ಹೆಂಡತಿಯು ಗಂಡನನ್ನು ನಿಂದಿಸಬಹುದೇ?

ಪತ್ನಿ ಮತ್ತು ಪತ್ನಿಯ ಸಂಬಂಧವು ಯಾವಾಗಲೂ ನಂಬಿಕೆ, ಗೌರವ ಮತ್ತು ಪ್ರೀತಿಯ ಮೇಲೆ ನೆಲೆ ನಿಂತಿರುವುದು. ಹೀಗಾಗಿ ಈ ಸಂಬಂಧದ ಬಗ್ಗೆ ತುಂಬಾ ಕಾಳಜಿ ವಹಿಸಬೇಕು. ಯಾವುದೇ ಒಂದು ಸಣ್ಣ ವಿಚಾರಕ್ಕೆ ಇಬ್ಬರ ನಡುವೆ ವೈಮನಸ್ಸು ಅಥವಾ ಗಲಾಟೆಗಳು ಶುರುವಾದ್ರೆ, ಸಂಸಾರವೇ ಛಿದ್ರವಾಗುತ್ತವೆ. ಇನ್ನು ಹೆಂಡತಿಯು ಗಂಡನನ್ನು ನಿಂದಿಸಬಹುದೇ? ಇಂದಿನ ಕಾಲಕ್ಕೆ ಈ ಪ್ರಶ್ನೆ ಅಪ್ರಸ್ತುತ ಎನ್ನಿಸಬಹುದು. ಯಾರನ್ನಾದರೂ ಕೇಳಿದರೆ ಯಾರೂ ಯಾರನ್ನೂ ನಿಂದಿಸಬಹುದು ಉತ್ತರ ಎಲ್ಲರಿಂದ ಬರಬಹುದು.

ಹೆಂಡತಿಯು ಗಂಡನನ್ನು ನಿಂದಿಸಬಹುದೇ?
ಪ್ರಾತಿನಿಧಿಕ ಚಿತ್ರ
Edited By:

Updated on: Aug 18, 2025 | 7:57 PM

ದಾಂಪತ್ಯ ಎನ್ನುವ ಬಹಳ ಶ್ರೇಷ್ಠವಾದುದು. ಪತಿ ಪತ್ನಿಯರು ಅನ್ಯೋನ್ಯವಾಗಿ ಇರಬೇಕು ಎನ್ನುತ್ತದೆ. ಅದಕ್ಕಾಗಿಯೇ ಜಾತಕ, ಮೇಳಾಮೇಳಿಯನ್ನು ನೋಡುವುದು. ಹಾಗಿದ್ದರೂ ದಾಂಪತ್ಯದಲ್ಲಿ ಜಗಳವೇ ಆಗುವುದಿಲ್ಲ ಎಂದೇನಲ್ಲ. ಎರಡು ಮನಸ್ಸುಗಳು ಬೆರೆತಾಗಿ ಭಿನ್ನಾಭಿಪ್ರಾಯ ಬರುವುದು ಸಹಜವೇ. ಗೆಳೆತನದಲ್ಲಿಯೂ ತಂದೆ ಮಗನ ನಡುವೆಯೂ ಸಹೋದರರ ನಡುವೆಯೂ ಭಿನ್ನಾಭಿಪ್ರಾಯ ಇದ್ದೇ ಇರುತ್ತದೆ. ಆದರೆ ಪತಿ‌ಪತ್ನಿಯರ ನಡುವಿನ ಭಿನ್ನಾಭಿಪ್ರಾಯವನ್ನೇ ವಿಶೇಷವಾಗಿ ಹೇಳಲು ಕಾರಣಗಳಿವೆ.

ಬೇರೆ ಎಲ್ಲ ಸಂಬಂಧಗಳೂ ರಕ್ತಸಂಬಂಧವಾಗಿರುತ್ತದೆ. ಅಲ್ಲಿ ವೈರುಧ್ಯ ಬಂದರೂ ಬಾಂಧವ್ಯ ನಷ್ಟವಾಗದು. ತಂದೆ ಮಕ್ಕಳ ನಡುವೆ ಮನಸ್ತಾಪ ಬಂದು ದೂರಾದರೂ ತಂದೆ ಹಾಗೂ ಮಕ್ಕಳ ಸಂಬಂಧ ತುಂಡಾಗದು. ಯಾವ ಕಾಲಕ್ಕೂ ಅದು ಹಾಗೆಯೇ ಇರುವುದು. ಆದರೆ ಪತಿ‌ – ಪತ್ನಿಯರ ಸಂಬಂಧ ಭಾವನೆಗಳಿಂದ ನಿರ್ಮಾಣವಾಗಿರುತ್ತದೆ. ಅಂತಹ ಭಾವಕ್ಕೆ ಪೆಟ್ಟು ಬಿದ್ದಾಗ ಸಂಬಂಧ ಮುರಿದುಹೋಗಬಹುದು. ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಬರುವುದು ಈಗಿನದ್ದಲ್ಲ. ದಾಂಪತ್ಯ ಆರಂಭವಾದಾಗಿನಿಂದಲೂ ಇರುವುದೇ. ಎರಡು ಮನಸ್ಸುಗಳು ಒಂದೇ ಕಡೆಗೆ ಸೇರಿದಾಗ ಇಂತಹ ಘಟನೆ ನಡೆಯುತ್ತದೆ. ಆಗ ಭಿನ್ನಾಭಿಪ್ರಾಯಕ್ಕಿಂತ ಬದುಕು ದೊಡ್ಡದಾಗಿತ್ತು. ಅದನ್ನು ಅರ್ಥಮಾಡಿಕೊಂಡು ಭಿನ್ನಮತ ಬಂದ ವಿಚಾರದಲ್ಲಿ ಪುನಃ ವಿವಾದ ಆಗದಂತೆ ಎಚ್ಚರವಹಿಸುತ್ತಿದ್ದರು. ಈಗ ಇಂತಹ ಘಟನೆಯನ್ನು ಅತಿಯಾಗಿ ನೋಡಬಹುದು. ಆತ್ಮಪ್ರತಿಷ್ಠೆ ಹೆಚ್ಚಾಗಿ ಇಂತಹ ಘಟನೆಗಳು ನಡೆಯುತ್ತವೆ.

