ಇಂದು (ಫೆ.4) ವಿಶ್ವ ಕ್ಯಾನ್ಸರ್ ದಿನ (World Cancer Day). ಜಗತ್ತಿನೆಲ್ಲೆಡೆ ಕ್ಯಾನ್ಸರ್ ಬಗೆಗಿನ ಆತಂಕ, ತಪ್ಪುಕಲ್ಪನೆಗಳನ್ನು ಹೋಗಲಾಡಿಸಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ವಿಶ್ವ ಕ್ಯಾನ್ಸರ್ ದಿನವನ್ನು ಆಚರಿಸಲಾಗುತ್ತದೆ. ಈ ನಡುವೆ ಬೆಂಗಳೂರು ಸೇರಿದಂತೆ ದೇಶದಲ್ಲಿ ಸ್ತನ ಕ್ಯಾನ್ಸರ್ ಪ್ರಕರಣಗಳು ಏರಿಕೆಯಾಗುತ್ತಿವೆ ಎಂದು ಶ್ರೀ ಶಂಕರ ಕ್ಯಾನ್ಸರ್ ಪೌಂಡೇಶನ್ (Sri Shankara Cancer Foundation ) ಮಾಹಿತಿಯನ್ನು ಹಂಚಿಕೊಂಡಿದೆ. ಕಳೆದ ಮೂರು ವರ್ಷಗಳಲ್ಲಿ 23,328 ಮಂದಿ ಕ್ಯಾನ್ಸರ್ಗೆ ತುತ್ತಾಗಿದ್ದು ಚಿಕಿತ್ಸೆ ಪಡೆದಿದ್ದಾರೆ. ಈ ವೇಳೆ ಮಕ್ಕಳಲ್ಲೂ ಕ್ಯಾನ್ಸರ್ ಏರಿಕೆಯಾಗುತ್ತಿರುವುದು ಕಂಡುಬಂದಿದೆ. ಅಲ್ಲದೆ ಕಳೆದ ಮೂರು ವರ್ಷಗಳಲ್ಲಿ ಪತ್ತೆಯಾದ ಕ್ಯಾನ್ಸರ್ ಪ್ರಕರಣಗಳಲ್ಲಿ 3,810 ಮಂದಿ ಸ್ತನ ಕ್ಯಾನ್ಸರ್ನಿಂದ (Breast cancer) ಬಳಲುತ್ತಿದ್ದಾರೆ. ಹೀಗಾಗಿ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಅದರಲ್ಲೂ ನಗರ ಪ್ರದೇಶ ಮಾತ್ರವಲ್ಲದೆ ಗ್ರಾಮೀಣ ಭಾಗಗಳಲ್ಲೂ ಸ್ತನ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಹೇಳಲಾಗಿದೆ.
ಈ ಕುರಿತು ಡಾ.ಬಿಎಸ್ ಶ್ರೀನಾಥ್ ಮಾತನಾಡಿ ಇಷ್ಟು ದಿನಗಳವರೆಗೆ ದೊಡ್ಡ ನಗರಗಳಲ್ಲಿ ಮಾತ್ರ ಸ್ತನ ಕ್ಯಾನ್ಸರ್ ಪ್ರಕರಣಗಳು ಹೆಚ್ಚು ಕಂಡುಬರುತ್ತಿದ್ದವು. ಇತ್ತೀಚಿನ ದಿನಗಳಲ್ಲಿ ಅದು ಗ್ರಾಮೀಣ ಪ್ರದೇಶಗಳಿಗೂ ಹಬ್ಬುತ್ತಿದ್ದು 20, 22 ವರ್ಷದ ಯುವತಿಯರಲ್ಲೂ ಸ್ತನ ಕ್ಯಾನ್ಸರ್ ಕಾಡುತ್ತಿದೆ ಎಂದಿದ್ದಾರೆ. ಈ ಕುರಿತು ಇಡಿಯನ್ ಎಕ್ಪ್ರಸೆ ಸುದ್ದಿ ಸಂಸ್ಥೆ ವರದಿ ಮಾಡಿದೆ. ಅಲ್ಲದೆ ಇನ್ನೊಂದು ವರದಿಯ ಪ್ರಕಾರ ಸ್ತನ ಕ್ಯಾನ್ಸರ್ ಪ್ರಕರಣಗಳಲ್ಲಿ ಚೆನ್ನೈ ಮೊದಲ ಸ್ಥಾನದಲ್ಲಿದ್ದು ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ಪ್ರತೀ ವರ್ಷ ಪ್ರತಿ 1 ಲಕ್ಷದಲ್ಲಿ 41 ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ರಾಜ್ಯದಲ್ಲಿ ವರ್ಷಕ್ಕೆ 9,800 ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಪತ್ತೆಯಾಗುತ್ತಿದೆ. ಸದ್ಯ 26ರಿಂದ 30 ಸಾವಿರ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.
