AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಹಾರದ ಫಲಿತಾಂಶದ ಬಗ್ಗೆ 3 ತಿಂಗಳ ಹಿಂದೆಯೇ ಭವಿಷ್ಯ ನುಡಿದಿತ್ತು ‘ಮಾಡರ್ನ್ ಅಸ್ಟ್ರಾಲಜಿ’

Bihar election astrology predictions: ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶ ಬಂದಿದ್ದು, ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳ ಒಕ್ಕೂಟವಾದ ಎನ್​ಡಿಎ ಅಭೂತಪೂರ್ವವಾದ ಜನಾದೇಶ ಪಡೆದುಕೊಂಡಿದೆ. ಇನ್ನು ಇದೇ ವೇಳೆ ಬೆಂಗಳೂರಿನಿಂದ ಪ್ರಕಟವಾಗುವ ಜ್ಯೋತಿಷ್ಯದ ಇಂಗ್ಲಿಷ್ ಮಾಸಪತ್ರಿಕೆ ಮಾಡರ್ನ್ ಅಸ್ಟ್ರಾಲಜಿ ಮತ್ತೆ ಸುದ್ದಿಯಲ್ಲಿದೆ. ಜ್ಯೋತಿಷ್ಯದಲ್ಲಿ ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿದ್ದ ಬಿ.ವಿ.ರಾಮನ್ ಅವರ ಮಗಳು ಗಾಯತ್ರಿ ದೇವಿ ವಾಸುದೇವ್ ಅವರ ಸಂಪಾದಕತ್ವದಲ್ಲಿ ಹೊರಬರುವ ಜ್ಯೋತಿಷ್ಯದ ನಿಯತಕಾಲಿಕೆಯಲ್ಲಿ ಬಿಹಾರದ ವಿಧಾನಸಭಾ ಚುನಾವಣೆ ಬಗ್ಗೆ ಏನು ಹೇಳಲಾಗಿತ್ತು ಎಂಬುದರ ವಿವರಣಾತ್ಮಕ ಲೇಖನ ಇಲ್ಲಿದೆ.

ಬಿಹಾರದ ಫಲಿತಾಂಶದ ಬಗ್ಗೆ 3 ತಿಂಗಳ ಹಿಂದೆಯೇ ಭವಿಷ್ಯ ನುಡಿದಿತ್ತು ‘ಮಾಡರ್ನ್ ಅಸ್ಟ್ರಾಲಜಿ’
Nitish Kumar
ಸ್ವಾತಿ ಎನ್​ಕೆ
| Updated By: ಸುಷ್ಮಾ ಚಕ್ರೆ|

Updated on: Nov 14, 2025 | 5:39 PM

Share

ಬೆಂಗಳೂರು, ನವೆಂಬರ್ 14: ಬಿಹಾರದಲ್ಲಿ ವಿಧಾನಸಭಾ ಚುನಾವಣೆ (Bihar Assembly Elections) ಮುಕ್ತಾಯವಾಗಿ ಇಂದು ಮತ ಎಣಿಕೆ ನಡೆದಿದೆ. ಬಿಜೆಪಿ-ಜೆಡಿಯು ಮೈತ್ರಿಯ ಎನ್​ಡಿಎ ಬಣ ಅಭೂತಪೂರ್ವ ಜಯ ಸಾಧಿಸಿದೆ. ಈ ಫಲಿತಾಂಶದ ಬಗ್ಗೆ 3 ತಿಂಗಳ ಹಿಂದೆಯೇ ‘ಮಾಡರ್ನ್ ಅಸ್ಟ್ರಾಲಜಿ’ ಭವಿಷ್ಯ ನುಡಿದಿತ್ತು. ‘ಮಾಡರ್ನ್ ಅಸ್ಟ್ರಾಲಜಿ’ ಮಾಸಪತ್ರಿಕೆಯಲ್ಲಿ ಬಿಹಾರದ ವಿಧಾನಸಭೆ ಚುನಾವಣೆ ಫಲಿತಾಂಶದ ಬಗ್ಗೆ ಬೊಕ್ಕ ಗಾಂಧಿ ಪ್ರಸಾದ್ ಎಂಬುವವರು ಲೇಖನವನ್ನು ಬರೆದಿದ್ದರು. ಅದೇ ಲೇಖನ ಪ್ರಕಟವಾಗಿರುವ ಪುಟದ ಕೆಳ ಭಾಗದಲ್ಲಿ ಸಂಪಾದಕರಿಗೆ ಅದು ತಲುಪಿರುವ ದಿನಾಂಕ ಜೂನ್ 27, 2025 ಎಂದು ಸಹ ತಿಳಿಸಲಾಗಿದೆ. ಬಿಹಾರದ ಚುನಾವಣೆ ಲೇಖನವನ್ನು ಸೆಪ್ಟೆಂಬರ್ ತಿಂಗಳ ಮಾಸಪತ್ರಿಕೆಯಲ್ಲಿ ಪ್ರಕಟಿಸಿದ್ದು, ಅದು ಆಗಸ್ಟ್ ತಿಂಗಳ ಕೊನೆ ಹೊತ್ತಿಗೆ ಮಾರುಕಟ್ಟೆಯಲ್ಲಿ ಲಭ್ಯವಿತ್ತು. ಇನ್ನು ಲೇಖನದಲ್ಲಿ ಬಿಜೆಪಿಯ ಬಗ್ಗೆ ಹೀಗೆ ಬರೆಯಲಾಗಿದೆ:

