World Liver Day 2023: ಮಧುಮೇಹವು ಯಕೃತ್ತಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಅದರ ನಿರ್ವಹಣೆ ಹೇಗೆ?

| Updated By: ಅಕ್ಷಯ್​ ಪಲ್ಲಮಜಲು​​

Updated on: Apr 19, 2023 | 2:04 PM

ಆಲ್ಕೋಹಾಲ್ ಯುಕ್ತವಲ್ಲದ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ ಮತ್ತು ಇತರ ಹಲವಾರು ರೀತಿಯ ಪಿತ್ತಜನಕಾಂಗದ ಕಾಯಿಲೆಗಳಿಗೆ ಮಧುಮೇಹವು ಪ್ರಮುಖ ಅಪಾಯಕಾರಿ ಅಂಶವೆಂದು ಪರಿಗಣಿಸಲಾಗಿದೆ. ಆದ್ದರಿಂದ ಮಧುಮೇಹ ಇರುವವರು ತಮ್ಮ ಯಕೃತ್ತಿನ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸುವುದು ಮುಖ್ಯವಾಗಿದೆ.

World Liver Day 2023: ಮಧುಮೇಹವು ಯಕೃತ್ತಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಅದರ ನಿರ್ವಹಣೆ ಹೇಗೆ?
ಸಾಂದರ್ಭಿಕ ಚಿತ್ರ
Follow us on

ಯಕೃತ್ತು (Liver) ಅಥವಾ ಪಿತ್ತಜನಕಾಂಗ ದೇಹದಲ್ಲಿನ ಸಂಕೀರ್ಣ ಅಂಗಗಳಲ್ಲಿ ಒಂದಾಗಿದೆ. ಇದು ಜೀರ್ಣಕ್ರಿಯೆ, ರೋಗನಿರೋಧಕ ಶಕ್ತಿ ಮತ್ತು ಚಯಾಪಚಯ ಕ್ರಿಯೆಗೆ ಕಾರಣವಾಗಿದೆ. ಇತರ ದೈಹಿಕ ಅಸ್ವಸ್ಥತೆಗಳಿಗೆ ಹೋಲಿಸಿದರೆ ಯಕೃತ್ತಿಗೆ ಸಂಬಂಧಿಸಿದ ಅಸ್ವಸ್ಥತೆಗಳ ಬಗ್ಗೆ ಜನರಿಗೆ ಹೆಚ್ಚಾಗಿ ತಿಳಿದಿಲ್ಲ. ಹಾಗಾಗಿ ಪ್ರತಿ ವರ್ಷ ಏಪ್ರಿಲ್ 19 ರಂದು ಯಕೃತ್ತಿಗೆ ಸಂಬಂಧಿಸಿದ ಅಸ್ವಸ್ಥತೆಗಳು ಮತ್ತು ರೋಗಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಯಕೃತ್ತಿನ ದಿನವನ್ನು (world liver day) ಆಚರಿಸಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ , ಭಾರತದಲ್ಲಿ ಯಕೃತ್ತಿನ ಕಾಯಿಲೆಗಳು ಸಾವಿಗೆ 10 ಸಾಮಾನ್ಯ ಕಾರಣಗಳಲ್ಲಿ ಒಂದಾಗಿದೆ. ಕೊಬ್ಬಿನ ಯಕೃತ್ತು ಮತ್ತು ಇತರ ಯಕೃತ್ತಿನ ಸಮಸ್ಯೆಗಳ ಬಗ್ಗೆ ಕೇಳಿದ್ದೇವೆ. ಆದರೆ ಮಧುಮೇಹವು ಯಕೃತ್ತಿನ ಕಾರ್ಯವಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ.