ಸ್ತನ ಕ್ಯಾನ್ಸರ್ಗೆ ಮುಖ್ಯವಾಗಿ ತಂಬಾಕು, ಮದ್ಯಪಾನ, ಕೆಂಪು ಮಾಂಸ ಸೇವನೆ, ಮಾಲಿನ್ಯ ತುಂಬಿದ ಸ್ಥಳಗಳಲ್ಲಿ ಓಡಾಟ, ಹೆಚ್ಚು ಮಕ್ಕಳನ್ನು ಪಡೆಯುವುದು, ವಯಕ್ತಿಕ ಸ್ವಚ್ಛತೆಯ ಕೊರತೆ ಜತೆಗೆ ಅಸುರಕ್ಷಿತ ಲೈಂಗಿಕ ಕ್ರಿಯೆ ನಡೆಸುವುದರಿಂದಲೂ ಸ್ತನ ಕ್ಯಾನ್ಸರ್ ಕಾಡುತ್ತದೆ. ಕಳೆದ ಮೂರು ವರ್ಷದಲ್ಲಿ 1,305 ಮಂದಿ ಕ್ಯಾನ್ಸರ್ನಿಂದ ಮೃತಪಟ್ಟಿದ್ದಾರೆ. ಅದರಲ್ಲಿ ಹೆಚ್ಚಿನ ಪ್ರಕರಣಗಳು ಶ್ವಾಸಕೋಶದ ಕ್ಯಾನ್ಸರ್ ಆಗಿದೆ. 2020ರಲ್ಲಿ ಭಾರತದಲ್ಲಿ ಒಟ್ಟು 1.4 ಮಿಲಿಯನ್ ಹೊಸ ಕ್ಯಾನ್ಸರ್ ಪ್ರಕರಗಳು ದೃಢಪಟ್ಟಿವೆ. ಜಗತ್ತಿನಾದ್ಯಂತ ಭಾರದಂತಹ ಮುಂದುವರೆಯುತ್ತಿರುವ ದೇಶಗಳಲ್ಲಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿವೆ ಅಲ್ಲದೆ ಸಾವಿನ ಪ್ರಮಾಣವೂ ಏರಿಕೆಯಾಗುತ್ತಿದೆ. ಮುಂದುವರೆದ ರಾಷ್ಟ್ರಗಳಿಗೆ ಹೋಲಿಸಿದರೆ ಮುಂದುರೆಯುತ್ತಿರುವ ದೇಶಗಳಲ್ಲಿ ಕ್ಯಾನ್ಸರ್ ತೀವ್ರವಾಗಿ ಕಾಡುತ್ತಿದೆ. ಇದಕ್ಕೆ ಮೂಲ ಕಾರಣ ಎಂದರೆ ಕ್ಯಾನ್ಸರ್ ಪೀಡಿತರು ಕೊನೆಯ ಹಂತದಲ್ಲಿ ವೈದ್ಯರನ್ನು ಸಂಪರ್ಕಿಸುತ್ತಾರೆ. ಆಗ ಚಿಕಿತ್ಸೆಯ ಹಂತ ದಾಟಿರುತ್ತದೆ. ಹೀಗಾಗಿ ಮರಣಪ್ರಮಾಣ ಹೆಚ್ಚಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಜಾಗೃತಿ ಮೂಡುತ್ತಿದೆ. ಆದರೂ ಜನ ಇನ್ನೂ ಜಾಗೃತರಾಗುವ ಅವಶ್ಯಕತೆ ಇದೆ ಎನ್ನುತ್ತಾರೆ ವೈದ್ಯರು.
ಇದನ್ನೂ ಓದಿ:
ಅರಿಶಿನ ನೀರು ಕುಡಿಯುವುದರಿಂದ ಕ್ಯಾನ್ಸರ್ ದೂರವಾಗುತ್ತದೆಯೇ? ಇಲ್ಲಿದೆ ಮಾಹಿತಿ