ಇಪ್ಪತ್ತೇಳು ನಕ್ಷತ್ರಗಳಲ್ಲಿ ಭರಣೀ ಎರಡನೇ ನಕ್ಷತ್ರ. ಇದು ಮೇಷ ರಾಶಿಯಾಗಿಯೇ ಪೂರ್ಣವಾಗಿ ಬರುತ್ತದೆ. ಇದು ಮೂರ ನಕ್ಷತ್ರಗಳ ಗುಚ್ಛವೆಂದು ತಾರಾವಿದರು ಹೇಳುತ್ತಾರೆ. ಈ ನಕ್ಷತ್ರದ ದೇವತೆ ಯಮ. ಹಾಗಾಗಿ ಶುಭಕಾರ್ಯಗಳಿಗೆ ಈ ನಕ್ಷತ್ರದ ದಿನ ಶುಭವಲ್ಲ ಎನ್ನುತ್ತಾರೆ. ಈ ನಕ್ಷತ್ರಕ್ಕೆ ಅಪಭರಣೀ ಎನ್ನುವುದು ಪ್ರಾಚೀನ ಹೆಸರು. ನೆಲ್ಲಿ ಮರ ಭರಣೀ ನಕ್ಷತ್ರದ ವೃಕ್ಷವಾಗಿದೆ. ಈ ರಾಶಿಯಲ್ಲಿ ಜನಿಸಿದವರು ಈ ಕೆಳಗಿನ ಗುಣಗಳಿಂದ ಇರುವರು.
ಈ ನಕ್ಷತ್ರದಲ್ಲಿ ಜನಿಸಿದವರಿಗೆ ಯಾವಾಗಲೂ ಅಪಕೀರ್ತಿಗಳು ಬರುತ್ತಲೇ ಇರುತ್ತವೆ. ಎಂತಹ ಒಳ್ಳೆಯ ಕೆಲಸವನ್ನೇ ಮಾಡಿದರೂ ಅಲ್ಲಿ ಒಂದು ಅಪಕೀರ್ತಿ ಯಾರಿಂದಲಾದರೂ ಬರುವುದು.
ಯಾವಾಗಲೂ ಸಂತೋಷದಿಂದ ಇರಬೇಕು ಎನ್ನುವುದು ಇವರ ತತ್ತ್ವ. ಹಾಗಾಗಿ ಏನಾದರೂ ವಿನೋದದ ಕಾರ್ಯ ಅಥವಾ ವಿನೋದದ ಮಾತನ್ನು ಆಡುತ್ತಾರೆ.
ಇವರು ನೀರಿನಿಂದ ಭಯಪಡುತ್ತಾರೆ. ಅಂದರೆ ನದಿ, ಸರೋವರ, ಕೆರೆ ಮುಂತಾದ ಕಡೆಗಳಲ್ಲಿ ಭಯವಿರುವುದು. ನೀರಿನಲ್ಲಿ ಇಳಿಯಲಾರರು. ಅಲ್ಲಿಂದ ದೂರವಿರುತ್ತಾರೆ.
ಇವರಲ್ಲಿ ಕ್ಷಣಕ್ಕೊಂದು ಆಸೆಗಳು ಹುಟ್ಟಿಕೊಳ್ಳುತ್ತದೆ. ಒಂದು ಕಾರ್ಯವನ್ನು ಹೇಗೆಲ್ಲ ಮಾಡಬಹುದು ಎನ್ನುವುದನ್ನು ನೋಡುತ್ತಲೇ ಇರುತ್ತಾರೆ. ಎಲ್ಲವುದನ್ನು ಪಡೆಯುವ ಆಸೆ ಇರುವುದು.
ಪ್ರಾಣಿಗಳನ್ನು ಕಂಡರೆ ಪ್ರೀತಿ ಜಾಸ್ತಿ. ಪ್ರಾಣಿಗಳನ್ನು ಸಾಕುತ್ತಾರೆ ಮತ್ತು ಯಾವುದೇ ಪ್ರಾಣಿಗಾದರೂ ತನ್ನ ಆಹಾರವನ್ನು ಕೊಡುತ್ತಾರೆ. ಪ್ರಾಣಿಗಳು ಸಂತೋಷವಾಗಿ ಇರುವಂತೆ ನೋಡಿಕೊಳ್ಳುತ್ತಾರೆ.
ಇದನ್ನೂ ಓದಿ: ಭಾದ್ರಪದ ಪಕ್ಷ ಮಾಸದಲ್ಲಿ ಇಂದಿರಾ ಏಕಾದಶಿ ಯಾವಾಗ? ಇಂದಿರಾ ಏಕಾದಶಿ ವ್ರತದ ಕರುಣಾಜನಕ ಕಥೆ ತಿಳಿಯಿರಿ
ಒಂದು ಕಾರ್ಯವನ್ನು ಮಾಡಬೇಕು ಎಂದುಕೊಂಡರೆ ಅದನ್ನು ಮತ್ತೆ ಮತ್ತೆ ಬದಲಾವಣೆ ಮಾಡಲಾರರು. ಮನಸ್ಸಿಗೆ ಬರುವುದು ನಿಧಾನವಾದರೂ ಬಂದ ಅನಂತರ ಅದು ದೃಢವೇ ಆಗುವುದು.
ಸತ್ಯವನ್ನೇ ಹೇಳುವುದು ಇವರ ಸ್ವಭಾವವಾದರೂ ಕೆಲವೊಮ್ಮೆ ಮುಚ್ಚಿಟ್ಟ ಸತ್ಯವೂ ಗೊತ್ತಾಗುವುದು. ಅಪ್ರಿಯವಾದ ಸತ್ಯವನ್ನು ಹೇಳಲು ಇಷ್ಟವಾಗದು.
ಯಾವ ಕೆಲಸವನ್ನು ಕೊಟ್ಟರೂ ಅದನ್ನು ಸರಿಯಾಗಿ ನಿರ್ವಹಿಸುವ ಕೌಶಲ, ಬುದ್ಧಿಶಕ್ತಿ ಇರುವುದು. ಎಲ್ಲವನ್ನೂ ಎಲ್ಲರನ್ನೂ ನಿಭಾಯಿಸಿಕೊಂಡು ಹೋಗುವರು.
ಇವು ಭರಣೀ ನಕ್ಷತ್ರದಲ್ಲಿ ಜನಿಸಿದವರ ಗುಣಗಳು. ಎಲ್ಲವೂ ಎಲ್ಲರಲ್ಲಿಯೂ ಸಂಪೂರ್ಣವಾಗಿ ಇರದೇ ಇದ್ದರೂ ಕೆಲವು ಅಂಶಗಳನ್ನು ಕಾಣಬಹುದು.
-ಲೋಹಿತ ಹೆಬ್ಬಾರ್ – 8762924271