ಭಾರತೀಯ ಜನತಾ ಪಕ್ಷಕ್ಕೆ ಅದು ಸ್ಥಾಪನೆಯಾದ ದಿನದ ಸಮಯದ ಆಧಾರದಲ್ಲಿ ಕುಂಡಲಿಯನ್ನು ತಯಾರಿಸಲಾಗಿದ್ದು, ಜುಲೈ 14, 2025ರಿಂದ ಫೆಬ್ರವರಿ 10,2026ರ ತನಕ ಚಂದ್ರ ದಶೆಯಲ್ಲಿ ಕೇತು ಭುಕ್ತಿ ನಡೆಯುತ್ತದೆ. ಅದರಲ್ಲಿ ರಾಹುವಿನ ಅಂತರ ಭುಕ್ತಿ ಅಕ್ಟೋಬರ್ 12, 2025ರಿಂದ ನವೆಂಬರ್ 13,2025ರ ತನಕ ನಡೆಯುತ್ತದೆ. ಚಂದ್ರ ದಶೆ ಬಿಜೆಪಿಗೆ ಉತ್ತಮ ಫಲಿತಾಂಶವನ್ನು ನೀಡಿದೆ. ಬುಧಭುಕ್ತಿ ನಡೆಯುವಾಗ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಪೂರ್ಣ ಬಹುಮತ ಬಾರದೆ ಹೋಗಿರಬಹುದು. ಆದರೂ ಮಿತ್ರ ಪಕ್ಷಗಳ ಜೊತೆಗೂಡಿ ಬಿಜೆಪಿಯೇ ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ಸಫಲವಾಗಿದೆ. ಕುಜವತ್ ಕೇತುಃ ಎಂಬ ಪ್ರಮಾಣ ಇದ್ದು, ಕೇತು ಗ್ರಹವು ಕುಜ ಗ್ರಹದ ರೀತಿಯಲ್ಲಿಯೇ ಫಲ ನೀಡುತ್ತದೆ. ಅದಕ್ಕೆ ಶನಿ ಗ್ರಹದ ಪ್ರಭಾವ ಇದೆ. ಬಿಜೆಪಿ ಸ್ಥಾಪಿಸಿದ ಕಾಲದಲ್ಲಿ ಶನಿ, ಕುಜ ಹಾಗೂ ವಕ್ರೀ ಗುರು ಸಿಂಹದಲ್ಲಿದ್ದು, ಕುಂಭ ರಾಶಿಯಲ್ಲಿ ಇದ್ ಕೇತುವಿನ ಮೇಲೆ ದೃಷ್ಟಿ ಇತ್ತು.

ಬಿಜೆಪಿ ಸ್ಥಾಪನೆ ಕಾಲದಲ್ಲಿ ಮಿಥುನ ಲಗ್ನ ಇತ್ತು. ಸದ್ಯಕ್ಕೆ ಶನಿ ಮೀನ ರಾಶಿಯಲ್ಲಿ ಸಂಚರಿಸುತ್ತಿದ್ದು, ಪಕ್ಷದ ಮಿಥುನ ಲಗ್ನಕ್ಕೆ ಹತ್ತನೇ ಸ್ಥಾನ ಆಗುತ್ತದೆ. ಇನ್ನು ಮಿಥುನದಲ್ಲಿಯೇ ಗುರು ಸಂಚಾರ ನಡೆಯುವುದು ಇವೆಲ್ಲ ಸೇರಿ ಭಾರತೀಯ ಜನತಾ ಪಕ್ಷವು ತನ್ನ ಪ್ರದರ್ಶನವು ಸುಧಾರಣೆ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗಲಿದೆ.