ಮಧುಮೇಹವು ಯಕೃತ್ತಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ರೂಬಿ ಹಾಲ್ ಕ್ಲಿನಿಕ್ ನ ಕನ್ಸಲ್ಟೆಂಟ್ ಗ್ಯಾಸ್ಟ್ರೋಎಂಟರಾಲಜಿಸ್ಟ್, ಹೆಪಟಾಲಜಿಸ್ಟ್ ಡಾ. ವಿಕ್ರಾಂತ್ ಕಾಲೆ ಅವರು ದೀರ್ಘಕಾಲದ ಮಧುಮೇಹದ ಸಮಸ್ಯೆಯು ಯಕೃತ್ತು ಮತ್ತು ದೇಹದಲ್ಲಿನ ವಿವಿಧ ಅಂಗಗಳು ಮತ್ತು ವ್ಯವಸ್ಥೆಗಳ ಮೇಲೆ ಅದು ಪರಿಣಾಮವನ್ನು ಬೀರುತ್ತದೆ ಎಂಬ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಮಧುಮೇಹವು ಯಕೃತ್ತಿಗೆ ಹಾನಿಯನ್ನುಂಟು ಮಾಡುತ್ತದೆ. ಇದು ಆಲ್ಕೋಹಾಲ್ ಯುಕ್ತವಲ್ಲದ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ. ಈ ಸ್ಥಿತಿಯು ಯಕೃತ್ತಿನಲ್ಲಿ ಕೊಬ್ಬಿನ ಶೇಖರಣೆಗೆ ಕಾರಣವಾಗುತ್ತದೆ. ಮಧುಮೇಹವನ್ನು ಸರಿಯಾಗಿ ನಿರ್ವಹಿಸದಿದ್ದರೆ, ಸಿರೋಸಿಸ್, ದೀರ್ಘಕಾಲದ ಯಕೃತ್ತಿನ ಕಾಯಿಲೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇದು ಪಿತ್ತಜನಕಾಂಗ ಗಾಯಗೊಳ್ಳಲು ಕಾರಣವಾಗುತ್ತದೆ. ಮತ್ತು ಅಂತಿಮವಾಗಿ ಸರಿಯಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಅದು ಕಳೆದುಕೊಳ್ಳುತ್ತದೆ. ಸಿಸೋರಿಸ್ ಬಹಳಷ್ಟು ತೊಡಕುಗಳನ್ನು ಉಂಟುಮಾಡುತ್ತದೆ. ಹೊಟ್ಟೆಯಲ್ಲಿ ದ್ರವ ಶೇಖರಣೆ, ಅನ್ನನಾಳ ಅಥವಾ ಹೊಟ್ಟೆಯಲ್ಲಿ ವಿಸ್ತರಿಸಿದ ರಕ್ತನಾಳಗಳಿಂದ ರಕ್ತಸ್ರಾವ ಮತ್ತು ಯಕೃತ್ತಿನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.

ಮಧುಮೇಹವು ಯಕೃತ್ತಿನ ಮೇಲೆ ನೇರವಾಗಿ ಪರಿಣಾಮ ಬೀರುವುದಲ್ಲದೆ, ಮಧುಮೇಹಕ್ಕೆ ಸಂಬಂಧಿಸಿದ ಇತರ ಅಂಶಗಳು ಯಕೃತ್ತಿನ ಹಾನಿಗೆ ಕಾರಣವಾಗಬಹುದು. ಇದರಲ್ಲಿ ಬೊಜ್ಜು, ಅಧಿಕ ರಕ್ತದೊತ್ತಡ ಮತ್ತು ಅಧಿಕ ಕೊಲೆಸ್ಟ್ರಾಲ್ ಮಟ್ಟಗಳು ಸೇರಿವೆ. ಇದು ಮಧುಮೇಹ ಹೊಂದಿರುವ ಜನರಲ್ಲಿ ಸಾಮಾನ್ಯವಾಗಿದೆ ಮತ್ತು ಇದು ಯಕೃತ್ತಿನ ಕಾಯಿಲೆಗಳನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಹೆಚ್ಚಿಸುತ್ತದೆ.

ಮಧುಮೇಹದಿಂದ ಬಳಲುತ್ತಿರುವವರು ತಮ್ಮ ಯಕೃತ್ತಿನ ಬಗ್ಗೆ ಕಾಳಜಿ ವಹಿಸುವುದು ಹೇಗೆ?