ಇದನ್ನೂ ಓದಿ: ಪತ್ನಿಯು ಪತಿಯನ್ನು ನಿಂದಿಸುತ್ತಲೇ ಇದ್ದರೆ ಏನಾಗುತ್ತದೆ?

ಸ್ತ್ರೀಗೆ ಸಂಬಂಧಿಸಿದಂತೆ ವಿಶೇಷವಾಗಿ ಹೇಳುವುದಾದರೆ ಸ್ತ್ರೀ ಬಾಲ್ಯದಲ್ಲಿ ತಂದೆಯ ಮಾರ್ಗದರ್ಶನದಲ್ಲಿ, ವಿವಾಹವಾದ ಮೇಲೆ ಪತಿಯ ರಕ್ಷಣೆಯಲ್ಲಿ, ವಯಸ್ಸಾದಾಗ ಮಕ್ಕಳ ರಕ್ಷಣೆಯಲ್ಲಿ ಇರಬೇಕು ಎನ್ನುತ್ತದೆ. ಇದರರ್ಥ ಆಕೆ ಸರ್ವದಾ ರಕ್ಷಣೆಗೆ ಯೋಗ್ಯಳಾದವಳು. ಸ್ತ್ರೀಯನ್ನು ರತ್ನ ಎಂಬುದಾಗಿ ಕರೆದಿದ್ದಾರೆ. ಅಂತಹ ರತ್ನವನ್ನು ಅನಾಥ ಮಾಡುವುದು ಪ್ರಾಚೀನರು ಒಪ್ಪಲಾರರು.

ಸನಾಥಳಾಗಿರುವ ಸ್ತ್ರೀ ಒಮ್ಮೆ ಪತಿಗೆ ಏನಾದರೂ ತನ್ನ ದುರಹಂಕಾರದಿಂದ ಸಲ್ಲದ ಮಾತುಗಳನ್ನಾಡಿದರೆ ಏನಾಗುತ್ತದೆ ಎನ್ನುವುದನ್ನು ಬ್ರಹ್ಮವೈವರ್ತಪುರಾಣ ಹೇಳುತ್ತದೆ.

ವಾಕ್ ತರ್ಜನಾತ್ ಭವೇತ್ ಕಾಕಃ
ಹಿಂಸನಾತ್ ಸೂಕರೋ ಭವೇತ್ |
ಸರ್ಪೋ ಭವತಿ ಕೋಪೇನ
ದರ್ಪೇಣ ಗರ್ದಭೋ ಭವೇತ್ ||
ಕುಕ್ಕುರೀ ಚ ಕುವಾಕ್ಯೇನ
ಹ್ಯಂಧಶ್ಚ ವಿಷದರ್ಶನಾತ್ |
ಪತಿವ್ರತಾ ಚ ವೈಕುಂಠಂ
ಪತ್ಯಾ ಸಹ ವ್ರಜೇದ್ಧ್ರುವಮ್ ||

ಪತಿಗೆ ಮಾತಿನಿಂದ ನಿಂದನೆ ಮಾಡಿದರೆ ಮುಂದಿನ ಜನ್ಮದಲ್ಲಿ ಕಾಗೆಯಾಗಿ ಜನಿಸುವರು. ಪತಿಗೆ ನಾನಾ ರೀತಿ ಮಾನಸಿಕ ಹಿಂಸೆಯನ್ನು ನೀಡಿದರೆ ಹಂದಿ ಜನ್ಮ ಅವರಿಗೆ ಬರಲಿದೆ. ಪತಿಯ ಮೇಲೆ ಸದಾ ಕೋಪವನ್ನು ಮಾಡುತ್ತಿದ್ದರೆ ಅಂತಹವರು ಸರ್ಪ ಜನ್ಮವನ್ನು ಪಡೆಯುತ್ತಾರೆ. ಅಹಂಕಾರವನ್ನು ಪತಿಯ ಮೇಲೆ ತೋರಿಸಿದರೆ ಕತ್ತೆಯಾಗಿ ಜನಿಸುವರು. ಕೆಟ್ಟ ಮಾತುಗಳನ್ನು ಪತಿಗೆ ಹೇಳಿದರೆ ಹೆಣ್ಣು ನಾಯಿಯ ಜನ್ಮ ಬರಲಿದೆ. ಕೆಟ್ಟ ಕ್ರಿಯೆಯನ್ನು ಮಾಡಿದರೆ ಕುರುಡನಾಗುವರು. ಪತಿವ್ರತೆಯಾದರೆ ಮರಣಾನಂತರ ಪತಿಯ ಜೊತೆ ವೈಕುಂಠದಲ್ಲಿ ವಾಸವಾಗುವರು.

ಹೀಗೆ ನಿಂದಿತ ಕರ್ಮವು ಯಾವ ಜನ್ಮಕ್ಕೆ ಕಾರಣವಾಗಲಿದೆ ಎನ್ನುವುದನ್ನು ಸ್ಪಷ್ಟವಾಗಿ ಪುರಾಣಗಳು ತಿಳಿಸಿಕೊಡುತ್ತವೆ.

– ಲೋಹಿತ ಹೆಬ್ಬಾರ್ – 8762924271