ನರೇಂದ್ರ ಮೋದಿ ಜಾತಕ ಪರಿಶೀಲನೆ:

ಪಕ್ಷದ ಫಲಿತಾಂಶದ ಮೇಲೆ ಪರಿಣಾಮ ಬೀರುವುದರಲ್ಲಿ ನರೇಂದ್ರ ಮೋದಿ ಪ್ರಮುಖರಾಗುತ್ತಾರೆ. ಆದ್ದರಿಂದ ಅವರ ಜಾತಕ ಪರಿಶೀಲನೆ ಮಾಡುವುದಾದರೆ, ಅಕ್ಟೋಬರ್ 16,2026ರಿಂದ ಡಿಸೆಂಬರ್ 14,2027ರ ತನಕ ಅವರಿಗೆ ಕುಜ ದಶೆಯಲ್ಲಿ ಶುಕ್ರ ಭುಕ್ತಿ ನಡೆಯುತ್ತದೆ. ಶುಕ್ರನ ಅಂತರ ಭುಕ್ತಿ ನಡೆಯುವ ಅಕ್ಟೋಬರ್ 16, 2026ರಿಂದ ಡಿಸೆಬರ್ 24, 2026ರ ತನಕ ಮೋದಿ ಅವರಿಗೆ ಉತ್ತಮ ಸಮಯ ಇರಲಿದ್ದು, ಚುನಾವಣೆಗಳಲ್ಲಿ ಉತ್ತಮ ಫಲಿತಾಂಶ ದೊರೆಯುತ್ತದೆ.

ಕಾಂಗ್ರೆಸ್ ಜಾತಕ ಹೇಗಿದೆ?:

ಕಾಂಗ್ರೆಸ್ ಪಕ್ಷ ಸ್ಥಾಪನೆಯ ಆಧಾರದಲ್ಲಿ ನೋಡುವುದಾದರೆ, ಅಕ್ಟೋಬರ್ 14, 2025ರಿಂದ ಏಪ್ರಿಲ್ 11, 2027ರ ತನಕ ಗುರು ದಶೆಯಲ್ಲಿ ರಾಹು ಭುಕ್ತಿ ಇದೆ. ಇನ್ನು ಜುಲೈ 13, 2025ರಿಂದ ಡಿಸೆಂಬರ್ 6, 2025ರ ತನಕ ಶುಕ್ರನ ಅಂತರ ಭುಕ್ತಿ ಇದೆ. ಕಾಂಗ್ರೆಸ್ ಸ್ಥಾಪನೆಯಾಗಿದ್ದು ಮಕರ ಲಗ್ನದಲ್ಲಿ. ಆ ಸಮಯದಲ್ಲಿ ಅಲ್ಲಿಂದ ಆರನೇ ಮನೆಯಲ್ಲಿ ಗುರು ಗ್ರಹ ಇತ್ತು. ಆದ್ದರಿಂದ ಗುರು ದಶೆಯು ಆ ಪಕ್ಷಕ್ಕೆ ಕಹಿಯ ಅನುಭವವನ್ನೇ ನೀಡಿದೆ. ಲೋಕಸಭೆ ಚುನಾವಣೆಯಲ್ಲಿ ಅದರ ಹಿಂದಿನ ಫಲಿತಕ್ಕೆ ಹೋಲಿಸಿದರೆ ಫಲಿತಾಂಶ ಸುಧಾರಣೆ ಕಂಡಿದ್ದರೂ ಅದರಿಂದ ದೊಡ್ಡ ಅನುಕೂಲ ಅಂತೇನೂ ಆಗಲಿಲ್ಲ. ಆ ಪಕ್ಷ ಸ್ಥಾಪನೆಯಾದಾಗ ಕನ್ಯಾ ರಾಶಿಯಲ್ಲಿ ಚಂದ್ರ ಇತ್ತು. ಆ ಕನ್ಯಾ ರಾಶಿಗೆ ಏಳನೇ ಮನೆಯಲ್ಲಿ ಶನಿ ಸಂಚಾರ ಆಗುತ್ತಿದ್ದು, ಆ ಪಕ್ಷದ ಸಾಧನೆಯಲ್ಲಿ ಸುಧಾರಣೆ ಆಗುವ ಯಾವ ಲಕ್ಷಣವೂ ಇಲ್ಲ. ರಾಹುವು ಚಂದ್ರನ ಯುತಿಯಲ್ಲಿ ಇದ್ದ ಸ್ಥಾಪನೆ ಕಾಲದಲ್ಲಿನ ಸ್ಥಿತಿಯು ತಪ್ಪಾದ ನಿರ್ಧಾರಗಳನ್ನು ಕೈಗೊಂಡು, ಅದರ ಫಲವನ್ನು ಪಡೆಯುತ್ತಾರೆ ಎಂಬುದನ್ನು ಸೂಚಿಸುತ್ತದೆ.

