ರಾಜಕೀಯ ಕ್ಷೇತ್ರದಲ್ಲಿ ಈ ಥರದ ಜಾತಕ ಇರುವಂಥವರು ಬಹುತೇಕ ಎಲ್ಲ ಪಕ್ಷಗಳಲ್ಲೂ ನೋಡಲಿಕ್ಕೆ ಸಿಗುತ್ತಾರೆ. ಆದರೆ ಇಷ್ಟು ದೊಡ್ಡ ಮಟ್ಟದಲ್ಲಿ ಜನರ ಮುಂದೆಯೂ ಅವರು ಪ್ರಭಾವಿ ಆಗಿ ಕಾಣಿಸಿಕೊಳ್ಳುವುದು ವಿರಳಾತಿವಿರಳ. ಆ ಕಾರಣದಿಂದಲೇ ಈ ವ್ಯಕ್ತಿಯ ಜಾತಕ ವಿಶ್ಲೇಷಣೆ ಒಂದು ರೀತಿಯಲ್ಲಿ ಆಸಕ್ತಿಕರ ಹಾಗೂ ಸವಾಲು. ಈ ಲೇಖನದಲ್ಲಿ ವಿಶ್ಲೇಷಣೆ ಮಾಡುತ್ತಿರುವುದು ಕೇಂದ್ರ ಗೃಹಸಚಿವರಾದ ಅಮಿತ್ ಶಾ ಅವರ ಜಾತಕವನ್ನು. ಆರಂಭದಲ್ಲಿಯೇ ಹೇಳಿದಂತೆ ಅತ್ಯುನ್ನತ ಸ್ಥಾನವನ್ನು ನಿರ್ವಹಿಸುವ ಸಾಮರ್ಥ್ಯ, ಅರ್ಹತೆ ಎಲ್ಲವೂ ಇವರಲ್ಲಿದೆ ಎಂಬುದು ಜಾತಕದ ಮೂಲಕವಾಗಿ ತಿಳಿದುಬರುತ್ತದೆ. ಆದರೆ ಇವರಿಗೆ ತೆರೆಯ ಹಿಂದೆ ಇದ್ದುಕೊಂಡು, ಕೆಲಸ ನಿರ್ವಹಿಸುವುದು ಬಹಳ ಆಸಕ್ತಿ. ಒಂದು ವೇಳೆ ಇವರು ನಂಬಿದಂಥ ಸಿದ್ಧಾಂತದಲ್ಲಿನ ಸಂಘಟನೆಯಿಂದ ಒತ್ತಡ ಬಂದರಷ್ಟೇ ಒಪ್ಪಿಕೊಂಡಿಯಾರು. ಅನಿವಾರ್ಯ ಸಂದರ್ಭದಲ್ಲಿ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ ವಿನಾ ಸ್ವತಃ ಮಹತ್ವಾಕಾಂಕ್ಷಿ ವ್ಯಕ್ತಿಯಲ್ಲ ಅಮಿತ್ ಶಾ ಎಂಬುದು ಜಾತಕದಿಂದ ತಿಳಿದುಬರುತ್ತದೆ.
ಅಮಿತ್ ಶಾ ಅವರದು ಭರಣಿ ನಕ್ಷತ್ರ, ಮೇಷ ರಾಶಿ ಹಾಗೂ ಕನ್ಯಾ ಲಗ್ನ. ಅಲ್ಲಿಂದ ದ್ವಿತೀಯದಲ್ಲಿ ಲಗ್ನಾಧಿಪತಿಗೆ ನಿಪುಣ ಯೋಗ ಇದೆ. ಜನ್ಮ ಜಾತಕದಲ್ಲಿ ಲಗ್ನಾಧಿಪತಿಯಾದ ಬುಧನಿಗೆ ಎಂಟನೇ ಮನೆಯಲ್ಲಿ ಗುರು ಗ್ರಹ ಇರುವುದರಿಂದ ಈತನ ವ್ಯಕ್ತಿತ್ವದಲ್ಲಿ ಅಧಿಕಾರಕ್ಕೆ ಸಂಬಂಧಿಸಿದಂತೆ ನಿಸ್ವಾರ್ಥತೆಯನ್ನು ಸೂಚಿಸುತ್ತದೆ. ಬರೀ ಒಂದು ಗ್ರಹ ಮಾತ್ರ ಹೀಗೆ ಸೂಚಿಸುತ್ತದೆ ಅಂತಲ್ಲ. ಇದಕ್ಕೆ ಪೂರಕವಾಗಿ ಜನ್ಮ ಕುಂಡಲಿಯಲ್ಲಿ ಕುಂಭ ರಾಶಿಯಲ್ಲಿ ಶನಿ ಗ್ರಹ ಸ್ಥಿತವಾಗಿದೆ.
