿದ ಮಾಂಸ, ತಿಂಡಿಗಳಿಂದ ದೂರ ಇದ್ದುಬಿಡಿ
Published On - 7:49 pm, Thu, 4 February 21