ನಿತೀಶ್ ಕುಮಾರ್ ಜಾತಕ ವಿಶ್ಲೇಷಣೆ:

ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜನ್ಮ ಜಾತಕದ ಪ್ರಕಾರ ಮೇ 25, 2023ರಿಂದ ಮೇ 25, 2026ರ ತನಕ ರಾಹು ದಶೆಯಲ್ಲಿ ಶುಕ್ರ ಭುಕ್ತಿ ನಡೆಯುತ್ತದೆ. ಇನ್ನು ಅಕ್ಟೋಬರ್ 21, 2025ರಿಂದ ಮಾರ್ಚ್ 21, 2026ರ ತನಕ ಬುಧನ ಅಂತರ ಭುಕ್ತಿ ನಡೆಯುತ್ತದೆ. ಮಿಥುನ ಲಗ್ನದಲ್ಲಿ ಜನಿಸಿದಂಥ ನಿತೀಶ್ ಅವರಿಗೆ ಜನನ ಕಾಲದಲ್ಲಿ ಶುಕ್ರ ಹತ್ತನೇ ಮನೆಯಲ್ಲಿ ಇದೆ. ಆದ್ದರಿಂದ ಮುಖ್ಯಮಂತ್ರಿಯಾಗಿ ಅವರೇ ಮುಂದುವರಿಯುವ ಸಾಧ್ಯತೆ ಹೆಚ್ಚು. ಶನಿ ಗ್ರಹವು ಮೀನ ರಾಶಿಯಲ್ಲಿ ಸಂಚರಿಸುತ್ತಿದ್ದು, ಬಿಹಾರದಲ್ಲಿ ಜೆಡಿಯು ಸ್ಥಿತಿ ಸುಧಾರಣೆ ಕಾಣುತ್ತದೆ.

ಹೆಚ್ಚಿನ ಸ್ಥಾನಗಳನ್ನು ಗೆಲ್ಲುವುದರೊಂದಿಗೆ ಎನ್ ಡಿಎ ಮೈತ್ರಿಕೂಟವಾದ ಬಿಜೆಪಿ ಹಾಗೂ ಜೆಡಿಯು ಬಿಹಾರದಲ್ಲಿ ಸರ್ಕಾರ ರಚನೆ ಮಾಡಬಹುದು.

ಇದು ಆ ಲೇಖನದಲ್ಲಿ ಇರುವಂಥ ಅಂಶಗಳಾಗಿವೆ. ಇನ್ನು ಗಾಯತ್ರಿ ದೇವಿ ವಾಸುದೇವ್ ಅವರನ್ನು ಟಿವಿ9 ಕನ್ನಡ ವೆಬ್ ಸೈಟ್ ನಿಂದ ಮಾತನಾಡಿಸಲಾಯಿತು. ಮುಂದಿನ ವರ್ಷದ ವಿಶೇಷ ಸಂಚಿಕೆ ತಯಾರಿಯಲ್ಲಿ ಮುಳುಗಿ ಹೋಗಿದ್ದೇನೆ. ಡಿಸೆಂಬರ್ ಮಧ್ಯದ ಹೊತ್ತಿಗೆ ಮುಂದಿನ ವರ್ಷದ ಪ್ರೆಡಿಕ್ಷನ್ ಬಗ್ಗೆ ಮಾತನಾಡಬಲ್ಲೆ. ಆದರೆ ಸದ್ಯಕ್ಕೆ ಆ ಕುರಿತು ಮಾತನಾಡುವುದು ಸರಿ ಹೋಗುವುದಿಲ್ಲ. ನಮ್ಮ ಮಾಡರ್ನ್ ಅಸ್ಟ್ರಾಲಜಿಯಲ್ಲಿ ಪ್ರಕಟ ಆಗಿರುವ ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶದ ಬಗೆಗಿನ ಲೇಖನದ ಅಂಶಗಳನ್ನು ನೀವು ಬಳಸಿಕೊಳ್ಳಬಹುದು ಎಂದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