ನಿಮಗೆ ಗೊತ್ತಿರಲಿ, ಯಾರ ಜಾತಕದಲ್ಲಿ ಕುಂಭ ರಾಶಿಯಲ್ಲಿ ಶನಿ ಗ್ರಹ ಇರುತ್ತದೋ ಅಂಥವರು ಸ್ವತಃ ಅಧಿಕಾರಕ್ಕೆ ಏರಬೇಕು ಎಂದು ಬಯಸುವವರಲ್ಲ. ಇನ್ನು ಅಂಥವರಿಗೆ ಉನ್ನತ ಸ್ಥಾನಕ್ಕೆ ಏರುವುದು ಸಹ ಸಾಧ್ಯವಾಗುವುದಿಲ್ಲ. ಇವರು ಎಂದಿದ್ದರೂ ಕಿಂಗ್ ಮೇಕರ್ ಗಳೇ. ಒಂದು ವ್ಯವಸ್ಥೆಯಲ್ಲಿ ತೆರೆಯ ಹಿಂದೆ ನಿಂತು, ಎಲ್ಲವನ್ನೂ ಸಂಭಾಳಿಸುವಂತಹ ಹಾಗೂ ನಿಭಾಯಿಸುವಂಥ ಛಾತಿ ಇರುವಂಥವರು ಹಾಗೂ ನಿರೀಕ್ಷೆ ಕೂಡ ಮಾಡಲು ಸಾಧ್ಯವಿಲ್ಲದಷ್ಟು ನೇರವಂತರು ಹಾಗೂ ಬುದ್ಧಿವಂತರು.
ಅಮಿತ್ ಶಾ ಅವರಿಗೆ ಈಗ ಗುರು ದಶೆಯಲ್ಲಿ ಶನಿ ಭುಕ್ತಿ. ಗುರು ಗ್ರಹವು ಇವರಿಗೆ ಖರದ್ರೇಕ್ಕಾಣಾಧಿಪತಿ. ಹೀಗೆ ಇರುವುದರಿಂದಾಗಿ ಆರೋಗ್ಯದಲ್ಲಿ ಸಮಸ್ಯೆ ಇರುತ್ತದೆ. ತಮ್ಮ ಸ್ಥಿತಿಯನ್ನು ಒಪ್ಪಿಕೊಳ್ಳುವ ಇವರು ಆ ಕಾರಣದಿಂದಾಗಿಯೇ ಪ್ರಧಾನಮಂತ್ರಿಯಂಥ ಅತಿದೊಡ್ಡ ಜವಾಬ್ದಾರಿಯುತ ಸ್ಥಾನವನ್ನು ಒಪ್ಪಿಕೊಳ್ಳುವುದಿಲ್ಲ, ಬಯಸುವುದಿಲ್ಲ. ಆದರೆ ಇವರಿಗೆ ಪರಿಸ್ಥಿತಿ ಹಾಗೂ ಸನ್ನಿವೇಶ ಬಹಳ ಮುಖ್ಯ. ತಾನು ನಂಬಿದ ಸಿದ್ಧಾಂತ ಹಾಗೂ ತನಗೆ ಎಲ್ಲವನ್ನೂ ಕೊಟ್ಟ ಪಕ್ಷವನ್ನೂ ಎಂಥ ಕ್ಷಣದಲ್ಲೂ ಸಮಸ್ಯೆಗೆ ಅಥವಾ ಸಂಕಷ್ಟಕ್ಕೆ ಗುರಿ ಆಗದಂತೆ ನೋಡಿಕೊಳ್ಳುವ ಸ್ವಭಾವ ಇವರದಾಗಿರುತ್ತದೆ. ಆದ್ದರಿಂದ ಅನಿವಾರ್ಯ ಪರಿಸ್ಥಿತಿಯಲ್ಲಿ, ಒತ್ತಡದ ಕಾರಣಕ್ಕೆ ಅಮಿತ್ ಶಾ ಪ್ರಧಾನಿ ಹುದ್ದೆಗೆ ಏರಬಹುದೇ ವಿನಾ ವ್ಯಕ್ತಿಗತವಾದ ಮಹತ್ವಾಕಾಂಕ್ಷೆಯಿಂದಂತೂ ಖಂಡಿತಾ ಅಲ್ಲ.
ಇದನ್ನೂ ಓದಿ: ಗುರು ಹಾಗೂ ಸೂರ್ಯರ ಯೋಗದಿಂದ ಯಾವ ರಾಶಿಗೆ ಏನೇನು ಫಲ?