ನೀವು ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದರೆ, ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವುದು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಪಾಲಿಸುವುದು ಬಹಳ ಮುಖ್ಯ. ಅದಕ್ಕಾಗಿ ಇಲ್ಲಿವೆ ಸರಳ ಸಲಹೆಗಳು:

ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಿ: ರಕ್ತದಲ್ಲಿನ ಸಕ್ಕರೆ ಮಟ್ಟವು ಅಧಿಕವಾಗಿದ್ದರೆ, ಅದು ಯಕೃತ್ತಿನ ಹಾನಿಯ ಅಪಾಯವನ್ನು ಹೆಚ್ಚಿಸಬಹುದು. ಆದ್ದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಮಿತವಾಗಿ ಪರೀಕ್ಷಿಸುವುದು ಮುಖ್ಯ ಮತ್ತು ನಿಮ್ಮ ವೈದ್ಯರ ಸಹಾಯದಿಂದ ಮಧುಮೇಹ ನಿರ್ವಹಣೆ ಯೋಜನೆಯನ್ನು ಮಾಡಿಕೊಳ್ಳಿ.

ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಿ: ಒಬ್ಬ ವ್ಯಕ್ತಿಯು ಅಧಿಕ ತೂಕ ಅಥವಾ ಬೊಜ್ಜು ಹೊಂದಿದ್ದರೆ ಅದು ಕೊಬ್ಬಿನ ಯಕೃತ್ತಿನ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಆರೋಗ್ಯಕರ ಆಹಾರ ಸೇವನೆ ಮತ್ತು ವ್ಯಾಯಾಮದ ಮೂಲಕ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ.

ಆರೋಗ್ಯಕರ ಆಹಾರವನ್ನು ಸೇವಿಸಿ: ಸ್ಯಾಚುರೇಟೆಡ್ ಮತ್ತು ಟ್ರಾನ್ಸ್ ಕೊಬ್ಬುಗಳನ್ನು ಹೊಂದಿರುವ ಆಹಾರಗಳು ಕೊಬ್ಬಿನ ಯಕೃತ್ತಿನ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಹಣ್ಣುಗಳು, ಧಾನ್ಯಗಳು, ಪ್ರೋಟೀನ್ ಗಳು ಮತ್ತು ಆರೋಗ್ಯಕರ ಕೊಬ್ಬುಗಳಲ್ಲಿ ಸಮೃದ್ಧವಾಗಿರುವ ಆಹಾರಗಳನ್ನು ಸೇವಿಸಿ.

ಆಲ್ಕೋಹಾಲ್ ಸೇವನೆ ತಪ್ಪಿಸಿ: ಆಲ್ಕೋಹಾಲ್ ಸೇವನೆ ಯಕೃತ್ತಿನ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ ಮತ್ತು ಮಧುಮೇಹ ಹೊಂದಿರುವ ಜನರು ಆಲ್ಕೋಹಾಲ್ ಸಂಬಂಧಿತ ಯಕೃತ್ತಿನ ಕಾಯಿಲೆಯ ಅಪಾಯವನ್ನು ಹೊಂದಿರುತ್ತಾರೆ. ಆದ್ದರಿಂದ ಆಲ್ಕೋಹಾಲ್ ಸೇವಿಸುವುದನ್ನು ತಪ್ಪಿಸುವುದು ಒಳ್ಳೆಯದು.

ನಿಯಮಿತ ಆರೋಗ್ಯ ತಪಾಸಣೆ: ನಿಯಮಿತವಾಗಿ ಯಕೃತ್ತಿನ ಪರೀಕ್ಷೆಯನ್ನು ಮಾಡುವುದರಿಂದ ಯಕೃತ್ತಿನ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಲು ಮತ್ತು ಯಾವುದೇ ಸಮಸ್ಯೆಗಳನ್ನು ಮೊದಲೇ ಪತ್ತೆಹಚ್ಚಲು ಸಹಾಯ ಮಾಡುತ್ತದೆ. ಯಕೃತ್ತಿನ ರೋಗಗಳು ಯಾವುದೇ ಗಮನಾರ್ಹ ಲಕ್ಷಣಗಳನ್ನು ಹೊಂದಿರುವುದಿಲ್ಲ, ಆದರೆ ಇದು ಯಕೃತ್ತಿಗೆ ಗಂಭೀರವಾದ ಹಾನಿಯನ್ನು ಉಂಟುಮಾಡುತ್ತದೆ. ಆದ್ದರಿಂದ ನಿಯಮಿತವಾಗಿ ವೈದ್ಯರನ್ನು ಭೇಟಿಯಾಗಿ ತಪಾಸಣೆ ಮಾಡುವುದು ಮುಖ್ಯವಾಗಿರುತ್ತದೆ.