ಅಮಿತ್ ಶಾ ತಮ್ಮ ಆರೋಗ್ಯಕ್ಕೆ ಬಹಳ ಪ್ರಾಮುಖ್ಯ ನೀಡಲೇಬೇಕು. ಇನ್ನು ಇವರ ಜಾತಕದಲ್ಲಿ ನೀಗಡ ದ್ರೇಕ್ಕಾಣ ಇದೆ. ಹೀಗಂದರೆ ಶೃಂಖಲಾ, ಬಂಧನ ಇತ್ಯಾದಿ ಅರ್ಥವಿದೆ. ಇದು ದ್ವಾದಶ ಭಾವದಲ್ಲಿ ಇರುವ ಏಕೈಕ ದ್ರೇಕ್ಕಾಣ. 28ನೇ ದ್ರೇಕ್ಕಾಣ ಇದು. ಮಕರದಲ್ಲಿ ಇರುತ್ತದೆ. ಇದರ ಅಧಿಪತಿ ಶನಿ. ಇವರ ಲಗ್ನಕ್ಕೆ ಪಂಚಮ ಸ್ಥಾನದಲ್ಲಿದೆ. ಮುಂದೆ ಮಕ್ಕಳೇ ಇವರ ಚಟುವಟಿಕೆಗಳಿಗೆ ಕಡಿವಾಣ ಹಾಕಬಹುದು. ಅಂದರೆ ಪಿತೃ ಭಕ್ತಿ, ವಾತ್ಸಲ್ಯದಿಂದ ಇನ್ನು ಹೆಚ್ಚು ಹೆಚ್ಚು ಜವಾಬ್ದಾರಿ ಬೇಡ ನಿಮಗೆ, ಆರೋಗ್ಯದ ಬಗ್ಗೆ ಗಮನ ಹರಿಸಿ ಎಂದು ಹೇಳುವಂಥದ್ದನ್ನೇ ಮಕ್ಕಳಿಂದ ‘ಬಂಧನ’ ಎಂದು ಹೇಳಬಹುದು.
2029ನೇ ಇಸವಿಯ ತನಕ ಅಮಿತ್ ಶಾ ಆರೋಗ್ಯ, ಆಯುಷ್ಯಕ್ಕೂ ಸಮಸ್ಯೆ ಇರದು. ಲಗ್ನದ ಕರ್ಮ ಸ್ಥಾನದಲ್ಲಿ ಉಚ್ಚ ರಾಹು ಇರುವುದರಿಂದ ಅವರನ್ನು ಅಪ್ರಾಮಾಣಿಕರು ಎಂದು ಜ್ಯೋತಿಷ್ಯದ ಪ್ರಕಾರ ಹೇಳಲಾಗದು. ಬಹಳ ಪ್ರಾಮಾಣಿಕರೂ ಕೆಲಸದಲ್ಲಿ ತಲ್ಲೀನತೆಯೂ ಇವರ ಗುಣ. ಮತ್ತೆ ಅದೇ ಹುದ್ದೆಯಲ್ಲಿ ಮುಂದುವರಿಯಲು ಇವರಲ್ಲಿರುವ ಚಾಣಕ್ಷತನವೇ ವರವೂ ಆಗುತ್ತದೆ. ಇನ್ನು ಕೊನೆಯದಾಗಿ ಮತ್ತು ಅಷ್ಟೇ ಮುಖ್ಯವಾದ ಸಂಗತಿ ಏನೆಂದರೆ, ಹಠಕ್ಕೆ ಬಿದ್ದರೆ ಅದನ್ನು ಸಾಧಿಸದೆ ಬಿಡುವ ವ್ಯಕ್ತಿ ಇವರಲ್ಲ.
ಲೇಖಕರು: ಪ್ರಕಾಶ್ ಅಮ್ಮಣ್ಣಾಯ, ಜ್ಯೋತಿಷಿ, ಅಧ್ಯಾತ್ಮ ಚಿಂತಕರು, ಕಾಪು (ಉಡುಪಿ ಜಿಲ್ಲೆ)
(ಇಲ್ಲಿ ವ್ಯಕ್ತವಾಗಿರುವ ಅಭಿಪ್ರಾಯ ಲೇಖಕರದು. ಜ್ಯೋತಿಷ್ಯ ಆಧಾರದಲ್ಲಿ ಲೇಖಕರು ವಿಶ್ಲೇಷಣೆ ಮಾಡಿದ್ದು, ಅದರ ಸಂಪೂರ್ಣ ಜವಾಬ್ದಾರಿ ಲೇಖಕರದು. ಇಲ್ಲಿ ವ್ಯಕ್ತವಾಗಿರುವ ಲೇಖಕರ ಅಭಿಪ್ರಾಯವನ್ನು ಟಿವಿ9 ಕನ್ನಡ ವೆಬ್ ಸೈಟ್ ಆಗಲೀ ಅಥವಾ ಇತರ ಸೋದರ ಸಂಸ್ಥೆಗಳಾಗಲೀ ಅನುಮೋದಿಸುವುದಿಲ್ಲ.)